ಚೆನ್ನೈನ ಉದ್ಯಮಿ ವರ್ಧಮಾನ್ ಜೈನ್ ತಿರುಪತಿ ತಿಮ್ಮಪ್ಪನಿಗೆ 121 ಕೆಜಿ ಚಿನ್ನದ ಆಭರಣಗಳನ್ನು ದಾನ ಮಾಡಿದ್ದಾರೆ. 206 ಕೋಟಿ ಮೌಲ್ಯದ ಈ ದಾನವು ತಿರುಮಲ ದೇಗುಲದ ಇತಿಹಾಸದಲ್ಲೇ ಅತಿದೊಡ್ಡ ದಾನಗಳಲ್ಲಿ ಒಂದಾಗಿದೆ. ಇವರು ಈ ಹಿಂದೆಯೂ ಹಲವಾರು ಬಾರಿ ದೇಣಿಗೆ ನೀಡಿದ್ದಾರೆ.

ಆಂಧ್ರ ಪ್ರದೇಶ: ಕೆಲವು ದಿನಗಳ ಹಿಂದೆ ತಿರುಪತಿ ತಿಮ್ಮಪ್ಪನಿಗೆ ಚೆನ್ನೈನ ಖ್ಯಾತ ಉದ್ಯಮಿ ಒಬ್ಬರು ಬರೋಬ್ಬರಿ 121 ಕೆಜಿ ಚಿನ್ನದ ಆಭರಣಗಳನ್ನ ನೀಡಿದ್ದಾರೆ ಎಂದು ಸುದ್ದಿಯಾಗಿತ್ತು. ಇವತ್ತು ಆ ಚಿನ್ನಾಭರಣಗಳನ್ನು ಅಧಿಕೃತವಾಗಿ ಹಸ್ತಾಂತರ ಮಾಡಲಾಗಿದೆ. ಟಿಟಿಡಿ ಅದನ್ನು ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಅಂದಹಾಗೆ ಇದು ತಿರುಮಲ ದೇಗುಲದ ಇತಿಹಾಸದಲ್ಲೇ ಅತಿದೊಡ್ಡ ದಾನಗಳಲ್ಲಿ ಒಂದಾಗಿದೆ!

ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಮ್ಮುಖದಲ್ಲಿ 46 ಬಗೆಯ ಆಭರಣಗಳನ್ನು ನೀಡಲಾಗಿದೆ. ಇದರಲ್ಲಿ ಕಿರೀಟ, ಹಾರ, ತೋಳ್ಬಂದಿಗಳು ಸೇರಿವೆ. ಒಟ್ಟು 121 ಕೆಜಿ ಚಿನ್ನದ ಆಭರ ಅವಾಗಿದ್ದು, ಒಟ್ಟು ಮೌಲ್ಯ 206 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ದಾನ ಮಾಡಿದ ವ್ಯಕ್ತಿ ಬೇರೆ ಯಾರೂ ಅಲ್ಲ. ಅವರೇ ವರ್ಧಮಾನ್ ಜೈನ್. ಇವತ್ತು ತಮ್ಮ ಪತ್ನಿ ರಾಧಿಕಾ ಜೈನ್ ಜೊತೆ ಆಗಮಿಸಿ 206 ಕೋಟಿ ಮೌಲ್ಯದ ಚಿನ್ನಾಭರಣವನ್ನು ದೇಗುಲಕ್ಕೆ ನೀಡಿದರು. ಇನ್ನು ಇವರು ತಿರುಪತಿಗೆ ದಾನ ಮಾಡುತ್ತಿರೋದು ಇದೇ ಮೊದಲಲ್ಲ. ಈ ಹಿಂದೆಯೂ ನೀಡಿರುವ ಮಾಹಿತಿ ಹೀಗಿದೆ.

₹7 ಕೋಟಿ – ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್‌ಗೆ ದೇಣಿಗೆ

₹5 ಕೋಟಿ – ಟಿಟಿಡಿ ಗೋಶಾಲೆಯಲ್ಲಿ ಪಶು ಆಹಾರ ಮಿಶ್ರಣ ಘಟಕ ಸ್ಥಾಪನೆಗೆ

₹1 ಕೋಟಿ – ನಾಣ್ಯ ವಿಂಗಡಿಸುವ ಯಂತ್ರ ಖರೀದಿಗೆ

ಎಲೆಕ್ಟ್ರಿಕ್ ಬಸ್‌ಗಳು – ತಿರುಮಲದಲ್ಲಿ ಸಾರಿಗೆ ವ್ಯವಸ್ಥೆಗೆ ಕೊಡುಗೆ

ವರ್ಧಮಾನ್ ಜೈನ್ ಯಾರು?

