Asianet Suvarna News Asianet Suvarna News

ಕನ್ನಡದ ಕನಸು ಮುಗಿಲಗಲಕ್ಕೂ ಹಬ್ಬಿಸೋಣ: ರಾಜ್ಯೋತ್ಸವಕ್ಕೆ ಸಿದ್ದರಾಮಯ್ಯ ವಿಶೇಷ ಲೇಖನ

ನಾಡಿನ ಸಮಸ್ತ ಜನತೆಗೆ 68ನೇ ಕನ್ನಡ ರಾಜ್ಯೋತ್ಸವದ ಹಾಗೂ ‘ಕರ್ನಾಟಕ’ವೆಂದು ನಾಮಕರಣಗೊಂಡು ಐವತ್ತು ವರ್ಷಗಳು ಸಂದ ಸುವರ್ಣ ಮಹೋತ್ಸವ ಸಂಭ್ರಮದ ಶುಭಾಶಯಗಳು. ಸಾವಿರಾರು ವರ್ಷಗಳಿಗೂ ಮೀರಿದ ಭವ್ಯ ಇತಿಹಾಸವುಳ್ಳ ಕರ್ನಾಟಕಕ್ಕೆ ಎರಡು ಸಾವಿರ ವರ್ಷಗಳಿಗೂ ಮೀರಿದ ಭಾಷಾ ಲಿಪಿಯ ಪರಂಪರೆಯಿದೆ. 

special article by cm siddaramaiah over kannada rajyotsava gvd
Author
First Published Nov 1, 2023, 6:03 AM IST

ನಾಡಿನ ಸಮಸ್ತ ಜನತೆಗೆ 68ನೇ ಕನ್ನಡ ರಾಜ್ಯೋತ್ಸವದ ಹಾಗೂ ‘ಕರ್ನಾಟಕ’ವೆಂದು ನಾಮಕರಣಗೊಂಡು ಐವತ್ತು ವರ್ಷಗಳು ಸಂದ ಸುವರ್ಣ ಮಹೋತ್ಸವ ಸಂಭ್ರಮದ ಶುಭಾಶಯಗಳು. ಸಾವಿರಾರು ವರ್ಷಗಳಿಗೂ ಮೀರಿದ ಭವ್ಯ ಇತಿಹಾಸವುಳ್ಳ ಕರ್ನಾಟಕಕ್ಕೆ ಎರಡು ಸಾವಿರ ವರ್ಷಗಳಿಗೂ ಮೀರಿದ ಭಾಷಾ ಲಿಪಿಯ ಪರಂಪರೆಯಿದೆ. ಸಾವಿರ ವರ್ಷಗಳ ಹಿಂದೆಯೇ ಮುಪ್ಪರಿಗೊಂಡ ಸಾಹಿತ್ಯ; ಹನ್ನೆರಡನೆಯ ಶತಮಾನದಲ್ಲಿಯೇ ವಚನ ಚಳವಳಿಯ ಮೂಲಕ ಸಮತೆಯ ತತ್ವವನ್ನು ಜಗತ್ತಿನ ಮುಂದಿರಿಸಿ ಹೊಸದೊಂದು ವೈಚಾರಿಕ ಚಿಂತನಾ ಕ್ರಮವನ್ನು ನೀಡಿದ ಘನ ಇತಿಹಾಸವಿದೆ. ಸಂಪದ್ಭರಿತ ಸಾಮ್ರಾಜ್ಯಗಳು, ಪ್ರಗತಿಪರ ಚಿಂತನೆಯ ರಾಜಮನೆತನಗಳು ಈ ನಾಡನ್ನಾಳಿವೆ.

