ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಎರಡನೇ ಆವೃತ್ತಿಯ JSW ಇಂಡಿಯನ್ ಓಪನ್ ಸ್ಕ್ವಾಷ್ ಪಂದ್ಯಾವಳಿ ಆರಂಭವಾಗಲಿದೆ. ಹಾಲಿ ಚಾಂಪಿಯನ್ ಅನಾಹತ್ ಸಿಂಗ್, ರಮಿತ್ ಟಂಡನ್, ಜೋಷ್ನಾ ಚಿನಪ್ಪ ಸೇರಿದಂತೆ ಭಾರತದ ಪ್ರಮುಖ ಆಟಗಾರರು ಮತ್ತು ಅಂತರಾಷ್ಟ್ರೀಯ ಸ್ಪರ್ಧಿಗಳು ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ. 

ಬೆಂಗಳೂರು (ಮಾ.17): ಮುಂಬೈನ ಐತಿಹಾಸಿಕ ಸಿಸಿಐ (CCI) ಬ್ರಬೋರ್ನ್ ಸ್ಟೇಡಿಯಂನಲ್ಲಿ ನಾಳೆಯಿಂದ ಎರಡನೇ ಆವೃತ್ತಿಯ JSW ಇಂಡಿಯನ್ ಓಪನ್ ಆರಂಭವಾಗಲಿದ್ದು, ಐದು ದಿನಗಳ ಕಾಲ ಉನ್ನತ ಮಟ್ಟದ ಸ್ಕ್ವಾಷ್ ಪಂದ್ಯಗಳಿಗೆ ವೇದಿಕೆ ಸಿದ್ಧವಾಗಿದೆ. ಭಾರತದ ಪ್ರಮುಖ ಆಟಗಾರರು ಮತ್ತು ಅಂತರಾಷ್ಟ್ರೀಯ ಸ್ಪರ್ಧಿಗಳನ್ನೊಳಗೊಂಡ ಈ ಪಂದ್ಯಾವಳಿಯಲ್ಲಿ, ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಒಟ್ಟು 30 ಪಂದ್ಯಗಳು ನಡೆಯಲಿವೆ. ಆಟಗಾರರು ಪಿಎಸ್‌ಎ (PSA) ಶ್ರೇಯಾಂಕದ ಅಂಕಗಳು ಮತ್ತು ಪ್ರತಿಷ್ಠಿತ ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ.

Add Asianetnews Kannada as a Preferred SourcegooglePreferred

ಈ ಪಂದ್ಯಾವಳಿಯಲ್ಲಿ ಅಗ್ರ ಶ್ರೇಯಾಂಕದ ಮತ್ತು ಹಾಲಿ ಚಾಂಪಿಯನ್ ಅನಾಹತ್ ಸಿಂಗ್ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇವರೊಂದಿಗೆ ಭಾರತದ ಪ್ರಮುಖ ಆಟಗಾರರಾದ ರಮಿತ್ ಟಂಡನ್, ವೀರ್ ಚೋತ್ರಾನಿ, ಅಭಯ್ ಸಿಂಗ್ ಮತ್ತು ಹಿರಿಯ ಆಟಗಾರ್ತಿ ಜೋಷ್ನಾ ಚಿನಪ್ಪ ಅವರು ತಾಯ್ನಾಡಿನ ಪ್ರೇಕ್ಷಕರ ಮುಂದೆ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.

ಅಂತರಾಷ್ಟ್ರೀಯ ಮಟ್ಟದ ಪ್ರಬಲ ಆಟಗಾರರಾದ ಯಾಹ್ಯಾ ಎಲ್ನಾವಾಸ್ನಿ, ನದೀನ್ ಎಲ್ಹಮ್ಮಮ್ ಮತ್ತು ಎನೋರಾ ವಿಲ್ಲಾರ್ಡ್ ಕೂಡ ಪಾಲ್ಗೊಳ್ಳುತ್ತಿದ್ದು, ವಾರದ ಉದ್ದಕ್ಕೂ ರೋಚಕ ಪಂದ್ಯಗಳು ನಡೆಯಲಿವೆ.

ಪಂದ್ಯಾವಳಿಯ ಬಗ್ಗೆ ಮಾತನಾಡಿದ ರಮಿತ್ ಟಂಡನ್, "ಭಾರತದ ಸಂಸ್ಕೃತಿ ಮತ್ತು ಆತಿಥ್ಯದ ಕಾರಣದಿಂದಾಗಿ ಆಟಗಾರರು ಇಲ್ಲಿಗೆ ಬರಲು ಇಷ್ಟಪಡುತ್ತಾರೆ. ಕಳೆದ ವರ್ಷದ ಈ ಪಂದ್ಯಾವಳಿಯು ವರ್ಷದ ಅತ್ಯುತ್ತಮ ಈವೆಂಟ್‌ಗಳಲ್ಲಿ ಒಂದಾಗಿತ್ತು ಎಂದು ಅನೇಕ ಆಟಗಾರರು ನನಗೆ ತಿಳಿಸಿದ್ದರು ಎಂದರು.

ಡಿಫೆಂಡಿಂಗ್ ಚಾಂಪಿಯನ್ ಅನಾಹತ್ ಸಿಂಗ್ ಮಾತನಾಡಿ "ಈ ಪಂದ್ಯಾವಳಿಗಾಗಿ ನಾನು ಕಠಿಣ ತರಬೇತಿ ನಡೆಸಿದ್ದೇನೆ. ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಮತ್ತು ಪ್ರತಿ ಪಂದ್ಯವನ್ನೂ ಅದೇ ಮಾನಸಿಕತೆಯೊಂದಿಗೆ ಎದುರಿಸುವುದು ನನ್ನ ಗುರಿ. ಮುಂದಿನ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ಕ್ವಾಷ್ ಸೇರ್ಪಡೆಯಾಗುತ್ತಿರುವುದರಿಂದ, ಅಂತಹ ದೊಡ್ಡ ಗುರಿಯತ್ತ ಸಾಗಲು ಇಂತಹ ಪಂದ್ಯಾವಳಿಗಳು ಪ್ರಮುಖ ಹಂತಗಳಾಗಿವೆ" ಎಂದರು.

2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಸ್ಕ್ವಾಷ್ ಪದಾರ್ಪಣೆ ಮಾಡುತ್ತಿರುವುದರಿಂದ, ಭಾರತದಲ್ಲಿ ಕ್ರೀಡೆಯ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಈ ಟೂರ್ನಿ ಸಹಕಾರಿಯಾಗಿದೆ. ಮಾರ್ಚ್ 18 ಮೊದಲ ಸುತ್ತಿನ ಪಂದ್ಯಗಳು (ಮಧ್ಯಾಹ್ನ 12:00 ರಿಂದ), ಮಾರ್ಚ್ 19, ಎರಡನೇ ಸುತ್ತು, ಮಾರ್ಚ್ 20 ಕ್ವಾರ್ಟರ್ ಫೈನಲ್ಸ್, ಮಾರ್ಚ್ 21 ಸೆಮಿಫೈನಲ್ಸ್ ಮತ್ತು ಮಾರ್ಚ್ 22 ರಂದು ಫೈನಲ್ಸ್ ನಡೆಯಲಿದೆ.