ಮೈಸೂರು ರಾಜ್ಯ-ಕರ್ನಾಟಕ ಹುಟ್ಟಿದ್ದು ಹೇಗೆ?: 9ನೇ ಶತಮಾನದಲ್ಲೇ ಇದ್ದ ನಮ್ಮ ಕನ್ನಡ ನಾಡು!
ಕರ್ನಾಟಕ ರಾಜ್ಯೋತ್ಸವ. ಇದು 1956ರ ನವೆಂಬರ್ ಒಂದರಂದು ಭಾಷಾವಾರು ರಾಜ್ಯಗಳು ರಚನೆಯಾದ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಗೊಂಡು ರಾಜ್ಯವಾದ ದಿವಸ.

ಆನಂದ್, ಬನವಾಸಿ ಬಳಗ, ಬೆಂಗಳೂರು
ನಮ್ಮ ಕನ್ನಡನಾಡು ನಮ್ಮ ಹಿರಿಯರು, ಕನ್ನಡನಾಡಿನ ಗಡಿಗಳನ್ನು ಗುರುತಿಸಿ 1150 ವರ್ಷಗಳಷ್ಟು ಹಿಂದೆಯೇ ಬರೆದಿದ್ದಾರೆ. ಒಂಬತ್ತನೆಯ ಶತಮಾನದಲ್ಲೇ ‘ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್’ ಎಂಬ ಸಾಲುಗಳ ಮೂಲಕ ಕನ್ನಡಿಗರ ನೆಲೆಯ ಹರವನ್ನು ತಿಳಿಸಿದ್ದಾರೆ. ಇಂದಿನ ಕನ್ನಡನಾಡು ನಿಜವಾದ ಕನ್ನಡನಾಡಿನ ಮೂರನೇ ಒಂದು ಭಾಗ ಮಾತ್ರ ಎಂದರೆ ಅಚ್ಚರಿಯುಂಟಾಗಬಹುದು. ಡಾ.ಚಿದಾನಂದಮೂರ್ತಿಗಳ ಸಂಶೋಧನಾಧರಿತ ಪುಸ್ತಕ ‘ಬೃಹತ್ ಕರ್ನಾಟಕ – ಭಾಷಿಕ, ಸಾಂಸ್ಕೃತಿಕ’ದಲ್ಲಿ ಕನ್ನಡಿಗರ ತವರು ನೆಲ ಇಡೀ ಮಹಾರಾಷ್ಟ್ರವನ್ನೆಲ್ಲಾ ಒಳಗೊಂಡಿದ್ದ ನಾಸಿಕ್‌ನ ಬಳಿಯ ಗೋದಾವರಿಯ ಉತ್ತರದ ಭಾಗದಿಂದ ದಕ್ಷಿಣದಲ್ಲಿ ಕಾವೇರಿ ನದಿತಟದಲ್ಲಿನ ಧರ್ಮಪುರಿ, ಕೃಷ್ಣಗಿರಿಗಳವರೆಗಿನ ನಾಡು ಎಂಬುದನ್ನು ಸಾಧಾರವಾಗಿ ವಿವರಿಸಲಾಗಿದೆ.
