ಬೆಂಗಳೂರು[ಜೂ.01]: ’ದಾವಣಗೆರೆ ಎಕ್ಸ್’ಪ್ರೆಸ್’ ಖ್ಯಾತಿಯ ಕರ್ನಾಟಕ ರಣಜಿ ತಂಡದ ನಾಯಕ ವಿನಯ್ ಕುಮಾರ್ ಫಿಟ್ನೆಸ್ ಸವಾಲು ಸ್ವೀಕರಿಸಿದ್ದು, ಬಳಿಕ ಮಾಜಿ-ಹಾಲಿ ಕ್ರಿಕೆಟಿಗರಿಗೆ ಹಾಗೂ ಸ್ಯಾಂಡಲ್’ವುಡ್ ತಾರೆ ಕಿಚ್ಚ ಸುದೀಪ್’ಗೆ ಫಿಟ್ನೆಸ್ ಸಾಬೀತು ಪಡಿಸಲು ಸವಾಲು ಎಸೆದಿದ್ದಾರೆ.
ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಆರಂಭಿಸಿರುವ ’ಹಮ್ ಫಟ್ ತೋ ದೇಶ್ ಫಿಟ್’ ಅಭಿಯಾನಕ್ಕೆ ಸ್ಪಂದಿಸಿರುವ ವಿನಯ್ ಕುಮಾರ್ ಜಿಮ್’ನಲ್ಲಿ ಕಸರತ್ತು ನಡೆಸಿ ತಾವು ಫಿಟ್ ಆಗಿರುವುದಾಗಿ ಸಾಬೀತುಪಡಿಸಿದ್ದಾರೆ. ಆ ಬಳಿಕ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ವಿರೇಂದ್ರ ಸೆಹ್ವಾಗ್, ಈ ಬಾರಿ ಚೆನ್ನೈ ಸೂಪರ್’ಕಿಂಗ್ಸ್ ತಂಡ ಪ್ರತಿನಿಧಿಸಿದ್ದ ಹರ್ಭಜನ್ ಸಿಂಗ್, ಕರ್ನಾಟಕ ತಂಡದ ಸಹ ಆಟಗಾರರಾದ ಮನೀಶ್ ಪಾಂಡೆ, ಕರುಣ್ ನಾಯರ್, ಮಯಾಂಕ್ ಅಗರ್’ವಾಲ್ ಮತ್ತು ವಿನಯ್ ಕುಮಾರ್ ನೆಚ್ಚಿನ ಹೀರೋ ಕಿಚ್ಚ ಸುದೀಪ್’ಗೆ ಫಿಟ್ನೆಸ್ ಸವಾಲು ನೀಡಿದ್ದಾರೆ.

ಈಗಾಗಲೇ ಕ್ರೀಡಾಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಆರಂಭಿಸಿರುವ 'ಹಮ್ ಫಿಟ್ ತೋ ದೇಶ್ ಫಿಟ್' ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಬಾಲಿವುಡ್ ತಾರೆಯರು, ಕ್ರೀಡಾ ದಿಗ್ಗಜರು, ರಾಜಕಾರಣಿಗಳು ಸೇರಿದಂತೆ ಹಲವಾರು ಗಣ್ಯರು ಫಿಟ್ನೆಸ್ ಸವಾಲು ಸ್ವೀಕರಿಸಿ ತಾವು ಸದೃಢವಾಗಿರುವುದಾಗಿ ಸಾಬೀತು ಪಡಿಸಿದ್ದಾರೆ.
’ದಾವಣಗೆರೆ ಎಕ್ಸ್’ಪ್ರೆಸ್’ ಖ್ಯಾತಿಯ ವಿನಯ್ ಕುಮಾರ್ ಆರ್ ಕರ್ನಾಟಕ ರಣಜಿ ತಂಡದ ನಾಯಕರಾಗಿದ್ದು, ಭಾರತ ಪರ ಒಂದು ಟೆಸ್ಟ್, 31 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನಾಡಿದ್ದು, ಒಟ್ಟು 49 ವಿಕೆಟ್ ಕಬಳಿಸಿದ್ದಾರೆ. ಇನ್ನು ಐಪಿಎಲ್’ನಲ್ಲಿ ಈ ಬಾರಿ ಕೋಲ್ಕತಾ ನೈಟ್’ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದರು.