ಭಾರತೀಯ ಕ್ರಿಕೆಟ್ ದಿಗ್ಗಜರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವಿನ ಎರಡು ದಶಕಗಳ ಅಪೂರ್ವ ಬಾಂಧವ್ಯದ ಬಗ್ಗೆ ರೋಹಿತ್ ಮನಬಿಚ್ಚಿ ಮಾತನಾಡಿದ್ದಾರೆ. ಮೈದಾನದಲ್ಲಿ ಕಣ್ಣ ಸನ್ನೆಯಲ್ಲೇ ಅರ್ಥಮಾಡಿಕೊಳ್ಳುವ ಇವರಿಬ್ಬರ ಏಕೈಕ ಗುರಿ ದೇಶಕ್ಕಾಗಿ ವಿಶ್ವಕಪ್ ಗೆಲ್ಲುವುದಾಗಿದೆ.
ಮುಂಬೈ: ಭಾರತೀಯ ಕ್ರಿಕೆಟ್‌ನ ಎರಡು ಬಲಿಷ್ಠ ಸ್ತಂಭಗಳು, ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ದಿಗ್ಗಜರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸುಮಾರು ಎರಡು ದಶಕಗಳಿಂದ ಭಾರತೀಯ ಕ್ರಿಕೆಟ್ ಅಂಗಳದಲ್ಲಿ ಒಂದಾಗಿ ಹೆಜ್ಜೆ ಹಾಕುತ್ತಿದ್ದಾರೆ. ಜೊತೆಯಾಗಿ ನೂರಾರು ಜಯದ ಕಥೆಗಳನ್ನು ಬರೆದಿರುವ, ಕಷ್ಟದ ಹಂತಗಳಲ್ಲಿ ಪರಸ್ಪರ ಹೆಗಲಿಗೆ ಹೆಗಲು ಕೊಟ್ಟು ನಿಂತಿರುವ ಈ ಇಬ್ಬರು ನಾಯಕರ ನಡುವಿನ ಅಪೂರ್ವ ಬಾಂಧವ್ಯದ ಕುರಿತು ಭಾರತೀಯ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ ಅತ್ಯಂತ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಎರಡು ದಶಕಗಳ ಅಪೂರ್ವ ಪಯಣ!
ರೋಹಿತ್ ಶರ್ಮಾ 2007 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಡಿ ಇಟ್ಟರೆ, ವಿರಾಟ್ ಕೊಹ್ಲಿ 2008 ರಲ್ಲಿ ಪಾದಾರ್ಪಣೆ ಮಾಡಿದರು. ಕೇವಲ ಒಂದು ವರ್ಷದ ಅಂತರದಲ್ಲಿ ನೀಲಿ ಉಡುಪು ಧರಿಸಿದ ಈ ಇಬ್ಬರು ಪ್ರತಿಭಾವಂತ ಯುವಕರು, ತದನಂತರ ಭಾರತೀಯ ಕ್ರಿಕೆಟ್‌ನ ಪೋಸ್ಟರ್ ಬಾಯ್‌ಗಳಾಗಿ ಬೆಳೆದು ನಿಂತಿದ್ದು ಈಗ ಇತಿಹಾಸ.
ಧೋನಿ ಬಳಗದಲ್ಲಿ ಪಳಗಿದ ಜೋಡಿ!
ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಸಾರಥ್ಯದಲ್ಲಿ ಪಳಗಿದ ಈ ಜೋಡಿ, ಆ ನಂತರ ಒಬ್ಬರ ನಾಯಕತ್ವದಲ್ಲಿ ಮತ್ತೊಬ್ಬರು ಆಡುತ್ತಾ ತಂಡವನ್ನು ಯಶಸ್ಸಿನ ಉತ್ತುಂಗಕ್ಕೇರಿಸಿದರು. ವಿರಾಟ್ ನಾಯಕನಾಗಿದ್ದಾಗ ರೋಹಿತ್ ಪ್ರಮುಖ ಅಸ್ತ್ರವಾಗಿದ್ದರೆ, ರೋಹಿತ್ ನಾಯಕತ್ವದ ಅವಧಿಯಲ್ಲಿ ವಿರಾಟ್ ತಂಡದ ಬೆನ್ನೆಲುಬಾಗಿ ನಿಂತರು. ಕಳೆದ ಹತ್ತು ವರ್ಷಗಳಲ್ಲಿ ಟೀಮ್ ಇಂಡಿಯಾ ಸಾಧಿಸಿದ ಪ್ರತಿಯೊಂದು ಸ್ಮರಣೀಯ ಗೆಲುವಿನ ಹಿಂದೆ ಈ ಇಬ್ಬರ ಕೊಡುಗೆ ಅಪಾರ.
ಪದಗಳ ಹಂಗಿಲ್ಲದ ಆತ್ಮೀಯ ಸ್ನೇಹ!
ವಿರಾಟ್ ಜೊತೆಗಿನ ಬಾಂಧವ್ಯದ ಬಗ್ಗೆ ಭಾವುಕರಾಗಿ ಮನಬಿಚ್ಚಿ ಮಾತನಾಡಿದ ರೋಹಿತ್ ಶರ್ಮಾ, "ಇಷ್ಟು ದೀರ್ಘಕಾಲ ಒಟ್ಟಿಗೆ ಕ್ರಿಕೆಟ್ ಆಡಿದ ಮೇಲೆ ನಮ್ಮ ನಡುವೆ ಮಾತಿಗೆ ಮೀರಿದ ಆತ್ಮೀಯತೆ ಬೆಳೆದಿದೆ. ಮೈದಾನದಲ್ಲಿ ಅಥವಾ ಮೈದಾನದ ಹೊರಗೆ ನಮಗೆ ಭಾವನೆಗಳನ್ನು ವ್ಯಕ್ತಪಡಿಸಲು ಪದಗಳ ಅಗತ್ಯವೇ ಬೀಳುವುದಿಲ್ಲ, ಕಣ್ಣ ಸನ್ನೆಯಲ್ಲೇ ವಿಷಯ ಅರ್ಥವಾಗುತ್ತದೆ. ನಮ್ಮಿಬ್ಬರ ಆಟದ ಶೈಲಿ, ಆಲೋಚನೆ ವಿಭಿನ್ನವಾಗಿರಬಹುದು. ಆದರೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಶೈಲಿಯನ್ನು ಹೊಂದಿರುವುದು ಅತ್ಯಗತ್ಯ" ಎಂದಿದ್ದಾರೆ.
ಸುಂದರ ಕ್ಷಣ ನೆನೆದ ರೋಹಿತ್!
ತಮ್ಮ ಸುಂದರ ದಿನಗಳನ್ನು ನೆನಪಿಸಿಕೊಂಡ ರೋಹಿತ್, "ನಮ್ಮಿಬ್ಬರ ನಿಕಟ ಸ್ನೇಹ ಆರಂಭವಾಗಿದ್ದು ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ. ಆ ಪ್ರವಾಸದ ನೆನಪುಗಳು ಇಂದಿಗೂ ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾಗಿವೆ. ಇಂದಿಗೂ ಆ ಹಳೆಯ ದಿನಗಳ ವಿಡಿಯೋಗಳು ಟಿವಿಯಲ್ಲಿ ಬಂದಾಗ ನಾವಿಬ್ಬರೂ ಮುಖ ಮುಖ ನೋಡಿ ಜೋರಾಗಿ ನಗುತ್ತೇವೆ" ಎಂದು ಆ ದಿನಗಳನ್ನು ಮೆಲಕು ಹಾಕಿದರು.
'ವಿರಾಟ್ ಎಂದಿಗೂ ಬದಲಾಗದ ಚಾಂಪಿಯನ್'!
