2008ರ ಐಪಿಎಲ್ 'ಸ್ಲ್ಯಾಪ್‌ಗೇಟ್' ವಿವಾದದ ಬಳಿಕ, ಇತ್ತೀಚೆಗೆ ಶ್ರೀಶಾಂತ್ ಅವರು ಹರ್ಭಜನ್ ಸಿಂಗ್‌ಗೆ ಬಾಕ್ಸಿಂಗ್ ಸವಾಲು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಹರ್ಭಜನ್, ತಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಸಿದ್ದ ಎಂದಿದ್ದಾರೆ.

ನವದೆಹಲಿ (ಆ.13): ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ 'ಸ್ಲ್ಯಾಪ್‌ಗೇಟ್' (Slapgate) ವಿವಾದದ ಮೂಲಕವೇ ದೊಡ್ಡ ಮಟ್ಟದ ಸುದ್ದಿಯಾಗಿದ್ದ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಮತ್ತು ಎಸ್. ಶ್ರೀಶಾಂತ್ ನಡುವಿನ ಜಗಳಕ್ಕೆ ಈಗ ಮತ್ತೊಂದು ಕುತೂಹಲಕಾರಿ ತಿರುವು ಸಿಕ್ಕಿದೆ. ಶ್ರೀಶಾಂತ್ ಅವರನ್ನು ತಮ್ಮ ರೂಮ್‌ಮೇಟ್ (Roommate) ಆಗಿ ನೀಡಿದರೆ ತಮಗೆ ಯಾವುದೇ ಅಭ್ಯಂತರವಿಲ್ಲ ಹಾಗೂ ಇದರಿಂದ ತಮ್ಮಿಬ್ಬರ ನಡುವಿನ ಹಲವು ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಭಾಗವಾಗಿದ್ದರೂ, ಹರ್ಭಜನ್ ಮತ್ತು ಶ್ರೀಶಾಂತ್ ನಡುವಿನ ಸಂಬಂಧ ಉತ್ತಮವಾಗೇನೂ ಇರಲಿಲ್ಲ ಎಂಬುದು ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಗೂ ತಿಳಿದಿರುವ ವಿಚಾರ. 2008ರ ಚೊಚ್ಚಲ ಆವೃತ್ತಿಯ ಐಪಿಎಲ್ ವೇಳೆ ಪಂದ್ಯ ಮುಗಿದ ನಂತರ ಹರ್ಭಜನ್ ಸಿಂಗ್ ಅವರು ಶ್ರೀಶಾಂತ್‌ಗೆ ಕೆನ್ನೆಗೆ ಹೊಡೆದದ್ದು ಕ್ರಿಕೆಟ್ ಲೋಕದ ಅತ್ಯಂತ ವಿವಾದಾತ್ಮಕ ಘಟನೆಗಳಲ್ಲಿ ಒಂದಾಗಿ ಉಳಿದುಕೊಂಡಿದೆ.

ನಾವು ಒಂದೇ ರೂಮ್‌ನಲ್ಲಿದ್ದರೆ ಎಲ್ಲ ಸರಿ ಹೋಗಲಿದೆ

ಇತ್ತೀಚೆಗೆ ಪಿಟಿಐ (PTI) ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಹಳೆಯ ಘಟನೆಯನ್ನು ನೆನಪಿಸಿಕೊಂಡಿರುವ ಹರ್ಭಜನ್ ಸಿಂಗ್, ತಮ್ಮ ನಡುವಿನ ಬಾಂಧವ್ಯ ಸುಧಾರಿಸುವ ಕುರಿತು ಮಾತನಾಡಿದ್ದಾರೆ. "ನಮ್ಮಿಬ್ಬರನ್ನೂ ಒಂದೇ ಕೊಠಡಿಯಲ್ಲಿ ಇರಿಸಿದರೆ, ನಮ್ಮ ನಡುವಿನ ಹಲವು ವಿಷಯಗಳು ಬಗೆಹರಿಯಲಿವೆ. ನಾನು ಅದನ್ನು ಆ ದೃಷ್ಟಿಕೋನದಿಂದ ನೋಡುತ್ತೇನೆ. ನೀವು ಅವರನ್ನು (ಶ್ರೀಶಾಂತ್) ನನ್ನ ರೂಮ್‌ಮೇಟ್ ಆಗಿ ಆಯ್ಕೆ ಮಾಡಬಹುದು, ನನಗೇನೂ ಅಭ್ಯಂತರವಿಲ್ಲ," ಎಂದು 'ಭಜ್ಜಿ' ಮುಕ್ತವಾಗಿ ಹೇಳಿದ್ದಾರೆ.

