2026ರ ನಗೋಯಾ ಏಷ್ಯನ್ ಗೇಮ್ಸ್‌ನಲ್ಲಿ ಕಮಲ್‌ಜೀತ್ ಮತ್ತು ಸುರುಚಿ ಜೋಡಿಯು 10 ಮೀ. ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಭಾರತಕ್ಕೆ 2ನೇ ಚಿನ್ನ ತಂದುಕೊಟ್ಟಿದ್ದಾರೆ. ಪುರುಷರ 50 ಮೀ. ರೈಫಲ್ 3 ಪೊಸಿಷನ್‌ನಲ್ಲಿ ಭಾರತ ತಂಡ ಬೆಳ್ಳಿ ಗೆದ್ದಿದ್ದು, ಒಟ್ಟು 23 ಪದಕಗಳೊಂದಿಗೆ 12ನೇ ಸ್ಥಾನದಲ್ಲಿದೆ.
ನಗೋಯಾ: 2026ರ ಏಷ್ಯನ್ ಗೇಮ್ಸ್‌ನಲ್ಲಿ 2ನೇ ಚಿನ್ನದ ಪದಕಕ್ಕಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದ ಭಾರತಕ್ಕೆ, ಶುಕ್ರವಾರ 2ನೇ ಚಿನ್ನ ದೊರೆಯಿತು. 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದ ಸ್ಪರ್ಧೆಯಲ್ಲಿ ಕಮಲ್‌ಜೀತ್ ಹಾಗೂ ಸುರುಚಿ ಇಂದರ್ ಸಿಂಗ್ ಜೋಡಿ ಸ್ವರ್ಣಕ್ಕೆ ಗುರಿಯಿಟ್ಟಿತು. ಒಟ್ಟಾರೆ ಭಾರತ ಶುಕ್ರವಾರ 1 ಚಿನ್ನ, 2 ಬೆಳ್ಳಿ ಹಾಗೂ 3 ಕಂಚಿನ ಪದಕ ಜಯಿಸಿತು. ಒಟ್ಟು 2 ಚಿನ್ನ, 9 ಬೆಳ್ಳಿ, 12 ಕಂಚಿನೊಂದಿಗೆ 23 ಪದಕ ಗಳಿಸಿರುವ ಭಾರತ, ಪದಕ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದೆ.
ಪ್ರಾಬಲ್ಯ: ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನದೊಂದಿಗೆ ಫೈನಲ್‌ಗೇರಿದ ಕಮಲ್‌ಜೀತ್ ಹಾಗೂ ಸುರುಚಿ ಜೋಡಿ ಫೈನಲ್‌ನಲ್ಲಿ ಒಟ್ಟು 484.6 ಅಂಕ ಗಳಿಸಿ ಮೊದಲ ಸ್ಥಾನ ಪಡೆಯಿತು. 2ನೇ ಸ್ಥಾನ ಪಡೆದ ಕೊರಿಯಾ ಜೋಡಿಗಿಂತ 6.6 ಅಂಕ ಮುನ್ನಡೆ ಸಾಧಿಸಿದ್ದು, ಭಾರತೀಯರ ಪ್ರಾಬಲ್ಯ ಹೇಗಿತ್ತು ಎನ್ನುವುದಕ್ಕೆ ಸಾಕ್ಷಿ. 415.8 ಅಂಕ ಗಳಿಸಿದ ಇರಾನ್ ಕಂಚು ಜಯಿಸಿತು.
ಇದೇ ವೇಳೆ ಪುರುಷರ 50 ಮೀ. ರೈಫಲ್ 3 ಪೊಸಿಷನ್‌ನಲ್ಲಿ ಭಾರತ ತಂಡ ಬೆಳ್ಳಿ ಪಡೆಯಿತು. ಐಶ್ವರಿ ಪ್ರತಾಪ್ ಸಿಂಗ್, ರುದ್ರಾಂಕ್ಷ್ ಪಾಟೀಲ್ ಹಾಗೂ ನೀರಜ್ ಕುಮಾರ್ ಜೋಡಿ 1762 ಅಂಕದೊಂದಿಗೆ 2ನೇ ಸ್ಥಾನ ಪಡೆದರೆ, 1766 ಅಂಕ ಗಳಿಸಿದ ಚೀನಾ ಚಿನ್ನಕ್ಕೆ ಮುತ್ತಿಟ್ಟಿತು. ಕೊರಿಯಾ 1751 ಅಂಕದೊಂದಿಗೆ ಕಂಚಿ ಗಳಿಸಿತು.
