Asianet Suvarna News Asianet Suvarna News

Kannada Rajyotsava: ಕರ್ನಾಟಕದ ಹೆಸರು ಹೇಳಿದಾಕ್ಷಣ ನೆನಪಿಗೆ ಬರುವ 50 ವಿಶಿಷ್ಟ ಸಂಗತಿಗಳು!

ಕರ್ನಾಟಕ ವಿಶಿಷ್ಟ ಹಾಗೂ ವೈವಿಧ್ಯಮಯ ರಾಜ್ಯ. ದೇಶದ ಇನ್ನಾವುದೇ ರಾಜ್ಯಗಳಲ್ಲಿ ಕಂಡುಬರದ ಹಲವು ವಿಶೇಷ ಸಂಗತಿಗಳು ಇಲ್ಲಿ ಕಾಣಸಿಗುತ್ತವೆ. ಮೈಸೂರು ಮಲ್ಲಿಗೆ, ಮಸಾಲೆ ದೋಸೆಯಿಂದ ಹಿಡಿದು ಮಹಾನ್‌ ಸಾಧಕರವರೆಗೆ ಈ ರಾಜ್ಯ ಭಾರತಕ್ಕೆ ನೀಡಿದ ಕೊಡುಗೆ ದೊಡ್ಡದು.
 

50 unique facts that come to mind when the name of Karnataka is mentioned gvd
Author
First Published Nov 1, 2023, 8:54 AM IST

ಎಂ.ಎಲ್.ಲಕ್ಷ್ಮೀಕಾಂತ್

ಕರ್ನಾಟಕ ವಿಶಿಷ್ಟ ಹಾಗೂ ವೈವಿಧ್ಯಮಯ ರಾಜ್ಯ. ದೇಶದ ಇನ್ನಾವುದೇ ರಾಜ್ಯಗಳಲ್ಲಿ ಕಂಡುಬರದ ಹಲವು ವಿಶೇಷ ಸಂಗತಿಗಳು ಇಲ್ಲಿ ಕಾಣಸಿಗುತ್ತವೆ. ಮೈಸೂರು ಮಲ್ಲಿಗೆ, ಮಸಾಲೆ ದೋಸೆಯಿಂದ ಹಿಡಿದು ಮಹಾನ್‌ ಸಾಧಕರವರೆಗೆ ಈ ರಾಜ್ಯ ಭಾರತಕ್ಕೆ ನೀಡಿದ ಕೊಡುಗೆ ದೊಡ್ಡದು. ಕರ್ನಾಟಕದ ಹೆಸರು ಹೇಳಿದಾಕ್ಷಣ ಎಲ್ಲರಿಗೂ ನೆನಪಿಗೆ ಬರುವ 50 ವಿಶಿಷ್ಟ ಸಂಗತಿಗಳು ಇಲ್ಲಿವೆ. ಇಷ್ಟೇ ಅಲ್ಲ, ಇನ್ನೂ ನೂರಾರು ವಿಶೇಷಗಳು ಇಲ್ಲಿವೆ. ಮೈಸೂರು ರಾಜ್ಯಕ್ಕೆ ಕರ್ನಾಟಕವೆಂಬ ಹೆಸರು ಬಂದು 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಾವಿಲ್ಲಿ 50 ಸಂಗತಿಗಳನ್ನು ನೀಡಿದ್ದೇವೆ.

1. ಏಕೈಕ ಕನ್ನಡಿಗ ಪ್ರಧಾನಿ
ಕರ್ನಾಟಕದಿಂದ ಪ್ರಧಾನಿಯಂತಹ ಅತ್ಯುನ್ನತ ಹುದ್ದೆಗೇರಿದ ಏಕೈಕ ವ್ಯಕ್ತಿ ಎಚ್‌.ಡಿ.ದೇವೇಗೌಡ. 10 ತಿಂಗಳ ಕಾಲ ಅವರು ದೇಶವನ್ನು ಮುನ್ನಡೆಸಿದ್ದರು.

2. ಡಾ।ರಾಜ್‌, ವಿಷ್ಣು, ರಜನಿ 
ಡಾ।ರಾಜಕುಮಾರ್‌, ರಜನೀಕಾಂತ್‌, ವಿಷ್ಣುವರ್ಧನ್‌, ಅಂಬರೀಷ್‌, ಶಂಕರ್‌ನಾಗ್‌, ಅನಂತ್ ನಾಗ್ ಶಿವರಾಜಕುಮಾರ್‌, ಸುದೀಪ್‌, ದರ್ಶನ್‌, ಯಶ್, ರಿಷಬ್‌ ಶೆಟ್ಟಿ, ಸುನೀಲ್‌ ಶೆಟ್ಟಿ, ಸರೋಜಾ ದೇವಿ, ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ ಅವರಂತಹ ನಟರನ್ನು ಚಿತ್ರರಂಗಕ್ಕೆ ನೀಡಿದ ರಾಜ್ಯ.

