ರೋಯಿಂಗ್‌ ವಿಭಾಗದಲ್ಲಿ ಭಾರತ 3 ಪದಕ ತನ್ನದಾಗಿಸಿಕೊಂಡಿತು. ಪುರುಷರ ಲೈಟ್‌ವೇಟ್‌ ಡಬಲ್ಸ್‌ ಸ್ಕಲ್ಸ್‌ ವಿಭಾಗದಲ್ಲಿ ಅರ್ಜುನ್‌ ಲಾಲ್‌ ಜಾಟ್‌, ಅರವಿಂದ್ ಜೋಡಿ ಬೆಳ್ಳಿ ಪಡೆಯಿತು. ಚೀನಾ ಚಿನ್ನ, ಉಜ್ಬೇಕಿಸ್ತಾನ ಕಂಚು ಗೆದ್ದಿತು. ಇದೇ ವೇಳೆ ಮೆನ್ಸ್‌ ಎಯ್ಟ್‌ ವಿಭಾಗದ ಫೈನಲ್‌ನಲ್ಲಿ ಭಾರತದ ತಂಡಕ್ಕೆ ಬೆಳ್ಳಿ ಪದಕ ಸಿಕ್ಕಿತು.

ಹಾಂಗ್‌ಝೋ(ಸೆ.25): ‘ಈ ಬಾರಿ ನೂರು ಪದಕ’ ಎಂಬ ಧ್ಯೇಯವಾಕ್ಯ ಹಾಗೂ ದೃಢ ನಿಶ್ಚಯದೊಂದಿಗೆ 19ನೇ ಆವೃತ್ತಿಯ ಏಷ್ಯನ್‌ ಗೇಮ್ಸ್‌ನಲ್ಲಿ ಕಣಕ್ಕಿಳಿದಿರುವ ಭಾರತೀಯ ಅಥ್ಲೀಟ್‌ಗಳು ಕ್ರೀಡಾಕೂಟದ ಮೊದಲ ದಿನವೇ ಪದಕ ಬೇಟೆ ಆರಂಭಿಸಿದ್ದಾರೆ. ಪದಕ ಸ್ಪರ್ಧೆಗಳು ಆರಂಭಗೊಂಡ ಭಾನುವಾರ ಭಾರತ 3 ಬೆಳ್ಳಿ ಹಾಗೂ 2 ಕಂಚಿನ ಪದಕಕ್ಕೆ ಕೊರಳೊಡ್ಡಿದೆ.

ಈಗಾಗಲೇ ಕೆಲ ದಿನಗಳ ಹಿಂದೆಯೇ ಹಲವು ಕ್ರೀಡೆಗಳು ಆರಂಭಗೊಂಡಿದ್ದರೂ ಪದಕ ಸ್ಪರ್ಧೆಗೆ ಭಾನುವಾರ ಚಾಲನೆ ಲಭಿಸಿತು. ಭಾರತ ಶೂಟಿಂಗ್‌ನ ಬೆಳ್ಳಿ ಗೆಲ್ಲುವ ಮೂಲಕ ಪದಕ ಖಾತೆ ತೆರೆದರೆ, ಇದೇ ಕ್ರೀಡೆಯಲ್ಲಿ ಮತ್ತೊಂದು ಕಂಚು ಭಾರತಕ್ಕೆ ಲಭಿಸಿತು. ರೋಯಿಂಗ್‌ನಲ್ಲಿ ಭಾರತದ ಪುರುಷರು ಅಭೂತಪೂರ್ವ ಪ್ರದರ್ಶನ ತೋರಿ 2 ಬೆಳ್ಳಿ, 1 ಕಂಚು ತಂದುಕೊಟ್ಟರು. ಉಳಿದಂತೆ ಮಹಿಳಾ ಕ್ರಿಕೆಟ್‌, ಬಾಕ್ಸಿಂಗ್‌, ಪುರುಷರ ಫುಟ್ಬಾಲ್‌ ಹಾಗೂ ಹಾಕಿ ಸೇರಿದಂತೆ ಪ್ರಮುಖ ಕ್ರೀಡೆಗಳಲ್ಲಿ ಭಾರತ ತನ್ನ ಪ್ರಾಬಲ್ಯ ಮುಂದುವರಿಸಿ ಪದಕ ಗೆಲುವಿನತ್ತ ದಾಪುಗಾಲಿಟ್ಟರೆ, ಟೇಬಲ್‌ ಟೆನಿಸ್‌, ವಾಲಿಬಾಲ್‌, ವುಶು, ಫೆನ್ಸಿಂಗ್‌ ಸೇರಿದಂತೆ ಕೆಲ ಸ್ಪರ್ಧೆಗಳಲ್ಲಿ ನೀರಸ ಪ್ರದರ್ಶನ ತೋರಿತು.

