ಯುಎಸ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಜೋಕೋವಿಚ್‌ರನ್ನು ಆಲ್ಕರಜ್ ಸೋಲಿಸಿದರು. ಫೈನಲ್‌ನಲ್ಲಿ ಆಲ್ಕರಜ್, ಸಿನ್ನರ್ ಮುಖಾಮುಖಿಯಾಗಲಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ನಡೆದ 8 ಗ್ರ್ಯಾನ್ ಸ್ಲಾಂಗಳಲ್ಲಿ ಆಲ್ಕರಜ್ ಮತ್ತು ಸಿನ್ನರ್ ಗೆಲುವು ಸಾಧಿಸಿದ್ದಾರೆ.

ನ್ಯೂಯಾರ್ಕ್: 25ನೇ ಗ್ರ್ಯಾನ್‌ಸ್ಲಾಂ ಟ್ರೋಫಿ ಗೆಲ್ಲುವ ದಿಗ್ಗಜ ಆಟಗಾರ ನೋವಾಕ್ ಜೋಕೋವಿಚ್ ಕನಸು ಮತ್ತೆ ಭಗ್ನಗೊಂಡಿದೆ. ಯುಎಸ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಮಾಜಿ ವಿಶ್ವ ನಂ.1 ಆಟಗಾರ, ಸರ್ಬಿಯಾದ ಜೋಕೋವಿಚ್‌ರನ್ನು ಯುವ ಸೂಪರ್‌ಸ್ಟಾರ್‌ ಕಾರ್ಲೊಸ್ ಆಲ್ಕರಜ್ ಸೋಲಿಸಿದರು.

2022ರ ಚಾಂಪಿಯನ್, ವಿಶ್ವ ನಂ.2 ಸ್ಪೇನ್‌ನ ಆಟಗಾರ ಆಲ್ಕರಜ್ ಈ ಪಂದ್ಯವನ್ನು 6-4, 7-6(4), 6-2 ನೇರ ಸೆಟ್‌ಗಳಲ್ಲಿ ತಮ್ಮದಾಗಿಸಿಕೊಂಡರು. ಈ ಮೂಲಕ ಯುಎಸ್ ಓಪನ್‌ನಲ್ಲಿ 2ನೇ ಬಾರಿ ಫೈನಲ್‌ಗೇರಿದರು. ಇದು ಜೋಕೋವಿಚ್ ವಿರುದ್ಧ ಆಲ್ಕರಜ್ ಗೆ 9 ಪಂದ್ಯಗಳಲ್ಲಿ 4ನೇ ಗೆಲುವು. ಹಾರ್ಡ್ ಕೋರ್ಟ್‌ನಲ್ಲಿ ಮೊದಲ ಬಾರಿ ಜೋಕೋವಿಚ್‌ರನ್ನು ಆಲ್ಕರಜ್ ಸೋಲಿಸಿದರು. 7ನೇ ಬಾರಿ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಫೈನಲ್‌ಗೇರಿರುವ 22 ವರ್ಷದ ಆಲ್ಕರಜ್‌ಗೆ, ಫೈನಲ್‌ನಲ್ಲಿ ಇಟಲಿಯ ಸೂಪರ್‌ಸ್ಟಾರ್‌, ವಿಶ್ವ ನಂ.1 ಆಟಗಾರ ಯಾನಿಕ್ ಸಿನ್ನರ್ ಸವಾಲು ಎದುರಾಗಲಿದೆ.

ಸಿನ್ನರ್ ವಿನ್ನರ್: ಪುರುಷರ ಸಿಂಗಲ್ಸ್‌ನ ಮತ್ತೊಂದು ಸೆಮಿಫೈನಲ್ ನಲ್ಲಿ ಕೆನಡಾದ ಫೆಲಿಕ್ಸ್ ಆಗ‌ ಅಲಿಯಾಸ್ಲಿಮ್ ವಿರುದ್ಧ 6-1, 6-3, 3-6, 6-4 ಸೆಟ್‌ಗಳಲ್ಲಿ ಸಿನ್ನರ್ ಗೆಲುವು ತಮ್ಮದಾಗಿಸಿಕೊಂಡರು. ಈ ವರ್ಷ ಆಸ್ಟ್ರೇಲಿಯನ್ ಓಪನ್, ವಿಂಬಲ್ಡನ್ ಗೆದ್ದಿರುವ ಇಟಲಿಯ 24 ವರ್ಷದ ಆಟಗಾರ 6ನೇ ಬಾರಿ ಗ್ರ್ಯಾನ್‌ಸ್ಲಾಂ ಫೈನಲ್‌ಗೇರಿದ್ದಾರೆ.

ಭಾನುವಾರದ ಪಂದ್ಯ ಯುವ ಟೆನಿಸ್ ತಾರೆಗಳ ನಡುವಿನ ಮೆಗಾ ಕದನಕ್ಕೆ ಸಾಕ್ಷಿಯಾಗಲಿದೆ. ಹಾಲಿ ಚಾಂಪಿಯನ್ ಆಗಿರುವ ಸಿನ್ನರ್, ಸತತ 2ನೇ ಯುಎಸ್ ಓಪನ್ ಮೇಲೆ ಕಣ್ಣಿಟ್ಟಿದ್ದಾರೆ. ಸತತ 5ನೇ ಗ್ರ್ಯಾನ್‌ಸ್ಲಾಂ ಫೈನಲ್‌ಗೇರಿರುವ ಸಿನ್ನರ್ ಒಟ್ಟಾರೆ 5ನೇ ಟ್ರೋಫಿ ಗೆಲ್ಲುವ ಕಾತರದಲ್ಲಿದ್ದಾರೆ. 7ನೇ ಬಾರಿ ಫೈನಲ್ ಪ್ರವೇಶಿಸಿರುವ ಆಲ್ಕರಜ್, 6ನೇ ಗ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿದ್ದಾರೆ.