3. ಸಮಾಜ ಸುಧಾರಕ ಬಸವಣ್ಣ
12ನೇ ಶತಮಾನದ ಕ್ರಾಂತಿಕಾರಿ ಸಮಾಜ ಸುಧಾರಕ. ಜಗಜ್ಯೋತಿ ಬಸವೇಶ್ವರರು ಇವತ್ತಿಗೂ ಸಮಾಜಕ್ಕೆ ಮಾದರಿ. ಕೂಡಲಸಂಗಮದಲ್ಲಿರುವ ಬಸವಣ್ಣ ಐಕ್ಯಮಂಟಪ ಪ್ರಮುಖ ಪ್ರವಾಸಿ ತಾಣ.

4. ಕಿತ್ತೂರು ರಾಣಿ ಚನ್ನಮ್ಮ ಶೌರ್ಯ
ಬ್ರಿಟಿಷರ ವಿರುದ್ಧ ಸಿಡಿದೆದ್ದ ಮೊದಲ ರಾಣಿ ಕಿತ್ತೂರು ಚನ್ನಮ್ಮ. ಮೊದಲ ಯುದ್ಧದಲ್ಲಿ ಬ್ರಿಟಿಷರನ್ನು ಮಣಿಸಿ, ಬಳಿಕ ಯುದ್ಧ ಕೈದಿಯಾಗಿ ಮರಣವನ್ನಪ್ಪಿದ ವೀರರಾಣಿ

ಮೈಸೂರು ರಾಜ್ಯ-ಕರ್ನಾಟಕ ಹುಟ್ಟಿದ್ದು ಹೇಗೆ?: 9ನೇ ಶತಮಾನದಲ್ಲೇ ಇದ್ದ ನಮ್ಮ ಕನ್ನಡ ನಾಡು!

5. ನಾಲ್ವಡಿ ಕೃಷ್ಣರಾಜ ಒಡೆಯರ್‌
ಮೈಸೂರು ಪ್ರಾಂತ್ಯದಲ್ಲಿ ಕ್ರಾಂತಿಕಾರಕ ಅಭಿವೃದ್ಧಿ ಮಾಡಿದ ಅರಸರು. ಗಾಂಧೀಜಿ ಅವರಿಂದ ‘ರಾಜರ್ಷಿ’ ಎಂಬ ಬಿರುದು ಪಡೆದ ಮೈಸೂರು ಮಹಾರಾಜ.

6. ಭಾರತ ರತ್ನ ಸರ್|ಎಂ.ವಿಶ್ವೇಶ್ವರಯ್ಯ
ಭಾರತ ಕಂಡ ಅತ್ಯಂತ ಶ್ರೇಷ್ಠ ಎಂಜಿನಿಯರ್‌. ಭಾರತರತ್ನ ಪುರಸ್ಕೃತ. ಮೈಸೂರು ದಿವಾನರಾಗಿ ಹಲವು ಕಾರ್ಖಾನೆ, ಸಂಸ್ಥೆಗಳ ಸ್ಥಾಪನೆಗೆ ಕಾರಣರಾದವರು.

7. ಪ್ರಸಿದ್ಧ ಸಾಹಿತಿಗಳಿಗೆ ತವರು
ಆರ್‌.ಕೆ.ನಾರಾಯಣ್‌, ಕುವೆಂಪು, ಮಾಸ್ತಿ, ಬೇಂದ್ರೆ ಸೇರಿ ಹಲವು ಸಾಹಿತಿಗಳು ಕರ್ನಾಟಕದವರು. ದೇಶದಲ್ಲೇ 2ನೇ ಅತಿ ಹೆಚ್ಚು (8) ಜ್ಞಾನಪೀಠ ಬಂದಿರುವುದು ಕರ್ನಾಟಕದ ಸಾಹಿತಿಗಳಿಗೇ.

8. ಸಂಗೀತ ಕ್ಷೇತ್ರದಲ್ಲಿ ಪಾರಮ್ಯ
ಕರ್ನಾಟಕ, ಹಿಂದುಸ್ತಾನಿ ಹಾಗೂ ಜಾನಪದ ಸಂಗೀತ ಮೂರಕ್ಕೂ ಪ್ರಾಶಸ್ತ್ಯ ನೀಡಿದ ರಾಜ್ಯ. ಸವಾಯಿ ಗಂಧರ್ವ, ಪಂಡಿತ ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್‌ ಹಾಗೂ ಮಲ್ಲಿಕಾರ್ಜುನ ಮನ್ಸೂರ್‌ರಂತಹ ಶ್ರೇಷ್ಠ ಗಾಯಕರನ್ನು ನೀಡಿದ ರಾಜ್ಯ.