Asian Games 2023: ವಿಶ್ವದಾಖಲೆಯೊಂದಿಗೆ ದೇಶಕ್ಕೆ ಮೊದಲ ಚಿನ್ನದ ಕಿರೀಟ ತೊಡಿಸಿದ ಭಾರತದ ಶೂಟರ್‌ಗಳ ತಂಡ

ಶೂಟಿಂಗ್‌ನಲ್ಲಿ 2 ಪದಕ!

ಮಹಿಳೆಯರ ವಿಭಾಗದ 10 ಮೀ. ಏರ್‌ ರೈಫಲ್‌ ತಂಡ ವಿಭಾಗದಲ್ಲಿ ಭಾರತದ ರಮಿತಾ ಜಿಂದಾಲ್‌, ಮೆಹುಲಿ ಘೋಷ್‌, ಅಶಿ ಚೋಕ್ಸಿ ಅವರನ್ನೊಳಗೊಂಡ ತಂಡ ಬೆಳ್ಳಿ ಪದಕಕ್ಕೆ ಕೊರಳೊಡ್ಡಿತು. ಭಾರತ 1886 ಅಂಕ ಸಂಪಾದಿಸಿದರೆ, 1896 ಅಂಕದೊಂದಿಗೆ ಚೀನಾ ತಂಡ ಚಿನ್ನ, 1880 ಅಂಕ ಪಡೆದ ಮಂಗೋಲಿಯಾ ತಂಡ ಕಂಚು ಪಡೆಯಿತು. ಇನ್ನು, ಮಹಿಳೆಯರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ರಮಿತಾ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ರೋಯಿಂಗ್‌ನಲ್ಲಿ ಹ್ಯಾಟ್ರಿಕ್‌ ಪದಕ

ಇನ್ನು ರೋಯಿಂಗ್‌ ವಿಭಾಗದಲ್ಲಿ ಭಾರತ 3 ಪದಕ ತನ್ನದಾಗಿಸಿಕೊಂಡಿತು. ಪುರುಷರ ಲೈಟ್‌ವೇಟ್‌ ಡಬಲ್ಸ್‌ ಸ್ಕಲ್ಸ್‌ ವಿಭಾಗದಲ್ಲಿ ಅರ್ಜುನ್‌ ಲಾಲ್‌ ಜಾಟ್‌, ಅರವಿಂದ್ ಜೋಡಿ ಬೆಳ್ಳಿ ಪಡೆಯಿತು. ಚೀನಾ ಚಿನ್ನ, ಉಜ್ಬೇಕಿಸ್ತಾನ ಕಂಚು ಗೆದ್ದಿತು. ಇದೇ ವೇಳೆ ಮೆನ್ಸ್‌ ಎಯ್ಟ್‌ ವಿಭಾಗದ ಫೈನಲ್‌ನಲ್ಲಿ ಭಾರತದ ತಂಡಕ್ಕೆ ಬೆಳ್ಳಿ ಪದಕ ಸಿಕ್ಕಿತು. ಪ್ರಾಬಲ್ಯ ಮುಂದುವರಿಸಿದ ಚೀನಾ ಈ ಸ್ಪರ್ಧೆಯಲ್ಲೂ ಚಿನ್ನ ಹೆಕ್ಕಿದರೆ, ಇಂಡೋನೇಷ್ಯಾಗೆ ಕಂಚು ಲಭಿಸಿತು. ಭಾರತಕ್ಕೆ ಮತ್ತೊಂದು ಪದಕ ರೋಯಿಂಗ್‌ನ ಮೆನ್ಸ್‌ ಪೇರ್‌ ವಿಭಾಗದಲ್ಲಿ ಕಂಚಿನ ರೂಪದಲ್ಲಿ ದೊರೆಯಿತು. ಬಾಬು ಲಾಲ್‌ ಯಾದವ್‌, ಲೇಖ್‌ ರಾಮ್‌ ಸ್ಪರ್ಧೆಯಲ್ಲಿ 2ನೇ ಸ್ಥಾನಿಯಾದರು.

