ಕ್ರಿಕೆಟಿಗ ವಿನೋದ್ ಕಾಂಬ್ಳಿ ಜೀವನವನ್ನು ಆಧರಿಸಿದ 'ಕಾಂಬ್ಳಿ' ವೆಬ್ ಸರಣಿ 'ಝೀ-5'ನಲ್ಲಿ ಬಿಡುಗಡೆಯಾಗಲಿದೆ. ನಿರ್ದೇಶಕ ಅಭಿಜಿತ್ ದೇಶಪಾಂಡೆ ನಿರ್ದೇಶನದ ಈ ಸರಣಿಯು, ಕಾಂಬ್ಳಿಯ ಕ್ರಿಕೆಟ್ ಜರ್ನಿ, ಆರಂಭಿಕ ಯಶಸ್ಸು ಹಾಗೂ ಸಚಿನ್ ತೆಂಡೂಲ್ಕರ್ ಜೊತೆಗಿನ ಸ್ನೇಹದ ಏರಿಳಿತಗಳನ್ನು ಕಟ್ಟಿಕೊಡುವ ನಿರೀಕ್ಷೆಯಿದೆ.

ಮುಂಬೈ: ಕ್ರಿಕೆಟ್‌ನಲ್ಲಿ ಕೆಲವು ಕ್ರಿಕೆಟಿಗರ ದಾಖಲೆಗಳಿಗಿಂತ ಅವರ ಕ್ರಿಕೆಟ್ ಜರ್ನಿ ಸಾಕಷ್ಟು ಸದ್ದು ಮಾಡಿರುವುದಿದೆ. ಅಂತಹ ಆಟಗಾರರ ಪೈಕಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಅಗ್ರಸಾಲಿನಲ್ಲಿ ನಿಲ್ಲುತ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಭರ್ಜರಿಯಾಗಿ ಪಾದಾರ್ಪಣೆ ಮಾಡಿದ್ದ ವಿನೋದ್ ಕಾಂಬ್ಳಿ, ಆರಂಭಿಕ ಯಶಸ್ಸಿನ ಬಳಿಕ ಸಿಕ್ಕ ತಿರುವಿನಿಂದಾಗಿ ಪಾತಾಳಕ್ಕೆ ಜಾರಿದ್ದು ಈಗ ಇತಿಹಾಸ. ಇದೀಗ ವಿನೋದ್ ಕಾಂಬ್ಳಿಯ ಆ ಜೆರ್ನಿಯನ್ನು ತೆರೆಯ ಮೇಲೆ ನೋಡುವ ಅವಕಾಶ ಬಂದಿದೆ. ಇದೀಗ ವಿನೋದ್ ಕಾಂಬ್ಳಿಯ ಜೀವನವನ್ನು ಆಧರಿಸಿದ ಈ ವೆಬ್‌ ಸರಣಿ 'ಕಾಂಬ್ಳಿ' ಹೆಸರಿನಲ್ಲಿ ಸ್ಕ್ರೀನ್‌ ಮೇಲೆ ಬರಲು ಸಜ್ಜಾಗಿದೆ.

ನಿರ್ದೇಶಕ ಅಭಿಜಿತ್ ದೇಶಪಾಂಡೆ, 2019ರಿಂದಲೂ ಈ ಪ್ರಾಜೆಕ್ಟ್‌ಮನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವೆಬ್ ಸರಣಿಯು OTT ಫ್ಲಾಟ್‌ಫಾರ್ಮ್‌ 'ಝೀ-5'ನಲ್ಲಿ ಬಿಡುಗಡೆಯಾಗಲಿದ್ದು, 'ಕಾಂಬ್ಳಿ' ವೆಬ್‌ ಸೀರಿಸ್‌ನ ಪೋಸ್ಟರ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ.

ಸಚಿನ್ ಬಾಲ್ಯದ ಗೆಳೆಯ ದೂರಾಗಿದ್ದೇಕೆ? ಬಯಲಾಗುತ್ತಾ ಆ ಸೀಕ್ರೇಟ್?

ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಎಂತಹ ಆತ್ಮೀಯ ಬಾಲ್ಯದ ಗೆಳೆಯರು ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ. ಶಾಲಾ ದಿನಗಳಿಂದ ಆತ್ಮೀಯ ಗೆಳೆಯರಾಗಿದ್ದ ಈ ಜೋಡಿ 1988ರಲ್ಲಿ ನಡೆದ ಹ್ಯಾರಿಸ್ ಶೀಲ್ಡ್‌ ಟೂರ್ನಿಯಲ್ಲಿ ಬರೋಬ್ಬರಿ 664 ರನ್‌ಗಳ ದಾಖಲೆಯ ಅಜೇಯ ಜತೆಯಾಟ ಇಡೀ ಕ್ರಿಕೆಟ್ ಜಗತ್ತಿನ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಈ ಇಬ್ಬರು ರಮಾಕಾಂತ್ ಅಚ್ರೇಕರ್ ಮಾರ್ಗದರ್ಶನದಲ್ಲಿ ಕ್ರಿಕೆಟ್ ಆರಂಭಿಸಿದ್ದರು. ಹೀಗಾಗಿ ಸಹಜವಾಗಿ ಇದೆಲ್ಲವನ್ನು ವೆಬ್‌ ಸೀರಿಸ್‌ನಲ್ಲಿ ಎಳೆಎಳೆಯಾಗಿ ತೆರೆಕಾಣುವ ನಿರೀಕ್ಷೆಯಿದೆ. ಆದರೆ ಬಾಲ್ಯದಿಂದಲೂ ಸಚಿನ್ ಆತ್ಮೀಯ ಗೆಳೆಯರಾಗಿ ಗುರುತಿಸಿಕೊಂಡಿದ್ದ ಕಾಂಬ್ಳಿ, ಆ ಬಳಿಕ ಸಚಿನ್‌ರಿಂದ ದೂರಾಗಿದ್ದೇಕೆ ಎನ್ನುವ ಕುತೂಹಲಕ್ಕೆ ಈ ವೆಬ್ ಸೀರಿಸ್ ತೆರೆ ಎಳೆಯುವ ನಿರೀಕ್ಷೆಯಿದ್ದು, ಈ ವಿಚಾರ ತಿಳಿದುಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಸ್ನೇಹದ ಏರಿಳಿತವನ್ನು ಈ ವೆಬ್ ಸೀರಿಸ್ ಕಟ್ಟಿಕೊಡುವ ನಿರೀಕ್ಷೆಯಿದೆ. ಯಾಕೆಂದರೆ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಸಂದರ್ಭದಲ್ಲಿ ತಮ್ಮ ಹೆಸರನ್ನು ಉಲ್ಲೇಖಿಸದಿರುವುದಕ್ಕೆ ಬಹಿರಂಗವಾಗಿಯೇ ವಿನೋದ್ ಕಾಂಬ್ಳಿ ತಮ್ಮ ಅಸಮಾಧಾನ ಹೊರಹಾಕಿದ್ದರು. ಇದರ ಬೆನ್ನಲ್ಲೇ ಸಚಿನ್ ಹಾಗೂ ಕಾಂಬ್ಳಿ ನಡುವೆ ಸಂಬಂಧ ಬಿರುಕುಬಿಟ್ಟಿದೆ ಎಂದೆಲ್ಲಾ ಸುದ್ದಿಯಾಗಿತ್ತು. ಹೀಗಾಗಿ ಈ ಎಲ್ಲಾ ವಿಚಾರಗಳು ಕಾಂಬ್ಳಿ ವೆಬ್ ಸೀರಿಸ್‌ನಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕ ಅಭಿಜಿತ್ ದೇಶಪಾಂಡೆ ಮಾಡಿರುವ ಸಾಧ್ಯತೆಯಿದೆ.

ಸಿನಿಮಾದಲ್ಲೂ ಅದೃಷ್ಟಪರೀಕ್ಷೆ ನಡೆಸಿದ್ದ ವಿನೋದ್ ಕಾಂಬ್ಳಿ:

ಕ್ರಿಕೆಟ್‌ನಿಂದ ದೂರವಾದ ಬಳಿಕ ವಿನೋದ್ ಕಾಂಬ್ಳಿ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆ ನಡೆಸಿದ್ದರು. 2000 ಇಸವಿಯಲ್ಲಿ ಬಿಡುಗಡೆಯಾದ 'ಅನಾರ್ಥ್' ಚಿತ್ರದಲ್ಲಿ ಸಂಜಯ್ ದತ್ ಜತೆ ನಟಿಸಿದ್ದರು. ಆದರೆ ಅಲ್ಲೂ ಕಾಂಬ್ಳಿ ಅಷ್ಟೊಂದು ಯಶಸ್ಸು ಕಂಡಿರಲಿಲ್ಲ. ಇನ್ನು ವಿನೋದ್ ಕಾಂಬ್ಳಿ ಹಾಗೂ ಸಚಿನ್ ತೆಂಡೂಲ್ಕರ್ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ.