ಪಾಕಿಸ್ತಾನದ ಆಯ್ಕೆಗಾರ ಆಕಿಬ್ ಜಾವೇದ್, ಜಸ್ಪ್ರೀತ್ ಬುಮ್ರಾರ ವಿಶಿಷ್ಟ ಬೌಲಿಂಗ್ ಶೈಲಿಯನ್ನು ಸ್ಪಿನ್ನರ್ ಉಸ್ಮಾನ್ ತಾರಿಖ್‌ಗೆ ಹೋಲಿಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ 14 ವಿಕೆಟ್ ಪಡೆದು ಮಿಂಚಿದ ಬುಮ್ರಾ, ಫೈನಲ್‌ನಲ್ಲಿ 4 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕರಾಚಿ: ಭಾರತದ ವೇಗದ ಬೌಲಿಂಗ್ ದಿಗ್ಗಜ ಜಸ್ಪ್ರೀತ್ ಬುಮ್ರಾರನ್ನು ಪಾಕಿಸ್ತಾನದ ಆಯ್ಕೆಗಾರ ಆಕಿಬ್ ಜಾವೇದ್, 'ವೇಗದ ಬೌಲರ್‌ಗಳಲ್ಲಿ ಉಸ್ಮಾನ್ ತಾರಿಖ್ ಇದ್ದಂತೆ' ಎಂದು ವಿಚಿತ್ರವಾಗಿ ಹೋಲಿಸಿದ್ದಾರೆ. ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ, ಬುಮ್ರಾರ ಬೌಲಿಂಗ್ ಶೈಲಿಯನ್ನು ಪಾಕಿಸ್ತಾನದ ಸ್ಪಿನ್ನರ್ ಉಸ್ಮಾನ್ ತಾರಿಖ್ ಅವರ ವಿಭಿನ್ನ ಆಕ್ಷನ್‌ಗೆ ಆಕಿಬ್ ಹೋಲಿಕೆ ಮಾಡಿದ್ದಾರೆ. ಈ ಟೂರ್ನಿಯಲ್ಲಿ ವರುಣ್ ಚಕ್ರವರ್ತಿ ಜೊತೆ ಬುಮ್ರಾ ಕೂಡ 14 ವಿಕೆಟ್ ಪಡೆದು ಮಿಂಚಿದ್ದರು.
ಬುಮ್ರಾರ ಅಸಾಮಾನ್ಯ ಆಕ್ಷನ್, ವೇಗ ಮತ್ತು ಬ್ಯಾಟರ್‌ಗಳ ಲಯವನ್ನು ಕೆಡಿಸುವ ಸಾಮರ್ಥ್ಯವು ಆಧುನಿಕ ಕ್ರಿಕೆಟ್‌ನಲ್ಲಿ ಅವರನ್ನು ವಿಶೇಷವಾಗಿಸಿದೆ ಎಂದು ಆಕಿಬ್ ಜಾವೇದ್ ಅಭಿಪ್ರಾಯಪಟ್ಟಿದ್ದಾರೆ. ಬಾಲ್ ಎಸೆಯುವ ಸ್ವಲ್ಪ ಮುನ್ನ ಉಸ್ಮಾನ್ ತಾರಿಖ್ ತೆಗೆದುಕೊಳ್ಳುವ ಸಣ್ಣ ವಿರಾಮದಂತೆ, ಬುಮ್ರಾ ಶೈಲಿಯೂ ವಿಶಿಷ್ಟವಾಗಿದೆ ಎಂದು ಅವರು ಹೇಳಿದರು. "ಈ ವಿಶ್ವಕಪ್‌ನಲ್ಲಿ ಬುಮ್ರಾ ತರಹ ಬೇರೆ ಬೌಲರ್ ಇಲ್ಲ. ಅವರೊಬ್ಬ ಸಾಮಾನ್ಯ ಬೌಲರ್ ಅಲ್ಲ, ಅವರ ಆಕ್ಷನ್ ಕೂಡ ವಿಭಿನ್ನವಾಗಿದೆ. ಬ್ಯಾಟರ್‌ಗಳಿಗೆ ಬುಮ್ರಾ ವಿರುದ್ಧ ಎಂದಿಗೂ ಸರಿಯಾದ ಲಯವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ," ಎಂದು ಜಾವೇದ್ ಮಾಧ್ಯಮಗಳಿಗೆ ತಿಳಿಸಿದರು. ವಾಸಿಂ ಅಕ್ರಮ್, ವಕಾರ್ ಯೂನಿಸ್ ಅವರಂತಹ ದಿಗ್ಗಜರ ನೆರಳು ಕೂಡ ಇಂದಿನ ಬೌಲರ್‌ಗಳಲ್ಲಿ ಕಾಣುತ್ತಿಲ್ಲ, ಬುಮ್ರಾ ಮಾತ್ರ ಭಿನ್ನವಾಗಿ ನಿಲ್ಲುತ್ತಾರೆ ಎಂದು ಅವರು ಸೇರಿಸಿದರು.
