ಬೆಂಗಳೂರು[ಫೆ.12]: ಜೀವನದಲ್ಲಿ ತೆಗೆದುಕೊಳ್ಳುವ ಕೆಲ ನಿರ್ಧಾರಗಳು ಮಹತ್ವದ ತಿರುವುಗಳಾಗಿ ಪರಿಣಮಿಸುತ್ತವೆ. ಕರ್ನಾಟಕದ ಕ್ರಿಕೆಟಿಗ ಗಣೇಶ್‌ ಸತೀಶ್‌ ಜೀವನದಲ್ಲೂ ಆಗಿದ್ದು ಇದೆ. ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಆಟಗಾರನಾಗಿ ರಾಜ್ಯ ತಂಡದ ಯಶಸ್ಸಿಗೆ ನಿರಂತರ ಕೊಡುಗೆ ನೀಡುತ್ತಿದ್ದ ಗಣೇಶ್‌, 2014-15ರ ರಣಜಿ ಋುತುವಿನಲ್ಲಿ ವಿದರ್ಭಕ್ಕೆ ವಲಸೆ ಹೋಗಬೇಕಾಯಿತು. ಆದರೆ ಅಂದು ತೆಗೆದುಕೊಂಡ ನಿರ್ಧಾರ ಗಣೇಶ್‌ಗೆ ವರವಾಗಿ ಪರಿಣಮಿಸಿದೆ. ಅವರು ಪ್ರತಿನಿಧಿಸುತ್ತಿರುವ ವಿದರ್ಭ ತಂಡ ಸತತ 2 ಬಾರಿ ರಣಜಿ ಟ್ರೋಫಿ ಎತ್ತಿಹಿಡಿದಿದೆ. ಇರಾನಿ ಟ್ರೋಫಿಯಲ್ಲೂ ಉತ್ತಮ ಪ್ರದರ್ಶನ ಮುಂದುವರಿಸಲು ಎದುರು ನೋಡುತ್ತಿರುವ ಗಣೇಶ್‌, ಸುವರ್ಣ ನ್ಯೂಸ್’ನ ಸಹೋದರ ಸಂಸ್ಥೆಯಾದ ‘ಕನ್ನಡಪ್ರಭ’ಕ್ಕೆ ನಾಗ್ಪುರದಿಂದ ತಮ್ಮ ರಣಜಿ ಅನುಭವಗಳನ್ನು ಹಂಚಿಕೊಂಡರು.

ಒತ್ತಡವಿದ್ದಿದ್ದು ಒಳ್ಳೆಯದ್ದಾಯಿತು!: 2017-18ರಲ್ಲಿ ವಿದರ್ಭ ಚಾಂಪಿಯನ್‌ ತಂಡ ಚಾಂಪಿಯನ್‌ ಆಗಲಿದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ತಂಡ ಟ್ರೋಫಿ ಎತ್ತಿಹಿಡಿದ ಬಳಿಕ, ತಂಡದ ಸಾಧನೆಯನ್ನು ಕೊಂಡಾಡಿದವರಿಗಿಂತ, ‘ಆಕಸ್ಮಿಕ’ ಎಂದವರೇ ಹೆಚ್ಚು. ಆದರೆ ಈ ವರ್ಷ ವಿದರ್ಭ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿತ್ತು. ‘ಈ ವರ್ಷ ಎಷ್ಟು ಪರಿಶ್ರಮದೊಂದಿಗೆ ಟ್ರೋಫಿ ಗೆದ್ದೆವೋ, ಅಷ್ಟೇ ಪರಿಶ್ರಮ ಕಳೆದ ವರ್ಷವೂ ಇತ್ತು. ಆದರೆ ಕಳೆದ ವರ್ಷ ನಮ್ಮ ಮೇಲೆ ಒತ್ತಡವಿರಲಿಲ್ಲ. ಆದರೆ ಈ ವರ್ಷ ಸಾಮರ್ಥ್ಯ ಮತ್ತೆ ಸಾಬೀತು ಪಡಿಸಬೇಕಾದ ಒತ್ತಡವಿತ್ತು. ನಾವು ಆಕಸ್ಮಿಕ ಚಾಂಪಿಯನ್ನರಲ್ಲ ಎನ್ನುವುದನ್ನು ತೋರಿಸಬೇಕಿತ್ತು. ಒತ್ತಡವಿದ್ದಿದ್ದು ಒಳ್ಳೆಯದ್ದೇ ಆಯಿತು’ ಎಂದು ಗಣೇಶ್‌ ಹೇಳಿದರು.