ಕನ್ನಡನಾಡಿನ ರಾಜಕೀಯ ಗಡಿಗಳು ಕಾಲಕಾಲಕ್ಕೆ ಹಿಗ್ಗಿವೆ, ಕುಗ್ಗಿವೆ, ಹರಡಿ ಹೋಗಿವೆ. ಚಾಲುಕ್ಯ ಸಾಮ್ರಾಜ್ಯದಲ್ಲಿ ಇಡೀ ಕನ್ನಡ ಪ್ರದೇಶಗಳು ಒಂದು ಆಳ್ವಿಕೆಯ ಅಡಿಯಲ್ಲಿ ಇದ್ದದ್ದು. ಇದು ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರ ಕಾಲದವರೆಗೂ ಮುಂದುವರೆದಿತ್ತು. ಮುಂದೆ ಹೊಯ್ಸಳರ ಕಾಲದಲ್ಲಿ ಉತ್ತರದ ಭಾಗ ಕನ್ನಡಿಗ ಸೇವುಣರ ಕೈಸೇರಿದರೆ ದಕ್ಷಿಣ ಭಾಗ ಹೊಯ್ಸಳರ ಕೈಸೇರಿತು. ನಿರಂತರವಾಗಿ ಉತ್ತರ ಭಾಗದಿಂದ ಆಗುತ್ತಿದ್ದ ಮುಸ್ಲಿಮ್ ರಾಜರುಗಳ ದಾಳಿಗೆ ಕೊನೆಗೊಮ್ಮ ಸೇವುಣರ ರಾಜ್ಯ ಮಣಿಯಿತು. ನಂತರದಲ್ಲಿ ವಿಜಯನಗರವನ್ನು ರಾಜಧಾನಿಯಾಗಿಸಿಕೊಂಡಿದ್ದ ಕರ್ನಾಟಕ ಸಾಮ್ರಾಜ್ಯದ ಹುಟ್ಟಿನೊಂದಿಗೆ ಮತ್ತೊಮ್ಮೆ ವೈಭವದ ದಿನಗಳನ್ನು ಕನ್ನಡನಾಡು ಕಂಡಿತು.
ಭಾರತಕ್ಕೆ ಮಾದರಿಯಾಗಿ ಕನ್ನಡ ನಾಡು ಕಟ್ಟೋಣ: ರಾಜ್ಯೋತ್ಸವಕ್ಕೆ ಡಿ.ಕೆ.ಶಿವಕುಮಾರ್ ಲೇಖನ
ಆ ಹೊತ್ತಿನಲ್ಲಿ ಕಲೆ, ಸಂಗೀತ, ಸಾಹಿತ್ಯಗಳು ಉತ್ತಂಗಕ್ಕೇರಿದಂತೆಯೇ ತಂತ್ರಜ್ಞಾನ, ವಿದೇಶಗಳೊಂದಿಗೆ ವ್ಯಾಪಾರ ವಹಿವಾಟುಗಳು ಕೂಡಾ ಉತ್ತುಂಗ ಸ್ಥಿತಿಯಲ್ಲಿತ್ತು. ೧೫೬೫ರ ಜನವರಿ ೨೩ರ ತಾಳಿಕೋಟೆ ಯುದ್ಧದಲ್ಲಿ ಆದ ಘನಘೋರ ಸೋಲು, ಕರ್ನಾಟಕ ಸಾಮ್ರಾಜ್ಯದ ಅವನತಿಗೆ ಕಾರಣವಾಯಿತು. ಬಹುಶಃ ಅಂದಿನಿಂದಲೇ ಕನ್ನಡಿಗರ ಇತಿಹಾಸ ಮುಕ್ಕಾಗತೊಡಗಿತು. ಕರ್ನಾಟಕ ಸಾಮ್ರಾಜ್ಯದ ಹಲವು ಪ್ರದೇಶಗಳು ಸುಲ್ತಾನರುಗಳ ವಶವಾದರೆ ಇನ್ನು ಹಲವು ಸ್ವತಂತ್ರ ಪಾಳೆಪಟ್ಟುಗಳಾಗಲು ಮುಂದಾದವು. ನಡುವೆ ಮೈಸೂರು ಸಂಸ್ಥಾನ ಪ್ರವರ್ಧಮಾನಕ್ಕೆ ಬಂದಿತು.