ವಿಶ್ವಕಪ್‌ನಲ್ಲಿ ಬುಮ್ರಾರ ಮಾಂತ್ರಿಕ ಪ್ರದರ್ಶನ
ಟಿ20 ವಿಶ್ವಕಪ್‌ನುದ್ದಕ್ಕೂ ಭಾರತದ ಪ್ರಮುಖ ಅಸ್ತ್ರವಾಗಿದ್ದ ಬುಮ್ರಾ, ನಿರ್ಣಾಯಕ ಕ್ಷಣಗಳಲ್ಲಿ ವಿಕೆಟ್ ಪಡೆದು ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು. ಅಹಮದಾಬಾದ್‌ನಲ್ಲಿ ನಡೆದ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಕೇವಲ 15 ರನ್ ನೀಡಿ 4 ವಿಕೆಟ್ ಪಡೆದ ಅವರ ಪ್ರದರ್ಶನ, ಕ್ರಿಕೆಟ್ ಇತಿಹಾಸದಲ್ಲಿನ ಅತ್ಯುತ್ತಮ ಸ್ಪೆಲ್‌ಗಳಲ್ಲಿ ಒಂದಾಗಿದೆ. ಈ ಪಂದ್ಯವನ್ನು ಭಾರತ 96 ರನ್‌ಗಳ ಭರ್ಜರಿ ಅಂತರದಿಂದ ಗೆದ್ದುಕೊಂಡಿತು ಮತ್ತು ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಈ ವಿಶ್ವಕಪ್‌ನೊಂದಿಗೆ, ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಬುಮ್ರಾ ಪಾತ್ರರಾದರು. ಲಸಿತ್ ಮಾಲಿಂಗ (38) ಮತ್ತು ಆನ್ರಿಕ್ ನಾರ್ಕಿಯಾ (38) ಅವರನ್ನು ಹಿಂದಿಕ್ಕಿ ಬುಮ್ರಾ ಅಗ್ರಸ್ಥಾನಕ್ಕೇರಿದರು. ಟಿ20 ವಿಶ್ವಕಪ್ ಫೈನಲ್‌ನಲ್ಲಿ ವೇಗದ ಬೌಲರೊಬ್ಬರ ಅತ್ಯುತ್ತಮ ಪ್ರದರ್ಶನವನ್ನು ಬುಮ್ರಾ ಅಹಮದಾಬಾದ್‌ನಲ್ಲಿ ನೀಡಿದರು. ವಿಶೇಷವೆಂದರೆ, ಫೈನಲ್‌ನಲ್ಲಿ ಒಂದೇ ಒಂದು ಬೌಂಡರಿ ಬಿಟ್ಟುಕೊಡದೆ ಅವರು ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು.
ಇನ್ನು ಬಹುತೇಕ ಟಿ20 ಸರಣಿಗೆ ಬುಮ್ರಾ ಇಲ್ಲ!
ನವದೆಹಲಿ: ಈ ಬಾರಿ ಭಾರತದ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಇನ್ನು ಮುಂದೆ ಭಾರತ ದ್ವಿಪಕ್ಷೀಯ ಟಿ20 ಸರಣಿಗಳ ಬದಲು ಏಕದಿನ ಪಂದ್ಯಗಳಿಗೆ ಹೆಚ್ಚಿನ ಒತ್ತು ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. 2027ರ ಅಕ್ಟೋಬರ್-ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ.
ಇದಕ್ಕಾಗಿ ಭಾರತ ಮುಗಿದ ಬೆನ್ನಲ್ಲೇ ಸಿದ್ಧತೆ ಆರಂಭಿಸಲಿದೆ. ಇದರ ಭಾಗವಾಗಿ ಬುಮ್ರಾರನ್ನು ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಗೆ ಸೀಮಿತಗೊಳಿಸಿ, ಅಂ.ರಾ. ಟಿ20 ಪಂದ್ಯಗಳಿಂದ ವಿಶ್ರಾಂತಿ ಕೊಡಲು ತಂಡದ ಆಡಳಿತ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.