9. ಕರುನಾಡಿನ ಗಣ್ಯ ಉದ್ಯಮಿಗಳು
ಎನ್‌.ಆರ್‌.ನಾರಾಯಣಮೂರ್ತಿ, ನಂದನ್‌ ನಿಲೇಕಣಿ, ಸುಧಾಮೂರ್ತಿ, ಅಜೀಂ ಪ್ರೇಮ್‌ಜಿ, ಡಾ। ದೇವಿಶೆಟ್ಟಿಯಂತಹ ಖ್ಯಾತನಾಮರನ್ನು ದೇಶಕ್ಕೆ ಕೊಡುಗೆ ನೀಡಿದ ರಾಜ್ಯ.

10. ವೀರ ಯೋಧರ ಕೊಡಗು
ದೇಶಕ್ಕೆ ಎರಡು ಸೇನಾ ಮುಖ್ಯಸ್ಥರನ್ನು (ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ, ಜನರಲ್‌ ಕೆ.ಎಸ್‌. ತಿಮ್ಮಯ್ಯ) ನೀಡಿದ ಜಿಲ್ಲೆ. ಇದಲ್ಲದೆ ಸಹಸ್ರಾರು ಯೋಧರು, ಅಧಿಕಾರಿಗಳು ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

11. ಕ್ರಿಕೆಟ್, ಬಿಲಿಯರ್ಡ್ಸ್, ಟೆನಿಸ್ ದಿಗ್ಗಜರು
ಪ್ರಸನ್ನ, ರೋಜರ್‌ ಬಿನ್ನಿ, ಅನಿಲ್‌ ಕುಂಬ್ಳೆ, ರಾಹುಲ್‌ ದ್ರಾವಿಡ್‌, ಜಾವಗಲ್‌ ಶ್ರೀನಾಥ್‌, ವೆಂಕಟೇಶ್ ಪ್ರಸಾದ್‌, ಕೆ.ಎಲ್‌.ರಾಹುಲ್‌, ಪಂಕಜ್‌ ಅಡ್ವಾಣಿ, ರೋಹನ್‌ ಬೋಪಣ್ಣರಂತಹ ಆಟಗಾರರನ್ನು ಕ್ರೀಡಾ ಕ್ಷೇತ್ರಕ್ಕೆ ನೀಡಿದ ರಾಜ್ಯ ಕರ್ನಾಟಕ.

12. ಭಾರತದ ಐಟಿ ರಾಜಧಾನಿ
ಅಮೆರಿಕಕ್ಕೆ ಸಿಲಿಕಾನ್‌ ವ್ಯಾಲಿ ಹೇಗೋ, ಹಾಗೆ ಭಾರತಕ್ಕೆ ಕರ್ನಾಟಕ. ಲಕ್ಷಾಂತರ ಮಂದಿಗೆ ನೌಕರಿ ಕೊಟ್ಟಿರುವ ಹೆಮ್ಮೆಯ ಬೆಂಗಳೂರು ನಮ್ಮ ಕರುನಾಡಿನ ರಾಜಧಾನಿ.

13. ಐಟಿ ಜತೆಗೆ ಸ್ಟಾರ್ಟಪ್‌ಗಳ ತವರೂರು
ಇನ್ಫೋಸಿಸ್‌, ವಿಪ್ರೋ, ಫ್ಲಿಪ್‌ಕಾರ್ಟ್‌, ಕಾಫಿಡೇಯಂತಹ ಕಂಪನಿಗಳು ಮಾತ್ರವೇ ಅಲ್ಲದೆ ಹಲವು ಸ್ಟಾರ್ಟಪ್‌ಗಳಿಗೆ ತವರೂರು ಕರ್ನಾಟಕ. 

14. ಬಾಹ್ಯಾಕಾಶ ತೋರಿಸಿದ ಇಸ್ರೋ
ಕಡಿಮೆ ವೆಚ್ಚದಲ್ಲಿ ಅಂತರಿಕ್ಷ ಯಾನ, ಉಪಗ್ರಹ- ರಾಕೆಟ್‌ ಉಡಾವಣೆ ಮೂಲಕ ಜಗತ್ತಿನ ಗಮನ ಸೆಳೆದ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಕೇಂದ್ರ ಕಚೇರಿ ಇರುವುದು ರಾಜ್ಯದಲ್ಲೇ.

15. ದೇಶಕ್ಕೊಂದೇ ನಿಮ್ಹಾನ್ಸ್‌
ಮಾನಸಿಕ ಆರೋಗ್ಯ ಹಾಗೂ ನರರೋಗ ಶಿಕ್ಷಣ ಸಂಸ್ಥೆಗಳ ಪರಮೋಚ್ಚ ಸಂಸ್ಥೆಯಾಗಿರುವ, 7 ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಕೇಂದ್ರ ಸರ್ಕಾರದ ನಿಮ್ಹಾನ್ಸ್ ಕರ್ನಾಟಕ ಬಿಟ್ಟು ದೇಶದ ಬೇರೆಲ್ಲೂ ಇಲ್ಲ.

