Asianet Suvarna News Asianet Suvarna News

US Open 2023: ಜೋಕೋ, ಇಗಾ 3ನೇ ಸುತ್ತಿಗೆ ಲಗ್ಗೆ

ವಿಶ್ವ ನಂ.1, ಪೋಲೆಂಡ್‌ನ ಸ್ವಿಯಾಟೆಕ್‌ ಆಸ್ಟ್ರೇಲಿಯಾದ ಡೇರಿಯಾ ಸೆವಿಲ್ಲೆ ವಿರುದ್ಧ 6-3, 6-4 ಅಂತರದಲ್ಲಿ ಗೆದ್ದರು. 6ನೇ ಶ್ರೇಯಾಂಕಿತೆ, ಅಮೆರಿಕದ ಕೊಕೊ ಗಾಫ್‌, ಚೆಕ್‌ ಗಣರಾಜ್ಯದ ಕ್ಯಾರೊಲಿನಾ ಮುಕೋವಾ ಕೂಡಾ 3ನೇ ಸುತ್ತು ತಲುಪಿದರು.

US Open 2023 Novak Djokovic Iga Swiatek enters  3rd round kvn
Author
First Published Sep 1, 2023, 9:43 AM IST

ನ್ಯೂಯಾರ್ಕ್‌(ಸೆ.01): 23 ಗ್ರ್ಯಾನ್‌ಸ್ಲಾಂಗಳ ಒಡೆಯ ನೋವಾಕ್‌ ಜೋಕೋವಿಚ್‌, ಮಹಿಳಾ ಸಿಂಗಲ್ಸ್‌ನ ಹಾಲಿ ಚಾಂಪಿಯನ್‌ ಇಗಾ ಸ್ವಿಯಾಟೆಕ್‌ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ 3ನೇ ಸುತ್ತು ಪ್ರವೇಶಿಸಿದ್ದಾರೆ.

ಬುಧವಾರ ರಾತ್ರಿ ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಸರ್ಬಿಯಾದ ಜೋಕೋ, ಸ್ಪೇನ್‌ನ ಬೆರ್ನಾಬೆ ಝಪಾಟ ವಿರುದ್ಧ 6-4, 6-1 6-1 ಸೆಟ್‌ಗಳಲ್ಲಿ ಸುಲಭ ಜಯ ಸಾಧಿಸಿದರು. ಆದರೆ 7ನೇ ಶ್ರೇಯಾಂಕಿತ ಸ್ಟೆಫಾನೋಸ್‌ ಸಿಟ್ಸಿಪಾಸ್‌, 5ನೇ ಶ್ರೇಯಾಂಕಿತ ಕ್ಯಾಸ್ಪರ್‌ ರುಡ್‌ ಸೋತು ಹೊರಬಿದ್ದರು. ಗ್ರೀಕ್‌ನ ಸ್ಟೆಫಾನೋಸ್‌ಗೆ ಸ್ವಿಜರ್‌ಲೆಂಡ್‌ನ ಡೊಮಿನಿಕ್‌ ಸ್ಟೀಫನ್‌, ನಾರ್ವೆಯ ರುಡ್‌ಗೆ ಚೀನಾದ ಝಾಂಗ್‌ ಝಿಝೆನ್‌ ವಿರುದ್ಧ ಆಘಾತಕಾರಿ ಸೋಲು ಎದುರಾಯಿತು.

ಇದೇ ವೇಳೆ ವಿಶ್ವ ನಂ.1, ಪೋಲೆಂಡ್‌ನ ಸ್ವಿಯಾಟೆಕ್‌ ಆಸ್ಟ್ರೇಲಿಯಾದ ಡೇರಿಯಾ ಸೆವಿಲ್ಲೆ ವಿರುದ್ಧ 6-3, 6-4 ಅಂತರದಲ್ಲಿ ಗೆದ್ದರು. 6ನೇ ಶ್ರೇಯಾಂಕಿತೆ, ಅಮೆರಿಕದ ಕೊಕೊ ಗಾಫ್‌, ಚೆಕ್‌ ಗಣರಾಜ್ಯದ ಕ್ಯಾರೊಲಿನಾ ಮುಕೋವಾ ಕೂಡಾ 3ನೇ ಸುತ್ತು ತಲುಪಿದರು.

ಅಂಬಾನಿ ಸಂಸ್ಥೆಗೆ ಭಾರತದ ಪಂದ್ಯಗಳ ಪ್ರಸಾರ ಹಕ್ಕು..! ಮುಂದುವರೆದ ಜಿಯೋ ಅಧಿಪತ್ಯ!

ಬೋಪಣ್ಣ ಶುಭಾರಂಭ

ಭಾರತದ ಹಿರಿಯ ಟೆನಿಸಿಗ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಯುಎಸ್‌ ಓಪನ್ ಪುರುಷರ ಡಬಲ್ಸ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಬುಧವಾರ ರಾತ್ರಿ 6ನೇ ಶ್ರೇಯಾಂಕಿತ ಇಂಡೋ-ಆಸೀಸ್‌ ಜೋಡಿ ಆಸ್ಟ್ರೇಲಿಯಾದ ಕ್ರಿಸ್ಟೋಫರ್‌-ಅಲೆಕ್ಸಾಂಡರ್‌ ವುಕಿಚ್‌ ವಿರುದ್ಧ 6-4, 6-2 ಅಂತರದಲ್ಲಿ ಗೆಲುವು ಸಾಧಿಸಿತು.

