Mysuru: ಕರ್ನಾಟಕದಲ್ಲಿ ದೇಶದ ಮೊದಲ ಪ್ಯಾರಾ ಕ್ರೀಡಾ ಅಕಾಡೆಮಿ
ಪ್ಯಾರಾಲಿಂಪಿಕ್ಸ್ ಪದಕ ವಿಜೇತ ಎಚ್.ಎನ್.ಗಿರೀಶ, ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ಶಟ್ಲರ್ ಆನಂದ್‌ರಿಂದ ಮೈಸೂರಲ್ಲಿ ಅಕಾಡೆಮಿ ಆರಂಭಕ್ಕೆ ಸಿದ್ಧತೆ
ಕನ್ನಡಪ್ರಭ ವಿಶೇಷ, ಸ್ಪಂದನ್ ಕಣಿಯಾರ್
ಬೆಂಗಳೂರು (ಏ. 17): ದೇಶದಲ್ಲಿ ನೂರಾರು ಕ್ರೀಡಾ ಅಕಾಡೆಮಿಗಳಿವೆ. ಹಲವಾರು ಮಾಜಿ, ಹಾಲಿ ಕ್ರೀಡಾಪಟುಗಳು ಅಕಾಡೆಮಿ ನಡೆಸುತ್ತಿದ್ದಾರೆ. ಆದರೆ ಪ್ಯಾರಾ ಕ್ರೀಡೆಗಳಿಗೆಂದೇ ಅಕಾಡೆಮಿಯೊಂದು ಕರ್ನಾಟಕದಲ್ಲಿ ತಲೆ ಎತ್ತಿದೆ. ಇಂಥದೊಂದು ಅಕಾಡೆಮಿ ದೇಶದಲ್ಲೇ ಮೊದಲು ಎನ್ನುವುದು ವಿಶೇಷ.ಈ ಅಕಾಡೆಮಿಯನ್ನು ಸ್ಥಾಪಿಸಿ, ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಅವರನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನಾಗಿ ತಯಾರು ಮಾಡಲು ಹೊರಟಿರುವುದು 2012ರ ಲಂಡನ್ ಪ್ಯಾರಾಲಿಂಪಿಕ್ಸ್ ಹೈಜಂಪ್ ಬೆಳ್ಳಿ, ಪದ್ಮಶ್ರೀ ಪುರಸ್ಕೃತ ಎಚ್.ಎನ್.ಗಿರೀಶ ಹಾಗೂ 2015ರ ವಿಶ್ವ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಡಬಲ್ಸ್ ಚಿನ್ನ ವಿಜೇತ ಆನಂದ್ ಬೋರೇಗೌಡ.
ಪ್ಯಾರಾ ಬ್ಯಾಡ್ಮಿಂಟನ್, ಪ್ಯಾರಾ ಶೂಟಿಂಗ್‌ಗೆ ಭಾರತದಲ್ಲಿ ಪ್ರತ್ಯೇಕ ಅಕಾಡೆಮಿಗಳಿವೆ. ಆದರೆ ಪ್ಯಾರಾಲಿಂಪಿಕ್ಸ್‌ನ ಎಲ್ಲಾ ಕ್ರೀಡೆಗಳಿಗೂ ತರಬೇತಿ ನೀಡುವ ಅಕಾಡೆಮಿಯನ್ನು ಗಿರೀಶ ಹಾಗೂ ಆನಂದ್ ಸ್ಥಾಪಿಸಿದ್ದಾರೆ. ಅಕಾಡೆಮಿಯನ್ನು ಕಳೆದ ತಿಂಗಳು ಮೈಸೂರಿನಲ್ಲಿ ನೋಂದಾಯಿಸಲಾಗಿದ್ದು, ಸಣ್ಣ ಮಟ್ಟದಲ್ಲಿ ತರಬೇತಿ ಹಾಗೂ ಪ್ರಾಯೋಜಕತ್ವವನ್ನೂ ಆರಂಭಿಸಲಾಗಿದೆ.
ಈ ಅಕಾಡೆಮಿಯಿಂದ ಪ್ರಾಯೋಜಕತ್ವ ಪಡೆದ ಕ್ರೀಡಾಪಟುಗಳು ಇತ್ತೀಚೆಗೆ ಒಡಿಶಾದಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಫೆನ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 7 ಪದಕ ಜಯಿಸಿದ್ದಾರೆ. ಪ್ಯಾರಾ ಸೈಕಲ್ ಪಟುವೊಬ್ಬರಿಗೂ ಅಕಾಡೆಮಿ ಆರ್ಥಿಕ ನೆರವು ನೀಡುತ್ತಿದೆ.
ಇದನ್ನೂ ಓದಿ: ಖದರ್ ಕಳೆದುಕೊಂಡ IPL, 14 ವರ್ಷದ ಐಪಿಎಲ್ ಯಶಸ್ವಿ ಓಟಕ್ಕೆ ಬಿತ್ತಾ ಬ್ರೇಕ್..?