ನಮ್ಮ ಜಾನಪದ ಕಾವ್ಯಗಳು, ಕಲೆಗಳು ತಮ್ಮ ಒಡಲಿನಲ್ಲಿ ಸಮೃದ್ಧ ಜೀವನಾನುಭವ, ಜನಪದರ ವಿವೇಕವನ್ನು ಒಳಗೊಂಡಿವೆ. ಜಗತ್ತಿನ ಇತಿಹಾಸದಲ್ಲಿಯೇ ಅಪರೂಪವೆನ್ನುವಂತೆ ಗಾಢ ಸಂಸ್ಕೃತಿಯನ್ನು, ದಟ್ಟ ಚಿಂತನಾಕ್ರಮವೊಂದನ್ನು ಹಲವಾರು ಶತಮಾನಗಳ ಹಿಂದೆಯೇ ರೂಪಿಸಿಕೊಂಡ ಶ್ರೇಷ್ಠ ನಾಗರಿಕತೆಗಳ ಸಾಲಿನಲ್ಲಿ ಕನ್ನಡ ಸಮುದಾಯ ಮುಂಚೂಣಿಯಲ್ಲಿ ನಿಲ್ಲುತ್ತದೆ. ಭೌಗೋಳಿಕವಾಗಿಯಂತೂ ನಮ್ಮ ಈ ನಾಡು ಅಪಾರ ಪ್ರಾಕೃತಿಕ, ಜೈವಿಕ ವೈವಿಧ್ಯಗಳನ್ನು ಒಳಗೊಂಡಿರುವ ಚೆಲುವ ಕನ್ನಡ ನಾಡೇ ಆಗಿದೆ. ಹೀಗೆ ಭೌಗೋಳಿಕ, ಸಾಂಸ್ಕೃತಿಕ ಶ್ರೀಮಂತಿಕೆ ಮೇಳೈಸಿರುವ, ವಿಚಾರವಂತಿಕೆ, ಕಲಾವಂತಿಕೆಗಳು ಮುಪ್ಪರಿಗೊಂಡಿರುವ ಸಾವಿರಾರು ವರ್ಷಗಳ ಘನ ಇತಿಹಾಸವುಳ್ಳ ಕನ್ನಡ ಭಾಷಿಕ ಸಮುದಾಯವು ತನ್ನ ವಿನಯವಂತಿಕೆಯಿಂದಾಗಿಯೇ ಆದರಣೀಯವಾಗಿದೆ.

ಜಾತಿ ಗಣತಿ ವರದಿ ಸ್ವೀಕರಿಸುತ್ತೇವೆ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಇಂದು ಕರ್ನಾಟಕವು ತನ್ನ ಉದ್ಯಮಶೀಲತೆ, ನಾವೀನ್ಯತೆಗಳಿಂದಾಗಿ, ಕ್ರಿಯಾಶೀಲ ಮಾನವ ಸಂಪನ್ಮೂಲದಿಂದ ಜಾಗತಿಕವಾಗಿ ತನ್ನದೇ ಆದ ಗುರುತರ ಛಾಪು ಮೂಡಿಸಿದೆ. ಈ ಕಾರಣಕ್ಕಾಗಿಯೇ ಜಗತ್ತಿನ ಶ್ರೇಷ್ಠ ಉದ್ದಿಮೆಗಳು, ಸಂಶೋಧನಾ ಸಂಸ್ಥೆಗಳು ಕರ್ನಾಟಕದಲ್ಲಿ ನೆಲೆಯೂರಿವೆ, ಇಲ್ಲಿನ ಪ್ರತಿಭಾಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುತ್ತಿವೆ. ಕನ್ನಡಿಗರಾದ ನಾವು ನಮ್ಮ ಘನಪರಂಪರೆಯನ್ನು ನೆನೆಯುತ್ತಾ ಜಾಗತಿಕ ಭೂಪಟದಲ್ಲಿ ಕರ್ನಾಟಕವು ಮುಕುಟಮಣಿಯಾಗಿ ಶೋಭಿಸಲು ನಮ್ಮ ಜೀವನವನ್ನು ಮುಡುಪಾಗಿಡೋಣ. ಸಮತೋಲಿತ, ಸುಸ್ಥಿರ ಅಭಿವೃದ್ಧಿಯ ಹರಿಕಾರರಾಗಿ ಜಗತ್ತಿಗೇ ಮಾದರಿಯಾಗಲು ಶ್ರಮಿಸೋಣ.

