ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ನಥಿಂಗ್, ತನ್ನ ಮುಂಬರುವ Nothing Phone 4b ಸರಣಿಯಲ್ಲಿ ಆರ್‌ಸಿಬಿ ಆಧಾರಿತ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಆರ್‌ಸಿಬಿ ತಂಡದ ಬಣ್ಣಗಳು, ಲೋಗೋ ಮತ್ತು ವಿಶೇಷ ಥೀಮ್‌ಗಳನ್ನು ಹೊಂದಿರುವ ಈ ಫೋನ್, ಕ್ರಿಕೆಟ್ ಪ್ರೇಮಿಗಳಿಗೆ ವಿಶಿಷ್ಟ ಅನುಭವ ನೀಡಲಿದೆ. ಇದರ ಹಾರ್ಡ್‌ವೇರ್ ಹಾಗೂ ತಾಂತ್ರಿಕ ಸಾಮರ್ಥ್ಯಗಳು ಸಾಮಾನ್ಯ ಆವೃತ್ತಿಯಂತೆಯೇ ಇರಲಿವೆ.
ಆರ್‍ಸಿಬಿ ಅಭಿಮಾನಿಗಳಿಗೆ ಭರ್ಜರಿ ಖುಷಿ ಸುದ್ದಿಯೊಂದಿದೆ. ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ನಥಿಂಗ್ (Nothing) ವಿಶೇಷ ಮೊಬೈಲ್ ಒಂದನ್ನ ಮಾರುಕಟ್ಟೆಗೆ ಪರಿಚಯಿಸುತ್ತಿದೆ. Nothing Phone 4b ಸರಣಿಯಲ್ಲಿ ಆರ್‌ಸಿಬಿ ಆಧಾರಿತ ವಿಶೇಷ ಆವೃತ್ತಿಯನ್ನ ಬಿಡುಗಡೆ ಮಾಡಲು ಸಜ್ಜಾಗಿದೆ.
ಟಿಪ್‌ಸ್ಟರ್‌ಗಳ (tipstar) ಮಾಹಿತಿ ಪ್ರಕಾರ ಕಂಪನಿಯು ಮೂರು ಸಾಮಾನ್ಯ ಬಣ್ಣಗಳ ಮಾಡೆಲ್‌ಗಳ ಜೊತೆಗೆ ನಾಲ್ಕನೇ ವಿಶೇಷ ಆವೃತ್ತಿಯಾಗಿ 'RCB-themed' ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.
ಏನಿದರ ವಿಶೇಷ?
ನಥಿಂಗ್ ಸಂಸ್ಥೆಯು 2026ರ ಐಪಿಎಲ್ ಸೀಸನ್‌ನಲ್ಲಿ ಆರ್‌ಸಿಬಿ ತಂಡದ ಮುಖ್ಯ ಪ್ರಾಯೋಜಕರಾಗಿ (Title Sponsor) ಒಪ್ಪಂದ ಮಾಡಿಕೊಂಡಿತ್ತು. 2025ರ ಐಪಿಎಲ್‌ನಲ್ಲಿ ತನ್ನ ಚೊಚ್ಚಲ ಪ್ರಶಸ್ತಿ ಗೆದ್ದಿದ್ದ ಆರ್‌ಸಿಬಿ ತಂಡ, 2026ರ ಸೀಸನ್‌ನಲ್ಲೂ ಯಶಸ್ವಿಯಾಗಿ ಪ್ರಶಸ್ತಿಯನ್ನು ಉಳಿಸಿಕೊಂಡಿದೆ. ಈ ಭರ್ಜರಿ ಯಶಸ್ಸಿನ ಬೆನ್ನಲ್ಲೇ ನಥಿಂಗ್ ಕಂಪನಿಯು ಕ್ರಿಕೆಟ್ ಪ್ರೇಮಿಗಳನ್ನು ಸೆಳೆಯಲು ಈ ಹೊಸ ಹೆಜ್ಜೆ ಇರಿಸಿದೆ.
ಆರ್‌ಸಿಬಿ ಎಡಿಷನ್‌ನಲ್ಲಿ ಏನೆಲ್ಲಾ ನಿರೀಕ್ಷಿಸಬಹುದು?
