ಮುಂಬೈ(ಮೇ.02): ಐಪಿಎಲ್‌ ಲೀಗ್‌ ಹಂತದಲ್ಲಿ ಇನ್ನು ಕೇವಲ 6 ಪಂದ್ಯಗಳು ಮಾತ್ರ ಬಾಕಿ ಇದ್ದು, ಗುರುವಾರ ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್‌ ಹಾಗೂ ಸನ್‌ರೈರ್ಸ್ ಹೈದರಾಬಾದ್‌ ನಡುವಿನ ಪಂದ್ಯ, ಭಾರಿ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ:ಆರ್‌ಸಿಬಿ ಪ್ಲೇ-ಆಫ್ ಕನಸು ಛಿದ್ರಗೊಳ್ಳಲು ಈ ಮೂವರು ಕಾರಣ!

ಚೆನ್ನೈ ಹಾಗೂ ಡೆಲ್ಲಿ ಈಗಾಗಲೇ ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿತ ಪಡಿಸಿಕೊಂಡಿವೆ. ಇನ್ನುಳಿದ 2 ಸ್ಥಾನಗಳಿಗೆ ಪೈಪೋಟಿ ಇದೆ. ಮುಂಬೈ 12 ಪಂದ್ಯಗಳಲ್ಲಿ 14 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದರೆ, ಸನ್‌ರೈಸರ್ಸ್ 12 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಮುಂಬೈ ಈ ಪಂದ್ಯದಲ್ಲಿ ಗೆದ್ದರೆ ಪ್ಲೇ-ಆಫ್‌ಗೇರುವ 3ನೇ ತಂಡ ಎನಿಸಿಕೊಳ್ಳಲಿದೆ. ಒಂದೊಮ್ಮೆ ಸೋತರೆ ಪ್ಲೇ-ಆಫ್‌ ಲೆಕ್ಕಾಚಾರ ಮತ್ತಷ್ಟುರೋಚಕಗೊಳ್ಳಲಿದೆ.

ಇದನ್ನೂ ಓದಿ: IPL 2019: ಡೆಲ್ಲಿ ಮಣಿಸಿ ಅಗ್ರಸ್ಥಾನಕ್ಕೇರಿದ CSK

ಮುಂಬೈ ಸೋತರೆ, ಸನ್‌ರೈಸರ್ಸ್ ಉತ್ತಮ ನೆಟ್‌ ರನ್‌ರೇಟ್‌ ಹೊಂದಿರುವ ಕಾರಣ 3ನೇ ಸ್ಥಾನಕ್ಕೇರಲಿದೆ. ಆಗ ಎರಡೂ ತಂಡಗಳಿಗೆ ಅಂತಿಮ ಪಂದ್ಯ ನಿರ್ಣಾಯಕವೆನಿಸಲಿದೆ. ಕೆಕೆಆರ್‌ ವಿರುದ್ಧದ ಪಂದ್ಯವನ್ನು ಮುಂಬೈ ಗೆದ್ದು, ಆರ್‌ಸಿಬಿ ವಿರುದ್ಧದ ಪಂದ್ಯವನ್ನು ಸನ್‌ರೈಸರ್ಸ್ ಗೆದ್ದರೆ ಈ ಎರಡು ತಂಡಗಳು ಪ್ಲೇ-ಆಫ್‌ ಪ್ರವೇಶಿಸಲಿವೆ. ಕೊನೆ ಪಂದ್ಯದಲ್ಲೂ ಮುಂಬೈ ಸೋತರೆ, ಕೆಕೆಆರ್‌ಗೆ ಪ್ಲೇ-ಆಫ್‌ಗೇರುವ ಅವಕಾಶ ಸಿಗಲಿದೆ. ಪೈಪೋಟಿಯಲ್ಲಿ ಪಂಜಾಬ್‌ ಹಾಗೂ ರಾಜಸ್ಥಾನ ಸಹ ಉಳಿದುಕೊಂಡಿದ್ದು, ಕೊನೆ 3 ದಿನಗಳ ಪಂದ್ಯಗಳು ಮತ್ತಷ್ಟುರೋಚಕತೆ ಪಡೆದುಕೊಳ್ಳಲಿವೆ.

ಇದನ್ನೂ ಓದಿ: ಐಪಿಎಲ್ ಟೂರ್ನಿಯಿಂದ ಹೊರಬಿದ್ದ ದುಬಾರಿ ಕ್ರಿಕೆಟಿಗ!

