ಬೆಂಗಳೂರು[ಮೇ.03]: ರಾಯಲ್‌ ಚಾಲೆಂಜರ್ಸ್ಸ್ ಬೆಂಗಳೂರು(ಆರ್‌ಸಿಬಿ)ಗೆ ಈ ಆವೃತ್ತಿಯ ಐಪಿಎಲ್‌ನಲ್ಲೂ ಅದೃಷ್ಟಕೈಕೊಟ್ಟಿದೆ. ತಂಡ ಮೊದಲ 6 ಪಂದ್ಯಗಳಲ್ಲಿ ಸೋತಾಗಲೇ ಪ್ಲೇ-ಆಫ್‌ಗೇರುವುದು ಬಹುತೇಕ ಅನುಮಾನ ಎಂದು ಅಂದಾಜಿಸಲಾಗಿತ್ತು. ಮೂರು ಪಂದ್ಯಗಳು ಆರ್‌ಸಿಬಿ ಪ್ಲೇ-ಆಫ್‌ನಿಂದ ದೂರ ಉಳಿಯಲು ಪ್ರಮುಖ ಕಾರಣವಾಯಿತು.

ಮುಂಬೈ ಇಂಡಿಯನ್ಸ್‌ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಸಿತ್‌ ಮಾಲಿಂಗ ನೋಬಾಲ್‌ ಎಸೆತದಿದ್ದರೂ, ಅಂಪೈರ್‌ ನೋಡದ ಕಾರಣ ಆರ್‌ಸಿಬಿ ಪಂದ್ಯ ಸೋತಿತ್ತು. ಆರ್‌ಸಿಬಿ ನಾಯಕ ಕೊಹ್ಲಿ ಅಂಪೈರ್‌ ವಿರುದ್ಧ ಕೆಂಡಾಮಂಡಲಗೊಂಡಿದ್ದರು. ಕೆಕೆಆರ್‌ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆ್ಯಂಡ್ರೆ ರಸೆಲ್‌, ಆರ್‌ಸಿಬಿಗೆ ಮುಳುವಾಗಿದ್ದರು.

206 ರನ್‌ ಗುರಿ ಬೆನ್ನತ್ತಿದ್ದ ಕೆಕೆಆರ್‌ಗೆ ಕೊನೆ 3 ಓವರಲ್ಲಿ 53 ರನ್‌ ಬೇಕಿತ್ತು. ರಸೆಲ್‌ 13 ಎಸೆತಗಳಲ್ಲಿ 7 ಸಿಕ್ಸರ್‌ ಸಮೇತ 48 ರನ್‌ ಸಿಡಿಸಿ, ಆರ್‌ಸಿಬಿಯಿಂದ ಗೆಲುವು ಕಸಿದುಕೊಂಡಿದ್ದರು. ರಾಜಸ್ಥಾನ ರಾಯಲ್ಸ್‌ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿ, ಪ್ಲೇ-ಆಫ್‌ ಆಸೆ ಜೀವಂತವಾಗಿರಿಸಿಕೊಳ್ಳುವ ವಿಶ್ವಾಸದಲ್ಲಿತ್ತು. ಆದರೆ ವರುಣ ದೇವ ಆರ್‌ಸಿಬಿ ಆಸೆಗೆ ತಣ್ಣೀರೆರೆಚಿದ. ಈ ಮೂರು ಪಂದ್ಯ ಗೆದ್ದಿದ್ದರೆ ಆರ್‌ಸಿಬಿಗೆ ಪ್ಲೇ-ಆಫ್‌ ಅವಕಾಶ ಸಿಗುವ ಸಾಧ್ಯತೆ ಇರುತ್ತಿತ್ತು.