ಹೈದರಾಲಿ ಹಾಗೂ ಟಿಪ್ಪುಸುಲ್ತಾನರ ಕಾಲದಲ್ಲಿ ಇದು ಮತ್ತೆ ಹಿಗ್ಗಿತ್ತು. ಟಿಪ್ಪು ಪತನದ ನಂತರ ಮರಾಠ, ಹೈದರಾಬಾದ್, ಮೈಸೂರು ಯದುವಂಶದ ದೊರೆಗಳು ಹಾಗೂ ಬ್ರಿಟಿಷರ ಆಡಳಿತದಲ್ಲಿ ಹಂಚಿಹೋಯಿತು. ಬಳ್ಳಾರಿ ಜಿಲ್ಲೆಯ ಕಲೆಕ್ಟರ್ ಆಗಿದ್ದ ಸರ್ ಥಾಮಸ್ ಮನ್ರೋ ಅವರು ಕನ್ನಡ ಭಾಷಿಕ ಪ್ರದೇಶಗಳೆಲ್ಲಾ ಒಂದು ಅಳ್ವಿಕೆಯಡಿಯಲ್ಲಿ ಬರಬೇಕೆಂದು ಪ್ರಯತ್ನಿಸಿದ ಮೊದಲ ಬ್ರಿಟಿಷ್ ಅಧಿಕಾರಿ ಅನ್ನಬಹುದು. ೧೯೦೦ರ ಹೊತ್ತಿಗೆ ಕನ್ನಡ ಮಾತನ್ನಾಡುವ ಪ್ರದೇಶಗಳು ೧೯ ವಿಭಿನ್ನ ಆಳ್ವಿಕೆಗಳಲ್ಲಿ ಹಂಚಿಹೋಗಿತ್ತು.
ಏಕೀಕರಣದ ಬಯಕೆ: ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಒಂದಾಗಬೇಕು ಎಂಬ ಬಯಕೆ ಚಿಗುರಲು ಮುಖ್ಯವಾದ ಮತ್ತೊಂದು ಕಾರಣ ಬಂಗಾಲದ ವಿಭಜನೆ ಹಾಗೂ ಮರುವಿಲೀನಗಳು, ಈ ನಿಟ್ಟಿನಲ್ಲಿ ನಡೆದ ಚಳವಳಿಗಳು, ಒರಿಸ್ಸಾ ಹಾಗೂ ಬಿಹಾರ ಪ್ರಾಂತ್ಯಗಳು ಭಾಷಾಧಾರಿತ ರಾಜ್ಯಗಳಾಗಬೇಕೆಂದು ಎತ್ತಿದ್ದ ಬೇಡಿಕೆಗಳು, ಹೋರಾಟಗಳು ಕನ್ನಡಿಗರಲ್ಲಿ ಆಸೆ ಮೊಳೆಯುವಂತೆ ಮಾಡಿದವು. ಈ ನಿಟ್ಟಿನಲ್ಲಿ ಕರ್ನಾಟಕ ಕುಲಪುರೋಹಿತರಾದ ಶ್ರೀ ಆಲೂರು ವೆಂಕಟರಾಯರ ಪ್ರಯತ್ನಗಳು ಬಹಳ ಮಹತ್ವವಾದವು. ತಮ್ಮ ಪ್ರಭಾವಶಾಲಿ ಬರಹಗಳಿಂದ ಕನ್ನಡಿಗರಲ್ಲಿ ಎಚ್ಚರ ಮೂಡಿಸಿದ ಆಲೂರರ ‘ಕರ್ನಾಟಕ ಗತವೈಭವ’ ಈ ನಿಟ್ಟಿನಲ್ಲಿ ಬಹಳವೇ ಪ್ರಭಾವ ಬೀರಿದವು.