ಸನ್‌ರೈಸರ್ಸ್‌ಗೆ ಈ ಪಂದ್ಯದಲ್ಲಿ ತನ್ನ ರನ್‌ ಮಷಿನ್‌ ಡೇವಿಡ್‌ ವಾರ್ನರ್‌ ಅನುಪಸ್ಥಿತಿ ಕಾಡಲಿದೆ. ಅವರ ಬದಲಿಗೆ ಮಾರ್ಟಿನ್‌ ಗಪ್ಟಿಲ್‌ ಆಡುವ ನಿರೀಕ್ಷೆ ಇದೆ. ಮಧ್ಯಮ ಕ್ರಮಾಂಕ ಅತ್ಯಂತ ದುರ್ಬಲವಾಗಿದ್ದು, ಮುಂಬೈ ಇದರ ಸಂಪೂರ್ಣ ಲಾಭ ಪಡೆಯಲು ಎದುರು ನೋಡುತ್ತಿದೆ. ಮತ್ತೊಂದೆಡೆ ಮುಂಬೈ ಬ್ಯಾಟಿಂಗ್‌ ಪಡೆ ಸಹ ಅಸ್ಥಿರ ಪ್ರದರ್ಶನ ತೋರುತ್ತಿದೆ. ಆದರೆ ಹಾರ್ದಿಕ್‌ ಪಾಂಡ್ಯ ಆಲ್ರೌಂಡ್‌ ಆಟ ತಂಡ ಭರವಸೆ ಉಳಿಸಿಕೊಳ್ಳಲು ಕಾರಣವಾಗಿದೆ. ನಿರ್ಣಾಯಕ ಹಂತದಲ್ಲಿ ಬೌಲರ್‌ಗಳು ಲಯ ಕಳೆದುಕೊಂಡಿರುವುದು ಸಹ ನಾಯಕ ರೋಹಿತ್‌ಗೆ ಆತಂಕ ಹೆಚ್ಚಿಸಿದೆ.

ಮುಂಬೈ ಪ್ಲೇ-ಆಫ್‌ ಲೆಕ್ಕಾಚಾರ ಹೇಗೆ?

* ಸನ್‌ರೈಸರ್ಸ್ ವಿರುದ್ಧ ಗೆದ್ದರೆ ನೇರ ಪ್ಲೇ-ಆಫ್‌ಗೆ
* ಸನ್‌ರೈಸರ್ಸ್ ವಿರುದ್ಧ ಸೋತರೆ, 4ನೇ ಸ್ಥಾನಕ್ಕೆ ಕುಸಿತ
* ಕೊನೆ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ಜಯ ಅಗತ್ಯ
* ಕೊನೆ 2 ಪಂದ್ಯಗಳಲ್ಲೂ ಗೆದ್ದರೆ ಅಗ್ರ 2ರಲ್ಲಿ ಸ್ಥಾನ

ಸನ್‌ರೈಸರ್ಸ್ ಪ್ಲೇ-ಆಫ್‌ ಲೆಕ್ಕಾಚಾರ ಹೇಗೆ?
* ಮುಂಬೈ ವಿರುದ್ಧ ಗೆದ್ದರೆ 3ನೇ ಸ್ಥಾನಕ್ಕೆ
* ಪ್ಲೇ-ಆಫ್‌ಗೇರುವ ಸಾಧ್ಯತೆ ಹೆಚ್ಚಳ
* ಕೊನೆ ಪಂದ್ಯದಲ್ಲಿ ಸೋತರೂ ರನ್‌ರೇಟ್ ಆಧಾರದಲ್ಲಿ ಪ್ಲೇ-ಆಫ್‌ಗೇರುವ ಸಾಧ್ಯತೆ

ಒಟ್ಟು ಮುಖಾಮುಖಿ: 13
ಮುಂಬೈ: 06
ಸನ್‌ರೈಸರ್ಸ್: 07

ಪಿಚ್‌ ರಿಪೋರ್ಟ್‌
ವಾಂಖೇಡೆ ಕ್ರೀಡಾಂಗಣದಲ್ಲಿ ಈ ವರ್ಷ ನಡೆದಿರುವ 5 ಪಂದ್ಯಗಳಲ್ಲೂ ದೊಡ್ಡ ಮೊತ್ತ ದಾಖಲಾಗಿದೆ. ಕೊನೆ 3 ಪಂದ್ಯಗಳಲ್ಲಿ ಮೊದಲು ಬೌಲ್‌ ಮಾಡಿದ ತಂಡ ಗೆಲುವು ಸಾಧಿಸಿದೆ. ಹೀಗಾಗಿ ಟಾಸ್‌ ಪ್ರಮುಖವೆನಿಸಲಿದೆ. ವೇಗಿಗಳಿಗೆ ಪಿಚ್‌ ನೆರವು ನೀಡುವ ನಿರೀಕ್ಷೆ ಇದೆ.