US ಓಪನ್ 2019: ಪ್ರಿ ಕ್ವಾರ್ಟರ್‌ಗೆ ಜೋಕೋ, ಫೆಡರರ್
ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ರೋಜರ್ ಫೆಡರರ್ ಹಾಗೂ ನೋವಾಕ್ ಜೋಕೋವಿಚ್ ಪ್ರೀಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನ್ಯೂಯಾರ್ಕ್[ಸೆ.01]: ವರ್ಷದ ಕೊನೆಯ ಪ್ರತಿಷ್ಠಿತ ಗ್ರ್ಯಾಂಡ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ನಿರೀಕ್ಷೆಯಂತೆ ಪ್ರಮುಖರು ಪ್ರಶಸ್ತಿ ಸಮೀಪ ತಲುಪುತ್ತಿದ್ದಾರೆ. 17ನೇ ಗ್ರ್ಯಾಂಡ್‌ಸ್ಲಾಂ ಮೇಲೆ ಕಣ್ಣಿಟ್ಟಿರುವ ಹಾಲಿ ಚಾಂಪಿಯನ್ ಸರ್ಬಿಯಾದ ನೊವಾಕ್ ಜೋಕೋವಿಚ್, ದಾಖಲೆ ಗ್ರ್ಯಾಂಡ್‌ಸ್ಲಾಂಗಳ ಒಡೆಯ ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್, ಯುಎಸ್ ಓಪನ್ ಗ್ರ್ಯಾಂಡ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಪ್ರಿಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.
ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ 3ನೇ ಸುತ್ತಿನಲ್ಲಿ ಜೋಕೋವಿಚ್, ಅಮೆರಿಕದ ಡೆನಿಸ್ ಕುಡ್ಲಾ ವಿರುದ್ಧ 6-3, 6-4, 6-2 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಈ ಜಯದೊಂದಿಗೆ ಜೋಕೋ, ಯುಎಸ್ ಓಪನ್‌ನಲ್ಲಿ 72ನೇ ಗೆಲುವು ದಾಖಲಿಸಿದರು. 4ನೇ ಸುತ್ತಿನಲ್ಲಿ ಜೋಕೋ, ಮಾಜಿ ಯುಎಸ್ ಚಾಂಪಿಯನ್ ಹಾಗೂ ವಿಶ್ವ ನಂ.23 ಸ್ವಿಜರ್‌ಲೆಂಡ್‌ನ ಸ್ಟಾನಿಸ್ಲಾಸ್ ವಾವ್ರಿಂಕಾ ರನ್ನು ಎದುರಿಸಲಿದ್ದಾರೆ.
US ಓಪನ್ 2019: ಮೂರನೇ ಸುತ್ತಿಗೆ ನಡಾಲ್ ಲಗ್ಗೆ
ಮತ್ತೊಂದು 3ನೇ ಸುತ್ತಿನ ಪಂದ್ಯದಲ್ಲಿ ಫೆಡರರ್, ಬ್ರಿಟನ್‌ನ ಡಾನ್ ಇವಾನ್ಸ್ ಎದುರು 6-2, 6-2, 6-1 ಸೆಟ್‌ಗಳಲ್ಲಿ ಸುಲಭ ಗೆಲುವು ಪಡೆದರು. ಪ್ರಿ ಕ್ವಾರ್ಟರ್‌ನಲ್ಲಿ ಫೆಡರರ್, ಬೆಲ್ಜಿಯಂ ಆಟಗಾರ ಡೇವಿಡ್ ಗಫಿನ್ ಎದುರು ಸೆಣಸಲಿದ್ದಾರೆ. ಉಳಿದಂತೆ ಜಪಾನ್‌ನ ಕೇ ನಿಶೀಕೋರಿ, ಗ್ರಿಗೊರ್ ಡಿಮಿಟ್ರಿವ್, ಡೆನಿಲ್ ಮೆಡ್ವಡೇವ್ 4ನೇ ಸುತ್ತಿಗೇರಿದರು.