ಕನ್ನಡ ರಾಜ್ಯೋತ್ಸವ ಎನ್ನುವುದು ಕೇವಲ ಸಂಭ್ರಮದ ಕಾಲವಲ್ಲ, ಇದು ನಾಡು-ನುಡಿಯ ಬಗ್ಗೆ ನಮಗಿರುವ ಬದ್ಧತೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಕಾಲವೂ ಹೌದು. ಸಾಮಾನ್ಯವಾಗಿ ನಮ್ಮ ಕನ್ನಡ ಪ್ರೇಮ ಕನ್ನಡ ರಾಜ್ಯೋತ್ಸವದ ದಿನ ಮತ್ತು ನವೆಂಬರ್ ತಿಂಗಳಲ್ಲಿ ಸಂಭ್ರಮ-ಸಡಗರದ ಹೊನಲಾಗಿ ರಾಜ್ಯದ ಬೀದಿಬೀದಿಗಳಲ್ಲಿ ಹರಿಯುತ್ತದೆ. ಇದು ನಾವೆಲ್ಲರೂ ಹೆಮ್ಮೆಪಡಬೇಕಾದ ಸಂಗತಿಯೇ ಆಗಿದೆ. ಆದರೆ ಈ ಅಭಿಮಾನ ನವೆಂಬರ್ ತಿಂಗಳಲ್ಲಿ ವಿಜೃಂಭಿಸಿ ನಂತರದ ದಿನಗಳಲ್ಲಿ ಕಳೆದುಹೋಗಬಾರದು. ಕನ್ನಡವನ್ನು ಕಟ್ಟುವ, ಬೆಳೆಸುವ ಉಳಿಸುವ ನಮ್ಮ ಬದುಕಿನ ಭಾಗವಾಗಿ ನಿರಂತರವಾಗಿ ನಡೆಯುತ್ತಲೇ ಇರಬೇಕು.

ಕನ್ನಡದ ಭಾಷೆಗೆ ಅದರದ್ದೇ ಆಗಿರುವ ಅಸ್ಮಿತೆಯಿದೆ. ಅದು ಬಹುತ್ವವನ್ನು ಗೌರವಿಸುವ ಮತ್ತು ಒಕ್ಕೂಟದ ಹಿತವನ್ನು ಕಾಯುವ ಬಾಳನೋಟದ ಅಸ್ಮಿತೆ. ಇದು ಪಂಪನಿಂದ ಕುವೆಂಪುವರೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದುಬಂದಿರುವ ಜೀವನದರ್ಶನ. ಇದನ್ನೇ ಪಂಪ ಮಾನವ ಕುಲ ತಾನೊಂದೇ ವಲಂ ಎಂದು ಹೇಳಿದ್ದು. ನಮ್ಮದು ಬಹುತ್ವದ ವ್ಯವಸ್ಥೆ. ಇಲ್ಲಿ ಬಹುಭಾಷೆಗಳಿವೆ, ಬಹುಸಂಸ್ಕೃತಿ, ಬಹುಮಾದರಿಯ ಜನಾಂಗಗಳಿವೆ. ಈ ಎಲ್ಲಾ ಸಮುದಾಯಗಳು ತಮ್ಮ ಸಾಮುದಾಯಿಕ ಅನನ್ಯತೆಯನ್ನು ಉಳಿಸಿಕೊಂಡೇ ಸಂವಿಧಾನಬದ್ಧವಾದ ಗಣತಂತ್ರ ವ್ಯವಸ್ಥೆಯನ್ನು ಗೌರವಿಸುವ ರೀತಿಯಲ್ಲಿ ಬದುಕನ್ನು ಕಟ್ಟಿಕೊಂಡಿವೆ. ಇಂಥ ಬಹುತ್ವದ ಸ್ಥಳೀಯತೆಯನ್ನು ಗೌರವಿಸುವ ಹಾಗು ಒಕ್ಕೂಟದ ಭಾವೈಕ್ಯತೆಯನ್ನು ಬಲಗೊಳಿಸುವ ಮಾದರಿಯಲ್ಲಿ ನಮ್ಮ ಸಂವಿಧಾನ ರಚನೆಗೊಂಡಿದೆ. ಈ ಸಂವಿಧಾನದ ಆಶಯಕ್ಕನುಗುಣವಾಗಿಯೇ ಭಾಷಾವಾರು ಪ್ರಾಂತ್ಯಗಳ ವಿಂಗಡನೆಯಾಗಿದೆ.