ಕಬಡ್ಡಿಯಲ್ಲಿ ಭಾರತದ ಎರಡು ತಂಡಗಳೂ ಫೈನಲ್ ಪ್ರವೇಶ
ಈ ಬಾರಿ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪುರುಷ ಹಾಗೂ ಮಹಿಳಾ ಕಬಡ್ಡಿ ತಂಡಗಳು ನಿರೀಕ್ಷೆಯಂತೆಯೇ ಫೈನಲ್ ಪ್ರವೇಶಿಸಿವೆ. ಈ ಮೂಲಕ ಕಳೆದ ಬಾರಿ ಗೆದ್ದಿದ್ದ ಚಿನ್ನವನ್ನು ಉಳಿಸಿಕೊಳ್ಳುವತ್ತ ಹೆಜ್ಜೆಯಿಟ್ಟಿವೆ. ಪುರುಷರ ತಂಡ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್ ವಿರುದ್ಧ 66-28 ಅಂಕಗಳಿಂದ ಗೆದ್ದರೆ, ಮಹಿಳಾ ತಂಡಕ್ಕೆ ಸೆಮೀಸ್‌ನಲ್ಲಿ ನೇಪಾಳ ವಿರುದ್ಧ 48-24 ಅಂಕಗಳ ಗೆಲುವು ಲಭಿಸಿತು. ಈ ಎರಡೂ ತಂಡಗಳಿಗೆ ಫೈನಲ್‌ನಲ್ಲಿ ಶನಿವಾರ ಇರಾನ್ ತಂಡಗಳ ಸವಾಲು ಎದುರಾಗಲಿವೆ.
ಕ್ರೀಡಾಕೂಟದಲ್ಲಿ ಪುರುಷರ ಕಬಡ್ಡಿ 1990ರಿಂದಲೂ ನಡೆಯುತ್ತಿದ್ದು, ಈ ಹಿಂದಿನ 9 ಆವೃತ್ತಿಗಳ ಪೈಕಿ 8ರಲ್ಲಿ ಭಾರತ ಚಾಂಪಿಯನ್ ಆಗಿದೆ. ಮಹಿಳಾ ಕಬಡ್ಡಿ 2010ರಲ್ಲಿ ಮೊದಲ ಬಾರಿ ನಡೆದಿತ್ತು. ಈವರೆಗಿನ 4 ಆವೃತ್ತಿಗಳ ಪೈಕಿ 3ರಲ್ಲಿ ಭಾರತ ಚಿನ್ನ ಗೆದ್ದಿದೆ.
10000 ಮೀ.: ಗುಲ್ವೀರ್ ಸಿಂಗ್‌ಗೆ ಬೆಳ್ಳಿ ಸಂಭ್ರಮ
ಅಥ್ಲೆಟಿಕ್ಸ್‌ನಲ್ಲಿ ಭಾರತ ಮತ್ತೊಂದು ಪದಕ ಗೆದ್ದಿದೆ. ಪುರುಷರ 10000 ಮೀ. ರೇಸ್‌ನಲ್ಲಿ ಗುಲ್ವೀರ್ ಸಿಂಗ್ 28 ನಿಮಿಷ 29.38 ಸೆಕೆಂಡ್‌ಗಳಲ್ಲಿ ಕ್ರಮಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಅವರು ಕಳೆದ ಏಷ್ಯಾಡ್‌ನಲ್ಲಿ ಕಂಚು ಜಯಿಸಿದ್ದರು. ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಗುಲ್ವೀರ್ 10000 ಮೀ. ಬೆಳ್ಳಿ ಹಾಗೂ 5000 ಮೀ. ರೇಸ್‌ನಲ್ಲಿ ಕಂಚು ಪಡೆದಿದ್ದರು.
ಪೋಲ್‌ವಾಲ್ಟ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ಬಾರಾನಿಕಾ
ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಪೋಲ್ ವಾಲ್ಟ್‌ನಲ್ಲಿ ಭಾರತಕ್ಕೆ ಮೊದಲ ಪದಕ ಸಿಕ್ಕಿದೆ. ಮಹಿಳೆಯರ ಸ್ಪರ್ಧೆಯಲ್ಲಿ ಬಾರಾನಿಕಾ ಇಳಂಗೋವನ್ ಕಂಚು ಜಯಿಸಿದರು. 4.15 ಮೀ. ಎತ್ತರಕ್ಕೆ ಹಾರುವ ಮೂಲಕ ಕಜಕಸ್ತಾನದ ಪೊಲೀನಾ ಇವನೊವಾ ಜೊತೆ 3ನೇ ಸ್ಥಾನ ಹಂಚಿಕೊಂಡರು.


