ಟಿ20 ವಿಶ್ವಕಪ್‌ನ ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 97 ರನ್ ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟ ಸಂಜು ಸ್ಯಾಮ್ಸನ್ ಆಟವನ್ನು ಕೋಚ್ ಗೌತಮ್ ಗಂಭೀರ್ ಶ್ಲಾಘಿಸಿದ್ದಾರೆ. ಸಂಜು ಅವರ ಪ್ರದರ್ಶನವನ್ನು 'ವಿಶ್ವದರ್ಜೆಯದ್ದು' ಎಂದು ಬಣ್ಣಿಸಿದ್ದಾರೆ.

ಕೋಲ್ಕತಾ: ಟಿ20 ವಿಶ್ವಕಪ್‌ನ ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಗೆಲುವು ತಂದುಕೊಟ್ಟ ಸಂಜು ಸ್ಯಾಮ್ಸನ್ ಆಟವನ್ನು ಟೀಮ್ ಇಂಡಿಯಾದ ಹೆಡ್ ಕೋಚ್ ಗೌತಮ್ ಗಂಭೀರ್ ಕೊಂಡಾಡಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯದಲ್ಲಿ ಅಕ್ಷರಶಃ ಸಂಜುವನ್ನು ಕೋಚ್ ಗಂಭೀರ್ ಹಾಗೂ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಕಡೆಗಣಿಸಿದ್ದರು. ಆದರೆ ಇದೀಗ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸಂಜು ಆಡಿದ ರೀತಿಯ ಬಗ್ಗೆ ಗಂಭೀರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಸಂಜು ಸ್ಯಾಮ್ಸನ್ ಗುಣಗಾನ ಮಾಡಿದ ಗಂಭೀರ್

ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಅಜೇಯ 97 ರನ್ ಗಳಿಸಿದ ಸಂಜು ಪ್ರದರ್ಶನ 'ವರ್ಲ್ಡ್ ಕ್ಲಾಸ್' ಆಗಿತ್ತು. ಒತ್ತಡದ ಸನ್ನಿವೇಶದಲ್ಲಿ ಸಂಜು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಹೊರಹಾಕಿದ ಎಂದು ಗಂಭೀರ್ ಹೇಳಿದ್ದಾರೆ. 196 ರನ್‌ಗಳ ಬೃಹತ್ ಗುರಿ ಬೆನ್ನಟ್ಟುವಾಗ ಸಂಜು ತೋರಿದ ಪ್ರಬುದ್ಧತೆಯನ್ನು ಗಂಭೀರ್ ಶ್ಲಾಘಿಸಿದ್ದಾರೆ. "ಸಂಜು ಒಬ್ಬ ವಿಶ್ವದರ್ಜೆಯ ಆಟಗಾರ. ರನ್ ಚೇಸ್ ಮಾಡುವಾಗ ಆತ ಇನ್ನಿಂಗ್ಸ್ ಕಟ್ಟಿದ ರೀತಿ ಅದ್ಭುತವಾಗಿತ್ತು. ಅನಗತ್ಯ ಶಾಟ್‌ಗಳಿಗೆ ಕೈ ಹಾಕದೆ, ಕ್ರೀಸ್‌ನಲ್ಲಿ ನೆಲೆಯೂರಿ ಸ್ಮಾರ್ಟ್ ಆಗಿ ಆಡಲು ಪ್ರಯತ್ನಿಸಿದ. ಆತ ಆಡಿದ್ದೆಲ್ಲಾ ಸಾಮಾನ್ಯ ಕ್ರಿಕೆಟ್ ಶಾಟ್‌ಗಳೇ. ಅದೇ ಅವನ ಪ್ರತಿಭೆ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ದೊಡ್ಡ ಸ್ಕೋರ್ ಮಾಡದಿದ್ದರೂ, ಸಂಜು ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದ" ಎಂದು ಗಂಭೀರ್ ಹೇಳಿದ್ದಾರೆ.

