ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ, ನಾಯಕ ಶುಭಮನ್ ಗಿಲ್ ಕುಲ್ದೀಪ್ ಯಾದವ್ ಬೌಲಿಂಗ್‌ನಲ್ಲಿ ಜಿಂಕೆಯಂತೆ ಜಿಗಿದು ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದು ಕಮಿಂದು ಮೆಂಡಿಸ್ ಅವರನ್ನು ಔಟ್ ಮಾಡಿದರು. ಆರಂಭಿಕ ಕುಸಿತದ ನಂತರ ದಿನುಷ ಮತ್ತು ಡಿಕ್ವೆಲ್ಲಾ ಅವರ ಜೊತೆಯಾಟದಿಂದ ಚೇತರಿಸಿಕೊಂಡ ಲಂಕಾ, ದಿನದಾಟದ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿ 210 ರನ್‌ಗಳ ಹಿನ್ನಡೆಯಲ್ಲಿದೆ.
ಗಾಲೆ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನ ಮೂರನೇ ದಿನ, ಟೀಂ ಇಂಡಿಯಾ ಕ್ಯಾಪ್ಟನ್ ಶುಭಮನ್ ಗಿಲ್ ಹಿಡಿದ ಒಂದು ಕ್ಯಾಚ್ ಈಗ ಸಖತ್ ವೈರಲ್ ಆಗಿದೆ. ಕುಲ್ದೀಪ್ ಯಾದವ್ ಬೌಲಿಂಗ್‌ನಲ್ಲಿ, ಲಂಕಾ ಆಟಗಾರ ಕಮಿಂದು ಮೆಂಡಿಸ್‌ನನ್ನು ಔಟ್ ಮಾಡಲು ಗಿಲ್ ಕಣ್ಮುಚ್ಚಿ ಬಿಡುವಷ್ಟರಲ್ಲಿ ಜಿಂಕೆಯಂತೆ ಜಿಗಿದು ಒಂದೇ ಕೈಯಲ್ಲಿ ಕ್ಯಾಚ್ ಹಿಡಿದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶ್ರೀಲಂಕಾ ಇನ್ನಿಂಗ್ಸ್‌ನ 17ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಕುಲ್ದೀಪ್ ಯಾದವ್ ಓವರ್‌ನ ಮೊದಲ ಎಸೆತವನ್ನು ಮೆಂಡಿಸ್ ಕ್ರೀಸ್‌ನಿಂದ ಮುಂದೆ ಬಂದು ಬಾರಿಸಲು ಯತ್ನಿಸಿದರು. ಆದರೆ ಶಾರ್ಟ್ ಎಕ್ಸ್‌ಟ್ರಾ ಕವರ್‌ನಲ್ಲಿದ್ದ ನಾಯಕ ಶುಭ್‌ಮನ್ ಗಿಲ್, ಗಾಳಿಯಲ್ಲಿ ಪೂರ್ಣವಾಗಿ ಡೈವ್ ಮಾಡಿ ಒಂದೇ ಕೈಯಲ್ಲಿ ಚೆಂಡನ್ನು ಹಿಡಿದು ಎಲ್ಲರನ್ನೂ ಬೆರಗುಗೊಳಿಸಿದರು.
ಹೀಗಿತ್ತು ನೋಡಿ ಗಿಲ್ ಹಿಡಿದ ಅದ್ಭುತ ಕ್ಯಾಚ್
ಮೂರನೇ ದಿನದಾಟದ ಆರಂಭದಲ್ಲೇ ಮೊಹಮ್ಮದ್ ಸಿರಾಜ್ ಮತ್ತು ಮಾನವ್ ಸುತಾರ್ ಲಂಕಾ ತಂಡಕ್ಕೆ ಆಘಾತ ನೀಡಿದ್ದರು. ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲೇ ಓಪನರ್ ನಿಶಾನ್ ಫೆರ್ನಾಂಡೋ (2) ವಿಕೆಟ್ ಕಳೆದುಕೊಂಡರು. ಸಿರಾಜ್ ಬೌಲಿಂಗ್‌ನಲ್ಲಿ ದೇವದತ್ ಪಡಿಕ್ಕಲ್‌ಗೆ ಕ್ಯಾಚ್ ನೀಡಿ ಅವರು ಔಟಾದರು. ನಂತರ ಬಂದ ದಿನೇಶ್ ಚಾಂಡಿಮಾಲ್ (4) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಸುತಾರ್ ಎಸೆತದಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಕ್ಯಾಚ್ ಕೊಟ್ಟು ಪೆವಿಲಿಯನ್‌ಗೆ ನಡೆದರು.
ಸ್ವಲ್ಪ ಸಮಯದಲ್ಲೇ, ಲಹಿರು ಉದಾರ (27) ಅವರನ್ನೂ ಸುತಾರ್ ಔಟ್ ಮಾಡಿದರು. ಇದರ ಬೆನ್ನಲ್ಲೇ, ಕಮಿಂದು ಮೆಂಡಿಸ್ (14) ವಿಕೆಟ್ ಪಡೆದ ಗಿಲ್, ತಮ್ಮ ಅದ್ಭುತ ಕ್ಯಾಚ್ ಮೂಲಕ ಲಂಕಾ ಮೇಲೆ ಮತ್ತಷ್ಟು ಒತ್ತಡ ಹೇರಿದರು. ನಂತರ ಧನಂಜಯ ಡಿ ಸಿಲ್ವ (21) ವಿಕೆಟನ್ನು ರವೀಂದ್ರ ಜಡೇಜಾ ಪಡೆದರು. ಇದರಿಂದ ಶ್ರೀಲಂಕಾ ಸಂಕಷ್ಟಕ್ಕೆ ಸಿಲುಕಿತು.
ಲಂಕಾಗೆ ಆಸರೆಯಾದ ದಿನುಷ್-ನಿರ್ಷೊನ್ ಭರ್ಜರಿ ಜತೆಯಾಟ
ಆದರೆ, ಆರನೇ ವಿಕೆಟ್‌ಗೆ ಜೊತೆಯಾದ ದಿನುಷ ಮತ್ತು ನಿರ್ಷೊನ್ ಡಿಕ್ವೆಲ್ಲಾ ಜೋಡಿ 146 ರನ್‌ಗಳ ಜೊತೆಯಾಟವಾಡಿ ಲಂಕಾ ತಂಡವನ್ನು ಕುಸಿತದಿಂದ ಪಾರು ಮಾಡಿತು. ಕೊನೆಯ ಸೆಷನ್‌ನಲ್ಲಿ, ಈ ಜೋಡಿಯನ್ನು ಪ್ರಸಿದ್ಧ್ ಕೃಷ್ಣ ಬೇರ್ಪಡಿಸಿದರು. ಡಿಕ್ವೆಲ್ಲಾ (80) ಅವರನ್ನು ಔಟ್ ಮಾಡಿ, ಭಾರತಕ್ಕೆ ಮತ್ತೆ ಮೇಲುಗೈ ತಂದುಕೊಟ್ಟರು. ನಂತರ ಬಂದ ಕೆಶಾರ ನುವಾಂತ (2) ವಿಕೆಟನ್ನು ರವೀಂದ್ರ ಜಡೇಜಾ ಪಡೆದರು.
ಸದ್ಯ 72 ಓವರ್ ಅಂತ್ಯದ ವೇಳೆಗೆ ಶ್ರೀಲಂಕಾ ತಂಡವು 7 ವಿಕೆಟ್ ಕಳೆದುಕೊಂಡು 252 ರನ್ ಬಾರಿಸಿದ್ದು ಇನ್ನೂ 210 ರನ್‌ಗಳ ಹಿನ್ನಡೆಯಲ್ಲಿದೆ. ಒಂದು ಹಂತದಲ್ಲಿ ಫಾಲೋಆನ್‌ಗೆ ಒಳಗಾಗುವ ಭೀತಿಯಲ್ಲಿದ್ದ ಲಂಕಾ ತಂಡವು ಇದೀಗ ಫಾಲೋ ಆನ್‌ನಿಂದ ಬಚಾವಾಗಲು ಕೇವಲ 10 ರನ್‌ಗಳ ಹಿನ್ನಡೆಯಲ್ಲಿದೆ. ಸೋನುಲ್ ದಿನುಷ 88 ಹಾಗೂ ಪ್ರಭಾತ್ ಜಯಸೂರ್ಯ(0) ಕ್ರೀಸ್‌ನಲ್ಲಿದ್ದಾರೆ.


