ಇಂಡಿಯನ್ ರೇಸಿಂಗ್ ಲೀಗ್ನಲ್ಲಿ 'ಕಿಚ್ಚಾಸ್ ಕಿಂಗ್ಸ್ ಬೆಂಗಳೂರು' ತಂಡದ ಮಾಲೀಕರಾಗಿರುವ ಸುದೀಪ್ ಅವರು 'ಕೋಲ್ಕತ್ತಾ ರಾಯಲ್ ಟೈಗರ್ಸ್' ಮಾಲೀಕ ಸೌರವ್ ಗಂಗೂಲಿಯನ್ನು ಭೇಟಿಯಾಗಿದ್ದಾರೆ. ಈ ಇಬ್ಬರು ದಿಗ್ಗಜರ ಭೇಟಿಯ ವಿಡಿಯೋ ಮತ್ತು ಸುದೀಪ್ ರೇಸಿಂಗ್ ಕಾರು ಚಲಾಯಿಸಿದ ರೋಚಕ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಬೆಂಗಳೂರು: ಕಿಚ್ಚ ಸುದೀಪ್ ಮೋಟಾರ್ಸ್ಪೋರ್ಟ್ ಲೋಕದಲ್ಲೂ ಸಂಚಲನ ಸೃಷ್ಟಿಸಿದ್ದಾರೆ. ಇಂಡಿಯನ್ ರೇಸಿಂಗ್ ಲೀಗ್ (IRL) ಹಾಗೂ ಇಂಡಿಯನ್ ರೇಸಿಂಗ್ ಫೆಸ್ಟಿವಲ್ನ (Indian Racing Festival) ಅಂಗವಾಗಿ ರೇಸಿಂಗ್ ಟ್ರ್ಯಾಕ್ನಲ್ಲಿ ಭರ್ಜರಿ ಸಿದ್ಧತೆ ಆರಂಭಿಸಿದ್ದಾರೆ. ಇದೀಗ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಭೇಟಿಯಾಗಿ ಗಮನ ಸೆಳೆದಿದ್ದಾರೆ.

ರೇಸಿಂಗ್ ಔಟ್ಫಿಟ್ನಲ್ಲಿ ಕಿಚ್ಚ - ಪ್ರಿಯಾ ಸುದೀಪ್
ಪ್ರತಿಷ್ಠಿತ ಕಾರು ರೇಸಿಂಗ್ ಸ್ಪರ್ಧೆಗೂ ಮುನ್ನ ಕಿಚ್ಚ ಸುದೀಪ್ ಹಾಗೂ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಪರಸ್ಪರ ಭೇಟಿಯಾದರು. ಇಂಡಿಯನ್ ರೇಸಿಂಗ್ ಲೀಗ್ನಲ್ಲಿ ಸುದೀಪ್ 'ಕಿಚ್ಚಾಸ್ ಕಿಂಗ್ಸ್ ಬೆಂಗಳೂರು' (Kichcha's Kings Bengaluru) ತಂಡದ ಮಾಲೀಕರಾಗಿದ್ದರೆ, ಸೌರವ್ ಗಂಗೂಲಿ 'ಕೋಲ್ಕತ್ತಾ ರಾಯಲ್ ಟೈಗರ್ಸ್' ತಂಡದ ಮಾಲೀಕರಾಗಿದ್ದಾರೆ.

