ಡೋಪಿಂಗ್‌ ಆರೋಪದಿಂದಾಗಿ ಟೋಕಿಯೊ ಒಲಿಂಪಿಕ್ಸ್ ಮತ್ತು ಏಷ್ಯನ್ ಗೇಮ್ಸ್‌ನಿಂದ ಹೊರಗುಳಿದಿದ್ದ ಕರ್ನಾಟಕದ ಅಥ್ಲೀಟ್ ಎಂ.ಆರ್.ಪೂವಮ್ಮ ಏಷ್ಯಾಡ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 36ನೇ ವಯಸ್ಸಿನಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿರುವ ಅವರು ತಮ್ಮ ಸಾಮರ್ಥ್ಯವನ್ನು ಅನುಮಾನಿಸಿದವರಿಗೆ ತಕ್ಕ ಉತ್ತರ ನೀಡಿದ್ದಾರೆ. ಇದರ ಜೊತೆಗೆ ಕರ್ನಾಟಕದ ಮತ್ತೋರ್ವ ಅಥ್ಲೀಟ್ ಸ್ನೇಹಾ ಎಸ್.ಎಸ್. ಕೂಡ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಡೋಪಿಂಗ್‌ ಆರೋಪದಿಂದ 2022ರ ಏಷ್ಯಾಡ್‌ನಿಂದ ಹೊರಗುಳಿದಿದ್ದ ಕನ್ನಡತಿ ಎಂ.ಆರ್‌.ಪೂವಮ್ಮ ಈಗ ಚಿನ್ನ ಗೆದ್ದು ಬೀಗಿದ್ದಾರೆ. ‘ಈ ಗೆಲುವು ನನ್ನ ಸಾಮರ್ಥ್ಯ ಅನುಮಾನಿಸಿದವರಿಗೆ ಉತ್ತರ’ ಎಂದು 36 ವರ್ಷದ ಪೂವಮ್ಮ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಗೆಲುವಿನ ಬಳಿಕ ಮಾತನಾಡಿರುವ ಅವರು, ‘ಇದು ನನ್ನ 6ನೇ ಏಷ್ಯಾಡ್‌ ಪದಕ. 2022ರ ಬಳಿಕ ಕಮ್‌ಬ್ಯಾಕ್‌ ಮಾಡಲು ಇದು ಬೇಕಿತ್ತು. ಯಾಕೆಂದರೆ ಕೆಲ ವಿಷಯಗಳಿಂದ(2021ರಲ್ಲಿ ಡೋಪಿಂಗ್‌ನಿಂದ ನಿರ್ಬಂಧ), ನಾನು 2021ರ ಟೋಕಿಯೊ ಒಲಿಂಪಿಕ್ಸ್, 2023ರ ಹಾಂಗ್ಝೋ ಏಷ್ಯಾನ್‌ ಗೇಮ್ಸ್‌ ತಪ್ಪಿಸಿಕೊಂಡಿದ್ದೆ. ಆದರೆ ಈಗ ಚಿನ್ನ ಗೆದ್ದು ಪ್ರತೀಕಾರ ತೀರಿಸಿಕೊಂಡೆ. ವಯಸ್ಸು ಕೇವಲ ಸಂಖ್ಯೆಯಷ್ಟೇ. ನಾನು ನನ್ನ ಕ್ರೀಡೆಯನ್ನು ಪ್ರೀತಿಸುತ್ತೇನೆ. ಬಹುಶಃ ನನ್ನ 40 ವಯಸ್ಸಿನಲ್ಲಿಯೂ ಓಟ ಮುಂದುವರೆಸಬಹುದು. ನಾನು ನಿವೃತ್ತಿ ಹೊಂದುತ್ತಿಲ್ಲ. ಆ ಮನಸ್ಸು ನನಗಿಲ್ಲ’ ಎಂದಿದ್ದಾರೆ.