ಸೆರೆನಾ, ಕೊಂಟಾಗೆ ಜಯ:
ದಾಖಲೆಯ 24ನೇ ಗ್ರ್ಯಾಂಡ್‌ಸ್ಲಾಂ ಮೇಲೆ ಕಣ್ಣಿಟ್ಟಿರುವ ಅಮೆರಿಕದ ಸೆರೆನಾ ವಿಲಿಯಮ್ಸ್, ಚೆಕ್ ಗಣರಾಜ್ಯದ ಕರೋಲಿನಾ ಮುಚೊವಾ ಎದುರು 6-3, 6-2 ಸೆಟ್‌ಗಳಲ್ಲಿ ಗೆದ್ದು ಪ್ರಿ ಕ್ವಾರ್ಟರ್‌ಗೆ ಲಗ್ಗೆ ಇಟ್ಟರು. ಆಸ್ಪ್ರೇಲಿಯಾದ ಜೋಹಾನ್ನ ಕೊಂಟಾ, ಚೀನಾದ ಜಾಂಗ್ ಶೂಯಿ ವಿರುದ್ಧ 6-2, 6-3 ಸೆಟ್‌ಗಳಲ್ಲಿ ಗೆದ್ದರು. ಉಳಿದಂತೆ ಆ್ಯಶ್ಲೆ ಬಾರ್ಟಿ, ಕ್ಯಾರೋಲಿನಾ ಪ್ಲಿಸ್ಕೋವಾ 4ನೇ ಸುತ್ತು ಪ್ರವೇಶಿಸಿದರು.
ಬೋಪಣ್ಣ ಜೋಡಿ 2ನೇ ಸುತ್ತಿಗೆ:
ಪುರುಷರ ಡಬಲ್ಸ್‌ನಲ್ಲಿ ಭಾರತಕ್ಕೆ ಮಿಶ್ರಫಲ ದೊರೆಕಿದೆ. ಭಾರತದ ರೋಹನ್ ಬೋಪಣ್ಣ, ಕೆನಡಾದ ಡೆನ್ನಿಸ್ ಶಪವಾಲೊವ್ ಜೋಡಿ 2ನೇ ಸುತ್ತಿಗೆ ಪ್ರವೇಶಿಸಿದರೆ, ಲಿಯಾಂಡರ್ ಪೇಸ್, ಅರ್ಜೆಂಟೀನಾದ ಗುಲ್ಲೆರ್ಮೊ ಡುರನ್ ಜೋಡಿ ಮೊದಲ ಸುತ್ತಲ್ಲಿ ಸೋತು ಹೊರಬಿದ್ದಿದೆ.
ಮೊದಲ ಸುತ್ತಿನಲ್ಲಿ ಬೋಪಣ್ಣ-ಡೆನ್ನಿಸ್ ಜೋಡಿ, ಫ್ರಾನ್ಸ್‌ನ ಪಿರ್ರೆ ಹ್ಯೂಜಸ್ ಹರ್ಬರ್ಟ್ ಹಾಗೂ ನಿಕೋಲಸ್ ಮಹತ್ ಜೋಡಿ ವಿರುದ್ಧ 6-3, 6-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಲಿಯಾಂಡರ್ ಪೇಸ್ ಹಾಗೂ ಗುಲ್ಲೆರ್ಮೊ ಜೋಡಿ, ನಾರ್ವೆಯ ಕಾಸ್ಪರ್ ರೂಡ್ ಹಾಗೂ ಸರ್ಬಿಯಾದ ಮಿಮೊರ್ ಕೆಕ್ಮನೊವಿಕ್ ಜೋಡಿ ಎದುರು 5-7, 2-6 ಸೆಟ್‌ಗಳಲ್ಲಿ ಪರಾಭವ ಹೊಂದಿದರು.