ಕಟಕ್‌[ಫೆ.23]: ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಕರ್ನಾಟಕ ಸತತ 2ನೇ ಗೆಲುವು ದಾಖಲಿಸಿದೆ. ಶುಕ್ರವಾರ ಇಲ್ಲಿ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ರಾಜ್ಯ ತಂಡ ಬಂಗಾಳ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಆಲ್ರೌಂಡ್‌ ಪ್ರದರ್ಶನ ಕರ್ನಾಟಕದ ಗೆಲುವಿಗೆ ನೆರವಾಯಿತು.

ಮೊದಲ ಪಂದ್ಯದಲ್ಲಿ ಮಿಜೋರಾಮ್‌ ತಂಡವನ್ನು 159 ರನ್‌ಗಳಿಂದ ಬಗ್ಗುಬಡಿದಿದ್ದ ಬಂಗಾಳ, ಶುಕ್ರವಾರ 19.4 ಓವರ್‌ಗಳಲ್ಲಿ ಕೇವಲ 131 ರನ್‌ಗಳಿಗೆ ಆಲೌಟ್‌ ಆಯಿತು. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಬಂಗಾಳವನ್ನು ಕರ್ನಾಟಕದ ವೇಗಿಗಳಾದ ಅಭಿಮನ್ಯು ಮಿಥುನ್‌ ಹಾಗೂ ವಿನಯ್‌ ಕುಮಾರ್‌ ಕಾಡಿದರು.

ಐಸಿಸಿಗೆ ಬಿಸಿಸಿಐ ಪತ್ರ - ಪಾಕಿಸ್ತಾನಕ್ಕೆ ಶುರುವಾಯ್ತು ಆತಂಕ!

ಸುಲಭ ಗುರಿ ಬೆನ್ನತ್ತಿದ ಕರ್ನಾಟಕಕ್ಕೆ ಆರಂಭಿಕರಾದ ರೋಹನ್‌ ಕದಂ ಹಾಗೂ ಬಿ.ಆರ್‌.ಶರತ್‌ ಆಸರೆಯಾದರು. ಈ ಜೋಡಿ ಮೊದಲ ವಿಕೆಟ್‌ಗೆ 14.3 ಓವರ್‌ಗಳಲ್ಲಿ 117 ರನ್‌ ಜೊತೆಯಾಟವಾಡಿ, ಗೆಲುವನ್ನು ಖಚಿತ ಪಡಿಸಿತು. ಇವರಿಬ್ಬರ ಆರ್ಭಟಕ್ಕೆ ಬಂಗಾಳದ ಬೌಲರ್‌ಗಳು ಸುಸ್ತಾದರು. ಅನುಭವಿ ಆಶೋಕ್‌ ದಿಂಡಾ 2 ಓವರ್‌ಗಳಲ್ಲಿ 22 ರನ್‌ ಚಚ್ಚಿಸಿಕೊಂಡರು.

ಸಂಭಾವನೆ ಇಲ್ದೆ ಆಡಲು ರೆಡಿಯಾದೆ - ಯಾರೂ ಆಸಕ್ತಿ ತೋರ್ಲಿಲ್ಲ: ಜಾಫರ್!

ಶರತ್‌ 37 ಎಸೆತಗಳಲ್ಲಿ 50 ರನ್‌ ಬಾರಿಸಿ ಔಟಾದರು. ಬಳಿಕ ಕರುಣ್‌ ನಾಯರ್‌(02) ಜತೆ ಸೇರಿ ರೋಹನ್‌ 15.5 ಓವರ್‌ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಗುರುವಾರವಷ್ಟೇ ರಾಜ್ಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ರೋಹನ್‌, 55 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 81 ರನ್‌ ಗಳಿಸಿ ಅಜೇಯರಾಗಿ ಉಳಿದರು.

ವಿದರ್ಭಕ್ಕೆ ವಲಸೆ ಹೋಗಿದ್ದು ಲಾಭವಾಯಿತು: ಕನ್ನಡಿಗ ಗಣೇಶ್ ಸತೀಶ್ ಮಾತು

ಇದಕ್ಕೂ ಮುನ್ನ, ಶ್ರೀವತ್ಸ ಗೋಸ್ವಾಮಿ(40) ಹಾಗೂ ನಾಯಕ ಮನೋಜ್‌ ತಿವಾರಿ (36) ಹೊರತುಪಡಿಸಿ ಬಂಗಾಳದ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳಿಂದ ಹೋರಾಟ ಕಂಡುಬರಲಿಲ್ಲ. ಕರ್ನಾಟಕದ ಪರ ಮಿಥುನ್‌ 3, ವಿನಯ್‌ ಕುಮಾರ್‌ ಹಾಗೂ ಮನೋಜ್‌ ತಲಾ 2 ವಿಕೆಟ್‌ ಕಬಳಿಸಿದರು. ‘ಡಿ’ ಗುಂಪಿನಲ್ಲಿ 2ನೇ ಸ್ಥಾನದಲ್ಲಿರುವ ಕರ್ನಾಟಕ, ಭಾನುವಾರ ಅರುಣಾಚಲ ಪ್ರದೇಶ ವಿರುದ್ಧ ಸೆಣಸಲಿದೆ.

ಸ್ಕೋರ್‌: ಬಂಗಾಳ 131/10 (ಗೋಸ್ವಾಮಿ 40, ಮನೋಜ್‌ 36, ಮಿಥುನ್‌ 3-22), 
ಕರ್ನಾಟಕ 134/1 (ರೋಹನ್‌ 81*, ಶರತ್‌ 50)