ಗುರುವಾರ ಮಧ್ಯರಾತ್ರಿ ನಡೆದ ಪುರುಷರ ಸಿಂಗಲ್ಸ್‌ 2ನೇ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ 20ರ ಆಲ್ಕರಜ್, ದ.ಆಫ್ರಿಕಾದ ಲಾರ್ಡ್‌ ಹ್ಯಾರಿಸ್ ವಿರುದ್ಧ 6-3, 6-1, 7-6(7/4) ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರೆ, ರಷ್ಯಾದ ಮೆಡ್ವೆಡೆವ್‌ ಅವರು ಆಸ್ಟ್ರೇಲಿಯಾದ ಕ್ರಿಸ್ಟೋಫರ್‌ ವಿರುದ್ಧ ಗೆದ್ದು ಮುಂದಿನ ಸುತ್ತಿಗೇರಿದರು.

ನ್ಯೂಯಾರ್ಕ್‌(ಸೆ.02): ವಿಶ್ವ ನಂ.1 ಟೆನಿಸಿಗ, ಹಾಲಿ ಚಾಂಪಿಯನ್‌ ಕಾರ್ಲೊಸ್‌ ಆಲ್ಕರಜ್‌, 3ನೇ ಶ್ರೇಯಾಂಕಿತ ಡ್ಯಾನಿಲ್‌ ಮೆಡ್ವೆಡೆವ್‌ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ 3ನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಗುರುವಾರ ಮಧ್ಯರಾತ್ರಿ ನಡೆದ ಪುರುಷರ ಸಿಂಗಲ್ಸ್‌ 2ನೇ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ 20ರ ಆಲ್ಕರಜ್, ದ.ಆಫ್ರಿಕಾದ ಲಾರ್ಡ್‌ ಹ್ಯಾರಿಸ್ ವಿರುದ್ಧ 6-3, 6-1, 7-6(7/4) ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರೆ, ರಷ್ಯಾದ ಮೆಡ್ವೆಡೆವ್‌ ಅವರು ಆಸ್ಟ್ರೇಲಿಯಾದ ಕ್ರಿಸ್ಟೋಫರ್‌ ವಿರುದ್ಧ ಗೆದ್ದು ಮುಂದಿನ ಸುತ್ತಿಗೇರಿದರು. ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌, ಇಟಲಿಯ ಸಿನ್ನರ್ ಕೂಡಾ ಜಯಗಳಿಸಿದರು. ಆದರೆ 2012ರ ಚಾಂಪಿಯನ್‌, ಬ್ರಿಟನ್‌ನ ಆ್ಯಂಡಿ ಮರ್ರೆ, ಬಲ್ಗೇರಿಯಾದ ಡಿಮಿಟ್ರೋವ್‌ ವಿರುದ್ಧ ಸೋತು ಹೊರಬಿದ್ದರು.

Scroll to load tweet…

'ನೀವು ನಮ್ಮ ದೇಶದ ಹೆಮ್ಮೆ': ಚೆಸ್ ವೀರ ಪ್ರಜ್ಞಾನಂದನನ್ನು ಆತ್ಮೀಯವಾಗಿ ಸ್ವಾಗತಿಸಿದ ಇಂಡಿಗೋ ಸಿಬ್ಬಂದಿ..!

ಜಬುರ್‌ಗೆ ಜಯ: ಯುಎಸ್‌ ಓಪನ್‌ ಸೇರಿದಂತೆ ಕಳೆದೊಂದು ವರ್ಷದಲ್ಲಿ 3 ಸಲ ಗ್ರ್ಯಾನ್‌ಸ್ಲಾಂ ಫೈನಲ್‌ನಲ್ಲಿ ಸೋತಿರುವ ಟ್ಯುನೀಶಿಯಾದ ಒನ್ಸ್‌ ಜಬುರ್ ಮಹಿಳಾ ಸಿಂಗಲ್ಸ್‌ 3ನೇ ಸುತ್ತಿಗೇರಿದರು. ಅವರು ಚೆಕ್‌ ಗಣರಾಜ್ಯದ ಲಿಂಡಾ ನೊಸ್ಕೋವಾ ವಿರುದ್ಧ 7-6(9/4), 4-6, 6-3ರಲ್ಲಿ ಗೆದ್ದರು. 2ನೇ ಶ್ರೇಯಾಂಕಿತೆ ಸಬಲೆಂಕಾ, 3ನೇ ಶ್ರೇಯಾಂಕಿತೆ, ಅಮೆರಿಕದ ಜೆಸ್ಸಿಕಾ ಪೆಗುಲಾ, 4ನೇ ಶ್ರೇಯಾಂಕಿತೆ ಎಲೆನಾ ರಬೈಕೆನಾ ಕೂಡಾ 3ನೇ ಸುತ್ತು ತಲುಪಿದರು.