ಈ ವಿಶೇಷ ಭೇಟಿಯ ವೇಳೆ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ಸಹ-ಮಾಲೀಕರೂ ಆಗಿರುವ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಹಾಜರಿದ್ದರು. ಸುದೀಪ್ ಹಾಗೂ ಪ್ರಿಯಾ ಸುದೀಪ್ ಇಬ್ಬರೂ ಸ್ಟೈಲಿಶ್ ರೇಸಿಂಗ್ ಔಟ್ಫಿಟ್ನಲ್ಲಿ ಮಿಂಚಿದ್ದಾರೆ. ಕ್ರಿಕೆಟ್ ಲೋಕದ 'ದಾದಾ' ಸೌರವ್ ಗಂಗೂಲಿ ಮತ್ತು ಸ್ಯಾಂಡಲ್ವುಡ್ 'ದಾದಾ' ಕಿಚ್ಚ ಸುದೀಪ್ ಒಟ್ಟಾಗಿ ಕಾಣಿಸಿಕೊಂಡಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇಬ್ಬರು ಜೋಡಿಗಳನ್ನ ನೋಡಿದ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಕಿಚ್ಚ ಸುದೀಪ್ ತಮ್ಮ 'ಕಿಚ್ಚಾಸ್ ಕಿಂಗ್ಸ್ ಬೆಂಗಳೂರು' ತಂಡದ ಪರ ರೇಸಿಂಗ್ ಟ್ರ್ಯಾಕ್ಗೆ ಇಳಿದು ಸಿಂಗಲ್-ಸೀಟರ್ ಫಾರ್ಮುಲಾ ರೇಸಿಂಗ್ ಕಾರು ಚಲಾಯಿಸಿರುವ ಫೋಟೋ ಮತ್ತು ವಿಡಿಯೋಗಳನ್ನು ಇತ್ತೀಚೆಗೆ ಹಂಚಿಕೊಂಡಿದ್ದರು. ಬಿಳಿ ಬಣ್ಣದ 'AGS RACING' ಹೆಲ್ಮೆಟ್ ಹಾಗೂ ಹಾರ್ನೆಸ್ ಧರಿಸಿ ರೇಸಿಂಗ್ ಕಾರಿನ ಕಾಕ್ಪಿಟ್ ಒಳಗೆ ಕುಳಿತು ಸುದೀಪ್ ಟ್ರ್ಯಾಕ್ನಲ್ಲಿ ಮಿಂಚಿದ್ದಾರೆ.

ರೇಸಿಂಗ್ ಕಾರು ಚಲಾಯಿಸುವ ಮುನ್ನ ಕಾರಿನ ಮೆಕ್ಯಾನಿಕ್ಸ್ ಮತ್ತು ಟ್ರ್ಯಾಕ್ ನಿಯಮಗಳ ಕುರಿತು ತಜ್ಞರಿಂದ ಸುದೀರ್ಘ ಮಾಹಿತಿ ಪಡೆದ ಸುದೀಪ್, ಆ ಬಳಿಕ ರೇಸಿಂಗ್ ಟ್ರ್ಯಾಕ್ನಲ್ಲಿ ವೇಗದ ಸವಾರಿ ನಡೆಸಿದ್ದಾರೆ. ಇದೊಂದು ತಮ್ಮ ಜೀವನದ ಅಪರೂಪದ ಮತ್ತು ಮರೆಯಲಾಗದ ಡ್ರೈವಿಂಗ್ ಅನುಭವ ಎಂದು ಕಿಚ್ಚ ಸುದೀಪ್ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಇಂಡಿಯನ್ ರೇಸಿಂಗ್ ಲೀಗ್ ಹಾಗೂ ಇಂಡಿಯನ್ ರೇಸಿಂಗ್ ಫೆಸ್ಟಿವಲ್ನ ಮುಂದಿನ ರೋಚಕ ಸುತ್ತುಗಳ ವೇಳಾಪಟ್ಟಿ ಹೀಗಿದೆ
- ನವೆಂಬರ್ 28–29: ಬುದ್ಧ ಇಂಟರ್ನ್ಯಾಷನಲ್ ಸರ್ಕ್ಯೂಟ್, ಗ್ರೇಟರ್ ನೋಯ್ಡಾ
- ಡಿಸೆಂಬರ್ 5–6: ನವಿ ಮುಂಬೈ ಸ್ಟ್ರೀಟ್ ಸರ್ಕ್ಯೂಟ್
ಒಟ್ಟಿನಲ್ಲಿ ಸಿನಿಮಾ, ಬಿಗ್ ಬಾಸ್ ಹಾಗೂ ಕ್ರಿಕೆಟ್ ನಡುವೆಯೂ ರೇಸಿಂಗ್ ಟ್ರ್ಯಾಕ್ನಲ್ಲಿ ಕಿಚ್ಚ ಸುದೀಪ್ ಹಾಗೂ ಪ್ರಿಯಾ ಸುದೀಪ್ ತೋರುತ್ತಿರುವ ಉತ್ಸಾಹ ಅಭಿಮಾನಿಗಳಿಗೆ ಡಬಲ್ ಖುಷಿ ನೀಡಿದೆ.
















