ಮಹೇಂದ್ರ ಸಿಂಗ್ ಧೋನಿ ಬರೀ ಹೆಸರಲ್ಲ...!
ಮಹೇಂದ್ರ ಸಿಂಗ್ ಧೋನಿ, ಟೀಂ ಇಂಡಿಯಾದ ಶ್ರೇಷ್ಠ ನಾಯಕರಲ್ಲಿ ಅಗ್ರಸ್ಥಾನದಲ್ಲಿ ನಿಲ್ಲಬಲ್ಲ ಕ್ರಿಕೆಟಿಗ. ಧೋನಿ ಗರಡಿಯಲ್ಲಿ ವಿರಾಟ್ ಕೊಹ್ಲಿ, ಅಶ್ವಿನ್, ಜಡೇಜಾ, ರೈನಾ, ರೋಹಿತ್ ಶರ್ಮಾ ಅವರಂತ ಪ್ರತಿಭಾನ್ವಿತರು ಮಿಂಚಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್, ಮೆಂಟರ್, ಮ್ಯಾಚ್ ಫಿನಿಷರ್, ಕ್ಯಾಪ್ಟನ್ ಕೂಲ್ ಹೀಗೆ ಹಲವು ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಇಂದಿಗೆ ಸರಿಯಾಗಿ 12 ವರ್ಷಗಳ ಹಿಂದೆ ಟೀಂ ಇಂಡಿಯಾ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು. ಆ ಬಳಿಕ ನಡೆದದ್ದೆಲ್ಲಾ ಇತಿಹಾಸ......
ಬೆಂಗಳೂರು[ಸೆ.14]: ಟೀಂ ಇಂಡಿಯಾ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ನಾಯಕನಾಗಿ ಇಂದಿಗೆ 12 ವರ್ಷ ಭರ್ತಿಯಾಗಿದೆ. ಝಾರ್ಖಂಡ್’ನ ರಾಂಚಿಯಿಂದ ಬಂದ ಹುಡುಗ ಇಡೀ ದೇಶದ ಕಣ್ಮಣಿಯಾಗಿ ನಿಂತದ್ದೇ ಒಂದು ವಿಸ್ಮಯ. ಐಸಿಸಿಯ ಮೂರು ಪ್ರತಿಷ್ಠಿತ ಟ್ರೋಫಿಗಳನ್ನು ಜಯಿಸಿದ ಜಗತ್ತಿನ ಏಕೈಕ ನಾಯಕ ಎನಿಸಿರುವ ಧೋನಿ ಎಂದೆದಿಗೂ ಭಾರತ ಕಂಡ ಸರ್ವಶ್ರೇಷ್ಠ ನಾಯಕ ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ.
ಇಂದಿಗೆ ಸರಿಯಾಗಿ 12 ವರ್ಷಗಳ ಹಿಂದೆ ಅಂದರೆ ಸೆಪ್ಟೆಂಬರ್ 14, 2007ರಂದು ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಟೀಂ ಇಂಡಿಯಾವನ್ನು ಚೊಚ್ಚಲ ಬಾರಿಗೆ ಮುನ್ನಡೆಸಿದ್ದರು. ಮಹೇಂದ್ರ ಸಿಂಗ್ ಧೋನಿ ಎಂದರೆ ಬರೀ ಹೆಸರಲ್ಲ, ಅದೊಂದು ಸ್ಫೂರ್ತಿಯ ಚಿಲುಮೆ. 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್, 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಭಾರತಕ್ಕೆ ಹಲವಾರು ಸ್ಮರಣೀಯ ಗೆಲುವು ತಂದುಕೊಟ್ಟ ನಾಯಕ ಧೋನಿ.
‘ಡಬಲ್ ಟಿ20 ವಿಶ್ವಕಪ್’ಗೆ ಟೀಂ ಇಂಡಿಯಾ ಸಿದ್ಧತೆ
2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ನೀರಸ ಪ್ರದರ್ಶನ ತೋರುವುದರೊಂದಿಗೆ ಗ್ರೂಪ್ ಹಂತದಲ್ಲೇ ಹೊರಬಿದ್ದು ಮುಖಭಂಗ ಅನುಭವಿಸಿತ್ತು. ಇಂತಹ ಕಠಿಣ ಸಂದರ್ಭದಲ್ಲಿ ತಂಡದ ನಾಯಕತ್ವ ವಹಿಸಿಕೊಂಡ ಧೋನಿ, ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿ ಆಡಲು ಅನನುಭವಿ ತಂಡದೊಂದಿಗೆ ದಕ್ಷಿಣ ಆಫ್ರಿಕಾಗೆ ತೆರಳಿದ್ದರು. ಸೆಪ್ಟೆಂಬರ್ 12ರಂದು ನಡೆಯಬೇಕಿದ್ದ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿತ್ತು. ಹೀಗಾಗಿ ಸೆಪ್ಟೆಂಬರ್ 14ರಂದು ಮೊದಲ ಬಾರಿಗೆ ಧೋನಿ ನಾಯಕನಾಗಿ ಕಣಕ್ಕಿಳಿದಿದ್ದರು. ಎದುರಿಗಿದ್ದಿದ್ದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ. ಮೊದಲ ಪಂದ್ಯವೇ ರೋಚಕ ಟೈ, ಫಲಿತಾಂಶಕ್ಕಾಗಿ ಬಾಲ್ ಔಟ್ ಮೊರೆ ಹೋದ ಐಸಿಸಿ. ಅಂತಿಮವಾಗಿ ಭಾರತಕ್ಕೆ ರೋಚಕ ಜಯ. ಟಿ20 ಫೈನಲ್’ನಲ್ಲಿ ಮತ್ತೆ ಪಾಕಿಸ್ತಾನ ತಂಡವೇ ಭಾರತಕ್ಕೆ ಎದುರಾಳಿ. ಅನನುಭವಿ ಜೋಗಿಂದರ್ ಶರ್ಮಾ ಕೈಯಲ್ಲಿ ಚಂಡಿತ್ತು ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದು ಈಗ ಇತಿಹಾಸ.
