ಕ್ರಿಕೆಟಿಗ ಕೆ.ಎಲ್. ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ ಅವರ ಪ್ರೇಮಕಥೆಯು 2019ರಲ್ಲಿ ಬೆಂಗಳೂರಿನಲ್ಲಿ ಶುರುವಾಯಿತು. ತಮ್ಮ ಸಂಬಂಧವನ್ನು ರಹಸ್ಯವಾಗಿಟ್ಟಿದ್ದ ಈ ಜೋಡಿ, 2021ರಲ್ಲಿ ಸಾರ್ವಜನಿಕವಾಗಿ ಒಪ್ಪಿಕೊಂಡು, 2023ರಲ್ಲಿ ಖಂಡಾಲಾದಲ್ಲಿ ವಿವಾಹವಾದರು. ಈ ಲೇಖನವು ಅವರ ಭೇಟಿ, ಮದುವೆ, ಶಿಕ್ಷಣ ಮತ್ತು ಆಸ್ತಿಯ ವಿವರಗಳನ್ನು ಒಳಗೊಂಡಿದೆ.

ಟೀಮ್ ಇಂಡಿಯಾ ಕ್ರಿಕೆಟರ್ ಕೆ.ಎಲ್. ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಅವರ ಲವ್ ಸ್ಟೋರಿ ಕ್ರಿಕೆಟ್ ಹಾಗೂ ಚಲನಚಿತ್ರ ರಂಗದ ಸುಂದರ ಸಂಗಮ. 2019 ರ ಆರಂಭದಲ್ಲಿ ಇಬ್ಬರೂ ಬೆಂಗಳೂರಿನಲ್ಲಿ ಪರಸ್ಪರ ಒಬ್ಬ ಸಾಮಾನ್ಯ ಸ್ನೇಹಿತರ ಮೂಲಕ ಭೇಟಿಯಾದರು. ಮೊದಲ ಭೇಟಿಯಲ್ಲೇ ಪರಸ್ಪರ ಇಷ್ಟಪಟ್ಟು ಹತ್ತಿರವಾದರೂ, ತಮ್ಮ ಸಂಬಂಧವನ್ನು ಮಾಧ್ಯಮಗಳಿಂದ ರಹಸ್ಯವಾಗಿಟ್ಟಿದ್ದರು.

ವದಂತಿಗಳು ಮತ್ತು ಸಾರ್ವಜನಿಕ ಪ್ರಕಟಣೆ!

ಇವರ ಪ್ರೀತಿಯ ಬಗ್ಗೆ ಮೊದಲ ಬಾರಿಗೆ ವದಂತಿಗಳು ಹರಡಿದ್ದು ಫ್ಯಾಷನ್ ಡಿಸೈನರ್ ವಿಕ್ರಮ್ ಫಡ್ನಿಸ್ ಅವರಿಂದ. ಅವರು ಸಾಮಾಜಿಕ ಮಾಧ್ಯಮದಲ್ಲಿ ಅಥಿಯಾ ಅವರ ಪೋಸ್ಟ್‌ಗೆ ತಮಾಷೆಯಾಗಿ ಕಮೆಂಟ್ ಮಾಡಿ, ಡೇಟಿಂಗ್ ಸುಳಿವು ನೀಡಿದರು. ನಂತರ ಅಭಿಮಾನಿಗಳು ಇಬ್ಬರ ಪೋಸ್ಟ್‌ಗಳನ್ನು ಗಮನಿಸಿ ಊಹಿಸಲು ಪ್ರಾರಂಭಿಸಿದರು. ಕೊನೆಗೆ 2021 ರಲ್ಲಿ ಅಥಿಯಾ ಹುಟ್ಟುಹಬ್ಬದಂದು ಕೆ.ಎಲ್. ರಾಹುಲ್ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಣಯ ಭರಿತ ಫೋಟೋ ಹಂಚಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ದೃಢಪಡಿಸಿದರು.

ಪರಸ್ಪರ ಬೆಂಬಲ ಮತ್ತು ಮದುವೆ!

