Asianet Suvarna News Asianet Suvarna News

ಒಲಿಂಪಿಕ್ಸ್‌ಗೆ ಕನ್ನಡಿಗರ ಕಳಿಸಲು ಬೊಮ್ಮಾಯಿ ಸ್ಕೀಂ

  • ಮುಂದಿನ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ರಾಜ್ಯದಿಂದ ಕನ್ನಡ ಕ್ರೀಡಾಪಟುಗಳು ಸಜ್ಜುಗೊಳಿಸಲು ಸ್ಕೀಂ
  • ‘ಒಲಿಂಪಿಕ್ಸ್‌ಗೆ ಕನ್ನಡಿಗರು ಯಾಕಾಗಬಾರದು?’ ಘೋಷವಾಕ್ಯದಲ್ಲಿ ಕಾರ್ಯಕ್ರಮ
  • ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 
cm Basavaraja bommai Scheme For Sent kannadigas to Olympic snr
Author
Bengaluru, First Published Aug 30, 2021, 7:48 AM IST

ಬೆಂಗಳೂರು (ಆ.30):  ಮುಂದಿನ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ರಾಜ್ಯದಿಂದ ಕನ್ನಡ ಕ್ರೀಡಾಪಟುಗಳು ಸಜ್ಜುಗೊಳಿಸಲು ‘ಒಲಿಂಪಿಕ್ಸ್‌ಗೆ ಕನ್ನಡಿಗರು ಯಾಕಾಗಬಾರದು?’ ಘೋಷವಾಕ್ಯದಲ್ಲಿ ಕಾರ್ಯಕ್ರಮವನ್ನು ರೂಪಿಸಿದ್ದು, ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆ ಭಾನುವಾರ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಮೇಜರ್‌ ಧ್ಯಾನ್‌ಚಂದ್‌ ದಿನ, ರಾಷ್ಟ್ರೀಯ ಕ್ರೀಡಾ ದಿನಾಚರಣೆ ಮತ್ತು ಅಂತಾರಾಷ್ಟ್ರೀಯ ಕ್ರೀಡಾಪಟುಗಳ ಸನ್ಮಾನ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳನ್ನು ಅಭಿನಂದಿಸಿ ಮಾತನಾಡಿದರು.

ಪ್ಯಾರಾ ಒಲಿಂಪಿಕ್ಸ್; ಬೆಳ್ಳಿ ಗೆದ್ದ ಭವಿನಾ ಪಟೇಲ್‌ಗೆ 3 ಕೋಟಿ ರೂ ಬಹುಮಾನ ಘೋಷಣೆ!

ಮುಂದಿನ ಒಲಿಂಪಿಕ್ಸ್‌ನಲ್ಲಿ ಕರ್ನಾಟಕದಿಂದ ಕನ್ನಡ ಕ್ರೀಡಾಪಟುಗಳು ಸ್ಪರ್ಧಿಸಬೇಕು, ಇದಕ್ಕಾಗಿ ಪ್ರತ್ಯೇಕ ಸಮಿತಿ ರಚಿಸಿದ್ದೇನೆ. ‘ಒಲಿಂಪಿಕ್ಸ್‌ ಫಾರ್‌ ಕನ್ನಡಿಗ.. ವೈ ನಾಟ್‌?’ ಎಂಬ ಘೋಷ ವಾಕ್ಯದೊಂದಿಗೆ 75 ಕ್ರೀಡಾ ಪಟುಗಳನ್ನು ಗುರುತಿಸಿ ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ತರಬೇತಿ ನೀಡಲಾಗುತ್ತದೆ. ಮುಂದಿನ ಒಲಿಂಪಿಕ್ಸ್‌ನಲ್ಲಿ ನಮ್ಮ ರಾಜ್ಯದವರೇ ಹೆಚ್ಚಾಗಿ ಸ್ಪರ್ಧಿಸಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು.