16. ದೇಶದ ಟಾಪ್‌ ವಿವಿ ಐಐಎಸ್ಸಿ
ವಿಶ್ವದ ಅತ್ಯುನ್ನತ ಸಂಶೋಧನಾ ವಿಶ್ವವಿದ್ಯಾಲಯಗಳಲ್ಲಿ ಒಂದು. ಶತಮಾನದ ಇತಿಹಾಸ ಹೊಂದಿರುವ ಈ ಸಂಸ್ಥೆ ವಿವಿಗಳ ರ್ಯಾಂವಕಿಂಗ್‌ನಲ್ಲಿ ಸದಾ ಸ್ಥಾನ ಪಡೆಯುತ್ತದೆ.

17. ಇಡ್ಲಿ, ದೋಸೆ, ವಡೆಗೆ ಫೇಮಸ್
ಮೈಸೂರು ಮಸಾಲೆ, ದಾವಣಗೆರೆ ಬೆಣ್ಣೆ ದೋಸೆ, ಇಡ್ಲಿ-ವಡೆ-ಸಾಂಬಾರ್‌ ರಾಜ್ಯದ ವಿಶಿಷ್ಟ ತಿನಿಸುಗಳು. ಅನ್ಯರಾಜ್ಯದವರು ಕರುನಾಡಿಗೆ ಬಂದಾಗ ಇವನ್ನು ತಿನ್ನದೇ ವಾಪಸ್‌ ಹೋಗುವುದಿಲ್ಲ.

18. ಮೈಸೂರು ಪಾಕ್‌, ಪೇಡ, ಕುಂದಾ
ಕರ್ನಾಟಕ ಸಿಹಿ ತಿನಿಸಿಗಳಿಂದಲೂ ಹೆಸರುವಾಸಿ. ಮೈಸೂರು ಪಾಕ್‌, ಧಾರವಾಡ ಪೇಡ, ಬೆಳಗಾವಿ ಕುಂದಾ ಜನರ ನಾಲಿಗೆಯಲ್ಲಿ ನೀರೂರಿಸುತ್ತವೆ.

19. ಮೈಸೂರು ಮಲ್ಲಿಗೆ, ರಸಬಾಳೆ
ಮೈಸೂರು ಭಾಗದಲ್ಲಿ ಬೆಳೆವ ಮಲ್ಲಿಗೆ ತನ್ನ ಪರಿಮಳದಿಂದಲೇ ಹೆಸರುವಾಸಿ. ಉಡುಪಿ ಮಲ್ಲಿಗೆ, ಹಡಗಲಿ ಮಲ್ಲಿಗೆಯೂ ಜನಪ್ರಿಯ. ವಿಶಿಷ್ಟ ಸೊಗಡಿನಿಂದಾಗಿ ಮೈಸೂರು ವೀಳ್ಯೆದೆಲೆ, ನಂಜನಗೂಡು ರಸಬಾಳೆ ಕೂಡ ಫೇಮಸ್‌.

20. ರಾಗಿ ಮುದ್ದೆ, ಜೋಳದ ರೊಟ್ಟಿ
ರಾಗಿ ಮುದ್ದೆ, ಜೋಳದ ರೊಟ್ಟಿ ಕರ್ನಾಟಕದ ಸಾಂಪ್ರದಾಯಿಕ ಆಹಾರ. ದಕ್ಷಿಣ ಕರ್ನಾಟಕದಲ್ಲಿ ಮುದ್ದೆ, ಉತ್ತರ ಕರ್ನಾಟಕದಲ್ಲಿ ರೊಟ್ಟಿ ಜನಪ್ರಿಯ.

ಭಾರತಕ್ಕೆ ಮಾದರಿಯಾಗಿ ಕನ್ನಡ ನಾಡು ಕಟ್ಟೋಣ: ರಾಜ್ಯೋತ್ಸವಕ್ಕೆ ಡಿ.ಕೆ.ಶಿವಕುಮಾರ್‌ ಲೇಖನ

21. ಬ್ರ್ಯಾಂಡ್‌ ನಂದಿನಿ
ಹಾಲು ಉತ್ಪಾದನೆಯಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿ ಕರ್ನಾಟಕ ಇದೆ. ಕೆಎಂಎಫ್‌ನ ನಂದಿನಿ ಬ್ರ್ಯಾಂಡ್‌ ಖಾಸಗಿ ಕಂಪನಿಗಳಿಗೂ ತನ್ನ ಉತ್ಪನ್ನ ಪೂರೈಸುತ್ತದೆ.