ಸೌರಾಷ್ಟ್ರ ಮಣಿಸಿ ರಣಜಿ ಟ್ರೋಫಿ ಗೆದ್ದ ವಿದರ್ಭ!

ಕೈಹಿಡಿದ ನಿರ್ಧಾರ: ವಿದರ್ಭ ತಂಡದಲ್ಲಿ ತಮಗೆ ಸಿಕ್ಕ ಜವಾಬ್ದಾರಿ, ತಾವು ತೆಗೆದುಕೊಂಡ ನಿರ್ಧಾರ ಕೈಹಿಡಿದಿದ್ದರ ಬಗ್ಗೆ ಸಂತಸ ವ್ಯಕ್ತಪಡಿಸಿದ ಗಣೇಶ್‌, ‘ಯಾವುದೇ ಗೊಂದಲವಿಲ್ಲದೆ, ಸ್ವಾತಂತ್ರ್ಯವಾಗಿ ಆಡಬೇಕು ಎನ್ನುವ ಕಾರಣಕ್ಕೆ ನಾನು ಕರ್ನಾಟಕ ತಂಡ ಬಿಟ್ಟು ವಿದರ್ಭಕ್ಕೆ ವಲಸೆ ಬಂದೆ. ಅನುಭವಿ ಆಟಗಾರನಾದ ಕಾರಣ ತಂಡ ನನಗೆ ದೊಡ್ಡ ಜವಾಬ್ದಾರಿಗಳನ್ನು ನೀಡಿತು. ನನಗೆ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದೇನೆ. ನಿರ್ಣಾಯಕ ಹಂತಗಳಲ್ಲಿ ರನ್‌ ಬಾರಿಸಿ ತಂಡಕ್ಕೆ ನೆರವಾಗಿದ್ದೇನೆ. ಅಂದು ನಾನು ವಿದರ್ಭ ತಂಡ ಸೇರಲು ತೆಗೆದುಕೊಂಡ ನಿರ್ಧಾರ ಕೈಹಿಡಿದಿದ್ದಕ್ಕೆ ಬಹಳ ಸಂತಸವಿದೆ’ ಎಂದರು.

ಇರಾನಿ ಕಪ್‌ ಪ್ರಶಸ್ತಿಗಾಗಿ ವಿದರ್ಭ-ಶೇಷ ಭಾರತ

ಇದೇ ವೇಳೆ ಕರ್ನಾಟಕ ತಂಡಕ್ಕೆ ಮರಳುವಂತೆ ಪ್ರಸ್ತಾಪ ಬಂದಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ 30 ವರ್ಷದ ಗಣೇಶ್‌, ‘ತವರು ತಂಡಕ್ಕೆ ವಾಪಸಾಗುವಂತೆ ಪ್ರಸ್ತಾಪ ಬಂದಿಲ್ಲ. ಕರ್ನಾಟಕ ತಂಡದಲ್ಲಿ ಅನೇಕ ಯುವ ಪ್ರತಿಭೆಗಳಿದ್ದಾರೆ. ತಂಡ ಅತ್ಯುತ್ತಮ ಪ್ರದರ್ಶನ ತೋರುತ್ತಿದೆ. ಸಾಕಷ್ಟು ಪ್ರತಿಭಾವಂತರೂ ಬೆಂಚ್‌ ಕಾಯುತ್ತಿದ್ದಾರೆ. ಹೀಗಾಗಿ ನನ್ನ ಅವಶ್ಯಕತೆ ತಂಡಕ್ಕೆ ಬರುವುದಿಲ್ಲ’ ಎಂದರು.

