ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ರಾಜಕೀಯದಿಂದ ದೂರ ಉಳಿದಿದ್ದರೂ, ಅವರ ಕುಟುಂಬದ ಹೊಸ ಮುಖ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸುತ್ತಿದೆ. ಈ ರಾಜಕೀಯ ಪಯಣದ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (ದಾದಾ) ಅವರು ಕ್ರಿಕೆಟ್ ಆಡಳಿತದಲ್ಲಿದ್ದರೂ, ತಾವು ಸಕ್ರಿಯ ರಾಜಕೀಯಕ್ಕೆ ಎಂದಿಗೂ ಬರುವುದಿಲ್ಲ ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದರು. ಬಂಗಾಳ ಕ್ರಿಕೆಟ್ ಸಂಘ (CAB) ಮತ್ತು ಬಿಸಿಸಿಐ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಸೌರವ್, ರಾಜಕೀಯದಿಂದ ಸದಾ ಅಂತರ ಕಾಯ್ದುಕೊಂಡಿದ್ದರು. ಆದರೆ, 'ದಾದಾ' ರಾಜಕೀಯ ಪ್ರವೇಶಕ್ಕೆ ನಿರಾಕರಿಸಿದ್ದರೂ, ಅವರ ಕುಟುಂಬಕ್ಕೆ ರಾಜಕೀಯದ ಬಿಸಿ ತಟ್ಟಿದೆ. ಗಂಗೂಲಿ ಮನೆಯ ಸದಸ್ಯರೊಬ್ಬರು ಈಗ ಸಕ್ರಿಯ ರಾಜಕೀಯದಲ್ಲಿ ನೆಲೆ ಕಂಡುಕೊಳ್ಳಲು ಮುಂಚೂಣಿಯಲ್ಲಿದ್ದಾರೆ. ಸೌರವ್ ಗಂಗೂಲಿ ಅವರ ಜೇಷ್ಠ ಸಹೋದರ ಸ್ನೇಹಶಿಶ್ ಗಂಗೂಲಿ ಅವರ ಪತ್ನಿ (ಅತ್ತಿಗೆ) ಅರ್ಪಿತಾ ಗಂಗೂಲಿ ಭಾರತೀಯ ಜನತಾ ಪಾರ್ಟಿ (BJP) ಯಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿ ತೊಡಗಿಸಿಕೊಂಡಿದ್ದು, ರಾಜಕೀಯ ಅಖಾಡಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಿದ್ದಾರೆ.

2012 ರಿಂದಲೇ ಆರ್‌ಎಸ್‌ಎಸ್, ಬಿಜೆಪಿ ನಂಟು!

ಜುಲೈ 21, 2024 ರಂದು ಸ್ನೇಹಶಿಶ್ ಗಂಗೂಲಿ ಅವರನ್ನು ವಿವಾಹವಾದ ಅರ್ಪಿತಾ ಗಂಗೂಲಿ, ತಾವು ದೀರ್ಘಕಾಲದಿಂದ ಉದ್ಯಮದಲ್ಲಿದ್ದರೂ 2012 ರಿಂದಲೇ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಜೊತೆ ನಿಕಟ ಬಾಂಧವ್ಯ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ನಾನು ಈ ಹಿಂದೆ ಛತ್ತೀಸ್‌ಗಢದಲ್ಲಿದ್ದಾಗ ಬಿಜೆಪಿಯ ಹಲವು ಅಂಗಸಂಸ್ಥೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಕೊಲ್ಕತ್ತಾದಲ್ಲಿ ಪಕ್ಷದ ಯಾವುದೇ ಅಧಿಕೃತ ಹುದ್ದೆಯಲ್ಲಿ ಇಲ್ಲದಿದ್ದರೂ, ಬಿಜೆಪಿ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದೇನೆ. ಪಕ್ಷವು ನನಗೆ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ಪೂರ್ಣ ನಿಷ್ಠೆಯಿಂದ ಪೂರೈಸಲು ಸಿದ್ಧಳಾಗಿದ್ದೇನೆ," ಎಂದು ಅರ್ಪಿತಾ ಸ್ಪಷ್ಟಪಡಿಸಿದ್ದಾರೆ.

ವೇದಿಕೆಯಿಂದ ಕೆಳಗಿಳಿಸಿದಾಗ ಶುರುವಾಯ್ತು ವಿವಾದ!

ತಾವು ಬಿಜೆಪಿಯಲ್ಲಿ ಸಕ್ರಿಯರಾಗಿದ್ದಕ್ಕೆ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಸರ್ಕಾರ ತಮ್ಮನ್ನು ಅವಮಾನಿಸಿದೆ ಎಂದು ಅರ್ಪಿತಾ ಗಂಗೂಲಿ ಗಂಭೀರ ಆರೋಪ ಮಾಡಿದ್ದಾರೆ. 2025ರ ದುರ್ಗಾಪೂಜಾ ಉತ್ಸವದ ಸಮಯದಲ್ಲಿ, ತಮ್ಮ ಪತಿ ಸ್ನೇಹಶಿಶ್ ಗಂಗೂಲಿ ಅವರು ಸಿಎಬಿ (CAB) ಅಧ್ಯಕ್ಷರಾಗಿದ್ದಾಗ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆದೇಶದ ಮೇರೆಗೆ ಅಂದಿನ ರಾಜ್ಯ ಸಚಿವ ಅರೂಪ್ ಬಿಸ್ವಾಸ್ ಅವರು ತಮ್ಮನ್ನು ಹಬ್ಬದ ಮುಖ್ಯ ವೇದಿಕೆಯಿಂದ ಬಲವಂತವಾಗಿ ಕೆಳಗಿಳಿಸಿದರು ಎಂದು ಅರ್ಪಿತಾ ದೂರಿದ್ದಾರೆ.

ಆಕ್ರೋಶ ಹೊರಹಾಕಿದ ಅರ್ಪಿತಾ!

ಬಿಜೆಪಿ ನಾಯಕರೊಂದಿಗಿನ ನನ್ನ ಫೋಟೋಗಳು ಮಾಧ್ಯಮಗಳಲ್ಲಿ ವೈರಲ್ ಆಗಿದ್ದ ಕಾರಣಕ್ಕಾಗಿ ನನ್ನನ್ನು ಆ ವೇದಿಕೆಯಿಂದ ಕೆಳಗಿಳಿಸಲಾಯಿತು. 'ನಿಮ್ಮ ಈ ದುರಹಂಕಾರ ಶೀಘ್ರದಲ್ಲೇ ಮುರಿಯುತ್ತದೆ' ಎಂದು ನಾನು ಆ ವೇದಿಕೆಯಿಂದಲೇ ಸವಾಲು ಹಾಕಿದ್ದೆ," ಎಂದು ಅರ್ಪಿತಾ ಗಂಗೂಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಒಟ್ಟಿನಲ್ಲಿ, 'ಪ್ರಿನ್ಸ್ ಆಫ್ ಕೊಲ್ಕತ್ತಾ' ಸೌರವ್ ಗಂಗೂಲಿ ರಾಜಕೀಯದಿಂದ ದೂರ ಉಳಿದಿದ್ದರೂ, ಅವರ ಅತ್ತಿಗೆಯ ರಾಜಕೀಯ ಎಂಟ್ರಿ ಮತ್ತು ಟಿಎಮ್‌ಸಿ ಸರ್ಕಾರದ ವಿರುದ್ಧದ ಅವರ ಬಹಿರಂಗ ಸಮರ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ.