ಟಿ20 ವಿಶ್ವಕಪ್‌ನಲ್ಲಿ ಆರಂಭದಲ್ಲಿ ಕಡೆಗಣಿಸಲ್ಪಟ್ಟು, ನಾಯಕ ಸೂರ್ಯಕುಮಾರ್ ಯಾದವ್ ಅವರಿಂದ ವ್ಯಂಗ್ಯಕ್ಕೊಳಗಾಗಿದ್ದ ಸಂಜು ಸ್ಯಾಮ್ಸನ್, ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಅಜೇಯ 97 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಕೋಲ್ಕತಾ: ಟಿ20 ವಿಶ್ವಕಪ್‌ನ ಗ್ರೂಪ್ ಹಂತದಲ್ಲಿ ಸತತ ನಾಲ್ಕು ಮ್ಯಾಚ್ ಗೆದ್ದು ಭಾರತ ಸೂಪರ್ 8 ಹಂತಕ್ಕೆ ಕಾಲಿಟ್ಟಿತ್ತು. ಆಗ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಮತ್ತು ಟೀಮ್ ಮ್ಯಾನೇಜ್‌ಮೆಂಟ್‌ಗೆ ಸಿಕ್ಕಾಪಟ್ಟೆ ಆತ್ಮವಿಶ್ವಾಸವಿತ್ತು. ವಿಶ್ವಕಪ್‌ಗೂ ಮುನ್ನ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 5 ಪಂದ್ಯಗಳಿಂದ ಕೇವಲ 46 ರನ್ ಗಳಿಸಿ ನಿರಾಸೆ ಮೂಡಿಸಿದ್ದ ಕೇರಳ ಮೂಲದ ಆಟಗಾರ ಸಂಜು ಸ್ಯಾಮ್ಸನ್‌ರನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗಿಟ್ಟೇ ಭಾರತ ಗ್ರೂಪ್ ಹಂತದ ಪಂದ್ಯಗಳನ್ನು ಆಡಿತ್ತು.
ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾಗೆ ಅನಾರೋಗ್ಯ ಕಾಡಿದಾಗ ಮಾತ್ರ ಸಂಜುಗೆ ಓಪನರ್ ಆಗಿ ಅವಕಾಶ ಸಿಕ್ಕಿತ್ತು. ಆ ಪಂದ್ಯದಲ್ಲಿ 8 ಎಸೆತಗಳಲ್ಲಿ 24 ರನ್ ಬಾರಿಸಿ ಮಿಂಚಿನ ಆರಂಭ ಒದಗಿಸಿದ್ರೂ, ನಂತರದ ಪಂದ್ಯಗಳಲ್ಲಿ ಸಂಜುಗೆ ಮತ್ತೆ ಚಾನ್ಸ್ ಸಿಗಲಿಲ್ಲ. ಅಭಿಷೇಕ್ ಶರ್ಮಾ ಸತತ ಮೂರು ಬಾರಿ ಡಕೌಟ್ ಆದ್ರೂ, ಎದುರಾಳಿಗಳು ಆಫ್ ಸ್ಪಿನ್ನರ್‌ಗಳನ್ನು ಬಳಸಿ ಎಡಗೈ ಬ್ಯಾಟರ್‌ಗಳಾದ ಅಭಿಷೇಕ್ ಮತ್ತು ಇಶಾನ್ ಕಿಶನ್‌ರನ್ನು ಕಟ್ಟಿಹಾಕುತ್ತಿದ್ದರೂ, ಬಲಗೈ ಆಟಗಾರ ಸಂಜುರನ್ನು ಆಡಿಸುವ ಬಗ್ಗೆ ಸೂರ್ಯ ಮತ್ತು ಟೀಮ್ ಮ್ಯಾನೇಜ್‌ಮೆಂಟ್ ಯೋಚಿಸಲೇ ಇಲ್ಲ.
ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್ 8 ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ, ಪತ್ರಕರ್ತರು ಆಫ್ ಸ್ಪಿನ್ ಬಲೆ ಬಗ್ಗೆ ಕ್ಯಾಪ್ಟನ್ ಸೂರ್ಯಕುಮಾರ್ ಬಳಿ ಪ್ರಶ್ನೆ ಕೇಳಿದ್ದರು. ಎಡಗೈ ಆಟಗಾರರಾದ ಅಭಿಷೇಕ್, ಕಿಶನ್ ಮತ್ತು ಮೂರನೇ ಕ್ರಮಾಂಕದಲ್ಲಿ ತಿಲಕ್ ಬರುವ ಬ್ಯಾಟಿಂಗ್ ಲೈನ್-ಅಪ್‌ನಲ್ಲಿ ಬದಲಾವಣೆ ಆಗುತ್ತಾ? ದಕ್ಷಿಣ ಆಫ್ರಿಕಾ ವಿರುದ್ಧ ಬಲಗೈ ಆಟಗಾರ ಸಂಜುರನ್ನು ಓಪನರ್ ಅಥವಾ ಮೂರನೇ ಕ್ರಮಾಂಕದಲ್ಲಿ ಆಡಿಸುತ್ತೀರಾ? ಅಂತ ಪತ್ರಕರ್ತರು ಕೇಳಿದ್ದರು. ಆದರೆ, ಇದಕ್ಕೆ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ವ್ಯಂಗ್ಯಭರಿತ ನಗುವಿನೊಂದಿಗೆ ಉತ್ತರ ನೀಡಿದ್ದರು. 'ಅಭಿಷೇಕ್ ಅಥವಾ ತಿಲಕ್‌ನನ್ನು ಕೈಬಿಟ್ಟು ಸಂಜುಗೆ ಆಡಿಸಬೇಕು ಅಂತ ಹೇಳ್ತಿದ್ದೀರಾ?' ಎಂದು ಕೇಳಿ ಸೂರ್ಯ ನಕ್ಕಿದ್ದರು.
ಹೀಗಿತ್ತು ನೋಡಿ ಸೂರ್ಯಕುಮಾರ್ ಯಾದವ್ ಪ್ರತಿಕ್ರಿಯೆ:
ಆದರೆ, ಸೂಪರ್ 8ರ ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಹೀನಾಯ ಸೋಲು ಟೀಮ್ ಇಂಡಿಯಾವನ್ನು ಆತ್ಮವಿಶ್ವಾಸದ ಶಿಖರದಿಂದ ಕೆಳಗೆ ಬೀಳಿಸಿತ್ತು. ಸೆಮಿಫೈನಲ್ ಅವಕಾಶಗಳು ಕೂಡ ಡೋಲಾಯಮಾನವಾದಾಗ, ಬೇರೆ ದಾರಿಯಿಲ್ಲದೆ ಭಾರತ ಕೊನೆಗೂ ಬಲಗೈ-ಎಡಗೈ ಓಪನಿಂಗ್ ಜೋಡಿಯನ್ನು ಪ್ರಯತ್ನಿಸಲು ಮುಂದಾಯಿತು. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸಂಜು, ಅಭಿಷೇಕ್ ಶರ್ಮಾ ಜೊತೆ ಮತ್ತೆ ಕ್ರೀಸ್‌ಗೆ ಇಳಿದರು. ಜೊತೆಗೆ, ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ಸಂಜುಗೆ ವಹಿಸಲಾಯಿತು. ಫಾರ್ಮ್‌ನಲ್ಲಿ ಇಲ್ಲದ ಅಭಿಷೇಕ್ ನೆಲೆಯೂರಲು ಸಮಯ ಕೊಟ್ಟು, ಸಂಜು 15 ಎಸೆತಗಳಲ್ಲಿ 24 ರನ್ ಗಳಿಸಿ ಪವರ್‌ಪ್ಲೇನಲ್ಲಿ ಉತ್ತಮ ಆರಂಭ ನೀಡಿದರು. ಪಂದ್ಯದ ನಂತರ ಕೋಚ್ ಮತ್ತು ಕ್ಯಾಪ್ಟನ್ ಇಬ್ಬರೂ ಸಂಜು ಆಟವನ್ನು ಹೊಗಳಿದರು. ಉತ್ತಮ ಆರಂಭ ಸಿಕ್ಕರೂ ಅದನ್ನು ದೊಡ್ಡ ಮೊತ್ತಕ್ಕೆ ಪರಿವರ್ತಿಸಲಿಲ್ಲ ಎಂದು ಕೆಲವರು ಸಂಜುರನ್ನು ಟೀಕಿಸಿದರೂ, ಕೋಚ್ ಗೌತಮ್ ಗಂಭೀರ್ ಸಂಜು ಇನ್ನಿಂಗ್ಸ್‌ನ ಇಂಪ್ಯಾಕ್ಟ್ ಬಗ್ಗೆ ಒತ್ತಿ ಹೇಳಿದರು.