ಕರ್ನಾಟಕ ವಿದ್ಯಾವರ್ಧಕ ಸಂಘ, ಕರ್ನಾಟಕ ಸಾಹಿತ್ಯ ಪರಿಷತ್ತು ತರಹದ ಹಲವು ಸಂಘ ಸಂಸ್ಥೆಗಳು ಜನ್ಮ ತಳೆದವು. ಪಾಟೀಲ ಪುಟ್ಟಪ್ಪನವರು, ಮುದವೀಡು ಕೃಷ್ಣರಾಯರು, ಬಿಂದೂರಾವ್ ಮುತಾಲಿಕ್ ದೇಸಾಯಿಗಳು, ಕಡಪಾ ರಾಘವೇಂದ್ರರಾಯರು, ಗದಿಗೆಯ್ಯ ಹೊನ್ನಾಪುರಮಠ, ಪಾಟೀಲ ಸಂಗಪ್ಪ, ಗಂಗಾಧರ ದೇಶಪಾಂಡೆಯವರು ಆಲೂರರಿಗೆ ಹೆಗಲು ನೀಡಿದರು. ವಾಗ್ಭೂಷಣ, ಕರ್ನಾಟಕ ಕೇಸರಿ, ಕರ್ಮವೀರ, ಕರ್ನಾಟಕ ವೃತ್ತ ಮೊದಲಾದ ಹಲವಾರು ಪತ್ರಿಕೆಗಳಲ್ಲಿ ಬರಹಗಳ ಮೂಲಕ ಕರ್ನಾಟಕ ಏಕೀಕರಣದ ಅಗತ್ಯವನ್ನು ಜನರಿಗೆ ಮನದಟ್ಟು ಮಾಡಿಸಿದರು. ಕರ್ನಾಟಕ ಕೈಪಿಡಿ ಎನ್ನುವ ಮತ್ತೊಂದು ಗ್ರಂಥವೂ ಪ್ರಭಾವಶಾಲಿಯಾಗಿತ್ತು, ಈ ಚಳವಳಿಗೆ ಉಳಿದ ಕನ್ನಡ ಪ್ರಾಂತ್ಯಗಳಿಂದಲೂ ಬೆಂಬಲ ದೊರೆತು ಅಲ್ಲಿಂದಲೂ ದನಿ ಹೊಮ್ಮಿಬಂದಿತು. ಕೆಂಗಲ್ ಹನುಮಂತಯ್ಯ, ಕುವೆಂಪು, ಕಕ್ಕಿಲಾಯ, ಕರೀಂಖಾನ್, ಕಯ್ಯಾರ ಕಿಂಞಣ್ಣ ರೈ, ಅನಕೃ, ಟಿ.ಪಿ.ಕೈಲಾಸಂ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಹೀಗೆ ನೂರಾರು ಮಹನೀಯರು ದನಿಗೂಡಿಸಿದರು.
ಅದರಗುಂಚಿ ಪಾಟೀಲರ ಆಮರಣ ಉಪವಾಸ: ಏಕೀಕರಣಕ್ಕಾಗಿ ನಡೆದ ಚಳವಳಿಯಲ್ಲಿ ಅದರಗುಂಚಿ ಶಂಕರಗೌಡ ಪಾಟೀಲರ ಉಪವಾಸ ಸತ್ಯಾಗ್ರಹ ಬಹಳ ಮಹತ್ವದ್ದು. ಏಕೀಕರಣಕ್ಕಾಗಿ ಅವರು ೨೮ನೇ ಮಾರ್ಚ್ ೧೯೫೩ರಲ್ಲಿ ಆಮರಣ ಉಪವಾಸಕ್ಕೆ ಕುಳಿತರು. ಹುಬ್ಬಳ್ಳಿಯ ಗಲಭೆಯ ನಂತರ ಸೊಲ್ಲಾಪುರದ ಜಯದೇವಿ ತಾಯಿ ಲಿಗಾಡೆ ಅವರು ರಕ್ತದಲ್ಲಿ ಪತ್ರ ಬರೆದ ಘಟನೆ ನಡೆಯಿತು. ಶಂಕರಗೌಡ ಪಾಟೀಲರ ಉಪವಾಸ ಸತ್ಯಾಗ್ರಹದ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಅಳವಂಡಿ ಶಿವಮೂರ್ತಿಸ್ವಾಮಿ ಅವರು, ಶೀಘ್ರವೇ ಕರ್ನಾಟಕ ಪ್ರಾಂತ ರಚನೆ ಆಗದಿದ್ದರೆ ಪರಿಸ್ಥಿತಿ ಉಲ್ಬಣಗೊಳ್ಳುತ್ತದೆ ಎಂಬ ಸೂಚನೆ ನೀಡಿದರು. ಮುಂಬಯಿ ಮತ್ತು ಹೈದರಾಬಾದ್ ಕರ್ನಾಟಕದ ಬಹುತೇಕ ಎಲ್ಲ ಭಾಗಗಳಿಂದ ಅನೇಕರು ಅದರಗುಂಚಿಗೆ ಬಂದು ತಮ್ಮ ಬೆಂಬಲ ಸೂಚಿಸಿದರು. ಕರ್ನಾಟಕ ಏಕೀಕರಣ ಸಮಸ್ಯೆಯು ಕೇವಲ ಕೆಲವು ರಾಜಕೀಯ ನಾಯಕರ ಸಮಸ್ಯೆ ಆಗಿ ಉಳಿಯದೆ ಇಡೀ ಜನತೆಯ ವಿಷಯವಾಗಿ ಪರಿಣಮಿಸಿತು. ಆಗ ಪಾಟೀಲರು ೨೩ ದಿನಗಳ ಉಪವಾಸ ಸತ್ಯಾಗ್ರಹವನ್ನು ಕೈಬಿಡಬೇಕಾಯಿತು.
ಹುಬ್ಬಳ್ಳಿ ಗೋಲಿಬಾರ್: ದಿನಗಳೆದಂತೆ ಅದರಗುಂಚಿ ಪಾಟೀಲರ ಉಪವಾಸ ಸತ್ಯಾಗ್ರಹದ ಸುದ್ದಿ ಜನರನ್ನು ರೊಚ್ಚಿಗೆಬ್ಬಿಸುತ್ತಿದ್ದವು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕೂಡಾ ಭಾಷಾವಾರು ಪ್ರಾಂತ್ಯರಚನೆಯ ಪರವಾಗಿ ನಿಂತಿತ್ತು. ೧೯ನೇ ಏಪ್ರಿಲ್ ೧೯೫೩ರಂದು ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಹುಬ್ಬಳ್ಳಿಯ ಗುಳಕವ್ವ ಮೈದಾನದಲ್ಲಿ ಕೆಪಿಸಿಸಿ ಕಾರ್ಯಕಾರಿ ಸಮಿತಿಯ ಸಭೆಯೊಂದು ನಡೆಯುತ್ತಿದ್ದಾಗ ಅಲ್ಲಿಗೆ ನುಗ್ಗಿದ ಪ್ರತಿಭಟನಾಕಾರರು ನಿಜಲಿಂಗಪ್ಪನವರಿಗೆ ಬಳೆ ತೊಡಿಸಿ ಚಪ್ಪಲಿ ಎಸೆದು ಅಪಮಾನಿಸಿದರು. ಹೀಗೆ ದಾಂಧಲೆಯಾದಾಗ, ಪೊಲೀಸರು ನಡೆಸಿದ ಲಾಠಿಚಾರ್ಜು, ಗೋಲಿಬಾರು ಜನರು ಚೆಲ್ಲಾಪಿಲ್ಲಿಯಾಗುವಂತೆ ಮಾಡಿತು. ಪಕ್ಕದಲ್ಲೇ ನಡೆಯುತ್ತಿದ್ದ ಒಂದು ಸರ್ಕಸ್‌ನಿಂದ ಹುಲಿ ಸಿಂಹಗಳು ತಪ್ಪಿಸಿಕೊಂಡು ಜನರ ಮಧ್ಯೆ ನುಗ್ಗಿದ್ದು ದೊಂಬಿಯನ್ನು ಮತ್ತಷ್ಟು ಹೆಚ್ಚಿಸಿತ್ತು. ಇಂಥದ್ದೊಂದು ರೋಚಕ ಘಟನೆ ಅಂದಿನ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಮುಖಪುಟದಲ್ಲಿ ಬಂದಿತ್ತು.