ಈ ಹಿಂದೆ ಗೃಹ ಸಚಿವನಾಗಿದ್ದ ಸಂದರ್ಭದಲ್ಲಿ ಪೊಲೀಸ್‌ ನೇಮಕಾತಿ ವೇಳೆ ಶೇ.2ರಷ್ಟುಹುದ್ದೆಗಳನ್ನು ಕ್ರೀಡಾಪಟುಗಳ ನೇರ ನೇಮಕಾತಿ ಮೂಲಕ ತುಂಬಲು ಅವಕಾಶ ಕಲ್ಪಿಸಿದ್ದೇನೆ. ಮುಂದಿನ ದಿನಗಳಲ್ಲಿ ಇತರೆ ಇಲಾಖೆಗಳಿಗೂ ಇದನ್ನು ವಿಸ್ತರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಉಳಿದಂತೆ ಮುಂಬರುವ ಬಜೆಟ್‌ನಲ್ಲಿ ಕ್ರೀಡೆಗೆ ಹೆಚ್ಚಿನ ಬಜೆಟ್‌ ಒದಗಿಸಲಾಗುವುದು ಎಂದು ಅವರು ಇದೇ ವೇಳೆ ಭರವಸೆ ನೀಡಿದರು.

ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆ ಅಧ್ಯಕ್ಷ ಡಾ.ಕೆ.ಗೋವಿಂದರಾಜ್‌ ಮಾತನಾಡಿ, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕ್ರೀಡಾ ಸಮುಚ್ಚಯ ನಿರ್ಮಾಣ ಮಾಡಿ ಅಂತಾರಾಷ್ಟ್ರೀಯ ದರ್ಜೆಯ ತರಬೇತಿ ನೀಡುವ ಮೂಲಕ ಗ್ರಾಮೀಣ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಸರ್ಕಾರ ಮುಂದಾಗಬೇಕು. ವಸತಿ ಸೌಲಭ್ಯದೊಂದಿಗೆ ಮತ್ತಷ್ಟುಉತ್ತಮ ಗುಣಮಟ್ಟದ ಊಟ ನೀಡಬೇಕು. ಜೊತೆಗೆ, ಪ್ರಯಾಣ ಭತ್ಯೆ ಹೆಚ್ಚಳ ಮಾಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ಸರ್ಕಾರದ ಎಲ್ಲ ಇಲಾಖೆ ಮತ್ತು ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಕನಿಷ್ಠ ಶೇ.2 ನೇರ ನೇಮಕಾತಿಗೆ ಅವಕಾಶ ನೀಡಬೇಕು. ಶಾಲೆಗಳಲ್ಲಿ ಒಂದು ಗಂಟೆ ಸಮಯ ಮಕ್ಕಳು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸರ್ಕಾರದಿಂದ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.

ರಾಜ್ಯಪಾಲರಿಂದ 1 ಲಕ್ಷ ರು. ಪ್ರೋತ್ಸಾಹ ಧನ

ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ಕೊರತೆ ಇಲ್ಲ. ಆದರೆ, ತರಬೇತಿಯ ಅಗತ್ಯವಿದೆ. ಇಂದು ಸನ್ಮಾನಿಸಿರುವ ಪ್ರತಿ ಕ್ರೀಡಾಳುಗಳಿಗೆ ಪ್ರತ್ಯೇಕವಾಗಿ ಒಂದು ಲಕ್ಷ ರು. ಗಳ ಪ್ರೋತ್ಸಾಹ ಧನ ನೀಡುವುದಾಗಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಹೇಳಿದರು.

ಕ್ರೀಡೆ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ನೀಡಲಿದೆ. ಸದ್ಯ ನಡೆಯುತ್ತಿರುವ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಅಂಗವಿಕಲರು ಸಾಮಾನ್ಯ ಕ್ರೀಡಾಪಟುಗಳಂತೆ ಸರಿಸಮನಾಗಿ ಪ್ರದರ್ಶನ ನೀಡುತ್ತಿದ್ದಾರೆ. ರಾಜ್ಯದ ಕ್ರೀಡಾಪಟುಗಳಿಗೆ ರಾಜಭವನದಲ್ಲಿ ಕಾರ್ಯಕ್ರಮ ಮಾಡಿ ಗೌರವಿಸಲಾಗುವುದು ಎಂದರು.

Follow Us:
Download App:
  • android
  • ios