ಪೂಜಾರ ವಿರುದ್ಧ ರಣತಂತ್ರ ಸಿದ್ಧವಿತ್ತು: ಫೈನಲ್‌ ಪಂದ್ಯದಲ್ಲಿ ಸೌರಾಷ್ಟ್ರ ತಂಡದ ಬ್ಯಾಟಿಂಗ್‌ ಆಧಾರಸ್ತಂಭ ಚೇತೇಶ್ವರ್‌ ಪೂಜಾರರನ್ನು ವಿದರ್ಭ ಸುಲಭವಾಗಿ ಪೆವಿಲಿಯನ್‌ಗಟ್ಟಿತು. ಈ ಕುರಿತು ವಿವರಣೆ ನೀಡಿದ ಗಣೇಶ್‌, ‘ಪ್ರತಿ ಆಟಗಾರನ ವಿರುದ್ಧವೂ ರಣತಂತ್ರ ರೂಪಿಸಿದ್ದೆವು. ಆಟಗಾರರ ಬಲಾಬಲಗಳ ಅಧ್ಯಯನ ನಡೆಸಿದ್ದೆವು. ನಮ್ಮ ಯೋಜನೆ ಸಫಲಗೊಂಡಿತು’ ಎಂದರು.

ವಿದರ್ಭ ಯಶಸ್ಸಿನ ಗುಟ್ಟೇನು?

2017-18, 2018-19ರ ರಣಜಿ ಟ್ರೋಫಿ ಚಾಂಪಿಯನ್‌ ಆಗಿ ಅಚ್ಚರಿ ಮೂಡಿಸಿದ ವಿದರ್ಭ ತಂಡದ ಯಶಸ್ಸಿನ ಗುಟ್ಟೇನು ಎನ್ನುವುದನ್ನು ಗಣೇಶ್‌ ಬಹಿರಂಗಗೊಳಿಸಿದ್ದಾರೆ. ತಂಡದ ಯಶಸ್ಸಿಗೆ ದೊಡ್ಡ ಮಟ್ಟದ ಕಾರಣ ಕೋಚ್‌ ಚಂದ್ರಕಾಂತ್‌ ಪಂಡಿತ್‌. ‘ತಂಡದ ಸಂಸ್ಕೃತಿಯಲ್ಲಿ ಭಾರೀ ಬದಲಾವಣೆ ತರಲಾಗಿದೆ. ಸಾಧಾರಣ ಪ್ರದರ್ಶನಕ್ಕೆ ಜಾಗವಿಲ್ಲ. 30, 40 ರನ್‌ ಇಲ್ಲವೇ 2, 3 ವಿಕೆಟ್‌ ಪಡೆದು ತಂಡದಲ್ಲಿ ಮುಂದುವರಿಯುತ್ತೇನೆ ಎಂದುಕೊಳ್ಳಲು ಸಾಧ್ಯವಿಲ್ಲ. ಪ್ರತಿ ಪಂದ್ಯದಲ್ಲೂ ಸುಧಾರಣೆ ತೋರಬೇಕಿದೆ. ಆಟಗಾರರು ಸಂತೃಪ್ತತೆಗೊಳ್ಳುವಂತಿಲ್ಲ. ಪ್ರತಿ ಬಾರಿಯೂ ಆಟಗಾರರು ತಮ್ಮ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು. ಯುವ ಆಟಗಾರರು ರಣಜಿ ತಂಡಕ್ಕೆ ಕಾಲಿಡಲು ಸಿದ್ಧರಿದ್ದಾರೆ. ಹೀಗಾಗಿ ಸ್ಥಿರತೆ ಉಳಿಸಿಕೊಳ್ಳುವವರಿಗೆ ಮಾತ್ರ ಸ್ಥಾನ. ಎಷ್ಟೇ ಗೆಲುವುಗಳನ್ನು ಕಂಡರೂ ಆಟಗಾರರು ಮೈಮರೆಯುವಂತಿಲ್ಲ. ಅಂತವರಿಗೆ ತಂಡದಲ್ಲಿ ಸ್ಥಾನವಿಲ್ಲ’ ಎಂದು ಗಣೇಶ್‌ ವಿವರಿಸಿದರು.

ಸಂದರ್ಶನ: ಸ್ಪಂದನ್‌ ಕಣಿಯಾರ್‌, ಕನ್ನಡಪ್ರಭ