ಹಾಕಿ, ಶೂಟಿಂಗ್ ಸೇರಿದಂತೆ ಕೆಲ ಕ್ರೀಡೆಗಳ ಸ್ಪರ್ಧಿಗಳ ಜೊತೆ ಪ್ರಧಾನಿ ಮೋದಿ ತಮ್ಮ ನಿವಾಸದಲ್ಲಿ ಸಂವಾದ ನಡೆಸಿದರು. ಜಾವೆಲಿನ್‌ ಚಾಂಪಿಯನ್‌ ನೀರಜ್‌ ಚೋಪ್‌, ತಾರಾ ಶಟ್ಲರ್‌ ಪಿ.ವಿ.ಸಿಂಧು, ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ ನಿಖಾತ್‌ ಝರೀನ್‌ ಕೂಡಾ ವರ್ಚುವಲ್‌ ಆಗಿ ಸಂವಾದದಲ್ಲಿ ಪಾಲ್ಗೊಂಡರು. ಈ ವೇಳೆ ಅಥ್ಲೀಟ್‌ಗಳಿಗೆ ಪ್ರಧಾನಿ ಕಿವಿಮಾತು ಹೇಳಿದ್ದಾರೆ.

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಉತ್ತಮ ಫಲಿತಾಂಶಕ್ಕಾಗಿ ಶಾಂತ ಚಿತ್ತದಿಂದ ಇರಿ, ಸರಿಯಾಗಿ ನಿದ್ದೆ ಮಾಡಿ ಎಂದು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ನೀಡಿದ್ದಾರೆ.

ಗುರುವಾರ ಹಾಕಿ, ಶೂಟಿಂಗ್ ಸೇರಿದಂತೆ ಕೆಲ ಕ್ರೀಡೆಗಳ ಸ್ಪರ್ಧಿಗಳ ಜೊತೆ ಪ್ರಧಾನಿ ಮೋದಿ ತಮ್ಮ ನಿವಾಸದಲ್ಲಿ ಸಂವಾದ ನಡೆಸಿದರು. ಜಾವೆಲಿನ್‌ ಚಾಂಪಿಯನ್‌ ನೀರಜ್‌ ಚೋಪ್‌, ತಾರಾ ಶಟ್ಲರ್‌ ಪಿ.ವಿ.ಸಿಂಧು, ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ ನಿಖಾತ್‌ ಝರೀನ್‌ ಕೂಡಾ ವರ್ಚುವಲ್‌ ಆಗಿ ಸಂವಾದದಲ್ಲಿ ಪಾಲ್ಗೊಂಡರು.

‘ಒಲಿಂಪಿಕ್ಸ್‌ಗೆ ಆಯ್ಕೆಯಾದ ಸಂಭ್ರಮದಲ್ಲಿ ಕಳೆದುಹೋಗಬೇಡಿ. ಅದು ನಿಮ್ಮ ಗಮನ ಬೇರೆಡೆ ಸೆಳೆಯುತ್ತದೆ. ನಿಮ್ಮ ಪ್ರತಿಭೆ ಮೇಲೆ ನಂಬಿಕೆ ಇಡಿ. ನೀವು ಪದಕ ಗೆಲ್ಲುತ್ತೀರೋ ಇಲ್ಲವೋ ಎಂಬುದು ಸಮಸ್ಯೆ ಅಲ್ಲ. ಶೇಕಡಾ 100ರಷ್ಟು ಪ್ರಯತ್ನಿಸಿ’ ಎಂದು ಸಲಹೆ ನೀಡಿದರು.

ವಿಂಬಲ್ಡನ್: 4ನೇ ಸುತ್ತಿಗೆ ಹಾಲಿ ಚಾಂಪಿಯನ್ ಆಲ್ಕರಜ್ ಲಗ್ಗೆ

‘ಕ್ರೀಡೆಯಲ್ಲಿ ಅಭ್ಯಾಸ ಮತ್ತು ಸ್ಥಿರತೆ ಮುಖ್ಯ. ಆದರೆ ನಿದ್ದೆಗೂ ಪ್ರಾಮುಖ್ಯತೆ ನೀಡಬೇಕು. ಅದು ಬಹಳ ಅಗತ್ಯ. ನಿದ್ದೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬೇಡಿ’ ಎಂದರು. ಅಲ್ಲದೆ ಪ್ಯಾರಿಸ್‌ನಿಂದ ಮರಳಿದ ಬಳಿಕ ಸ್ವಾತಂತ್ರ್ಯೋತ್ಸವಕ್ಕೆ ಆಹ್ವಾನ ನೀಡುವುದಾಗಿ ಒಲಿಂಪಿಯನ್‌ಗಳಿಗೆ ಭರವಸೆ ನೀಡಿದರು.

ತಾಯಿ ಮಾಡಿದ ಚುರ್ಮಾ ತನ್ನಿ: ನೀರಜ್‌ಗೆ ಮೋದಿ

ಟೋಕಿಯೊ ಒಲಿಂಪಿಕ್ಸ್‌ನಿಂದ ಹಿಂದಿರುಗಿದ ಬಳಿಕ ಚುರ್ಮಾ(ಹರ್ಯಾಣದ ಜನಪ್ರಿಯ ತಿನಿಸು) ನೀಡುವುದಾಗಿ ಮೋದಿ ಅವರಲ್ಲಿ ನೀರಜ್‌ ಚೋಪ್ರಾ ಭರವಸೆ ನೀಡಿದ್ದರು. ಇದನ್ನು ಸಂವಾದದ ವೇಳೆ ಮೋದಿ ನೆನಪಿಸಿದರು.