ಭಾಷಾವಾರು ಪ್ರಾಂತ್ಯ ರಚನೆಯ ಕುರಿತಾಗಿ ಕಾಲಕಾಲಕ್ಕೆ ಹಲವಾರು ಸಮಿತಿಗಳು, ಆಯೋಗಗಳು ರಚನೆಯಾಗಿ ವಿಭಿನ್ನ ವರದಿಗಳನ್ನು ನೀಡಿದ್ದವು. ಧರ್ ಆಯೋಗ ಭಾಷಾವಾರು ಪ್ರಾಂತ್ಯ ರಚನೆ ಸದ್ಯಕ್ಕೆ ಬೇಡ ಎಂದಿತು. ಜೆವಿಪಿ (ಜವಾಹರಲಾಲ್ ನೆಹರೂ, ಪಟ್ಟಾಭಿ ಸೀತಾರಾಮಯ್ಯ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್) ಆಯೋಗವು ಕೂಡಾ ಅದನ್ನೇ ಎತ್ತಿ ಹಿಡಿದಿತ್ತು. ಮುಂದೆ ಪೊಟ್ಟಿ ಶ್ರೀರಾಮುಲು ಅವರ ಆಮರಣ ಸತ್ಯಾಗ್ರಹ ನಡೆದು ಅವರ ಬಲಿದಾನವಾಯಿತು.
ಪೊಟ್ಟಿ ಶ್ರೀರಾಮುಲು: ಈ ನಡುವೆ 1952ರ ಹೊತ್ತಿಗೆ ಆಂಧ್ರದಲ್ಲಿ ಭಾಷಾವಾರು ಪ್ರಾಂತ್ಯದ ಸಲುವಾಗಿ ನಡೆದ ಹೋರಾಟಗಳು ತೀವ್ರತೆ ಪಡೆದವು. ಆಂಧ್ರ ಪ್ರದೇಶದ ಉದಯಕ್ಕೆ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಇವರನ್ನು ‘ಅಮರಜೀವಿ’ ಪೊಟ್ಟಿ ಶ್ರೀರಾಮುಲು ಅವರ ಮರಣ ಎಲ್ಲೆಡೆ ದಂಗೆಗೆ ಎಡೆ ಮಾಡಿಕೊಟ್ಟಿತು. ಅವರು ಸತ್ತ ಮೂರೇ ದಿನಗಳಲ್ಲಿ ಆಂಧ್ರ ರಾಜ್ಯದ ಸ್ಥಾಪನೆ ಘೋಷಿಸಿದರು.
ರಂಜಾನ್ ಸಾಬ್ ಬಲಿದಾನ: ಈ ಹೊತ್ತಲ್ಲಿ ಬಳ್ಳಾರಿ ಜಿಲ್ಲೆಯ ವಿಭಜನೆಯೂ ನಡೆದು ಆಲೂರು, ಆದವಾನಿ ಹಾಗೂ ರಾಯದುರ್ಗಗಳು ಆಂಧ್ರದ ಪಾಲಾದವು. ಇಡೀ ಬಳ್ಳಾರಿಯೇ ಕೈತಪ್ಪದೆ ಒಂದಿಷ್ಟು ತಾಲ್ಲೂಕುಗಳು ಮೈಸೂರು ಪ್ರಾಂತ್ಯದಲ್ಲಿ ವಿಲೀನವಾದವು. ಈ ಸಂದರ್ಭದಲ್ಲಿ ಒಂದು ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ಬಳ್ಳಾರಿಯಲ್ಲಿ ಹಮ್ಮಿಕೊಳ್ಳಲಾಯಿತು. ರಾತ್ರಿ ಸಭಾಮಂಟಪವನ್ನು ಕಾಯುತ್ತಿದ್ದ ಕನ್ನಡ ಹೋರಾಟಗಾರ ರಂಜಾನ್ ಸಾಬ್ ಅವರ ಮೇಲೆ ಸೆಪ್ಟೆಂಬರ್ 30,1953ರಂದು ಆಸಿಡ್ ಬಲ್ಬ್ ದಾಳಿ ನಡೆದು ಅವರು ಹುತಾತ್ಮರಾಗಬೇಕಾಯಿತು.