ಚೀನಾದ ಹಾಂಗ್‌ಝೋನಲ್ಲಿ ಏಷ್ಯನ್‌ ಗೇಮ್ಸ್‌ಗೆ ವರ್ಣರಂಜಿತ ಚಾಲನೆ

ಭಾರತದ ಇತರ ಫಲಿತಾಂಶ

ಟೇಬಲ್‌ ಟೆನಿಸ್‌: ಭಾರತ ಪುರುಷರ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ಹೊರಬಿತ್ತು. ತಂಡ ಉತ್ತರ ಕೊರಿಯಾ ವಿರುದ್ಧ 0-3 ಅಂತರದಲ್ಲಿ ಸೋಲು ಎದುರಾಯಿತು. ಇದಕ್ಕೂ ಮುನ್ನ ಪ್ರಿ ಕ್ವಾರ್ಟರ್‌ನಲ್ಲಿ ಕಜಕಸ್ತಾನ ವಿರುದ್ಧ 3-2 ರೋಚಕ ಗೆಲುವು ಸಾಧಿಸಿತ್ತು. ಇದೇ ವೇಳೆ ಮಹಿಳಾ ತಂಡ ಥಾಯ್ಲೆಂಡ್‌ ವಿರುದ್ಧ 2-3 ಅಂತರದಲ್ಲಿ ಸೋಲನುಭವಿಸಿತು. ಮನಿಕಾ ಬಾತ್ರಾ ಕೊನೆ ಪಂದ್ಯದಲ್ಲಿ ಸೋತಿದ್ದು ತಂಡವನ್ನು ಹೊರಬೀಳುವಂತೆ ಮಾಡಿತು.

ಫೆನ್ಸಿಂಗ್‌: ಮಹಿಳೆಯರ ಫೆನ್ಸಿಂಗ್‌ ವೈಯಕ್ತಿಕ ಎಪೀ ವಿಭಾಗದಲ್ಲಿ ತನಿಷ್ಕಾ ಕ್ವಾರ್ಟರ್‌ ಫೈನಲ್‌ನಲ್ಲಿ ಹಾಂಕಾಂಗ್‌ನ ವಿವಿಯನ್‌ ಕಾಂಗ್‌ ವಿರುದ್ಧ 7-15ರಲ್ಲಿ ಸೋಲುಂಡರು.

ಟೆನಿಸ್‌: ಟೆನಿಸ್‌ನಲ್ಲಿ ಭಾರತೀಯರು ಶುಭಾರಂಭ ಮಾಡಿದ್ದಾರೆ. ಭಾರತದ ಅಗ್ರ ಶ್ರೇಯಾಂಕಿತ ಸುಮಿತ್‌ ನಗಾಲ್‌ ಪುರುಷರ ಸಿಂಗಲ್ಸ್‌ನಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ಗೇರಿದರು. ಮೊದಲ ಸುತ್ತಿನಲ್ಲಿ ಮಕಾವುನ ಮಾರ್ಕೊ ಲ್ಯುಂಗ್‌ ವಿರುದ್ಧ 6-0, 6-0 ಜಯಗಳಿಸಿದರು. ಇದೇ ವೇಳೆ ಪುರುಷರ ಡಬಲ್ಸ್‌ನಲ್ಲಿ ಸಾಕೇತ್‌ ಮೈನೇನಿ-ರಾಮ್‌ಕುಮಾರ್‌ ರಾಮನಾಥನ್‌ ಜೋಡಿ ನೇಪಾಳದ ಅಭಿಷೇಕ್‌-ಪ್ರದೀಪ್‌ ವಿರುದ್ಧ 6-2, 6-3ರಲ್ಲಿ ಜಯಗಳಿಸಿತು.