ಮಣ್ಣಿನ ರುಚಿ ಹೇಗಿತ್ತು? ಟೀಂ ಇಂಡಿಯಾ ಜೊತೆ ಸಂವಾದದಲ್ಲಿ ರೋಹಿತ್‌ಗೆ ಮೋದಿ ಗೂಗ್ಲಿ!

ಈ ವೇಳೆ ಚೋಪ್ರಾ ಮಾತನಾಡಿ, ‘ಈ ಬಾರಿ ಖಂಡೀತಾ ಚುರ್ಮಾ ತರುತ್ತೇನೆ. ಕಳೆದ ಬಾರಿ ಸಕ್ಕರೆಯಲ್ಲಿ ಮಾಡಿದ ಚುರ್ಮಾ ತಂದಿದ್ದೆ. ಈ ಬಾರಿ ದೇಸಿ ತುಪ್ಪ ಹಾಗೂ ಬೆಲ್ಲದಿಂದ ತಯಾರಿಸಿದ ಚುರ್ಮಾ ಕೊಡುತ್ತೇನೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ನಿಮ್ಮ ತಾಯಿ ಮನೆಯಲ್ಲೇ ಮಾಡಿದ ಚುರ್ಮಾ ತಂದುಕೊಡಿ ಎಂದು ಮನವಿ ಮಾಡಿದರು.

2036ರ ಒಲಿಂಪಿಕ್ಸ್‌ಗೆ ಬಿಡ್‌ ಸಲ್ಲಿಸಲು ನಮಗೆ ನೆರವಾಗಿ

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಕ್ರೀಡಾಪಟುಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಮನವಿ ಮಾಡಿದ್ದು, ‘2036ರ ಒಲಿಂಪಿಕ್ಸ್‌ಗೆ ಬಿಡ್‌ ಸಲ್ಲಿಸಲು ನೀವು ನೆರವು ನೀಡಬೇಕು’ ಎಂದಿದ್ದಾರೆ.

ಗುರುವಾರ ಕ್ರೀಡಾಪಟುಗಳ ಜೊತೆ ಮೋದಿ ಅವರು ಸಂವಾದ ನಡೆಸಿದ್ದು, ಅದರ ವಿಡಿಯೋವನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಸಂವಾದದ ವೇಳೆ ಮೋದಿ, ‘2036ರ ಒಲಿಂಪಿಕ್ಸ್‌ಗ ಆತಿಥ್ಯ ಹಕ್ಕು ನಮಗೆ ಸಿಗುವ ವಿಶ್ವಾಸವಿದೆ. ಇದು ದೇಶದಲ್ಲಿ ಕ್ರೀಡೆಯ ಮತ್ತಷ್ಟು ಬೆಳವಣಿಗೆಗೆ ನೆರವಾಗಲಿದೆ. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ನೀವು, ಬಿಡುವಿರುವಾಗ ಅಲ್ಲಿನ ಸಿದ್ಧತೆ, ವ್ಯವಸ್ಥೆಗಳನ್ನು ಗಮನಿಸಿ. ಒಲಿಂಪಿಕ್ಸ್‌ ಆಯೋಜನೆಗೆ ಬೇಕಿರುವ ಅಂಶಗಳನ್ನು ಗಮನಿಸಿ ತಮ್ಮೊಂದಿಗೆ ಹಂಚಿಕೊಳ್ಳಿ. ನೀವು ಕೊಡುವ ಮಾಹಿತಿ ನಮಗೆ ಒಲಿಂಪಿಕ್ಸ್‌ ಆತಿಥ್ಯ ವಹಿಸಲು ಮತ್ತಷ್ಟು ನೆರವಾಗಲಿದೆ’ ಎಂದರು.

2036ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲು ಭಾರತ ಉತ್ಸುಕವಾಗಿದ್ದು, ಮುಂದಿನ ವರ್ಷ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿಯು ಆತಿಥ್ಯ ದೇಶವನ್ನು ಘೋಷಿಸುವ ಸಾಧ್ಯತೆಯಿದೆ.

ಭಾರತದ ಅಥ್ಲೀಟ್ಸ್‌ಗಳು ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಹೆಮ್ಮೆ ತರುತ್ತಾರೆ: ಮೋದಿ

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಅಥ್ಲೀಟ್‌ಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ದೇಶಕ್ಕೆ ಹೆಮ್ಮೆ ತರುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ಯಾರಿಸ್‌ಗೆ ತೆರಳಲಿರುವ ಹಲವು ಅಥ್ಲೀಟ್‌ಗಳ ಜೊತೆ ಸಂವಾದ ನಡೆಸಿದ ಬಳಿಕ ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, ‘ಒಲಿಂಪಿಕ್ಸ್‌ಗಾಗಿ ಪ್ಯಾರಿಸ್‌ಗೆ ತೆರಳುತ್ತಿರುವ ನಮ್ಮ ತಂಡದೊಂದಿಗೆ ಸಂವಾದ ನಡೆಸಿದ್ದೇನೆ. ನಮ್ಮ ಅಥ್ಲೀಟ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿ ಭಾರತವೇ ಹೆಮ್ಮೆ ಪಡುವಂತೆ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ. ಅವರ ಮೇಲೆ 140 ಕೋಟಿ ಭಾರತೀಯರು ಭರವಸೆ ಇಟ್ಟಿದ್ದಾರೆ’ ಎಂದು ಹೇಳಿದ್ದಾರೆ. ಈ ಬಾರಿ ಭಾರತದಿಂದ 120ರಷ್ಟು ಅಥ್ಲೀಟ್‌ಗಳು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.