Asianet Suvarna News Asianet Suvarna News

ಚೀನಾದ ಹಾಂಗ್‌ಝೋನಲ್ಲಿ ಏಷ್ಯನ್‌ ಗೇಮ್ಸ್‌ಗೆ ವರ್ಣರಂಜಿತ ಚಾಲನೆ

19ನೇ ಏಷ್ಯನ್‌ ಗೇಮ್ಸ್‌ಗೆ ಅದ್ದೂರಿ ಚಾಲನೆ
ಕಣ್ಮನ ಸೆಳೆದ ಅದ್ಧೂರಿ ಉದ್ಘಾಟನಾ ಸಮಾರಂಭ
ಅತ್ಯಾಧುನಿಕ ಲೇಸರ್‌ ಶೋಗೆ ಮನಸೋತ ಪ್ರೇಕ್ಷಕರು

Grand opening ceremony marks the start of 19th Asian Games in Hangzhou kvn
Author
First Published Sep 24, 2023, 9:28 AM IST

ಹಾಂಗ್‌ಝೋ(ಸೆ.24): ಕೊರೋನಾ ಮಹಾಮಾರಿಯ ಹೊಡೆತಕ್ಕೆ ಸಿಲುಕಿ ನಲುಗಿದ್ದ ಚೀನಾ ಈಗ ಮೈಕೊಡವಿ ಎದ್ದುನಿಂತಿದೆ. ಬಹುನಿರೀಕ್ಷಿತ 19ನೇ ಆವೃತ್ತಿಯ ಏಷ್ಯನ್‌ ಗೇಮ್ಸ್‌ಅನ್ನು ಅದ್ಧೂರಿಯಾಗಿ ಆಯೋಜಿಸಿ ಜಗತ್ತಿನ ಮುಂದೆ ತಾನೇನು ಎಂದು ತೋರಿಸಿಕೊಡಲು ಸಜ್ಜಾಗಿರುವ ಚೀನಾ, ಶನಿವಾರ ವರ್ಣರಂಜಿತ ಉದ್ಘಾಟನಾ ಸಮಾರಂಭದ ಮೂಲಕ ಅದರ ಮುನ್ಸೂಚನೆಯನ್ನು ಜಗತ್ತಿಗೇ ರವಾನಿಸಿತು.

‘ಮಿನಿ ಒಲಿಂಪಿಕ್ಸ್‌’ ಖ್ಯಾತಿಯ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಹಾಂಗ್‌ಝೋನ ಒಲಿಂಪಿಕ್ಸ್‌ ಸ್ಪೋರ್ಟ್ಸ್‌ ಸೆಂಟರ್‌ನಲ್ಲಿ ಸಂಜೆ 5.30ಕ್ಕೆ ಆರಂಭಗೊಂಡು, ಸುಮಾರು 2 ಗಂಟೆಗೂ ಹೆಚ್ಚಿನ ಕಾಲ ನೋಡುಗರನ್ನು ಬೆರಗುಗೊಳಿಸಿತು. ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ 19ನೇ ಆವೃತ್ತಿ ಕ್ರೀಡಾಕೂಟವನ್ನು ಉದ್ಘಾಟಿಸಿದ್ದಾಗಿ ಘೋಷಿಸಿದರು. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ 45 ರಾಷ್ಟ್ರಗಳ ಅಥ್ಲೀಟ್‌ಗಳ ಆಕರ್ಷಕ ಪಥಸಂಚಲನ ನಡೆಯಿತು.

ಈ ಎರಡು ತಂಡಗಳಲ್ಲೊಂದು ತಂಡ ವಿಶ್ವಕಪ್ ಗೆಲ್ಲಲಿದೆ: ಅಚ್ಚರಿಯ ಭವಿಷ್ಯ ನುಡಿದ ಕುಮಾರ ಸಂಗಕ್ಕರ..!

