ಲಿಯೋನೆಲ್ ಮೆಸ್ಸಿ 3 ದಿನಗಳ ಭಾರತ ಭೇಟಿ ಶನಿವಾರ ಆರಂಭವಾಗಿದೆ. ಮೆಸ್ಸಿಯನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಜನರು ನೆರೆದಿದ್ದರಿಂದ ಕೋಲ್ಕತಾದ ಸಾಲ್ಟ್‌ಲೇಕ್ ಕ್ರೀಡಾಂಗಣದಲ್ಲಿ ರಾದ್ಧಾಂತವಾಗಿದೆ.
ವಿಶ್ವದ ಶ್ರೇಷ್ಠ ಫುಟ್‌ಬಾಲ್ ಆಟಗಾರರಲ್ಲಿ ಒಬ್ಬರಾದ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ 3 ದಿನಗಳ ಭಾರತ ಭೇಟಿ ಶನಿವಾರ ಆರಂಭವಾಗಿದೆ. ಮೆಸ್ಸಿಯನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಜನರು ನೆರೆದಿದ್ದರಿಂದ ಕೋಲ್ಕತಾದ ಸಾಲ್ಟ್‌ಲೇಕ್ ಕ್ರೀಡಾಂಗಣದಲ್ಲಿ ರಾದ್ಧಾಂತವಾಗಿದೆ. ಇದು ಬೆಂಗಳೂರಿನಲ್ಲಿ ಕಳೆದ ಜೂನ್‌ನಲ್ಲಿ ಸಂಭವಿಸಿದ ಆರ್‌ಸಿಬಿ ಕಾಲ್ತುಳಿತವನ್ನು ನೆನಪಿಸಿದೆ.
ಸ್ಟೇಡಿಯಂನಲ್ಲಿ ಅವಾಂತರ: ಕೋಲ್ಕತಾದ ಕ್ರೀಡಾಂಗಣದಲ್ಲಿ 50 ಸಾವಿರ ಜನರು 5ರಿಂದ 20 ಸಾವಿರ ರು.ವರೆಗೆ ಟಿಕೆಟ್ ಖರೀದಿಸಿ ಗಂಟೆಗಟ್ಟಲೆಯಿಂದ ಮೆಸ್ಸಿ ಬರುವಿಕೆಗೆ ಕಾಯುತ್ತಿದ್ದರು. ಮೆಸ್ಸಿ ಆಗಮನವಾಗುತ್ತಿದ್ದಂತೆ ಅವರ ಸುತ್ತ ಸಾಕಷ್ಟು ಜನ ನಿಂತರು. ಗೊಂದಲವಾಯಿತು. ಅವರು ಕ್ರೀಡಾಂಗಣಕ್ಕೆ ಒಂದು ಸುತ್ತು ಹಾಕಲಿಲ್ಲ. ದೊಡ್ಡ ಪರದೆಗಳಲ್ಲೂ ಚಿತ್ರ ಸ್ಪಷ್ಟವಾಗಿ ಕಾಣಲಿಲ್ಲ. ಗೊಂದಲ ಹೆಚ್ಚಾಗಿ ಮೆಸ್ಸಿ 22 ನಿಮಿಷದಲ್ಲೇ ನಿರ್ಗಮಿಸಿದರು. ಕೆರಳಿದ ಜನ ಸ್ಟೇಡಿಯಂ ಕುರ್ಚಿ, ಬಾಟಲಿಗಳನ್ನು ಪಿಚ್‌ನತ್ತ ತೂರಿ ಕೆಂಡಕಾರಿದರು.
ಏರ್‌ಪೋರ್ಟಲ್ಲಿ ಜನಸಾಗರ: ಇದಕ್ಕೂ ಮುನ್ನ ಶನಿವಾರ ನಸುಕಿನ 2.26ಕ್ಕೆ ಮೆಸ್ಸಿ ಸ್ವಂತ ವಿಮಾನದಲ್ಲಿ ಕೋಲ್ಕತಾಕ್ಕೆ ಬಂದರು. ವಿಮಾನ ನಿಲ್ದಾಣದ ಹೊರಭಾಗದಲ್ಲಿ ಭಾರಿ ಸಂಖ್ಯೆಯ ಜನ ‘ಮೆಸ್ಸಿ ಮೆಸ್ಸಿ’ ಎಂದು ಕೂಗುತ್ತಾ ನಿಂತರು. ಅವರು ಹೋಟೆಲ್‌ಗೆ ಹೋದರೆ ಅಲ್ಲಿನ ಹೊರಭಾಗ, ಒಳಭಾಗದಲ್ಲೂ ಜನವೋ ಜನ.
ತೆಲಂಗಾಣ ಸಿಎಂ ಜತೆ ಫುಟ್‌ಬಾಲ್: ಕೋಲ್ಕತಾದಿಂದ ಹೈದರಾಬಾದ್‌ಗೆ ತೆರಳಿದ ಮೆಸ್ಸಿ ಅಲ್ಲಿ ಸಂಜೆ ತೆಲಂಗಾಣ ಸಿಎಂ ರೇವಂತ ರೆಡ್ಡಿ ಜತೆ ಫುಟ್‌ಬಾಲ್ ಆಡಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಅರ್ಜೆಂಟೀನಾ ಜೆರ್ಸಿಯನ್ನು ಮೆಸ್ಸಿ ಉಡುಗೊರೆ ಕೊಟ್ಟರು. ಅಲ್ಲಿ ಯಾವುದೇ ಅವ್ಯವಸ್ಥೆ ಆಗಲಿಲ್ಲ.
ಇಂದು ಮುಂಬೈ, ನಾಳೆ ದಿಲ್ಲಿ: ಮೆಸ್ಸಿ ಮುಂಬೈನಲ್ಲಿ ಭಾನುವಾರ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರನ್ನು ಭೇಟಿ ಮಾಡಲು ಬಾಲಿವುಡ್ ತಾರೆಯರು ಕಾತರದಿಂದ ಕಾಯುತ್ತಿದ್ದಾರೆ. ಸೋಮವಾರ ಮೆಸ್ಸಿ ದೆಹಲಿಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿ, ಕ್ರಿಕೆಟಿಗರನ್ನು ಭೇಟಿಯಾಗುವ ನಿರೀಕ್ಷೆ ಇದೆ.
ಮಮತಾ, ಶಾರುಖ್ ಪರದಾಟ: ಕೋಲ್ಕತಾ ಕ್ರೀಡಾಂಗಣದಲ್ಲಿ ಮೆಸ್ಸಿ ಜತೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಾಲಿವುಡ್ ನಟ ಶಾರುಖ್ ಖಾನ್, ಕ್ರಿಕೆಟಿಗ ಸೌರವ್ ಗಂಗೂಲಿ ಅವರೂ ಕಾಣಿಸಿಕೊಳ್ಳಬೇಕಿತ್ತು. ಜನದಟ್ಟಣೆಯಿಂದ ಅವರು ಕ್ರೀಡಾಂಗಣಕ್ಕೇ ಬರಲು ಆಗಲಿಲ್ಲ.
ಆರ್‌ಸಿಬಿ ಕಾಲ್ತುಳಿತದ ನೆನಪು
ಕೋಲ್ಕತಾದಲ್ಲಿನ ಅಭಿಮಾನಿಗಳ ಹುಚ್ಚಾಟ ಜೂ.4ರಂದು ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ವಿಜಯಯಾತ್ರೆ ವೇಳೆ ಸಂಭವಿಸಿದ ಕಾಲ್ತುಳಿತ ದುರಂತವನ್ನು ನೆನಪಿಸುವಂತಿತ್ತು.