ಧೋನಿ ಭವಿಷ್ಯದ ಬಗ್ಗೆ ಶೀಘ್ರವೇ ನಿರ್ಧಾರಕ್ಕೆ ಬನ್ನಿ: ಕುಂಬ್ಳೆ
ಇನ್ನು ಏಕದಿನ ವಿಶ್ವಕಪ್’ನಲ್ಲೂ ಸತತ ಮೂರು ಬಾರಿ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾ ತಂಡವನ್ನು ಸೊಕ್ಕಡಗಿಸಿದ್ದು ಮಾತ್ರವಲ್ಲದೇ, ಶ್ರೀಲಂಕಾ ವಿರುದ್ಧ ಫೈನಲ್’ನಲ್ಲಿ ಗೌತಮ್ ಗಂಭೀರ್ ಜತೆ ಸಮಯೋಚಿತ ಬ್ಯಾಟಿಂಗ್ ನಡೆಸಿದ್ದು, ಕುಲಸೇಖರ್ ಎಸೆತದಲ್ಲಿ ಚೆಂಡನ್ನು ಸಿಕ್ಸರ್’ಗಟ್ಟಿದ್ದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಎಂದೆಂದಿಗೂ ಅಚ್ಚಳಿಯದೇ ಉಳಿದ ಕ್ಷಣವೇ ಸರಿ. ಈ ಮೂಲಕ ಭಾರತ ಬರೋಬ್ಬರಿ 28 ವರ್ಷಗಳ ಬಳಿಕ ವಿಶ್ವಕಪ್ ಚಾಂಪಿಯನ್ ಆಗಿ ಮೆರೆದಾಡಿದ್ದು ಕೂಡಾ ಧೋನಿಯ ನಾಯಕತ್ವದಲ್ಲೇ.
ಈ ಸಂದರ್ಭದಲ್ಲಿ ಕ್ರಿಕೆಟ್ ಅಭಿಮಾನಿಗಳು 12 ವರ್ಷಗಳ ಹಿಂದೆ ಧೋನಿ ನಾಯಕತ್ವ ವಹಿಸಿಕೊಂಡಿದ್ದ ದಿನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸ್ಮರಿಸಿಕೊಂಡಿದ್ದಾರೆ. #12Yearsof CaptainDhoni ಇದೀಗ ಟ್ವಿಟರ್’ನಲ್ಲಿ ಟ್ರೆಂಡ್ ಆಗುತ್ತಿದೆ.
ಧೋನಿ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ನಾಯಕತ್ವ ತೊರೆದಿದ್ದರು. 2014ರಲ್ಲಿ ದಿಢೀರ್ ಟೆಸ್ಟ್ ಕ್ರಿಕೆಟ್’ಗೆ ವಿದಾಯ ಹೇಳಿದ್ದ ಧೋನಿ, 2017ರಲ್ಲಿ ಸೀಮಿತ ಓವರ್’ಗಳ ನಾಯಕತ್ವದಿಂದ ಕೆಳಗಿಳಿದಿದ್ದರು. ವಯಸ್ಸು 38 ಆದರೂ ಧೋನಿ ವಿಕೆಟ್ ಹಿಂದೆ ನಿಂತರೆ, ಎದುರಾಳಿ ಬ್ಯಾಟ್ಸ್’ಮನ್ ಮುನ್ನುಗ್ಗಿ ಬಾರಿಸುವುದಿರಲಿ, ಕ್ರೀಸ್’ನಿಂದ ಕಾಲೆತ್ತುವ ಮುನ್ನ ಎರೆಡೆರಡು ಬಾರಿ ಯೋಚಿಸುತ್ತಾರೆ. ಒಂದು ವೇಳೆ ಕ್ರೀಸ್’ನಲ್ಲಿ ಕಾಲೆತ್ತಿದರೆ ಕಣ್ಮಿಟುಕಿಸುವಷ್ಟರಲ್ಲಿ ಬೇಲ್ಸ್ ಎಗರಿಸಿಬಿಡುವ ಚಾಣಾಕ್ಷ ಧೋನಿ.
ಧೋನಿ ನಾಯಕತ್ವದ ಅಂಕಿ-ಅಂಶ
ಟೆಸ್ಟ್- 60 ಪಂದ್ಯ: 27 ಗೆಲುವು, 18 ಸೋಲು, 15 ಡ್ರಾ.
ಏಕದನ-199 ಪಂದ್ಯ: 110 ಗೆಲುವು, 74 ಸೋಲು, 4 ಟೈ, 11 ಫಲಿತಾಂಶವಿಲ್ಲ.
ಟಿ20- 72 ಪಂದ್ಯ: 41 ಗೆಲುವು, 28 ಸೋಲು, 1 ಟೈ, 2 ಫಲಿತಾಂಶ.
ಒಟ್ಟು: 331 ಪಂದ್ಯ: 178 ಗೆಲುವು, 120 ಸೋಲು, 15 ಡ್ರಾ, 5 ಟೈ, 13 ಫಲಿತಾಂಶವಿಲ್ಲ.