ಕೀನ್ಯಾದ ಕ್ರೀಡಾಪಟು ಸಬಾಸ್ಟಿಯನ್ ಸಾವೆ ಲಂಡನ್ ಮ್ಯಾರಥಾನ್‌ನಲ್ಲಿ 1 ಗಂಟೆ 59 ನಿಮಿಷ, 30 ಸೆಕೆಂಡ್‌ಗಳಲ್ಲಿ ಓಟ ಪೂರ್ಣಗೊಳಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ 2 ಗಂಟೆಯೊಳಗೆ ಮ್ಯಾರಥಾನ್ ಪೂರ್ಣಗೊಳಿಸಿದ ಮೊದಲ ಅಥ್ಲೀಟ್ ಎನಿಸಿಕೊಂಡಿದ್ದಾರೆ. ಮಹಿಳಾ ವಿಭಾಗದಲ್ಲಿ ಎಥಿಯೋಪಿಯಾದ ಟಿಗ್ಸ್ಟ್ ಅಸ್ಸೆಫಾ ಚಾಂಪಿಯನ್ ಆಗಿದ್ದಾರೆ.
ಲಂಡನ್: ಕೀನ್ಯಾದ ಕ್ರೀಡಾಪಟು ಸಬಾಸ್ಟಿಯನ್ ಸಾವೆ ಅವರು ಮ್ಯಾರಥಾನ್(42.195 ಕಿ.ಮೀ.) ಓಟದ ಸ್ಪರ್ಧೆಯಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಲಂಡನ್ ಮ್ಯಾರಥಾನ್‌ನಲ್ಲಿ ಅವರು 1 ಗಂಟೆ 59 ನಿಮಿಷ, 30 ಸೆಕೆಂಡ್‌ಗಳಲ್ಲಿ ರೇಸ್ ಪೂರ್ಣಗೊಳಿಸಿದ್ದಾರೆ. ಈ ಮೂಲಕ ವಿಶ್ವದಾಖಲೆ ಬರೆಯುವುದರ ಜೊತೆಗೆ, 2 ಗಂಟೆಯೊಳಗೆ ರೇಸ್ ಪೂರ್ತಿ ಮಾಡಿದ ವಿಶ್ವದ ಮೊದಲ ಅಥ್ಲೀಟ್ ಎನಿಸಿಕೊಂಡರು.
2023ರಲ್ಲಿ ಷಿಕಾಗೊ ಮ್ಯಾರಥಾನ್‌ನಲ್ಲಿ ಕೀನ್ಯಾದ ಕೆಲ್ವಿನ್ ಕಿಪ್ಟಮ್ 2:00 ಗಂಟೆ, 28 ಸೆಕಂಡ್‌ಗಳಲ್ಲಿ ಕ್ರಮಿಸಿದ್ದು ಈವರೆಗೂ ವಿಶ್ವ ದಾಖಲೆಯಾಗಿತ್ತು. ಭಾನುವಾರದ ರೇಸ್‌ನಲ್ಲಿ ಆ ದಾಖಲೆಯನ್ನು ಮೂವರು ಹಿಂದಿಕ್ಕಿದರು. ಸಾವೆ ಜೊತೆ ರೇಸ್‌ನಲ್ಲಿ 2ನೇ ಸ್ಥಾನ ಪಡೆದ ಎಥಿಯೋಪಿಯಾದ ಯೊಮಿಫ್ 1 ಗಂಟೆ 59 ನಿಮಿಷ 41 ಸೆಕೆಂಡ್‌ಗಳಲ್ಲಿ ಕ್ರಮಿಸಿ, 2 ಗಂಟೆಯೊಳಗೆ ರೇಸ್ ಪೂರ್ಣಗೊಳಿಸಿದ 2ನೇ ಅಥ್ಲೀಟ್ ಎನಿಸಿಕೊಂಡರು. ಉಗಾಂಡದ ಜಾಕಬ್ ಕಿಪಿಲಿಮೊ 2 ಗಂಟೆ 00 ನಿಮಿಷ 21 ಸೆಕೆಂಡ್‌ಗಳಲ್ಲಿ ಕ್ರಮಿಸಿ 3ನೇ ಸ್ಥಾನಿಯಾದರು.
29 ವರ್ಷದ ಸಾವೆ ಲಂಡನ್‌ನಲ್ಲಿ ಸತತ 2ನೇ ಬಾರಿ ಮ್ಯಾರಥಾನ್ ಗೆದ್ದರು. ಕಳೆದ ವರ್ಷ ಅವರು 2 ಗಂಟೆ, 02 ನಿಮಿಷ, 27 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಾಂಪಿಯನ್ ಆಗಿದ್ದರು. ಈ ಬಾರಿ ತಮ್ಮ ದಾಖಲೆ ಉತ್ತಮಪಡಿಸಿಕೊಂಡರು.
ಮಹಿಳಾ ಮ್ಯಾರಥಾನ್: ಅಸ್ಸೆಫಾ ಚಾಂಪಿಯನ್
ಲಂಡನ್ ಮ್ಯಾರಥಾನ್‌ನ ಮಹಿಳಾ ರೇಸ್‌ನಲ್ಲಿ ಎಥಿಯೋಪಿಯಾದ ಟಿಗ್ಸ್ಟ್ ಅಸ್ಸೆಫಾ ತಮ್ಮದೇ ಹೆಸರಲ್ಲಿದ್ದ ದಾಖಲೆ ಉತ್ತಮಪಡಿಸಿಕೊಂಡರು. ಅವರು 2 ಗಂಟೆ 15 ನಿಮಿಷ, 41 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರು. ಒಲಿಂಪಿಕ್ ಚಾಂಪಿಯನ್, ಕೀನ್ಯಾದ ಹೆಲೆನ್ ಒಬಿರಿ ಹಾಗೂ ಜೋಸಿಲಿನ್ ಕ್ರಮವಾಗಿ ಬೆಳ್ಳಿ, ಕಂಚು ತಮ್ಮದಾಗಿಸಿಕೊಂಡರು.
-- 25 ಬಾರಿ ಡೋಪ್ ಟೆಸ್ಟ್‌ಗೆ ಒಳಗಾಗಿದ್ದ ಸಬಾಸ್ಟಿಯನ್!
ಕೀನ್ಯಾದಲ್ಲಿ ಉದ್ದೀಪನ ಮದ್ದು ಸೇವನೆ ಪ್ರಮಾಣ ಹೆಚ್ಚಿದ್ದು, ಅಥ್ಲೀಟ್‌ಗಳು ಡೋಪಿಂಗ್‌ನಲ್ಲಿ ಸಿಕ್ಕಿಬೀಳುವುದು ಸಾಮಾನ್ಯ. ಆದರೆ ಸಬಾಸ್ಟಿಯನ್ ನಿಷೇಧಿತ ಮದ್ದು ಸೇವನೆಯಿಂದ ದೂರ ಉಳಿಯುವುದಕ್ಕಾಗಿ ಕಳೆದ ವರ್ಷ ಬರ್ಲಿನ್ ಮ್ಯಾರಥಾನ್‌ಗೂ ಮುನ್ನ 25 ಬಾರಿ ಡೋಪ್ ಟೆಸ್ಟ್‌ಗೆ ಒಳಗಾಗಿದ್ದರು. ಪ್ರತಿ ವಾರಕ್ಕೆ 2 ಬಾರಿಯಂತೆ ತಮ್ಮ ರಕ್ತ ಹಾಗೂ ಮೂತ್ರವನ್ನು ಪರೀಕ್ಷೆಗೆ ನೀಡುತ್ತಿದ್ದರು. ಈ ಬಾರಿ ಲಂಡನ್ ಮ್ಯಾರಥಾನ್‌ಗೂ ಮುನ್ನ ಕೂಡಾ ಅವರು ಇದೇ ರೀತಿ ಮಾಡಿ, ಡೋಪಿಂಗ್‌ನಿಂದ ದೂರ ಉಳಿದಿದ್ದಾರೆ. ಅಥ್ಲೀಟ್‌ಗಳನ್ನು ಸ್ಪರ್ಧೆಗಳ ಸಮಯದಲ್ಲಿ ಡೋಪ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆದರೆ ಸಬಾಸ್ಟಿಯನ್ ಸಾಮಾನ್ಯ ದಿನಗಳಲ್ಲೂ ಡೋಪ್ ಪರೀಕ್ಷೆಗೆ ಒಳಗಾಗುತ್ತಿದ್ದರು.
ಸಾವೆ ಕ್ರಮಿಸಿದ ದೂರ
ದೂರ ಸಮಯ
5 ಕಿ.ಮೀ. 14:14 ನಿಮಿಷ
10 ಕಿ.ಮೀ. 28:35 ನಿಮಿಷ
15 ಕಿ.ಮೀ. 43:10 ನಿಮಿಷ
20 ಕಿ.ಮೀ. 57:21 ನಿಮಿಷ
25 ಕಿ.ಮೀ. 1:11:41 ನಿಮಿಷ
30 ಕಿ.ಮೀ. 1:26:03 ನಿಮಿಷ
35 ಕಿ.ಮೀ. 1:39:57 ನಿಮಿಷ
40 ಕಿ.ಮೀ. 1:53:39 ನಿಮಿಷ
42.2 ಕಿ.ಮೀ. 1:59:30 ನಿಮಿಷ


