ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ 15 ವರ್ಷದ ವೈಭವ್ ಸೂರ್ಯವಂಶಿ, ಹೈದರಾಬಾದ್ ವಿರುದ್ಧ ಕೇವಲ 36 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ್ದಾರೆ. ಅವರ ಬ್ಯಾಟಿಂಗ್‌ಗೆ ಮನಸೋತ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್, ವೈಭವ್ ತನ್ನ ಹೊಸ ಫೇವರಿಟ್ ಆಟಗಾರ ಎಂದು ಶ್ಲಾಘಿಸಿದ್ದಾರೆ. ಈ ಗೆಲುವಿನೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.

ಜೈಪುರ: ಐಪಿಎಲ್‌ನಲ್ಲಿ ಹೈದರಾಬಾದ್ ವಿರುದ್ಧ ಸ್ಫೋಟಕ ಶತಕ ಸಿಡಿಸಿದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಬ್ಯಾಟಿಂಗ್‌ಗೆ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಮನಸೋತಿದ್ದಾರೆ. ತನ್ನ ಬೌಲಿಂಗ್ ಸೇರಿದಂತೆ ಎಲ್ಲ ಬೌಲರ್‌ಗಳ ಎಸೆತಗಳನ್ನು ಗ್ಯಾಲರಿಗೆ ಅಟ್ಟಿದ ವೈಭವ್, ಈಗ ತನ್ನ ಹೊಸ ಫೇವರಿಟ್ ಆಟಗಾರ ಎಂದು ಕಮಿನ್ಸ್ ಬಹಿರಂಗವಾಗಿ ಹೇಳಿದ್ದಾರೆ. ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ ರಾಯಲ್ಸ್ ಪರ ಆಡಿದ ವೈಭವ್, ಕೇವಲ 36 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಅವರ ಈ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 12 ಸಿಕ್ಸರ್‌ಗಳು ಸೇರಿದ್ದವು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

15 ವರ್ಷದ ಯುವ ಕ್ರಿಕೆಟಿಗನ ಕೊಂಡಾಡಿದ ಪ್ಯಾಟ್ ಕಮಿನ್ಸ್

ಆಸ್ಟ್ರೇಲಿಯಾ ತಂಡದ ನಾಯಕನೂ ಆಗಿರುವ ಪ್ಯಾಟ್ ಕಮಿನ್ಸ್‌ರನ್ನು ಮೊದಲ ಬಾರಿಗೆ ಎದುರಿಸುವಾಗ ವೈಭವ್‌ಗೆ ಯಾವುದೇ ಹಿಂಜರಿಕೆ ಇರಲಿಲ್ಲ. ತಾನು ಎದುರಿಸಿದ ಕಮಿನ್ಸ್ ಅವರ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟುವ ವೈಭವ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಈ ಸೀಸನ್‌ನಲ್ಲಿ ಇದಕ್ಕೂ ಮುನ್ನ ಜಸ್‌ಪ್ರೀತ್ ಬುಮ್ರಾ, ಜೋಶ್ ಹೇಝಲ್‌ವುಡ್ ಅವರಂತಹ ಸ್ಟಾರ್ ಬೌಲರ್‌ಗಳಿಗೂ ವೈಭವ್ ಸಿಕ್ಸರ್ ಬಾರಿಸಿದ್ದರು. "ಅವನು ಬಾಲ್ ಹೊಡೆಯುವ ರೀತಿ ನೋಡಲು ತುಂಬಾ ಖುಷಿ ಕೊಡುತ್ತದೆ. ಬಹುಶಃ ಅವನೇ ನನ್ನ ಹೊಸ ಫೇವರಿಟ್ ಆಟಗಾರ ಅನಿಸುತ್ತಿದೆ. ನೀವು ಸರಿಯಾದ ಜಾಗದಲ್ಲಿ ಬೌಲ್ ಮಾಡದಿದ್ದರೆ, ಅವನು ಅದನ್ನು ಬಹಳ ದೂರಕ್ಕೆ ಅಟ್ಟುತ್ತಾನೆ. ವೃತ್ತಿಜೀವನದ ಆರಂಭದಲ್ಲೇ ಇಷ್ಟೊಂದು ದೊಡ್ಡ ಮಟ್ಟದ ಪ್ರಭಾವ ಬೀರಲು ಅವನಿಗೆ ಸಾಧ್ಯವಾಗುತ್ತಿರುವುದು ಅದ್ಭುತ. ಆಟವನ್ನು ಅವನು ಆನಂದಿಸುವ ರೀತಿ ನನಗೆ ತುಂಬಾ ಇಷ್ಟವಾಯಿತು" ಎಂದು ಕಮಿನ್ಸ್ ಹೇಳಿದರು.

ಗಾಯದ ಕಾರಣದಿಂದ ದೀರ್ಘಕಾಲ ತಂಡದಿಂದ ಹೊರಗಿದ್ದ ಕಮಿನ್ಸ್, ಇಂದಿನ ದಿನಗಳಲ್ಲಿ ಬೌಲರ್‌ಗಳು ಎದುರಿಸುತ್ತಿರುವ ಸವಾಲುಗಳು ಬಹಳ ದೊಡ್ಡದು ಎಂದು ಒಪ್ಪಿಕೊಂಡರು. "ನಾವಿನ್ನು ಬೌಲರ್‌ಗಳು ಬ್ಯಾಟಿಂಗ್ ಮೇಲೂ ಗಮನ ಹರಿಸಬೇಕಾಗುತ್ತೆ ಅನಿಸುತ್ತಿದೆ" ಎಂದು ಕಮಿನ್ಸ್ ತಮಾಷೆಯಾಗಿ ಹೇಳಿದರು. ತಮ್ಮ ಅನುಪಸ್ಥಿತಿಯಲ್ಲಿ ತಂಡವನ್ನು ಉತ್ತಮವಾಗಿ ಮುನ್ನಡೆಸಿದ ಇಶಾನ್ ಕಿಶನ್ ಮತ್ತು ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಅಭಿಷೇಕ್ ಶರ್ಮಾ ಅವರನ್ನು ಕಮಿನ್ಸ್ ಶ್ಲಾಘಿಸಿದರು.

View post on Instagram

ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ ಸನ್‌ರೈಸರ್ಸ್ ಹೈದರಾಬಾದ್:

ಸನ್‌ರೈಸರ್ಸ್ ಹೈದರಾಬಾದ್ ತಂಡವು ಟೂರ್ನಿಯಲ್ಲಿ ತನ್ನ ಲಯ ಕಂಡುಕೊಂಡಿದ್ದು, ಇದೀಗ ಸತತ ನಾಲ್ಕನೇ ಗೆಲುವು ದಾಖಲಿಸಿದೆ. ಸದ್ಯ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆಡಿದ 8 ಪಂದ್ಯಗಳಲ್ಲಿ ಐದು ಗೆಲುವು ಹಾಗೂ ಮೂರು ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ. ಇದೀಗ ತಂಡಕ್ಕೆ ನಾಯಕ ಪ್ಯಾಟ್ ಕಮಿನ್ಸ್ ಸೇರ್ಪಡೆಯಿಂದಾಗಿ ಮತ್ತಷ್ಟು ಬಲ ಬರುವಂತೆ ಮಾಡಿದೆ.