22. ಕಾಫಿಯ ಘಮಘಮ
ದೇಶದಲ್ಲೇ ಅತಿ ಹೆಚ್ಚು ಕಾಫಿ ಉತ್ಪಾದಿಸುವ ರಾಜ್ಯ ಕರ್ನಾಟಕ. ಅಸಂಖ್ಯಾತ ಮಂದಿಗೆ ಬೆಳಗ್ಗೆ ಆರಂಭವಾಗುವುದೇ ವಿಶಿಷ್ಟ ಸ್ವಾದದ ಕಾಫಿ ಸೇವನೆಯೊಂದಿಗೆ.

23. ತೊಗರಿ, ಟೊಮೆಟೋ ಕಣಜ
ತೊಗರಿ, ಟೊಮೆಟೋ, ಈರುಳ್ಳಿಯಂತಹ ಬೆಳೆಯಲ್ಲಿ ಕರ್ನಾಟಕ ದೇಶದಲ್ಲಿ ಮುಂಚೂಣಿಯಲ್ಲಿದೆ. ದೇಶಕ್ಕೆ ಸಂಕಷ್ಟ ಎದುರಾದಾಗಲೆಲ್ಲಾ ನೆರವಿಗೆ ನಿಂತಿದೆ.

24. ಜೋಗ ಜಲಪಾತ ವೈಭವ
ದೇಶದ ಎತ್ತರದ ಜಲಪಾತಗಳಲ್ಲಿ ಒಂದಾಗಿರುವ, ನಯನ ಮನೋಹರ ಜೋಗ ಜಲಪಾತ ಇರುವುದು ನಮ್ಮ ರಾಜ್ಯದಲ್ಲೇ. ಪ್ರತಿ ವರ್ಷ ಲಕ್ಷಾಂತರ ಜನ ಭೇಟಿ ನೀಡುವ ತಾಣ.

25. ಪಶ್ಚಿಮಘಟ್ಟದ ಸೌಂದರ್ಯ
ಪರಿಸರ ಸೂಕ್ಷ್ಮ, ಹಲವು ಪ್ರಾಣಿ ಪ್ರಭೇದಗಳ ಆವಾಸಸ್ಥಾನ ಪಶ್ಚಿಮಘಟ್ಟ ಕರ್ನಾಟಕದ ಆಸ್ತಿ. ಇದು ಹಲವು ಗಿರಿಧಾಮ, ಪ್ರವಾಸಿತಾಣಗಳನ್ನು ಸೃಷ್ಟಿಸಿ, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

26. ಹುಲಿ ಸಂಖ್ಯೆಯಲ್ಲಿ ದೇಶದ ನಂ.2
ದೇಶದಲ್ಲೇ 2ನೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಕರ್ನಾಟಕ. ಹುಲಿಗಳ ರಕ್ಷಣೆಗಾಗಿ ಐದು ಅಭಯಾರಣ್ಯಗಳನ್ನು ಕರುನಾಡು ಹೊಂದಿದೆ.

27. ದೇಶದಲ್ಲೇ ಅತಿ ಹೆಚ್ಚು ಆನೆ
ದೇಶದಲ್ಲೇ ಅತಿ ಹೆಚ್ಚು ಆನೆಗಳು ಕರ್ನಾಟಕದಲ್ಲಿವೆ. ಭಾರತದಲ್ಲಿ 30 ಸಾವಿರ ಆನೆಗಳು ಇದ್ದರೆ, ಕರ್ನಾಟಕವೇ 6399 ಗಜಪಡೆಗಳಿಗೆ ಆವಾಸಸ್ಥಾನ.

28. ಮುಳ್ಳಯ್ಯನಗಿರಿ ಸೌಂದರ್ಯ
ಕರ್ನಾಟಕದ ಅತ್ಯಂತ ಎತ್ತರದ ಪರ್ವತ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ. ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಸುಂದರ ತಾಣ. ಸಮೀಪದಲ್ಲೇ ಬಾಬಾಬುಡನ್‌ಗಿರಿ ಇದೆ. ಸೌದಿಯಿಂದ ಭಾರತಕ್ಕೆ ಕಾಫಿ ಪರಿಚಯಿಸಿದ್ದು ಬಾಬಾ ಬುಡನ್‌ ಬಾಬಾ ಎಂಬ ಪ್ರತೀತಿ ಇದೆ.

29. ಕನ್ನಡ ನಾಡಿನ ಸುಂದರ ಕರಾವಳಿ
320 ಕಿ.ಮೀ. ಉದ್ದದ ಕರಾವಳಿಯನ್ನು ಕರ್ನಾಟಕ ಹೊಂದಿದೆ. ನಯಮನೋಹರ ಮಲ್ಪೆ ಸೇರಿದಂತೆ ಹಲವು ಬೀಚ್‌ಗಳು ಪ್ರವಾಸಿಗರಿಗೆ ಅಚ್ಚುಮೆಚ್ಚು. ಪ್ರಮುಖ ಬಂದರುಗಳು ಇಲ್ಲಿವೆ.