61 ಪಾಲುದಾರಿಕೆಯ ಯೋಜನೆಗಳಿಗೆ ಕೇಂದ್ರ ನಯಾಪೈಸೆ ಕೊಟ್ಟಿಲ್ಲ: ಸಿದ್ದರಾಮಯ್ಯ ಆಕ್ರೋಶ

ಪ್ರತಿಯೊಂದು ರಾಜ್ಯದ ರಾಜ್ಯಭಾಷೆಯು ಆ ನೆಲದ ಸಾರ್ವಭೌಮ ಭಾಷೆ. ಇದನ್ನು ಸಂವಿಧಾನ ಅಂಗೀಕರಿಸಿದೆ. ಮಾನ್ಯ ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಆಯಾ ರಾಜ್ಯಗಳ ರಾಜ್ಯಭಾಷೆ ಸಾರ್ವಭೌಮ ಭಾಷೆಯೇ ಹೊರತು ಬೇರಾವುದೇ ಮತ್ತೊಂದು ಭಾಷೆ ಆ ನೆಲದ ಬದುಕಿನ ಮೇಲೆ ಅಧಿಪತ್ಯವನ್ನು ಮೆರೆಯುವುದು ಭಾಷಾವಾರು ಪ್ರಾಂತ್ಯ ರಚನೆಯ ನೀತಿಗೆ ವಿರುದ್ಧವಾದುದು. ಸಂವಿಧಾನವೂ ಇದನ್ನು ಒಪ್ಪುವುದಿಲ್ಲ. ಸ್ಥಳೀಯತ್ವವನ್ನು ಉಳಿಸಿಕೊಂಡೇ ಅರ್ಥಾತ್ ಸ್ಥಳೀಯ ಭಾಷೆಯ ಸ್ವಾಯತ್ತತೆಯನ್ನು ಉಳಿಸಿಕೊಂಡೇ ಅನ್ಯಭಾಷೆಗಳನ್ನು ಕಲಿಯುವುದಕ್ಕೆ ಅವಕಾಶ ಕೊಡಬೇಕಾದ್ದು ಒಕ್ಕೂಟ ವ್ಯವಸ್ಥೆಯೊಳಗಿನ ನೀತಿ ಸಂಹಿತೆ ಕನ್ನಡವನ್ನು ಮನೆಮನದ ಭಾಷೆಯಾಗಿ, ಆಡಳಿತ ಭಾಷೆಯಾಗಿ ಮಾತ್ರವೇ ಮಿತಗೊಳಿಸದೆ, ಜ್ಞಾನದ ಭಾಷೆಯಾಗಿ, ಅನ್ನದ ಭಾಷೆಯಾಗಿ, ವಿಚಾರ, ವಿಜ್ಞಾನಗಳ ಭಾಷೆಯಾಗಿ ಕಟ್ಟೋಣ. ಬನ್ನಿ, ಈ ರಾಜ್ಯೋತ್ಸವದಂದು ಕರ್ನಾಟಕದ ಅಸ್ಮಿತೆಯನ್ನು ಸಂಭ್ರಮಿಸೋಣ, ಕನ್ನಡದ ಕನಸುಗಳನ್ನು ಮುಗಿಲಗಲಕ್ಕೂ ಹಬ್ಬಿಸೋಣ. ಕನ್ನಡವೆಂಬುದು ನಮ್ಮ ಉಸಿರಾಗಲಿ, ಚಿಂತನೆಯಾಗಲಿ, ನಾವೀನ್ಯತೆಯಾಗಲಿ.

Follow Us:
Download App:
  • android
  • ios