ಬಳಿಕ ನಡೆದ ಅದ್ಧೂರಿ ಸಮಾರಂಭದಲ್ಲಿ ಚೀನಾದ ಸಾಂಸ್ಕೃತಿಕ ಕಲಾ ವೈಭವ ಜಗತ್ತಿನ ಮುಂದೆ ಅನಾವರಣಗೊಂಡರೆ, ಮತ್ತೊಂದೆಡೆ ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನದ ಬಳಕೆ ನೆರೆದಿದ್ದ ಪ್ರೇಕ್ಷಕರನ್ನು ಮೂಕವಿಸ್ಮಿತಗೊಳಿಸಿತು. ಅತ್ಯಾಧುನಿಕ ಲೇಸರ್‌ ಶೋಗಳು, ಚೀನಿ ತಾರೆಯರ ನೃತ್ಯ ಕಣ್ಮನ ಸೆಳೆಯಿತು. ಪ್ರಮುಖವಾಗಿ ಪರಿಸರ ಸ್ನೇಹಿ ಸಿಡಿ ಮದ್ದುಗಳು ಹಾಂಗ್‌ಝೋ ನಗರವನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡಿತು. ಕ್ರೀಡಾಂಗಣದಲ್ಲಿ ನೆರೆದಿದ್ದ ಅಪಾರ ಪ್ರಮಾಣದ ಕ್ರೀಡಾಭಿಮಾನಿಗಳು ಚೀನಾದ ತಂತ್ರಜ್ಞಾನ, ಸಾಂಸ್ಕೃತಿಕ ಕಲಾ ವೈಭವವನ್ನು ಕಣ್ತುಂಬಿಕೊಂಡರು. ಆತಿಥೇಯರ ನಾಡಿನ ನೃತ್ಯದ ಸಾಂಸ್ಕೃತಿಕ ಸಿರಿ, ಸುಶ್ರಾವ್ಯ ಸಂಗೀತ ಕಾರ್ಯಕ್ರಮ ಕಾರ್ಯಕ್ರಮದ ಕಲೆ ಹೆಚ್ಚಿಸಿತು. ಡಿಜಿಟಲ್‌ ರೂಪದಲ್ಲಿ ಬೆಳಗಿದ ಕ್ರೀಡಾ ಜ್ಯೋತಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.

ಈ ಮೊದಲು ಬೀಜಿಂಗ್‌ ಒಲಿಂಪಿಕ್ಸ್‌ ಹಾಗೂ ಗುವಾಂಗ್ಝು ಏಷ್ಯಾಡ್‌ ಕೂಟಗಳ ಮೂಲಕ ಜಗತ್ತಿನ ಗಮನ ಸೆಳೆದಿದ್ದ ಚೀನಾ, ಈ ಬಾರಿ ಏಷ್ಯಾಡ್‌ ಮೂಲಕ ಮತ್ತೆ ಜಗತ್ತಿನ ಚಿತ್ತವನ್ನು ತನ್ನತ್ತ ಸೆಳೆಯುವಂತೆ ಮಾಡಿದೆ. ಸುಮಾರು 12000ಕ್ಕೂ ಹೆಚ್ಚು ಅಥ್ಲೀಟ್‌ಗಳು ಪಾಲ್ಗೊಳ್ಳುವ ಕ್ರೀಡಾಕೂಟಕ್ಕೆ ಅ.8ರಂದು ತೆರೆ ಬೀಳಲಿದೆ.

ಏಷ್ಯಾಡ್‌ನಲ್ಲಿ ಭಾರತದ ಸಾಧನೆ ಏನು? 40 ವರ್ಷಗಳಿಂದ ಭಾರತಕ್ಕೆ ಆತಿಥ್ಯದ ಹಕ್ಕು ಸಿಕ್ಕಿಲ್ಲವೇಕೆ?

ಸಮಾರಂಭದಲ್ಲಿ ಒಲಿಂಪಿಕ್‌ ಕೌನ್ಸಿಲ್‌ ಆಫ್‌ ಏಷ್ಯಾ(ಒಸಿಎ) ಅಧ್ಯಕ್ಷ ರಣ್‌ಧೀರ್‌ ಸಿಂಗ್‌, ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ(ಐಒಸಿ) ಮುಖ್ಯಸ್ಥ ಥಾಮಸ್‌ ಬಾಚ್‌, ವಿವಿಧ ದೇಶಗಳ ಗಣ್ಯರು ಪಾಲ್ಗೊಂಡರು.

ತ್ರಿವರ್ಣ ಧ್ವಜದ ಜೊತೆಗೆ ಸಾಗಿದ ಲವ್ಲೀನಾ, ಹರ್ಮನ್‌

ಉದ್ಘಾಟನಾ ಸಮಾರಂಭದಲ್ಲಿ ಎಲ್ಲಾ 45 ರಾಷ್ಟ್ರಗಳ ಆಕರ್ಷಕ ಪಥಸಂಚಲನ ಗಮನ ಸೆಳೆಯಿತು. ಭಾರತದ ತಾರಾ ಬಾಕ್ಸರ್‌ ಲವ್ಲೀನ್‌ ಬೊರ್ಗೊಹೈನ್‌ ಹಾಗೂ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ತ್ರಿವರ್ಣ ಧ್ವಜದೊಂದಿಗೆ ಪಥಸಂಚಲನದಲ್ಲಿ ಭಾರತ ಅಥ್ಲೀಟ್‌ಗಳನ್ನು ಮುನ್ನಡೆಸಿದರು. ಸಾಂಪ್ರದಾಯಿಕ ಧಿರಿಸಿನಲ್ಲಿ ಕಾಣಿಸಿದ ಭಾರತದ ನೂರಾರು ಅಥ್ಲೀಟ್‌ಗಳು ಎಲ್ಲರ ಗಮನ ಸೆಳೆದರು.

Follow Us:
Download App:
  • android
  • ios