ಭಾರತದ ಹಾಕಿ ದಿಗ್ಗಜ ಹಾಗೂ ಲಿಯಾಂಡರ್ ಪೇಸ್ ಅವರ ತಂದೆ ವೆಸ್ ಪೇಸ್ ಇಂದು ನಿಧನರಾಗಿದ್ದಾರೆ. 1972ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ತಂಡದ ಸದಸ್ಯರಾಗಿದ್ದರು. ಕ್ರೀಡೆ ಮತ್ತು ವೈದ್ಯಕೀಯ ಕ್ಷೇತ್ರಗಳೆರಡರಲ್ಲೂ ಗಣನೀಯ ಸಾಧನೆ ಮಾಡಿದ್ದರು.
ನವದೆಹಲಿ: ಭಾರತದ ಸ್ಪೋರ್ಟ್ಸ್ ಸೆಲಿಬ್ರಿಟಿಯಾಗಿ ಗುರುತಿಸಿಕೊಂಡಿದ್ದ ಟೆನಿಸ್ ಲೆಜೆಂಡ್ ಲಿಯಾಂಡರ್ ಅವರ ತಂದೆ ವೆಸ್ ಪೇಸ್ ಗುರುವಾರವಾದ ಇಂದು ಕೊನೆಯುಸಿರೆಳೆದಿದ್ದಾರೆ. 1945 ಏಪ್ರಿಲ್‌ನಲ್ಲಿ ಗೋವಾದಲ್ಲಿ ಜನಿಸಿದ್ದ ವೆಸ್ ಪೇಸ್, ಒಲಿಂಪಿಕ್ಸ್ ಕ್ರೀಡಾಕೂಟದ ಹಾಕಿಯಲ್ಲಿ ದೇಶಕ್ಕಾಗಿ ಕಂಚಿನ ಪದಕ ಜಯಿಸಿದ್ದರು. ವೆಸ್ ಪೇಸ್‌ಗೆ 80 ವರ್ಷ ವಯಸ್ಸಾಗಿತ್ತು. 1972ರ ಮ್ಯೂನಿಚ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡವನ್ನು ಪ್ರತಿನಿಧಿಸಿದ್ದ ವೆಸ್ ಪೇಸ್, ಮಿಡ್ ಫೀಲ್ಡರ್ ಆಗಿ ಗಮನ ಸೆಳೆದಿದ್ದರು. ಇದಕ್ಕೂ ಮೊದಲು ವೆಸ್ ಪೇಸ್ 1971ರ ಹಾಕಿ ವಿಶ್ವಕಪ್‌ನಲ್ಲೂ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಡಾ. ವೆಸ್ ಪೇಸ್ ಕ್ರೀಡೆ ಹಾಗೂ ಮೆಡಿಸಿನ್ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಡಾ. ವೆಸ್ ಪೇಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಕಿಯಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ್ದಾರೆ. ಇದಷ್ಟೇ ಅಲ್ಲದೇ ವಿವಿಧ ಕ್ರೀಡೆಯಲ್ಲಿ ಸ್ಪರ್ಧಾತ್ಮಕ ಮಟ್ಟದಲ್ಲಿ ಆಡಿ ತಾವೊಬ್ಬ ಆಲ್ರೌಂಡ್ ಅಥ್ಲೀಟ್ ಎನ್ನುವುದನ್ನು ಜಗತ್ತಿನ ಮುಂದೆ ಅನಾವರಣ ಮಾಡಿದ್ದರು. ಹಾಕಿಯಲ್ಲಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದು ಮಾತ್ರವಲ್ಲದೇ ಡಿವಿಷನಲ್ ವಿಭಾಗದಲ್ಲಿ ಕ್ರಿಕೆಟ್, ಫುಟ್ಬಾಲ್ ಹಾಗೂ ರಗ್ಬಿ ಕ್ರೀಡೆಯಲ್ಲೂ ತಮ್ಮ ಪ್ರತಿಭೆ ಅನಾವರಣ ಮಾಡಿದ್ದರು.
ಈ ಪೈಕಿ ಡಾ. ವೆಸ್ ಪೇಸ್, ರಗ್ಬಿ ಕ್ರೀಡೆಯ ಬಗ್ಗೆ ವಿಶೇಷವಾದ ಆಸಕ್ತಿಯನ್ನು ಹೊಂದಿದ್ದರು. ಅವರು 1996ರಿಂದ 2002ರವರೆಗೆ ಭಾರತ ರಗ್ಬಿ ಫುಟ್ಬಾಲ್ ಯೂನಿಯನ್‌ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಈ ಮೂಲಕ ಭಾರತದಲ್ಲಿ ರಗ್ಬಿ ಕ್ರೀಡೆ ಬೆಳೆವಣಿಯಲ್ಲಿ ಮಹತ್ವದ ಕೊಡುಗೆ ನೀಡಿದ್ದರು.
ಇನ್ನು ಕ್ರೀಡೆಯ ಜತೆಜತೆಗೆ ಕೋಲ್ಕತಾದಲ್ಲಿ ಮೆಡಿಕಲ್ ಎಜುಕೇಷನ್ ಪೂರ್ಣಗೊಳಿಸಿದ ಡಾ. ವೆಸ್ ಪೇಸ್, ಕ್ರೀಡೆಯ ಜತೆಗೆ ಮೆಡಿಕಲ್ ಎಕ್ಸ್‌ಪರ್ಟೈಸ್ ಆಗಿಯೂ ಗಮನ ಸೆಳೆದರು. ಕ್ರೀಡೆಯಲ್ಲಿ ಡೋಪಿಂಗ್ ನಿಷೇಧ ಕುರಿತಂತೆ ಪ್ರಮುಖವಾಗಿ ಗಮನ ಹರಿಸಿದರು.
ಆಂಟಿ-ಡೋಪಿಂಗ್ ಕುರಿತಂತೆ ಡಾ. ವೆಸ್ ಪೇಸ್ ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಜತೆಗೆ ಕಾರ್ಯ ನಿರ್ವಹಿಸಿದ್ದರು.
ಇನ್ನು ತಂದೆಯ ಹಾದಿಯಲ್ಲಿಯೇ ಸಾಗಿದ್ದ ಲಿಯಾಂಡರ್ ಪೇಸ್ ಕೂಡಾ ಭಾರತದ ದಿಗ್ಗಜ ಕ್ರೀಡಾ ತಾರೆಯಾಗಿ ಬೆಳೆದು ನಿಂತರು. ಲಿಯಾಂಡರ್ ಪೇಸ್ ಟೆನಿಸ್‌ನಲ್ಲಿ ಒಲಿಂಪಿಕ್ ಕಂಚಿನ ಪದಕ ಜಯಿಸಿದ್ದರು. ಡಾ. ವೆಸ್ ಪೇಸ್ ಅವರ ಪತ್ನಿ ಜೆನ್ನಿಫರ್ ಪೇಸ್ ಭಾರತ ಮಹಿಳಾ ಬಾಸ್ಕೇಟ್‌ಬಾಲ್ ತಂಡದ ಕ್ಯಾಪ್ಟನ್ ಆಗಿದ್ದರು.