ವರ್ಧಮಾನ್ ಅವರು ಕೇವಲ ಉದ್ಯಮಿಯಾಗಿ ಗುರುತಿಸಿಕೊಂಡಿಲ್ಲ. ಸಮಾಜ ಸೇವೆಯಲ್ಲೂ ಇವರ ಹೆಸರು ಮುಂಚೂಣಿಯಲ್ಲಿದೆ. ವೈದ್ಯಕೀಯ ಸೇವೆ, ಉದ್ಯೋಗ ಸೃಷ್ಟಿ, ಶಿಕ್ಷಣ ಸೇರಿದಂತೆ ಇತರೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಜೈನ್ ಚೆನ್ನೈನ ಪ್ರತಿಷ್ಠಿತ Loyola College ಕಾಲೇಜಿನಲ್ಲಿ ಸಂಖ್ಯಾಶಾಸ್ತ್ರ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಬಳಿಕ ಅಮೆರಿಕದ ಟೆಕ್ಸಾಸ್ ವಿವಿಯಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪಡೆದಿದ್ದಾರೆ. ಶಿಕ್ಷಣದ ಬಳಿಕ ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಸಿಕೊಂಡು ಹೊಸ ಉದ್ಯಮ ಕಟ್ಟುವ ಕನಸು ಕಂಡು ವೃತ್ತಿ ಶುರು ಮಾಡಿದರು ಎಂದು ವರದಿಯಾಗಿದೆ.

1997ರಲ್ಲಿ ಉದ್ಯಮ ಆರಂಭ

1997ರಲ್ಲಿ ಅನುರಾಗ್ ಜೈನ್ ಜೊತೆ ಸೇರಿ Vision HealthSource ಕಂಪನಿ ಸ್ಥಾಪಿಸಿದರು. ಈ ಕಂಪನಿ ವೈದ್ಯಕೀಯ ಬಿಲ್ಲಿಂಗ್, ಆಸ್ಪತ್ರೆಗಳ ವಿಮಾ ಕ್ಲೇಮ್ ನಿರ್ವಹಣೆ ಸೇರಿದಂತೆ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದ ವ್ಯವಹಾರಗಳನ್ನ ನೋಡಿಕೊಳ್ಳುತ್ತಿತ್ತು. ಬೆಳೆಯುತ್ತಿದ್ದ ಕಂಪನಿಯನ್ನು 2003ರಲ್ಲಿ Perot Systems ಸ್ವಾಧೀನಪಡಿಸಿಕೊಂಡಿತು. ಇದು ವರ್ಧಮಾನ್ ಜೈನ್‌ಗೆ ಹೊಸ ಮೈಲಿಗಲ್ಲನ್ನು ತಂದುಕೊಡ್ತು.

2009ರಲ್ಲಿ ಡೆಲ್ ಕಂಪನಿಯು Perot Systems ಸ್ವಾಧೀನಪಡಿಸಿಕೊಂಡಿತು. ಆಗ ವರ್ಧಮಾನ್ ಜೈನ್ Dell Services‌ನ ಜಾಗತಿಕ ಬಿಸಿನೆಸ್ ಪ್ರೊಸೆಸ್ ಔಟ್‌ಸೋರ್ಸಿಂಗ್ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾದರು. 100ಕ್ಕೂ ಹೆಚ್ಚು ಗ್ರಾಹಕರ ಸೇವೆ ನಿರ್ವಹಿಸುವುದರ ಜೊತೆಗೆ ಸುಮಾರು 9,000 ಉದ್ಯೋಗಿಗಳ ತಂಡ ಕಟ್ಟಿದರು. ನಂತರ Access Healthcare ಸಂಸ್ಥೆ ಸ್ಥಾಪಿಸಿ ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ವಿಸ್ತರಿಸಿದರು. 2025ರ ಜನವರಿಯಲ್ಲಿ ಅಮೆರಿಕದ New Mountain Capital ಸಂಸ್ಥೆಯು Access Healthcareನಲ್ಲಿ ಬಹುಮತದ ಪಾಲನ್ನು ಒಳಗೊಂಡ ಪ್ರಮುಖ ಹೂಡಿಕೆ ಘೋಷಿಸಿತು. ಈ ವ್ಯವಹಾರದ ಮೌಲ್ಯ ಸುಮಾರು 1.5 ರಿಂದ 2 ಬಿಲಿಯನ್ ಡಾಲರ್ ಎಂದು ವರದಿಯಾಗಿತ್ತು.

ಸಮಾಜ ಸೇವೆ

ವ್ಯಾಪಾರದ ಜೊತೆಗೆ ಸಮಾಜ ಸೇವೆಯಲ್ಲೂ ವರ್ಧಮಾನ್ ಜೈನ್ ಹೆಸರಿದೆ. Shree Sarita Jain Foundation Trustನ ವ್ಯವಸ್ಥಾಪಕ ಟ್ರಸ್ಟಿಯಾಗಿ ಶಿಕ್ಷಣ, ಹಸಿವು ನಿವಾರಣೆ ಹಾಗೂ ತುರ್ತು ವೈದ್ಯಕೀಯ ನೆರವು ಕಾರ್ಯಗಳಿಗೆ ಬೆಂಬಲ ನೀಡ್ತಿದ್ದಾರೆ.

ಬಡ ಯುವಕರಿಗೆ ಕೌಶಲ್ಯ ತರಬೇತಿ ಮತ್ತು ಉದ್ಯೋಗಾವಕಾಶ ಒದಗಿಸುವ ಉದ್ದೇಶದಿಂದ Aavishkaar ಆರಂಭಿಸಿದ್ದಾರೆ. ಮಕ್ಕಳ ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ಚೆನ್ನೈನ Kanchi Kamakoti CHILDS Trust Hospital ಜೊತೆಗೂ ಒಡನಾಟ ಹೊಂದಿದ್ದಾರೆ.

Scroll to load tweet…