ವಿರಾಟ್ ಕೊಹ್ಲಿ ಅವರ ಶ್ರೇಷ್ಠತೆ ಹಾಗೂ ಅವರ ಶ್ರಮವನ್ನು ಕೊಂಡಾಡಿದ ರೋಹಿತ್, "ವಿರಾಟ್ ಈ ದೇಶಕ್ಕಾಗಿ, ಈ ತಂಡಕ್ಕಾಗಿ ಏನು ಸಾಧಿಸಿದ್ದಾರೆ ಎಂಬುದು ಇಡೀ ಜಗತ್ತಿಗೇ ತಿಳಿದಿದೆ. ಅವರು ನಾಯಕನಾಗಿದ್ದಾಗಲೂ ಒಂದೇ ರೀತಿ ಇದ್ದರು, ನಾನು ನಾಯಕನಾದ ಮೇಲೆಯೂ ಅವರ ನಡವಳಿಕೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಅವರು ಎಂದಿಗೂ ಅಸಲಿ ವಿರಾಟ್ ಕೊಹ್ಲಿಯಾಗಿಯೇ ಉಳಿಯುತ್ತಾರೆ. ಮೈದಾನಕ್ಕೆ ಬರುವುದು, ಶ್ರದ್ಧೆಯಿಂದ ಅಭ್ಯಾಸ ಮಾಡುವುದು, ರನ್ ಗಳಿಸುವುದು ಮತ್ತು ಭಾರತವನ್ನು ಗೆಲ್ಲಿಸುವುದು, ಇದೊಂದೇ ಅವರ ಗುರಿ. ಅದು 2023 ರ ವಿಶ್ವಕಪ್ ಆಗಿರಲಿ ಅಥವಾ ಮುಂಬರುವ 2027 ರ ವಿಶ್ವಕಪ್ ಆಗಿರಲಿ, ವಿರಾಟ್‌ಗೆ ಯಾವುದೇ ವಿಷಯವನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವೇ ಇಲ್ಲ. ದೇಶಕ್ಕಾಗಿ ವಿಶ್ವಕಪ್ ಗೆಲ್ಲುವುದೊಂದೇ ನಮ್ಮಿಬ್ಬರ ಏಕೈಕ ಕನಸು" ಎಂದು ಹೆಮ್ಮೆಯಿಂದ ಹೇಳಿದರು.
ಕುಟುಂಬದೊಂದಿಗೆ ಕಳೆಯುತ್ತಿರುವ ಅಮೂಲ್ಯ ಕ್ಷಣಗಳು!
ಅಂತಾರಾಷ್ಟ್ರೀಯ ಕ್ರಿಕೆಟ್‌ನ ನಿರಂತರ ಒತ್ತಡ ಮತ್ತು ಸುದೀರ್ಘ ಪ್ರವಾಸಗಳ ಕುರಿತು ಮಾತನಾಡಿದ ರೋಹಿತ್, "ಒಂದು ಕಾಲವಿತ್ತು, ನಾವು ಪ್ರತಿ ಐದರಿಂದ ಏಳು ದಿನಗಳಿಗೊಮ್ಮೆ ಒಂದಿಲ್ಲೊಂದು ದೇಶಕ್ಕೆ ಪ್ರವಾಸ ಬೆಳೆಸಬೇಕಿತ್ತು. ಆಗ ಕುಟುಂಬದ ಜೊತೆ ಕಳೆಯಲು ಸಮಯವೇ ಸಿಗುತ್ತಿರಲಿಲ್ಲ. ಆದರೆ ಈಗಿನ ಹಂತದಲ್ಲಿ, ನಾವಿಬ್ಬರೂ ನಮ್ಮ ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಸಾಧ್ಯವಾಗುತ್ತಿದೆ. ಮಕ್ಕಳ ಜೊತೆ, ಕುಟುಂಬದ ಜೊತೆ ಸಮಯ ಕಳೆಯುವುದು ಮನಸ್ಸಿಗೆ ಅಪಾರ ಶಾಂತಿ ಮತ್ತು ಸಂತೋಷವನ್ನು ನೀಡುತ್ತದೆ" ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.


