ಭಾರತ ವಿರುದ್ಧದ ಎರಡನೇ ಟೆಸ್ಟ್‌ಗೂ ಮುನ್ನ, ಸ್ಟಾರ್ ವೇಗಿ ಕಗಿಸೊ ರಬಾಡ ಗಾಯದ ಕಾರಣದಿಂದ ಹೊರಗುಳಿದಿರುವುದು ದಕ್ಷಿಣ ಆಫ್ರಿಕಾಗೆ ಹಿನ್ನಡೆಯಾಗಿದೆ. ಗಾಯಗೊಂಡಿರುವ ನಾಯಕ ಶುಭಮನ್ ಗಿಲ್ ಬದಲಿಗೆ ರಿಷಭ್ ಪಂತ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಗುವಾಹಟಿ: ಭಾರತ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್‌ಗೂ ಮುನ್ನ ದಕ್ಷಿಣ ಆಫ್ರಿಕಾಗೆ ಹಿನ್ನಡೆಯಾಗಿದೆ. ನವೆಂಬರ್ 22ರಿಂದ ಗುವಾಹಟಿಯಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್‌ನಲ್ಲಿ ಸ್ಟಾರ್ ವೇಗಿ ಕಗಿಸೊ ರಬಾಡ ಆಡುವುದಿಲ್ಲ ಎಂದು ದಕ್ಷಿಣ ಆಫ್ರಿಕಾದ ನಾಯಕ ತೆಂಬಾ ಬವುಮಾ ಸ್ಪಷ್ಟಪಡಿಸಿದ್ದಾರೆ. ಕೋಲ್ಕತಾದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲೂ ರಬಾಡ ಗಾಯದ ಕಾರಣದಿಂದ ಆಡಿರಲಿಲ್ಲ. ಮೊದಲ ಟೆಸ್ಟ್‌ನಲ್ಲಿ ರಬಾಡ ಅನುಪಸ್ಥಿತಿಯಲ್ಲೂ ಸ್ಪಿನ್ನರ್‌ಗಳ ಉತ್ತಮ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾ ತಂಡವು ಆತಿಥೇಯ ಭಾರತ ಎದುರು 30 ರನ್‌ಗಳ ರೋಚಕ ಜಯ ಸಾಧಿಸಿತ್ತು.
ಎರಡನೇ ಟೆಸ್ಟ್‌ಗೂ ಮುನ್ನ ಬವುಮಾ ಮಾತು
ಗುವಾಹಟಿಯ ಪಿಚ್ ಮೊದಲ ದಿನಗಳಲ್ಲಿ ಬ್ಯಾಟಿಂಗ್‌ಗೆ ಸಹಕಾರಿಯಾಗಿದ್ದು, ನಂತರ ಸ್ಪಿನ್ನರ್‌ಗಳಿಗೆ ಅನುಕೂಲವಾಗಲಿದೆ ಎಂದು ತೆಂಬಾ ಬವುಮಾ ಹೇಳಿದ್ದಾರೆ. ಕೋಲ್ಕತಾ ಪಿಚ್‌ಗೆ ಹೋಲಿಸಿದರೆ ಗುವಾಹಟಿ ಪಿಚ್ ಸ್ವಲ್ಪ ಹೊಸದಾಗಿದ್ದು, ಸ್ಥಿರ ಪ್ರದರ್ಶನ ನೀಡುವ ನಿರೀಕ್ಷೆಯಿದೆ ಎಂದು ಬವುಮಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ರಬಾಡ ಬದಲಿಗೆ ಮತ್ತೋರ್ವ ಅನುಭವಿ ವೇಗಿ ಲುಂಗಿ ಎನ್‌ಗಿಡಿಯನ್ನು ದಕ್ಷಿಣ ಆಫ್ರಿಕಾ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.
ಈಡನ್ ಗಾರ್ಡನ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್‌ಗಳ ಮುಂದೆ ಭಾರತೀಯ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡಿದ್ದರಿಂದ, ಗುವಾಹಟಿಯಲ್ಲಿ ಟೀಂ ಇಂಡಿಯಾ ವೇಗ ಮತ್ತು ಬೌನ್ಸ್ ಇರುವ ವಿಕೆಟ್ ಕೇಳಿದೆ ಎಂದು ವರದಿಯಾಗಿದೆ. ಬಿಸಿಸಿಐನ ಮುಖ್ಯ ಕ್ಯುರೇಟರ್ ಆಶಿಶ್ ಭೌಮಿಕ್ ಅವರ ತವರು ಇದಾಗಿದೆ.
ಗುವಾಹಟಿ ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ. ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಗೆದ್ದ ದಕ್ಷಿಣ ಆಫ್ರಿಕಾ ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ. ಗುವಾಹಟಿಯಲ್ಲಿ ಎರಡನೇ ಟೆಸ್ಟ್ ಬೆಳಗ್ಗೆ 9 ಗಂಟೆಗೆ ಆರಂಭವಾಗಲಿದೆ. ಗಾಯಗೊಂಡಿರುವ ನಾಯಕ ಶುಭಮನ್ ಗಿಲ್ ಬದಲಿಗೆ ಉಪನಾಯಕ ರಿಷಭ್ ಪಂತ್ ಎರಡನೇ ಟೆಸ್ಟ್‌ನಲ್ಲಿ ಭಾರತವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ರಿಷಭ್ ಪಂತ್ ಟೆಸ್ಟ್‌ನಲ್ಲಿ ಭಾರತದ 38ನೇ ನಾಯಕರಾಗಿದ್ದಾರೆ. ಗಿಲ್ ಬದಲಿಗೆ ಎಡಗೈ ಬ್ಯಾಟರ್ ಸಾಯಿ ಸುದರ್ಶನ್ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.
ಟೆಸ್ಟ್ ಸರಣಿ ಗೆಲ್ಲುವ ಕನಸು ಕಾಣುತ್ತಿರುವ ಹರಿಣಗಳು!
ದಕ್ಷಿಣ ಆಫ್ರಿಕಾ ತಂಡವು ಇದುವರೆಗೂ ಭಾರತ ನೆಲದಲ್ಲಿ ಟೆಸ್ಟ್ ಸರಣಿಯನ್ನು ಜಯಿಸಿಲ್ಲ. ಇದೀಗ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೋಲ್ಕತಾ ಟೆಸ್ಟ್ ಗೆಲ್ಲುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದೀಗ ಎರಡನೇ ಟೆಸ್ಟ್‌ನಲ್ಲಿ ಹರಿಣಗಳ ಪಡೆ ಗೆಲುವು ಇಲ್ಲವೇ ಡ್ರಾ ಸಾಧಿಸಿದರೂ ಸಾಕು ಭಾರತ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಲಿದೆ. ಇನ್ನೊಂದೆಡೆ ತವರಿನಲ್ಲೇ ಮೊದಲ ಪಂದ್ಯ ಸೋತು ಆಘಾತಕ್ಕೊಳಗಾಗಿರುವ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಇದೀಗ ಶತಾಯಗತಾಯ ಎರಡನೇ ಟೆಸ್ಟ್ ಗೆದ್ದು ಸರಣಿ ಸಮಬಲ ಸಾಧಿಸಲು ಭಾರತ ತಂಡವು ಎದುರು ನೋಡುತ್ತಿದೆ.