ಕೊನೆಯ 8 ಗ್ರ್ಯಾನ್‌ಸ್ಲಾಂ ಆಲ್ಕರಜ್/ಸಿನ್ನರ್ ಪಾಲು!

ಟೆನಿಸ್‌ನಲ್ಲಿ ಬಿಗ್ 3 ಎಂದೇ ಖ್ಯಾತಿ ಪಡೆದಿದ್ದ ಫೆಡರರ್, ನಡಾಲ್, ಜೋಕೋವಿಚ್‌ ಅಬ್ಬರ ಬಹುತೇಕ ಕೊನೆಗೊಂಡಿದೆ. ಈಗ ಏನಿದ್ದರೂ ಆಲ್ಕರಜ್, ಸಿನ್ನರ್ ಎಂಬ ಯುವ ಸೂಪರ್ ಸ್ಟಾರ್‌ಗಳ ಹವಾ. ಇವರಿಬ್ಬರು ಟೆನಿಸ್‌ನಲ್ಲಿ ಎಷ್ಟರ ಮಟ್ಟಿಗೆ ಪ್ರಾಬಲ್ಯ ಸಾಧಿಸಿದ್ದಾರೆಂದರೆ, ಕಳೆದ 2 ವರ್ಷಗಳಲ್ಲಿ ನಡೆದ ಒಟ್ಟು 8 ಗ್ರ್ಯಾನ್ ಸ್ಲಾಂಗಳಲ್ಲಿ ಇವರಿಬ್ಬರೇ ಗೆದ್ದಿದ್ದಾರೆ. ಆಲ್ಕರಜ್ 2024ರ ಫ್ರೆಂಚ್ ಓಪನ್, ವಿಂಬಲ್ಡನ್, ಈ ವರ್ಷದ ಫ್ರೆಂಚ್ ಓಪನ್ ಗೆದ್ದಿದ್ದಾರೆ. ಸಿನ್ನರ್ 2024ರ ಆಸ್ಟ್ರೇಲಿಯನ್ ಓಪನ್, ಯುಎಸ್ ಓಪನ್, 2025ರ ಆಸ್ಟ್ರೇಲಿಯನ್ ಓಪನ್, ವಿಂಬಲ್ಡನ್ ತಮ್ಮದಾಗಿಸಿಕೊಂಡಿದ್ದಾರೆ.

ಆಲ್ಕರಜ್ vs ಸಿನ್ನರ್ ಸತತ ಮೂರನೇ ಫೈನಲ್

ಸಿನ್ನರ್ ಹಾಗೂ ಆಲ್ಕರಜ್ ಸತತ 3ನೇ ಗ್ರ್ಯಾನ್ ಸ್ಲಾಂ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. ಫ್ರೆಂಚ್ ಓಪನ್‌ನಲ್ಲಿ ಆಲ್ಕರಜ್ ಗೆದ್ದಿದ್ದರೆ, ವಿಂಬಲ್ಡನ್‌ನಲ್ಲಿ ಸಿನ್ನರ್ ಚಾಂಪಿಯನ್ ಆಗಿದ್ದರು.

ಸತತ 4 ಸೆಮಿಫೈನಲ್ ಸೋತ ಜೋಕೋವಿಚ್:

ಈ ವರ್ಷ ಜೋಕೋವಿಚ್ ಸತತ 4ನೇ ಗ್ರ್ಯಾನ್ ಸ್ಲಾಂನಲ್ಲೂ ಸೆಮಿಫೈನಲ್‌ನಲ್ಲಿ ಸೋತಿದ್ದಾರೆ. ಈ ಪೈಕಿ ಮೂರರಲ್ಲಿ ಆಲ್ಕರಜ್ ಅಥವಾ ಸಿನ್ನರ್ ವಿರುದ್ದ ಸೋಲು ಎದುರಾಗಿದೆ. ಕಳೆದೆರಡು ವರ್ಷಗಳ 8 ಗ್ರ್ಯಾನ್‌ಸ್ಲಾಂಗಳಲ್ಲಿ ಒಂದರಲ್ಲೂ ಜೋಕೋ ಗೆದ್ದಿಲ್ಲ. 2023ರ ಯುಎಸ್ ಓಪನ್ ಗೆಲುವಿನ ಬಳಿಕ ತಮ್ಮ 25ನೇ ಗ್ರ್ಯಾನ್ ಸ್ಲಾಂಗಾಗಿ ಕಾಯುತ್ತಲೇ ಇದ್ದಾರೆ.

ಹೋರಾಟ ಕೈಬಿಡುವುದಿಲ್ಲ

ಗ್ರ್ಯಾನ್‌ಸ್ಲಾಂನಲ್ಲಿ ನನ್ನ ಹೋರಾಟವನ್ನು ಕೈಬಿಡುವುದಿಲ್ಲ. ಫೈನಲ್‌ನಲ್ಲಿ ಆಡಿ ಕನಿಷ್ಠ ಇನ್ನೂ ಒಂದು ಗ್ರ್ಯಾನ್ ಸ್ಲಾಂ ಗೆಲ್ಲುವವರೆಗೂ ನನ್ನ ಹೋರಾಟ ಮುಂದುವರಿಯಲಿದೆ. ಆದರೆ ಇದು ಕಷ್ಟ ಎಂಬುದು ನಿಮಗೂ ಗೊತ್ತಿದೆ.

• ಜೋಕೋವಿಚ್ ಟೆನಿಸಿಗ