30. ಸ್ಕೂಬಾ ಡೈವಿಂಗ್‌ ಸಾಹಸಕ್ಕೂ ಪ್ರಸಿದ್ಧ
ಸ್ಕೂಬಾ ಡೈವಿಂಗ್‌ನಂತಹ ಸಮುದ್ರ ಸಾಹಸದಿಂದಲೂ ಕರ್ನಾಟಕ ಹೆಸರುವಾಸಿ. ಉತ್ತರ ಕನ್ನಡದ ನೇತ್ರಾಣಿ ದ್ವೀಪದ ಸಮೀಪ ಮಾತ್ರ ರಾಜ್ಯದಲ್ಲಿ ಸ್ಕೂಬಾ ಡೈವಿಂಗ್‌ ನಡೆಯುತ್ತದೆ.

31. ಮೊದಲು ವಿದ್ಯುತ್ ಪಡೆದ ರಾಜ್ಯ
ಏಷ್ಯಾದಲ್ಲೇ ಮೊದಲು ವಿದ್ಯುತ್‌ ಉತ್ಪಾದಿಸಿದ್ದು ಕರ್ನಾಟಕ. 1902ರಲ್ಲಿ ಮಂಡ್ಯ ಜಿಲ್ಲೆಯ ಶಿಂಷಾದಲ್ಲಿ ಜಲವಿದ್ಯುತ್ ಯೋಜನೆ ಆರಂಭಿಸಿ ಚಿನ್ನದ ಗಣಿಗೆ ಪೂರೈಸಿತು. ಸಾರ್ವಜನಿಕ ರಸ್ತೆಗಳಲ್ಲಿ ದೀಪಗಳನ್ನು ಬೆಳಗಿಸಿತು.

32. ಕೆಜಿಎಫ್‌ ಚಿನ್ನದ ಗಣಿ
ದೇಶದ ಮೊದಲ ಚಿನ್ನದ ಗಣಿ, ವಿಶ್ವದಲ್ಲೇ 2ನೇ ಅತ್ಯಂತ ಆಳದ ಗಣಿ ಎಂಬ ಹಿರಿಮೆ ಕೆಜಿಎಫ್‌ನದ್ದು. 120 ವರ್ಷ ಚಿನ್ನದ ತೆಗೆದುಕೊಟ್ಟ ಈ ಗಣಿ ಇರುವುದು ನಮ್ಮ ಕೋಲಾರದಲ್ಲಿ.

33. ಸರ್ಕಾರಿ ಬಸ್ ದೇಶದಲ್ಲೇ ಬೆಸ್ಟ್
ಕರ್ನಾಟಕ 4 ಸಾರಿಗೆ ನಿಗಮಗಳನ್ನು ಹೊಂದಿದೆ. ದೇಶದ ಬೇರೆ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ಗೆ ಹೋಲಿಸಿದರೆ ಕರ್ನಾಟಕದ ಬಸ್‌ಗಳು ತುಂಬಾ ಅಚ್ಚುಕಟ್ಟು.

34. ಉಡುಪಿ ಹೋಟೆಲ್‌ಗಳು
ಕರ್ನಾಟಕ ಮಾತ್ರವೇ ಅಲ್ಲದೆ ದೇಶದ ವಿವಿಧೆಡೆಯೂ ಕರ್ನಾಟಕದ ತಿನಿಸು, ಆಹಾರ ಉಣಬಡಿಸುವ ಉಡುಪಿ ಹೋಟೆಲ್‌ಗಳು ಜನಪ್ರಿಯ.

35. ಬ್ಯಾಂಕಿಂಗ್‌ ಕ್ಷೇತ್ರದ ತವರು
ದೇಶಕ್ಕೆ 7 ಬ್ಯಾಂಕುಗಳನ್ನು ಕೊಡುಗೆ ನೀಡಿದ ರಾಜ್ಯ ಕರ್ನಾಟಕ. ಅವೆಂದರೆ- ಕೆನರಾ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ವಿಜಯಾ ಬ್ಯಾಂಕ್‌, ಕಾರ್ಪೋರೇಷನ್‌ ಬ್ಯಾಂಕ್‌, ಕರ್ನಾಟಕ ಬ್ಯಾಂಕ್‌, ಮೈಸೂರು ಸ್ಟೇಟ್‌ ಬ್ಯಾಂಕ್‌ ಹಾಗೂ ವೈಶ್ಯ ಬ್ಯಾಂಕ್‌.

36. ದೇಶದ ಚುನಾವಣೆಗಳಿಗೆ ಮೈಸೂರಿನ ಶಾಯಿ
ಭಾರತದ ಎಲ್ಲ ಚುನಾವಣೆ ಹಾಗೂ ವಿವಿಧ ದೇಶಗಳ ಚುನಾವಣೆಗೆ ಅಳಿಸಲಾಗದ ಶಾಯಿ ಪೂರೈಸುವುದು ನಮ್ಮ ರಾಜ್ಯದ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ.

37. ಚನ್ನಪಟ್ಟಣ ಗೊಂಬೆ, ಕಿನ್ನಾಳ-ಬಿದರಿ ಕಲೆ
ಚನ್ನಪಟ್ಟಣ ಗೊಂಬೆ, ಕಿನ್ನಾಳ ಕಲೆ, ಬಿದರಿ ಕಲೆಯಂತಹ ಹಲವು ಕಲೆಗಳ ತವರೂರು. ದೆಹಲಿಯ ರಾಜಪಥದಲ್ಲಿ ಈ ಕಲೆಗಳ ಸ್ತಬ್ಧಚಿತ್ರ ಪ್ರದರ್ಶನ ಗಮನಸೆಳೆದಿತ್ತು.

38. ಒಂದೇ ರಾಜ್ಯ, ಹಲವು ಉಡುಪು
ಕೊಡಗಿನ ಸಾಂಪ್ರದಾಯಿಕ ಉಡುಪು, ಸೀರೆ ಧರಿಸುವ ವಿಧಾನ, ಲಂಬಾಣಿ ವೇಷ, ಮಂಡ್ಯ ಚಡ್ಡಿ, ಉತ್ತರ ಕರ್ನಾಟಕದ ಕಚ್ಚೆ ಪಂಚೆ, ಗಾಂಧಿ ಟೋಪಿಯಂತಹ ವಿಶಿಷ್ಟ ಉಡುಪುಗಳು ರಾಜ್ಯದ ಹೆಗ್ಗುರುತು.

39. ಚಿತ್ರದುರ್ಗ ಕಲ್ಲಿನ ಕೋಟೆ
11ನೇ ಶತಮಾನದಿಂದ 18ನೇ ಶತಮಾನದವರೆಗೂ ನಿರ್ಮಾಣವಾಗಿರುವ ಚಿತ್ರದುರ್ಗ ಕೋಟೆ. ಏಳುಸುತ್ತಿನ ಕೋಟೆ ಎಂದೂ ಹೆಸರುವಾಸಿ.

40. ಮಧುಗಿರಿ ಏಕ ಶಿಲಾ ಬೆಟ್ಟ
ಏಷ್ಯಾದ 2ನೇ ಅತಿದೊಡ್ಡ ಏಕಶಿಲಾ ಬೆಟ್ಟದ ಮೇಲೆ ವಿಜಯನಗರದ ಅರಸರು ನಿರ್ಮಿಸಿರುವ ಕೋಟೆಯ ಕಾರಣ ಈ ಸ್ಥಳ ಅತ್ಯಂತ ಪ್ರಸಿದ್ಧಿ ಪಡೆದಿದೆ.

41. ದಕ್ಷಿಣದ ತಾಜ್‌ ಗೋಲಗುಂಬಜ್‌
ಯಾವುದೇ ಕಂಬಗಳ ಆಧಾರವಿಲ್ಲದೆ ನಿರ್ಮಿಸಲಾಗಿರುವ ಭವ್ಯವಾದ ಸ್ಮಾರಕ ವಿಜಯಪುರದ ಗೋಲ್‌ಗುಂಬಜ್‌. ಇದನ್ನು ದಕ್ಷಿಣ ಭಾರತದ ತಾಜ್‌ಮಹಲ್‌ ಎಂದೂ ಕರೆಯಲಾಗುತ್ತದೆ.

42. ಶ್ರವಣಬೆಳಗೊಳದ ಗೊಮ್ಮಟ
ಏಕಶಿಲೆಯಲ್ಲಿ ನಿರ್ಮಿಸಲಾದ ಜಗತ್ತಿನ ಎತ್ತರದ ಏಕಶಿಲಾ ವಿಗ್ರಹ. ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕದಿಂದಾಗಿ ಜಗದ್ವಿಖ್ಯಾತ.

43. ಬೇಲೂರು, ಹಂಪಿ ಜಾಗತಿಕ ಹೆಗ್ಗುರುತು
ವಿಶ್ವವಿಖ್ಯಾತ ಹಂಪಿ, ಪಟ್ಟದಕಲ್ಲು, ಪಶ್ಚಿಮ ಘಟ್ಟ, ಹೊಯ್ಸಳ ಶೈಲಿಯ ದೇಗುಲಗಳಂತಹ (ಬೇಲೂರು-ಹಳೇಬೀಡು-ಸೋಮನಾಥಪುರ) 4 ವಿಶ್ವಪಾರಂಪರಿಕ ತಾಣಗಳು ಕರ್ನಾಟಕದ ಮುಕುಟಕ್ಕೆ ಹಿರಿಮೆ.