‘ಸುಸಜ್ಜಿತ ಅಕಾಡೆಮಿ ತೆರೆಯಲು ಜಾಗಕ್ಕಾಗಿ ಸರ್ಕಾರಕ್ಕೆ ಸದ್ಯದಲ್ಲೇ ಅರ್ಜಿ ಸಲ್ಲಿಸಲಿದ್ದೇವೆ. ಜಾಗ ಮಂಜೂರಾಗುತ್ತಿದ್ದಂತೆ ಪೂರ್ಣ ಪ್ರಮಾಣದಲ್ಲಿ ಅಕಾಡೆಮಿ ಆರಂಭಿಸುತ್ತೇವೆ’ ಎಂದು ಗಿರೀಶ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದರು. ‘ಸದ್ಯ ವಿವಿಧ ಕ್ರೀಡೆಗಳ ಕೋಚ್‌ಗಳ ನೆರವು ಪಡೆದು ವ್ಯವಸ್ಥೆ ಇರುವ ಕಡೆಯಲ್ಲೇ ಆಯಾ ಕ್ರೀಡೆಗಳಿಗೆ ತರಬೇತಿ ಆರಂಭಿಸಿದ್ದೇವೆ. ನಮ್ಮ ದುಡಿಮೆಯಲ್ಲೇ ಉಳಿಸಿದ ಹಣದಿಂದ ಅರ್ಹ ಕ್ರೀಡಾಪಟುಗಳಿಗೆ ಪ್ರಾಯೋಜಕತ್ವ ಸಹ ನೀಡುತ್ತಿದ್ದೇವೆ. ಮುಂದೆ ದೊಡ್ಡ ಪ್ರಮಾಣದಲ್ಲಿ, ಕಾರ್ಪೊರೇಟ್ ಸಂಸ್ಥೆಗಳ ಸಹಯೋಗದೊಂದಿಗೆ ಅಕಾಡೆಮಿ ನಡೆಸುವ ಉದ್ದೇಶವಿದೆ. ಆ ಮೂಲಕ ದೇಶದಲ್ಲಿ ಪ್ಯಾರಾ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ ಅವಕಾಶ ಕಲ್ಪಿಸುವ ಗುರಿ ಹೊಂದಿದ್ದೇವೆ’ ಎಂದು ಗಿರೀಶ ತಮ್ಮ ಯೋಜನೆಯ ಬಗ್ಗೆ ವಿವರಿಸಿದರು.
ಪ್ಯಾರಾ ಕ್ರೀಡೆ ಬಗ್ಗೆ ಜಾಗೃತಿ ಆಗಬೇಕು: "ಪ್ಯಾರಾ ಕ್ರೀಡೆಯ ಬಗ್ಗೆ ದೇಶದಲ್ಲಿ ಆಸಕ್ತಿ ಹೆಚ್ಚುತ್ತಿದೆ. ನಮ್ಮ ಕ್ರೀಡಾಪಟುಗಳ ಪ್ರದರ್ಶನ ಗುಣಮಟ್ಟವೂ ದೊಡ್ಡ ಮಟ್ಟದಲ್ಲಿ ಸುಧಾರಿಸಿದೆ ಎನ್ನುವುದಕ್ಕೆ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಗೆದ್ದ 19 ಪದಕಗಳೇ ಸಾಕ್ಷಿ. ಪ್ಯಾರಾ ಕ್ರೀಡೆಗಳ ಬಗ್ಗೆ ನಮ್ಮ ಜನರಲ್ಲಿ ಅರಿವು ಕಡಿಮೆ. ವ್ಹೀಲ್‌ಚೇರ್‌ನಲ್ಲಿ ಕೂತು ಆಡುವ ಎಷ್ಟೋ ಕ್ರೀಡೆಗಳಿವೆ. ಬೋಸಿಯಾ, ಲಾನ್ ಬಾಲ್, ಕ್ಲಬ್ ಥ್ರೋ ಹೀಗೆ ಅನೇಕ ಕ್ರೀಡೆಗಳ ಹೆಸರನ್ನೇ ಎಷ್ಟೋ ಜನ ಕೇಳಿಲ್ಲ. ಅಥ್ಲೆಟಿಕ್ಸ್, ವಾಲಿಬಾಲ್, ಹಾಕಿ, ಫುಟ್ಬಾಲ್ ಸೇರಿದಂತೆ ಅಷ್ಟುಜನಪ್ರಿಯವಲ್ಲದ ಕ್ರೀಡೆಗಳಲ್ಲೂ ನಾವು ಪದಕ ಗೆಲ್ಲುವಂತಾಗಬೇಕು ಎನ್ನುವುದು ನಮ್ಮ ಉದ್ದೇಶ" ಎಚ್.ಎನ್.ಗಿರೀಶ ಹೇಳಿದ್ದಾರೆ
ಗ್ರಾಮೀಣ ಪ್ರತಿಭೆ ಹುಡುಕುತ್ತೇವೆ: "ನಮ್ಮ ದೇಶ, ರಾಜ್ಯದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ ಅವಕಾಶ, ಮಾಹಿತಿಯ ಕೊರತೆ ಇದೆ. ಗ್ರಾಮೀಣ ಭಾಗಗಳಲ್ಲಿರುವ ಪ್ರತಿಭೆಗಳನ್ನು ಹುಡುಕಿ ಅವರಲ್ಲಿರುವ ಕ್ರೀಡಾಪಟುಗಳನ್ನು ಎಚ್ಚರಗೊಳಿಸಿ, ತರಬೇತಿ ನೀಡಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಗೆ ಸಿದ್ಧಗೊಳಿಸುವುದು ನಮ್ಮ ಅಕಾಡೆಮಿಯ ಮೂಲ ಉದ್ದೇಶ. ಪ್ಯಾರಾ ಕ್ರೀಡಾಪಟುಗಳಿಗಾಗಿ ದೇಶದಲ್ಲೇ ಮೊದಲ ಅಕಾಡೆಮಿ ಆರಂಭಿಸಿದ್ದೇವೆ ಎನ್ನುವ ಬಗ್ಗೆ ಬಹಳ ಖುಷಿ ಇದೆ. ಅಕಾಡೆಮಿಗೆ ಸರ್ಕಾರ, ಪ್ರಾಯೋಜಕರ ಬೆಂಬಲ ಅಗತ್ಯವಿದೆ" ಆನಂದ್ ಬೋರೇಗೌಡ ಹೇಳಿದ್ದಾರೆ