ಅಥಿಯಾ, ರಾಹುಲ್ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಪ್ರವಾಸಗಳಲ್ಲಿ ಜೊತೆಯಾಗಿ ಪ್ರಯಾಣಿಸಿ ಬೆಂಬಲ ನೀಡಿದರು. ಇಬ್ಬರೂ ಜಂಟಿಯಾಗಿ ಜಾಹೀರಾತುಗಳಲ್ಲಿ ನಟಿಸಿದರು. ಅಷ್ಟೇ ಅಲ್ಲದೆ, ಅಥಿಯಾ ಸಹೋದರ ಅಹಾನ್ ಶೆಟ್ಟಿ ಅವರ 'ತಡಪ್' ಚಿತ್ರದ ಪ್ರಥಮ ಪ್ರದರ್ಶನಕ್ಕೆ ರಾಹುಲ್ ಹಾಜರಾಗುವ ಮೂಲಕ ಶೆಟ್ಟಿ ಕುಟುಂಬಕ್ಕೂ ಹತ್ತಿರವಾದರು. ಕೊನೆಗೆ, ಜನವರಿ 23, 2023 ರಂದು ಖಂಡಾಲಾದಲ್ಲಿರುವ ಸುನೀಲ್ ಶೆಟ್ಟಿ ಅವರ ಫಾರ್ಮ್‌ಹೌಸ್‌ನಲ್ಲಿ ಕುಟುಂಬದ ಸಮ್ಮುಖದಲ್ಲಿ ಇಬ್ಬರೂ ವಿವಾಹವಾದರು. ತಮ್ಮ ಮೊದಲ ಮದುವೆ ವಾರ್ಷಿಕೋತ್ಸವದಂದು ತಮ್ಮ ಸುಂದರ ಕ್ಷಣಗಳ ವೀಡಿಯೊವನ್ನು ಹಂಚಿಕೊಂಡು ಅಭಿಮಾನಿಗಳಿಗೆ ಸಂತೋಷ ನೀಡಿದ್ದರು.

ಶೈಕ್ಷಣಿಕ ಅರ್ಹತೆ!

ಕೆ.ಎಲ್. ರಾಹುಲ್; ಕ್ರಿಕೆಟ್ ಜೊತೆಜೊತೆಗೇ ತಮ್ಮ ವ್ಯಾಸಂಗ ಮುಂದುವರಿಸಿ ವಾಣಿಜ್ಯ ಪದವಿ (B.Com) ಪಡೆದಿದ್ದಾರೆ.

ಅಥಿಯಾ ಶೆಟ್ಟಿ; ಮುಂಬೈನ ಪ್ರಸಿದ್ಧ ಶಾಲೆಗಳಲ್ಲಿ ಓದಿದ ನಂತರ, ಅಮೆರಿಕದ 'ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿ'ಯಿಂದ (NYFA) ಚಲನಚಿತ್ರ ನಿರ್ಮಾಣ ಮತ್ತು ಲಿಬರಲ್ ಆರ್ಟ್ಸ್‌ನಲ್ಲಿ ಪದವಿ ಪಡೆದಿದ್ದಾರೆ.

ಆಸ್ತಿ ವಿವರ!

ಕೆ.ಎಲ್. ರಾಹುಲ್; ಬಿಸಿಸಿಐ ಒಪ್ಪಂದ, ಐಪಿಎಲ್ ಸಂಭಾವನೆ ಹಾಗೂ ಬ್ರಾಂಡ್ ಪ್ರಚಾರಗಳಿಂದ ಸುಮಾರು ₹101 ಕೋಟಿ ಆಸ್ತಿ ಹೊಂದಿದ್ದಾರೆ.

ಅತಿಯಾ ಶೆಟ್ಟಿ; ಚಲನಚಿತ್ರಗಳು, ಪ್ರಮುಖ ಫ್ಯಾಷನ್ ಬ್ರಾಂಡ್ ಜಾಹೀರಾತುಗಳಿಂದ ಸುಮಾರು ₹30 ರಿಂದ ₹45 ಕೋಟಿ ನಿವ್ವಳ ಮೌಲ್ಯ ಹೊಂದಿದ್ದಾರೆ.