ಆರ್‌ಸಿಬಿ ತಂಡದ ಪ್ರಮುಖ ಬಣ್ಣಗಳಾದ ಕೆಂಪು, ಕಪ್ಪು ಮತ್ತು ಚಿನ್ನದ (Red, Black and Gold) ಬಣ್ಣಗಳ ಸಂಯೋಜನೆಯಲ್ಲಿ ಫೋನ್ ವಿನ್ಯಾಸ ಇರಬಹುದು. ಸಾಮಾನ್ಯ ಮಾಡೆಲ್‌ಗಿಂತ ಭಿನ್ನವಾಗಿ ಆರ್‌ಸಿಬಿ ಲೋಗೋ ಹೊಂದಿರುವ ವಿಶೇಷ ಬಾಕ್ಸ್ ಮತ್ತು ಆರ್‌ಸಿಬಿ ಥೀಮ್ ಆಕ್ಸೆಸರಿಗಳು ಇದರಲ್ಲಿ ಲಭ್ಯವಿರುವ ಸಾಧ್ಯತೆಯಿದೆ. ಫೋನ್‌ನ ಒಳಭಾಗದ ಸಾಫ್ಟ್‌ವೇರ್‌ನಲ್ಲಿ ಆರ್‌ಸಿಬಿ ಲೋಗೋದ ವಿಶೇಷ ವಾಲ್‌ಪೇಪರ್‌ಗಳು ಮತ್ತು ಥೀಮ್‌ಗಳನ್ನು ನೀಡಬಹುದು ಎಂದು ಅಂದಾಜಿಸಲಾಗಿದೆ. ಈ ವಿಶೇಷ ಆವೃತ್ತಿಯ ಹಾರ್ಡ್‌ವೇರ್ ಹಾಗೂ ತಾಂತ್ರಿಕ ಸಾಮರ್ಥ್ಯಗಳು ಸಾಮಾನ್ಯ ಆವೃತ್ತಿಯಂತೆಯೇ ಇರಲಿವೆ.
ಇನ್ನು ಕೆಲವು ಫೀಚರ್ಸ್‌ಗಳನ್ನ ಕಂಪನಿ ಈಗಾಗಲೇ ತಿಳಿಸಿದೆ. 120Hz ರಿಫ್ರೆಶ್ ರೇಟ್ ಬೆಂಬಲಿಸುವ 6.7 ಇಂಚಿನ Full HD+ OLED ಡಿಸ್‌ಪ್ಲೇ ಹೊಂದಿರಲಿದೆ. ನಥಿಂಗ್ ಈ ಫೋನ್‌ಗೆ ಸ್ನಾಪ್‌ಡ್ರಾಗನ್ ಚಿಪ್‌ಸೆಟ್ ಇರುವುದನ್ನು ಖಚಿತಪಡಿಸಿದ್ದು, ಇದು Snapdragon 6 Gen 4 ಪ್ರೊಸೆಸರ್ ಹೊಂದಿರುವ ಸಾಧ್ಯತೆಯಿದೆ. ನಥಿಂಗ್ ಬ್ರ್ಯಾಂಡ್‌ನ ಸಿಗ್ನೇಚರ್ ವೈಶಿಷ್ಟ್ಯಗಳಾದ ಗ್ಲಿಫ್ ಇಂಟರ್‌ಫೇಸ್ (Glyph Interface-ಲೈಟಿಂಗ್ ಸೌಲಭ್ಯ) ಮತ್ತು ಎಸೆನ್ಶಿಯಲ್ ಕೀ ಇರಲಿದೆ.
ಇನ್ನು 8GB RAM ಮತ್ತು 256GB ವರೆಗಿನ ಆಂತರಿಕ ಸಂಗ್ರಹಣೆ ಸಾಮರ್ಥ್ಯ ಹೊಂದಿರಲಿದೆ. ಒಐಎಸ್ (OIS) ತಂತ್ರಜ್ಞಾನದ 50MP ಪ್ರೈಮರಿ ಕ್ಯಾಮೆರಾ, 8MP ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 16MP ಮುಂಭಾಗದ ಕ್ಯಾಮೆರಾ ಇರಲಿದೆ. 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಸಾಮರ್ಥ್ಯದ ಬ್ಯಾಟರಿ ಇರಲಿದೆ.
ಬೆಲೆ ಎಷ್ಟು?
ಮಾಹಿತಿಗಳ ಪ್ರಕಾರ ಭಾರತದಲ್ಲಿ ನಥಿಂಗ್ ಫೋನ್ 4b ಬೆಲೆ ಸುಮಾರು ₹30,000 ರ ಆಸುಪಾಸಿನಲ್ಲಿ ಇರುವ ಸಾಧ್ಯತೆಯಿದೆ. ಇದು ಮಾರುಕಟ್ಟೆಯಲ್ಲಿ OnePlus Nord CE 6 ಸರಣಿ, ಮೊಟೊರೊಲಾ ಎಡ್ಜ್ (Motorola Edge) ಮತ್ತು ಐಕೂ ನಿಯೋ 10 (iQOO Neo 10) ಫೋನ್‌ಗಳಿಗೆ ಪ್ರಬಲ ಪೈಪೋಟಿ ನೀಡಲಿದೆ. ಭಾರತದಲ್ಲಿ ಈ ಹಿಂದೆ ಅನಿಮೆಷನ್ ಮತ್ತು ಗೇಮಿಂಗ್ ಥೀಮ್ ಹೊಂದಿರುವ ಆವೃತ್ತಿಗಳು ಬಿಡುಗಡೆಯಾಗಿದ್ದರೂ ಕ್ರಿಕೆಟ್ ಫ್ರಾಂಚೈಸಿ ಆಧಾರಿತ ಫೋನ್‌ಗಳು ಅತ್ಯಂತ ಅಪರೂಪವಾಗಿದೆ. ಇದು ಕ್ರೀಡಾ ಪ್ರೇಮಿಗಳಿಗೆ ವಿಶೇಷ ಕೊಡುಗೆಯಾಗಲಿದೆ.