ಕನ್ನಡದ ಕನಸು ಮುಗಿಲಗಲಕ್ಕೂ ಹಬ್ಬಿಸೋಣ: ರಾಜ್ಯೋತ್ಸವಕ್ಕೆ ಸಿದ್ದರಾಮಯ್ಯ ವಿಶೇಷ ಲೇಖನ
ರಾಜ್ಯ ಪುನರ್ವಿಂಗಡನಾ ಆಯೋಗದ ರಚನೆಯಾಗಿ ಕರ್ನಾಟಕ ರಾಜ್ಯದಲ್ಲಿ ಯಾವ ಯಾವ ಪ್ರದೇಶಗಳು ಸೇರಬೇಕೆಂಬುದು ತೀರ್ಮಾನವಾಯಿತು. ಅಪೂರ್ಣವಾದರೂ ವಿಶಾಲವಾದ ಮೈಸೂರು ರಾಜ್ಯ ನವೆಂಬರ್ 1, 1956ರಂದು ಉದಯವಾಯಿತು. ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ಕಾಸರಗೋಡು, ಮಡಕಶಿರಾ ತರಹದ ಹಲವು ಅಚ್ಚ ಕನ್ನಡ ಪ್ರದೇಶಗಳು ಕರ್ನಾಟಕವನ್ನು ಸೇರಲಾಗದ ಕಹಿಯೊಂದಿಗೇ ಕರ್ನಾಟಕ ರಾಜ್ಯ ಉದಯವಾಯಿತು. ಮುಂದೆ ಮೈಸೂರು ರಾಜ್ಯವನ್ನು 1973ರಲ್ಲಿ ದೇವರಾಜ ಅರಸ್ ಅವರ ಮುಂದಾಳ್ತನದ ಸರ್ಕಾರವು ಕರ್ನಾಟಕ ಎಂದು ಮರುನಾಮಕರಣ ಮಾಡಿತು. ಇದಾಗಿ ಇಂದಿಗೆ 50 ವರ್ಷಗಳಾಗಿವೆ.
ಉಸಿರಾಗಬೇಕಿದೆ ಕನ್ನಡ: ಕರ್ನಾಟಕವೇನೋ ನಮ್ಮದಾಗಿದೆ. ಆದರೆ ಇಲ್ಲಿ ಕನ್ನಡನಾಡಿನಲ್ಲೇ ಕನ್ನಡ ನಿಧಾನವಾಗಿ ಅಳಿದುಹೋಗುತ್ತಿರುವ ಪರಿಸ್ಥಿತಿಯನ್ನು ಕಾಣಬಹುದಾಗಿದೆ. ಕನ್ನಡವನ್ನು ನಿಧಾನವಾಗಿ ಇಂಗ್ಲಿಷ್, ಹಿಂದಿಗಳು ಪಲ್ಲಟಗೊಳಿಸುತ್ತಿರುವ ಈ ದಿನಗಳಲ್ಲಿ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎನ್ನುವ ಚನ್ನವೀರ ಕಣವಿಯವರ ಕವಿವಾಣಿ ಹೆಚ್ಚೆಚ್ಚು ಪ್ರಸ್ತುತ ಎನ್ನಿಸುತ್ತದೆ.