ಜಪಾನನ್ನು 35-1ರಿಂದ ಮಣಿಸಿ ಭಾರತ ಸೆಮಿಗೆ

ಸಲಾಲ(ಒಮಾನ್‌): ಪುರುಷರ ಹಾಕಿ ಫೈವ್ಸ್‌ ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ಸೆಮಿಫೈನಲ್‌ ಪ್ರವೇಶಿಸಿದೆ. ಗುರುವಾರದ ಎಲೈಟ್‌ ಗುಂಪಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭಾರತ, ಜಪಾನ್‌ ವಿರುದ್ಧ ಬರೋಬ್ಬರಿ 35-1 ಗೋಲುಗಳಿಂದ ಜಯಗಳಿಸಿ, 12 ಅಂಕದೊಂದಿಗೆ 2ನೇ ಸ್ಥಾನಿಯಾಗಿ ಸೆಮೀಸ್‌ಗೇರಿತು. ಮಣೀಂದರ್‌ ಸಿಂಗ್ 10, ಮೊಹಮದ್‌ ರಾಹೀಲ್‌ 7, ಗುರ್ಜೋತ್‌, ಪವನ್‌ ತಲಾ 5 ಗೋಲು ಬಾರಿಸಿದರು. ಗುರುವಾರದ ಮೊದಲ ಪಂದ್ಯದಲ್ಲಿ ಭಾರತ, ಮಲೇಷ್ಯಾ ವಿರುದ್ಧ 7-5ರಿಂದ ಗೆದ್ದಿತ್ತು. 13 ಅಂಕ ಗಳಿಸಿದ ಪಾಕ್‌ ಅಗ್ರಸ್ಥಾನಿಯಾಗಿ ಸೆಮೀಸ್‌ಗೇರಿತು. ಶನಿವಾರ ಸೆಮಿಫೈನಲ್‌ ನಡೆಯಲಿದ್ದು, ಎದುರಾಳಿ ಯಾರೆಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ.

ದೇಶಕ್ಕೆ ಹಿರಿಮೆ ತಂದ ಪ್ರಜ್ಞಾನಂದನ ಕುಟುಂಬವನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ!

ಏಷ್ಯಾಡ್‌: ಭಾರತ ಹಾಕಿ ತಂಡಗಳ ಘೋಷಣೆ

ಬೆಂಗಳೂರು: ಮುಂಬರುವ ಬಹುನಿರೀಕ್ಷಿತ ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತ ಪುರುಷ ಹಾಗೂ ಮಹಿಳಾ ಹಾಕಿ ತಂಡಗಳಿಗೆ ಗುರುವಾರ ನಗರದಲ್ಲಿ ವಿಶೇಷ, ಅದ್ಧೂರಿ ಬೀಳ್ಕೊಡುಗೆ ನೀಡಲಾಯಿತು.

ನಗರದ ಖಾಸಗಿ ಭವನದಲ್ಲಿ ನಡೆದ ಸಮಾರಂಭದಲ್ಲಿ ತಂಡ ಘೋಷಣೆ, ಜೆರ್ಸಿ ಹಸ್ತಾಂತರ ಕಾರ್ಯಕ್ರಮವೂ ನಡೆಯಿತು. ಎರಡೂ ತಂಡಗಳ ಆಟಗಾರರ ಜೊತೆ ಅವರ ಕುಟುಂಬಸ್ಥರನ್ನೂ ವೇದಿಕೆಗೆ ಕರೆಸಿ ಸನ್ಮಾನಿಸಿದ್ದು ವಿಶೇಷವೆನಿಸಿತು. ಟೂರ್ನಿಯಲ್ಲಿ ಧರಿಸುವ ಜೆರ್ಸಿಯನ್ನು ಆಟಗಾರರಿಗೆ ಸ್ವತಃ ಅವರ ಕುಟುಂಬಸ್ಥರೇ ಹಸ್ತಾಂತರಿಸಿ ಶುಭ ಹಾರೈಸಿದರು. ಕರ್ನಾಟಕದ ಕಲೆ ಯಕ್ಷಗಾನ ಸೇರಿ ವಿವಿಧ ರಾಜ್ಯಗಳ ಸಾಂಪ್ರದಾಯಿಕ ನೃತ್ಯಗಳು ಕಣ್ಮನ ಸೆಳೆದವು.

ಕಾರ್ಯಕ್ರಮದಲ್ಲಿ ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕೆ, ಕಾರ್ಯದರ್ಶಿ ಭೋಲನಾಥ್‌ ಸಿಂಗ್‌ ಸೇರಿ ಇತರ ಗಣ್ಯರು ಉಪಸ್ಥಿತರಿದ್ದರು. ಭಾರತದ ಆಟಗಾರರು ಸೆ.19ರಂದು ಚೀನಾದ ಹ್ಯಾಂಗ್ಝೂಗೆ ತೆರಳಲಿದ್ದು, ಅಲ್ಲಿವರೆಗೆ ನಗರದ ಸಾಯ್‌ ಕೇಂದ್ರದಲ್ಲಿ ಅಭ್ಯಾಸ ನಡೆಸಲಿದ್ದಾರೆ.
 

Follow Us:
Download App:
  • android
  • ios