44. ರಥೋತ್ಸವಗಳಿಗೂ ಫೇಮಸ್‌
ಕರ್ನಾಟಕ ರಥೋತ್ಸವಗಳಿಗೂ ಫೇಮಸ್‌. ಬನಶಂಕರಿ, ಸವದತ್ತಿ, ನಂಜನಗೂಡು, ಮಲೆಮಹದೇಶ್ವರ, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವಗಳಿಗೆ ಅಸಂಖ್ಯಾತ ಜನರು ಸೇರುತ್ತಾರೆ. ಕೊಪ್ಪಳ ಗವಿಸಿದ್ದೇಶ್ವರ ರಥೋತ್ಸವವಂತೂ ಪುರಿ ಜಗನ್ನಾಥ ಯಾತ್ರೆಯನ್ನು ನೆನಪಿಸುವಂತಿರುತ್ತದೆ.

45. ಶ್ರೀಗಂಧದ ತವರೂರು
ಅತಿ ಹೆಚ್ಚು ಶ್ರೀಗಂಧ ಬೆಳೆಯುತ್ತಿದ್ದ ಕಾರಣ ಕರ್ನಾಟಕವನ್ನು ಶ್ರೀಗಂಧದ ಬೀಡು ಎಂದಲೂ ಕರೆಯಲಾಗುತ್ತದೆ. ಕನ್ನಡ ಸಿನಿಮಾ ರಂಗ ‘ಸ್ಯಾಂಡಲ್‌ವುಡ್‌’ ಎಂದೇ ಖ್ಯಾತಿ.

46. ರೇಷ್ಮೆ, ವಿವಿಧ ಸೀರೆಗಳ ನಾಡು
ಮೈಸೂರು ರೇಷ್ಮೆಯಿಂದಾಗಿ ಕರ್ನಾಟಕ ವಿಶ್ವಾದ್ಯಂತ ಬಲು ಫೇಮಸ್‌. ಇದಲ್ಲದೆ ಇಳಕಲ್‌ ಸೀರೆ, ಮೊಳಕಾಲ್ಮುರಿನಂತಹ ಸೀರೆಗಳು ರಾಜ್ಯಕ್ಕೆ ಹಿರಿಮೆ ತಂದಿವೆ.

47. ವಿಶಿಷ್ಟ ವೇಷದ ಯಕ್ಷಗಾನ
ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಒಂದು. ನೃತ್ಯ, ಹಾಡುಗಾರಿಕೆ, ವೇಷಭೂಷಣಗಳನ್ನು ಒಳಗೊಂಡಿರುವ ಇದು ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು ಜನಪ್ರಿಯ.

ಕನ್ನಡದ ಕನಸು ಮುಗಿಲಗಲಕ್ಕೂ ಹಬ್ಬಿಸೋಣ: ರಾಜ್ಯೋತ್ಸವಕ್ಕೆ ಸಿದ್ದರಾಮಯ್ಯ ವಿಶೇಷ ಲೇಖನ

48. ಮೈಸೂರು ದಸರಾ
ಮೈಸೂರು ದಸರಾ ವಿಶ್ವವಿಖ್ಯಾತ. ನವರಾತ್ರಿಯ ಕೊನೆಯ ದಿನ ಚಿನ್ನದ ಅಂಬಾರಿ ಹೊತ್ತು ಗಜಪಡೆ ಹೆಜ್ಜೆ ಹಾಕುವುದನ್ನು ನೋಡಲು ವಿಶ್ವದ ವಿವಿಧೆಡೆಯಿಂದ ಜನರು ಬರುತ್ತಾರೆ.

49. ಕರಾವಳಿಯ ಕಂಬಳ
ತುಳುನಾಡಿನ ಕೋಣಗಳ ಓಟ ಸ್ಪರ್ಧೆ. ವೇಗ, ಕಸರತ್ತಿನಿಂದಾಗಿ ಜನರ ಗಮನಸೆಳೆಯುವ ಆಟ. ಹಲವು ಸಿನಿಮಾಗಳಿಂದಾಗಿ ದೇಶದ ಹಲವೆಡೆ ಇದು ಪರಿಚಿತ.

50. ಕೆಜಿಎಫ್‌, ಕಾಂತಾರ ಸದ್ದು
ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ನೋಡಿದ ಸಿನಿಮಾಗಳು ಇವೆ. ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಹಣ ಗಳಿಸಿದ್ದೇ ಅಲ್ಲದೆ ಸಾಕಷ್ಟು ಚರ್ಚೆಗೂ ಒಳಪಟ್ಟವು.

Follow Us:
Download App:
  • android
  • ios