ಮಿಶ್ರ ಡಬಲ್ಸ್‌ 2ನೇ ಸುತ್ತಿಗೆ ಬೋಪಣ್ಣ

ಭಾರತದ ಹಿರಿಯ ಟೆನಿಸಿಗ, ಕರ್ನಾಟಕದ ರೋಹನ್‌ ಬೋಪಣ್ಣ ಪುರುಷರ ಡಬಲ್ಸ್‌ ಬಳಿಕ ಮಿಶ್ರ ಡಬಲ್ಸ್‌ನಲ್ಲೂ 2ನೇ ಸುತ್ತಿಗೇರಿದ್ದಾರೆ. ಇಂಡೋನೇಷ್ಯಾದ ಆಲ್ಡಿಲಾ ಸುಟ್ಜಿಯಾಡಿ ಜೊತೆಗೂಡಿ ಆಡುತ್ತಿರುವ 43 ವರ್ಷದ ಬೋಪಣ್ಣ, ಶುಕ್ರವಾರ ಮೊದಲ ಸುತ್ತಿನಲ್ಲಿ ಜರ್ಮನಿಯ ಆ್ಯಂಡ್ರಿಯಾಸ್‌ ಮೀಸ್‌-ರಷ್ಯಾದ ವೆರಾ ಜ್ವೊನರೆವಾ ವಿರುದ್ಧ 7-5, 6-2 ಸೆಟ್‌ಗಳಲ್ಲಿ ಜಯಗಳಿಸಿದರು. ಇದೇ ವೇಳೆ ಪುರುಷರ ಡಬಲ್ಸ್‌ನಲ್ಲಿ ಬ್ರೆಜಿಲ್‌ನ ಡೆಮೋಲಿನರ್‌ ಜೊತೆಗೂಡಿ ಕಣಕ್ಕಿಳಿದಿದ್ದ ಯೂಕಿ ಬ್ಹಾಂಬ್ರಿ ಮೊದಲ ಸುತ್ತಲೇ ಸೋಲನುಭವಿಸಿದರು.

ಡೈಮಂಡ್ ಲೀಗ್: ನೀರಜ್‌ ಚೋಪ್ರಾಗೆ 2ನೇ ಸ್ಥಾನ

ಜೂರಿಚ್‌(ಸ್ವಿಜರ್‌ಲೆಂಡ್‌): ಕೆಲ ದಿನಗಳ ಹಿಂದಷ್ಟೇ ವಿಶ್ವ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ಭಾರತದ ತಾರಾ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ, ಜೂರಿಚ್‌ ಡೈಮಂಡ್‌ ಲೀಗಲ್ಲಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಈ ವರ್ಷ ಎಲ್ಲಾ ಸ್ಪರ್ಧೆಗಳಲ್ಲೂ ಗೆದ್ದಿದ್ದ 25ರ ನೀರಜ್‌, ಇದೇ ಮೊದಲ ಬಾರಿಗೆ ಅಗ್ರಸ್ಥಾನ ಪಡೆಯಲು ವಿಫಲರಾದರು.

ಗುರುವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ನೀರಜ್‌ ತಮ್ಮ ಕೊನೆ ಪ್ರಯತ್ನದಲ್ಲಿ 85.71 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಅಮೆರಿಕದ ಯುಜೀನ್‌ನಲ್ಲಿ ಸೆ.16-17ರಂದು ನಡೆಯಲಿರುವ ಡೈಮಂಡ್‌ ಲೀಗ್‌ ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡರು. ಕಳೆದ ವರ್ಷ ಡೈಮಂಡ್ ಲೀಗ್‌ ಫೈನಲ್ಸ್‌ನಲ್ಲಿ ಚಾಂಪಿಯನ್‌ ಆಗಿದ್ದ ನೀರಜ್‌, ಈ ಬಾರಿ ದೋಹಾ ಹಾಗೂ ಲುಸಾನ್‌ ಡೈಮಂಡ್‌ ಲೀಗ್‌ ಕೂಟಗಳಲ್ಲಿ ಅಗ್ರ ಸ್ಥಾನ ಪಡೆದಿದ್ದರು. ಅಜೇಯ ದಾಖಲೆಯನ್ನು ಮುಂದುವರಿಸುವ ಅವಕಾಶ ಕೇವಲ 15 ಸೆಂ.ಮೀ. ಅಂತರದಲ್ಲಿ ಕೈತಪ್ಪಿತು.

US Open 2023: ಜೋಕೋ, ಇಗಾ 3ನೇ ಸುತ್ತಿಗೆ ಲಗ್ಗೆ

ಒಟ್ಟು 6 ಯತ್ನಗಳಲ್ಲಿ ನೀರಜ್‌ 3 ಬಾರಿ ಫೌಲ್‌ ಮಾಡಿದರು. ಉಳಿದ 3 ಪ್ರಯತ್ನಗಳಲ್ಲಿ ಕ್ರಮವಾಗಿ 80.79 ಮೀ. 85.22 ಮೀ. ಹಾಗೂ 85.71 ಮೀ. ದೂರ ಎಸೆದರು. ಚೆಕ್ ಗಣರಾಜ್ಯದ ಜಾಕುಬ್‌ ವಡ್ಲೆಚ್ 85.86 ಮೀ. ದೂರ ಎಸೆದು ಅಗ್ರಸ್ಥಾನ ಪಡೆದರೆ, ಜರ್ಮನಿಯ ಜೂಲಿಯನ್ ವೆಬರ್(85.04 ಮೀ.) 3ನೇ ಸ್ಥಾನ ಗಳಿಸಿದರು.