ಬಾಕ್ಸಿಂಗ್ ರಿಂಗ್‌ಗೆ ಆಹ್ವಾನಿಸಿದ್ದ ಶ್ರೀಶಾಂತ್!

ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ 'ಲಲ್ಲನ್‌ಟಾಪ್' (Lallantop) ಯೂಟ್ಯೂಬ್ ಚಾನೆಲ್ ಜೊತೆಗಿನ ಸಂದರ್ಶನದಲ್ಲಿ ಶ್ರೀಶಾಂತ್ ಅವರು ಹರ್ಭಜನ್ ಸಿಂಗ್‌ಗೆ ನೇರವಾಗಿ ಬಾಕ್ಸಿಂಗ್ ಪಂದ್ಯಕ್ಕೆ ಬರುವಂತೆ ಸವಾಲು ಹಾಕುವ ಮೂಲಕ ಈ ವಿವಾದಕ್ಕೆ ಹೊಸ ತಿರುವು ನೀಡಿದ್ದರು.

ಆ ಸಂದರ್ಶನದಲ್ಲಿ ಶ್ರೀಶಾಂತ್ ಮತ್ತು ಹರ್ಭಜನ್ ಸಿಂಗ್ ಬಾಕ್ಸಿಂಗ್ ಗ್ಲೌಸ್ ಧರಿಸಿದ್ದ ಹಳೆಯ ಫೋಟೋ ಒಂದನ್ನು ತೋರಿಸಿದಾಗ ತೀವ್ರವಾಗಿ ಪ್ರತಿಕ್ರಿಯಿಸಿದ್ದ ಶ್ರೀಶಾಂತ್, "ಅದೇ ದೃಶ್ಯವನ್ನು ಮತ್ತೆ ಮರುಸೃಷ್ಟಿಸಲು ನಿನ್ನ ಬಳಿ ಧೈರ್ಯವಿದೆಯೇ? ನನ್ನ ಜೊತೆ ಬಾಕ್ಸಿಂಗ್ ರಿಂಗ್‌ಗೆ ಬರಲು ನಿನಗೆ ಧೈರ್ಯವಿದೆಯೇ? ಸಹಿ ಮಾಡಿ ರಿಂಗ್‌ಗೆ ಬರಲು ಸಾಧ್ಯವೇ? ಎಂದು ನಾನು ಅವರನ್ನು ಕೇಳುತ್ತಿದ್ದೇನೆ. ಈ ಗ್ಲೌಸ್‌ಗಳನ್ನು ಧರಿಸಿ ನನ್ನೊಂದಿಗೆ ರಿಂಗ್‌ಗೆ ಬರಲು ಧೈರ್ಯವಿದೆಯೇ? ಇದೇನೂ ಆಕ್ಟಿಂಗ್ ಅಲ್ಲ, ನಾನು ನಗುತ್ತಿದ್ದೇನೆ. ನೀನು ನಗುತ್ತಲೂ ಇಲ್ಲ, ನೀನೇನು ಮಾಡುತ್ತಿದ್ದೀಯೋ ನನಗಂತೂ ಗೊತ್ತಿಲ್ಲ. ನೋಡೇ ಬಿಡೋಣ, ಇದು ನನ್ನ ಓಪನ್ ಚಾಲೆಂಜ್," ಎಂದು ಕ್ಯಾಮೆರಾ ನೋಡಿ ಸವಾಲು ಎಸೆದಿದ್ದರು.

ಐಪಿಎಲ್ ಸ್ಲ್ಯಾಪ್‌ಗೇಟ್ ಘಟನೆಯ ಆಧಾರದ ಮೇಲೆ ಹರ್ಭಜನ್ ಸಿಂಗ್ ಜಾಹೀರಾತೊಂದರಲ್ಲಿ ಅಭಿನಯಿಸಿದ ನಂತರ ಇಬ್ಬರ ನಡುವೆ ಮತ್ತೆ ಮುನಿಸು ಮೂಡಿತ್ತು. ಇದೀಗ ಹರ್ಭಜನ್ ಸಿಂಗ್ ನೀಡಿರುವ ಈ ಶಾಂತಿ ಮಂತ್ರದ ಹೇಳಿಕೆಗೆ ಶ್ರೀಶಾಂತ್ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.