Asian Games: ಇಂದಿನಿಂದ ಭಾರತ ಪದಕ ಬೇಟೆ ಆರಂಭ

ಚೆಸ್‌: ಮಹಿಳಾ ವಿಭಾಗದಲ್ಲಿ ಹರಿಕಾ ದ್ರೋಣವಲ್ಲಿ ಹಾಗೂ ಕೊನೆರು ಹಂಪಿ ಮೊದಲ ಎರಡೂ ಸುತ್ತಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿದರು. ಇದೇ ವೇಳೆ ಅರ್ಜುನ್‌ ಎರಿಗೈಸಿ 1 ಪಂದ್ಯ ಗೆದ್ದು ಮತ್ತೊಂದು ಸುತ್ತಿನಲ್ಲಿ ಡ್ರಾ ಸಾಧಿಸಿದರು. ವಿದಿತ್‌ ಗುಜರಾತಿ 1ರಲ್ಲಿ ಗೆದ್ದು, ಮತ್ತೊಂದರಲ್ಲಿ ಸೋಲನುಭವಿಸಿದರು.

ಈಜು: ಭಾರತ ಈಜಿನಲ್ಲಿ ಮೊದಲ ದಿನ ನಿರೀಕ್ಷೆ ಉಳಿಸಿಕೊಳ್ಳಲಿಲ್ಲ. ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಬೆಂಗಳೂರಿನ ಶ್ರೀಹರಿ ನಟರಾಜ್‌ ಫೈನಲ್‌ನಲ್ಲಿ 54.48 ಸೆಕೆಂಡ್‌ಗಳಲ್ಲಿ ಕ್ರಮಿಸಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಇನ್ನು, ಮಹಿಳೆಯರ 4*100 ಮೀ. ಫ್ರೀಸ್ಟೈಲ್‌ ರಿಲೇ ಸ್ಪರ್ಧೆಯಲ್ಲಿ ಧಿನಿಧಿ, ಮಾನಾ ಪಟೇಲ್‌, ಶಿವಾಂಗಿ, ಜಾನ್ವಿ ಚೌಧರಿ ಅವರನ್ನೊಳಗೊಂಡ ತಂಡ 3 ನಿಮಿಷ 54.66 ಸೆಕೆಂಡ್‌ಗಳಲ್ಲಿ ಕ್ರಮಿಸಿ 7ನೇ ಸ್ಥಾನಿಯಾಯಿತು.

ಬಾಕ್ಸಿಂಗ್‌ನಲ್ಲಿ ಪ್ರೀತಿ, ನಿಖಾತ್‌ ಶುಭಾರಂಭ

ಬಾಕ್ಸಿಂಗ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್‌ ನಿಖಾತ್‌ ಜರೀನ್‌ ಮಹಿಳೆಯರ 50 ಕೆ.ಜಿ. ವಿಭಾಗದಲ್ಲಿ ಶುಭಾರಂಭ ಮಾಡಿದರು. ಅವರು ವಿಶ್ವ ಚಾಂಪಿಯನ್‌ಶಿಪ್‌ ಬೆಳ್ಳಿ ವಿಜೇತ, ವಿಯೆಟ್ನಾಂನ ನ್ಯುಯೆನ್‌ ವಿರುದ್ಧ 5-0 ಅಂತರದಲ್ಲಿ ಗೆದ್ದು ಪ್ರಿ ಕ್ವಾರ್ಟರ್‌ಗೇರಿದರು. ಇನ್ನು, 54 ಕೆ.ಜಿ. ವಿಭಾಗದಲ್ಲಿ ಪ್ರೀತಿ ಪವಾರ್‌ ಜೊರ್ಡಾನ್‌ನ ಸಿಲಿನ್‌ ಅಲ್‌ ಹಸನಾತ್‌ರನ್ನು ಸೋಲಿಸಿ ಕ್ವಾರ್ಟರ್‌ ಫೈನಲ್‌ಗೇರಿದರು.