"ನಾನು ಅಂಕಿಅಂಶಗಳಲ್ಲಿ ನಂಬಿಕೆ ಇಡುವುದಿಲ್ಲ. ಟಿ20 ಕ್ರಿಕೆಟ್ ಎಂದರೆ ಸಂದರ್ಭಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಮಾನಸಿಕ ಸ್ಥೈರ್ಯ. ದೊಡ್ಡ ಪಂದ್ಯಗಳಲ್ಲಿ ಅಂಕಿ-ಅಂಶಗಳಿಗಿಂತ ಮೈದಾನದಲ್ಲಿ ಬಳಸುವ ಬುದ್ಧಿವಂತಿಕೆಯೇ ಮುಖ್ಯ" ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಟೀಂ ಎಫರ್ಟ್ ಕೊಂಡಾಡಿದ ಗೌತಿ

ಸಂಜು ಗಳಿಸಿದ 97 ರನ್‌ಗಳ ಜೊತೆಗೆ, ಇತರ ಆಟಗಾರರ ಪ್ರದರ್ಶನವೂ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಕೋಚ್ ಗಂಭೀರ್ ಹೇಳಿದ್ದಾರೆ. "ಕೊನೆಯ ಓವರ್‌ಗಳಲ್ಲಿ ಶಿವಂ ದುಬೆ ಬಾರಿಸಿದ ಎರಡು ಬೌಂಡರಿಗಳು ಸಂಜು ಇನ್ನಿಂಗ್ಸ್‌ನಷ್ಟೇ ಮುಖ್ಯ. ತಿಲಕ್ ವರ್ಮಾ ಗಳಿಸಿದ 27 ರನ್‌ಗಳೂ ಅಷ್ಟೇ ಪ್ರಮುಖ. ತಂಡದಲ್ಲಿ ಪ್ರತಿಯೊಬ್ಬರ ಸಣ್ಣಪುಟ್ಟ ಕೊಡುಗೆಗಳು ಸೇರಿದಾಗ ಮಾತ್ರ ದೊಡ್ಡ ಗೆಲುವು ಸಾಧ್ಯ" ಎಂಬ ತಮ್ಮ ಫಿಲಾಸಫಿಯನ್ನು ಗಂಭೀರ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಬುಮ್ರಾ ಯಾವಾಗಲೂ ತಂಡದ ನಂಬಿಕಸ್ಥ ಬೌಲರ್. ಪವರ್‌ಪ್ಲೇನಲ್ಲಿ ವಿಕೆಟ್ ಪಡೆಯಲು ಸಾಧ್ಯವಾಗದಿದ್ದರೂ, ಅರ್ಶದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ರನ್ ನಿಯಂತ್ರಿಸಿದ್ದು ತಂಡಕ್ಕೆ ಅನುಕೂಲವಾಯಿತು. ಪವರ್‌ಪ್ಲೇನಲ್ಲಿ ಅಕ್ಷರ್ ಪಟೇಲ್ ಬೌಲಿಂಗ್ ಮಾಡಿದ ರೀತಿ ಶ್ಲಾಘನೀಯ. ಮುಂದೆಯೂ ಇವರು ಭಾರತಕ್ಕಾಗಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ಗಂಭೀರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಕೂಡ ಸಂಜು ಆಟವನ್ನು ಮೆಚ್ಚಿಕೊಂಡರು. "ಸಂಜು ಆಡಿದ್ದು 'ಎ ಪ್ಲಸ್' ಇನ್ನಿಂಗ್ಸ್. ಅನುಭವಿ ಆಟಗಾರನೊಬ್ಬ ಚೇಸಿಂಗ್ ಅನ್ನು ಹೇಗೆ ನಿಯಂತ್ರಿಸಬೇಕು ಎಂಬುದಕ್ಕೆ ಈ ಪ್ರದರ್ಶನವೇ ಅತ್ಯುತ್ತಮ ಉದಾಹರಣೆ" ಎಂದು ಹೋಪ್ ಹೇಳಿದರು.

ಟಿ20 ವಿಶ್ವಕಪ್‌ನಲ್ಲಿ ಆರನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ ಭಾರತ:

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಟೀಂ ಇಂಡಿಯಾ ಆರನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. 2007ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎಂ ಎಸ್ ಧೋನಿ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ 2014ರಲ್ಲಿ ಭಾರತ ಮತ್ತೊಮ್ಮೆ ಫೈನಲ್ ಪ್ರವೇಶಿಸಿತ್ತಾದರೂ, ಲಂಕಾ ಎದುರು ಮುಗ್ಗರಿಸಿತ್ತು. ಇನ್ನು 2016 ಹಾಗೂ 2022ರಲ್ಲಿ ಭಾರತ ತಂಡದ ಅಭಿಯಾನ ಸೆಮಿಫೈನಲ್‌ನಲ್ಲೇ ಕೊನೆಗೊಂಡಿತ್ತು. ಇನ್ನು 2024ರಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಇದೀಗ ಮತ್ತೊಮ್ಮೆ ಸೆಮೀಸ್ ಹಂತ ಪ್ರವೇಶಿಸಿದೆ.