ಕೊನೆಗೆ, ವೆಸ್ಟ್ ಇಂಡೀಸ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಓಪನರ್ ಆಗಿ ಮತ್ತೊಂದು ಚಾನ್ಸ್ ಪಡೆದ ಸಂಜು, ತಂಡದ ಆಪತ್ಬಾಂದವನಾಗಿ ನಿಂತರು. ನಿರ್ಣಾಯಕ ಪಂದ್ಯದಲ್ಲಿ ಅಭಿಷೇಕ್, ಇಶಾನ್ ಮತ್ತು ಸೂರ್ಯ ಎಲ್ಲರೂ ಕೈಕೊಟ್ಟಾಗ, 140 ಕೋಟಿ ಜನರ ನಿರೀಕ್ಷೆಗಳನ್ನು ಹೊತ್ತು ಈಡನ್ ಗಾರ್ಡನ್ಸ್‌ನಲ್ಲಿ ಸಂಜು ಮಿಂಚಿದರು. ಕೆಲ ದಿನಗಳ ಹಿಂದೆ, 'ಅಭಿಷೇಕ್, ತಿಲಕ್ ಬದಲು ಸಂಜುಗೆ ಆಡಿಸಬೇಕಾ?' ಎಂದು ವ್ಯಂಗ್ಯವಾಡಿದ್ದ ಅದೇ ಸೂರ್ಯಕುಮಾರ್, ಗೆಲುವಿನ ದಡ ಸೇರಿಸಿ ಬಂದ ಸಂಜುಗೆ ಸಲಾಂ ಹೊಡೆದು ಸ್ವಾಗತಿಸಿದರು. ಇದುವರೆಗೂ ತಮ್ಮನ್ನು ಕಡೆಗಣಿಸಿದವರಿಗೆ ಸಂಜು ನೀಡಿದ 'ಸ್ವೀಟ್ ರಿವೇಂಜ್' ಇದು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಈ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೇಗಿತ್ತು ಸಂಜು ಆಟ?
ವೆಸ್ಟ್ ಇಂಡೀಸ್ ನೀಡಿದ್ದ 196 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ತಲಾ 10 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ಸೂರ್ಯ 16 ಎಸೆತಗಳನ್ನು ಎದುರಿಸಿ ಕೇವಲ 18 ರನ್ ಬಾರಿಸಿದರು. ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರು, ಮತ್ತೊಂದು ತುದಿಯಲ್ಲಿ ದಿಟ್ಟ ಬ್ಯಾಟಿಂಗ್ ನಡೆಸಿದ ಸಂಜು ಸ್ಯಾಮ್ಸನ್ ಕೇವಲ 50 ಎಸೆತಗಳಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 97 ರನ್ ಸಿಡಿಸುವ ಮೂಲಕ ತಂಡವನ್ನು ಇನ್ನೂ 4 ಎಸೆತ ಬಾಕಿ ಇರುವಂತೆ ಗೆಲುವಿನ ದಡ ಸೇರಿಸಿದರು.