ಕರ್ನಾಟಕದ ಪೂವಮ್ಮ, ಸ್ನೇಹಾ ಪದಕ ಸಾಧನೆ

ಮಂಗಳವಾರ ಕರ್ನಾಟಕದ ಇಬ್ಬರು ಅಥ್ಲೀಟ್‌ಗಳು ಪದಕ ಸಾಧನೆ ಮಾಡಿದರು. 36 ವರ್ಷದ ಎಂ.ಆರ್‌.ಪೂವಮ್ಮ ಅವರು 4*400 ಮೀ. ಚಿನ್ನ ವಿಜೇತ ಮಹಿಳಾ ತಂಡದಲ್ಲಿದ್ದರು. ಇದು ಕ್ರೀಡಾಕೂಟದಲ್ಲಿ ಅವರಿಗೆ 2ನೇ ಪದಕ. ಇತ್ತೀಚೆಗಷ್ಟೇ ಅವರು ಬೆಳ್ಳಿ ವಿಜೇತ 4*400 ಮಿಶ್ರ ರಿಲೇ ತಂಡದ ಭಾಗವಾಗಿದ್ದರು. ಇನ್ನು, 4*100 ಮೀ. ಮಿಶ್ರ ರಿಲೇ ವಿಭಾಗದಲ್ಲಿ ಸ್ನೇಹಾ ಎಸ್‌.ಎಸ್‌. ಅವರನ್ನೊಳಗೊಂಡ ತಂಡ ಕಂಚಿನ ಪದಕ ಗೆದ್ದಿತು.

ಮಹಿಳಾ ರಿಲೇ ಚಿನ್ನದ ಗರಿ; ಮಿಶ್ರ, ಪುರುಷ ಟೀಂಗೆ ಕಂಚು

ಏಷ್ಯಾಡ್‌ನ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮಂಗಳವಾರ ಮತ್ತೆ 5 ಪದಕಗಳು ಲಭಿಸಿವೆ. ಮಹಿಳೆಯರ 4*400 ಮೀ. ರಿಲೇ ಸ್ಪರ್ಧೆಯಲ್ಲಿ ಕಿರಣ್‌ ಪಹಲ್‌, ಪ್ರಾಚಿ ಚೌಧರಿ, ವಿದ್ಯಾ ರಾಮರಾಜ್‌ ಹಾಗೂ ಕರ್ನಾಟಕದ ಎಂ.ಆರ್‌.ಪೂವಮ್ಮ ಅವರನ್ನೊಳಗೊಂಡ ತಂಡ 3 ನಿಮಿಷ 29.69 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಾಂಪಿಯನ್‌ ಆಯಿತು. ಬಹರೇನ್‌(3 ನಿಮಿಷ 30.21 ಸೆಕೆಂಡ್‌) ಬೆಳ್ಳಿ, ಚೀನಾ(3 ನಿಮಿಷ, 31.02 ಸೆಕೆಂಡ್‌) ಬೆಳ್ಳಿ ಪಡೆಯಿತು. ಭಾರತದ 4*400 ಮೀ. ಮಹಿಳಾ ತಂಡಕ್ಕೆ ಏಷ್ಯಾಡ್‌ನಲ್ಲಿ ಇದು 7ನೇ ಚಿನ್ನ. 1986ರಲ್ಲಿ ಚಿನ್ನ ಗೆದ್ದಿದ್ದ ತಂಡ, ಬಳಿಕ 2002ರಿಂದ 2018ರವರೆಗೆ ಸತತ 5 ಆವೃತ್ತಿಗಳಲ್ಲೂ ಚಾಂಪಿಯನ್‌ ಆಗಿತ್ತು. ಕಳೆದ ಬಾರಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತ್ತು.

ಇದೇ ವೇಳೆ 4*400 ಪುರುಷರ ವಿಭಾಗದಲ್ಲಿ ಧರ್ಮವೀರ್‌, ಟಿ.ಎಸ್‌.ಮನು, ಜಯ್‌ಕುಮಾರ್‌ ಹಾಗೂ ವಿಶಾಲ್‌ ಟಿ.ಕೆ. ಅವರನ್ನೊಳಗೊಂಡ ತಂಡ 3 ನಿಮಿಷ 01.61 ಸೆಕೆಂಡ್‌ನಲ್ಲಿ ಕ್ರಮಿಸಿ ಕಂಚು ಪಡೆಯಿತು. ಜಪಾನ್‌ ಚಿನ್ನ, ಕತಾರ್‌ ಬೆಳ್ಳಿ ಗೆದ್ದಿತು. ಮಿಶ್ರ 4*100 ಮೀ. ರಿಲೇ ವಿಭಾಗದಲ್ಲಿ ಗುರ್ವಿಂದರ್‌ ವೀರ್‌ ಸಿಂಗ್‌, ಅನಿಮೇಶ್‌ ಕುಜೂರ್‌, ಹರಿತಾ ಭದ್ರಾ ಹಾಗೂ ಕರ್ನಾಟಕದ ಸ್ನೇಹಾ ಎಸ್‌.ಎಸ್‌. ಅವರಿದ್ದ ತಂಡ 41.06 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚು ಗೆದ್ದಿತು.