ಸನ್‌ರೈಸರ್ಸ್ ಮಾಲಕಿ ಕಾವ್ಯ ಮಾರನ್ 'ದಿ ಹಂಡ್ರೆಡ್' ಲೀಗ್‌ಗಾಗಿ ಪಾಕಿಸ್ತಾನಿ ಕ್ರಿಕೆಟರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಇದೇ ಸಮಯದಲ್ಲಿ ಪಾಕಿಸ್ತಾನದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಯಿದ್ದು, ಅಬ್ರಾರ್ ದೇಶ ಮತ್ತು ಹಣದ ನಡುವೆ ಧರ್ಮಸಂಕಟಕ್ಕೆ ಸಿಲುಕಿದ್ದಾರೆ.

ಸನ್‌ರೈಸರ್ಸ್ ಹೈದ್ರಾಬಾದ್ ತಂಡದ ಮಾಲಕಿ ಕಾವ್ಯ ಮಾರನ್ ಇತ್ತೀಚೆಗೆ ಭಾರೀ ಟೀಕೆ ಎದುರಿಸಿದ್ದರು. ಅದು ಪಾಕಿಸ್ತಾನಿ ಕ್ರಿಕೆಟರ್ ಅಬ್ರಾರ್ ಅಹ್ಮದ್ ವಿಚಾರವಾಗಿ. ಇದೀಗ ಅದೇ ಅಬ್ರಾರ್ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೌದು, ಪಾಕಿಸ್ತಾನದ ‘ಮಿಸ್ಟರಿ ಸ್ಪಿನ್ನರ್’ ಅಬ್ರಾರ್ ಅಹ್ಮದ್ ಧರ್ಮಸಂಕಟಕ್ಕೆ ಸಿಲುಕಿದ್ದಾರೆ. ಒಂದು ಕಡೆ ರಾಷ್ಟ್ರೀಯ ತಂಡದ ಪರ ಆಡುವ ಗೌರವ ಇನ್ನೊಂದೆಡೆ ವಿದೇಶಿ ಲೀಗ್‌ನಲ್ಲಿ ಕೋಟಿ ಕೋಟಿ ಸಂಭಾವನೆಯ ಆಕರ್ಷಣೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ಮತ್ತು ಇಂಗ್ಲೆಂಡ್‌ನ 'ದಿ ಹಂಡ್ರೆಡ್' (The Hundred) ಲೀಗ್ ಏಕಕಾಲದಲ್ಲಿ ನಡೆಯುತ್ತಿರುವುದು ಅಬ್ರಾರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಸಮಸ್ಯೆ ಏನು?

ವರದಿಗಳ ಪ್ರಕಾರ ಇಂಗ್ಲೆಂಡ್‌ನಲ್ಲಿ ನಡೆಯುವ 'ದಿ ಹಂಡ್ರೆಡ್' ಲೀಗ್ ಜುಲೈ 21 ರಿಂದ ಪ್ರಾರಂಭವಾಗಲಿದೆ. ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ಜುಲೈ 25 ರಿಂದ ಆರಂಭವಾಗಲಿದೆ. ಒಂದು ವೇಳೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಬ್ರಾರ್ ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿದರೆ, ಅವರು ಲೀಗ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಅಬ್ರಾರ್ ಪಿಆರ್‍‌ಓಗಳ ಪ್ರಕಾರ, ಇದು ಅವರಿಗೆ ದೊಡ್ಡ ಆರ್ಥಿಕ ಹೊಡೆತ ನೀಡಲಿದೆ.

ಕಾವ್ಯ ಮಾರನ್ ಸುತ್ತ ವಿವಾದ

ಸನ್‌ರೈಸರ್ಸ್ ಹೈದರಾಬಾದ್ ಮಾಲಕಿ ಕಾವ್ಯ ಮಾರನ್ ಇಂಗ್ಲೆಂಡ್ ಲೀಗ್‌ನಲ್ಲಿ 'ಸನ್‌ರೈಸರ್ಸ್ ಲೀಡ್ಸ್' ತಂಡ ಹೊಂದಿದ್ದಾರೆ. ಹರಾಜಿನ ವೇಳೆ ಅಬ್ರಾರ್ ಅಹ್ಮದ್‌ಗಾಗಿ ಅವರು ಬಿಡ್ ಮಾಡಿದ್ದು ಭಾರತೀಯ ಕ್ರಿಕೆಟ್ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. 140 ಕೋಟಿ ಭಾರತೀಯರ ಭಾವನೆಗಳನ್ನು ಕಡೆಗಣಿಸಿ ಪಾಕ್ ಆಟಗಾರನಿಗೆ ಕೋಟಿಗಟ್ಟಲೆ ಹಣ ನೀಡಲಾಗಿದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಇಸಿಬಿಯ (England and Wales Cricket Board) ತಾರತಮ್ಯ ವಿರೋಧಿ ನಿಯಮದಿಂದಾಗಿ ಪಾಕ್ ಆಟಗಾರರನ್ನು ಖರೀದಿಸಲು ಸನ್‌ರೈಸರ್ಸ್ ಮುಂದೆ ಬಂದಿದೆ ಎಂದು ಹೇಳಲಾಗುತ್ತಿದೆ.

ಇತಿಹಾಸದ ಹಿನ್ನೆಲೆ

2008ರ ಮುಂಬೈ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳು ಸ್ಥಗಿತಗೊಂಡಿವೆ. ಐಪಿಎಲ್‌ನಲ್ಲೂ ಪಾಕಿಸ್ತಾನದ ಆಟಗಾರರಿಗೆ ನಿಷೇಧವಿದೆ. ಜಾಗತಿಕ ಮಟ್ಟದ ಟಿ20 ಲೀಗ್‌ಗಳಲ್ಲಿ ಭಾರತೀಯ ಮೂಲದ ಮಾಲೀಕರು ಸಾಮಾನ್ಯವಾಗಿ ಪಾಕ್ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವುದಿಲ್ಲ. ಕಾವ್ಯ ಮಾರನ್ ಅವರ ಈ ನಡೆ ಈಗ ಹೊಸ ವಿವಾದಕ್ಕೆ ನಾಂದಿ ಹಾಡಿದೆ.

ಮುಂದೇನು?

ಪಾಕಿಸ್ತಾನದ ಆಯ್ಕೆ ಸಮಿತಿಯು ಸೋಮವಾರ ವೆಸ್ಟ್ ಇಂಡೀಸ್ ಸರಣಿಗೆ ತಂಡವನ್ನು ಪ್ರಕಟಿಸಲಿದೆ. ಅಬ್ರಾರ್ ವೆಸ್ಟ್ ಇಂಡೀಸ್ ಬ್ಯಾಟರ್‌ಗಳ ವಿರುದ್ಧ ಪ್ರಬಲ ಅಸ್ತ್ರವಾಗಿರುವುದರಿಂದ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಅಬ್ರಾರ್ ಅಹ್ಮದ್ ರಾಷ್ಟ್ರಪ್ರೇಮ ಮೆರೆದು ಟೆಸ್ಟ್ ಕ್ರಿಕೆಟ್ ಆಡುತ್ತಾರೋ ಅಥವಾ ಹಣಕ್ಕಾಗಿ ಸನ್‌ರೈಸರ್ಸ್ ಲೀಡ್ಸ್ ಪರ ಕಣಕ್ಕಿಳಿಯುತ್ತಾರೋ ಕಾದು ನೋಡಬೇಕಿದೆ.