ಬೆಂಗಳೂರು(ಮೇ.14):  ಐಪಿಎಲ್‌ 12ನೇ ಆವೃತ್ತಿಯ ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್‌ ನಡುವಿನ ಫೈನಲ್‌ ಪಂದ್ಯದ ಮೇಲೆ ಬೆಟ್ಟಿಂಗ್‌ ಕಟ್ಟಿಸಿದ್ದ ಆರೋಪಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಟ್ಯಾನರಿ ರಸ್ತೆಯ ಪಿಳ್ಳಣ್ಣ ಗಾರ್ಡನ್‌ ನಿವಾಸಿ ಚಾಂದ್‌ ಪಾಷಾ (25) ಬಂಧಿತ. ಬುಕ್ಕಿ ಸೈಯ್ಯದ್‌ ಇಲಿಯಾಜ್‌ ಎಂಬುವನು ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ. 

ಇದನ್ನೂ ಓದಿ: ರಾತ್ರೋರಾತ್ರಿ ಸೆಲೆಬ್ರಿಟಿಯಾಗಿದ್ದ RCB ಅಭಿಮಾನಿಗೆ ನೆಟ್ಟಿಗರ ಕಿರುಕುಳ!

ಆರೋಪಿಯಿಂದ ಸುಮಾರು 70.33 ಲಕ್ಷ ಜಪ್ತಿ ಮಾಡಲಾಗಿದೆ. ಆರೋಪಿ ಚಾಂದ್‌ ಪಾಷಾ ಕೋರಮಂಗಲದ 3ನೇ ಬ್ಲಾಕ್‌ನ ಮನೆಯಲ್ಲಿ ಕುಳಿತು ಮೊಬೈಲ್‌ ಮತ್ತು ಮೊಬೈಲ್‌ ಆ್ಯಪ್‌ಗಳ ಮೂಲಕ ಬೆಟ್ಟಿಂಗ್‌ ಕಟ್ಟಿಸುತ್ತಿದ್ದ. ಅಲ್ಲದೆ, ಸಾರ್ವಜನಿಕರಿಂದ ಕ್ರಿಕೆಟ್‌ ಬೆಟ್ಟಿಂಗ್‌ ಹಣವನ್ನು ಕಟ್ಟಿಸಿಕೊಂಡು ಹಲವರಿಗೆ ವಂಚನೆ ಮಾಡಿರುವ ಬಗ್ಗೆ ಸಿಸಿಬಿಗೆ ದೂರು ದಾಖಲಾಗಿತ್ತು. 

ಇದನ್ನೂ ಓದಿ: ಅಂಬಾನಿ ಹಣದಿಂದ ಮುಂಬೈ ಗೆದ್ದಿದೆ- ಬಾಲಿವುಡ್ ನಟನ ವಿವಾದಿತ ಟ್ವೀಟ್!

ಆರೋಪಿಗಳು ಯಾರಿಗೂ ಗೊತ್ತಾಗಬಾರದು ಎಂಬ ಕಾರಣಕ್ಕೆ ‘ಪ್ಲೇವಿನ್‌ 365’, ‘ಲೋಟಸ್‌’ ಎಂಬ ಆ್ಯಪ್‌ನ್ನು ಬಳಸಿ ಬೆಟ್ಟಿಂಗ್‌ ಕಟ್ಟುತ್ತಿದ್ದರು. ಆರೋಪಿಯ ಮೊಬೈಲ್‌ ಜಪ್ತಿ ಮಾಡಿ ಪರಿಶೀಲನೆ ನಡೆಸಿದಾಗ ಆ್ಯಪ್‌ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ಟ್ರೋಫಿ ಪಾರ್ಟಿ- ಯುವಿ,ರೋಹಿತ್ ಡ್ಯಾನ್ಸ್ ವೈರಲ್!

ಭಾನುವಾರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಸಣ್ಣಪುಟ್ಟಕೆಲಸ ಮಾಡುತ್ತಿದ್ದ. ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ ಅನ್ನೇ ದಂಧೆಯನ್ನಾಗಿಸಿದ್ದ. ಬೆಟ್ಟಿಂಗ್‌ ಕಟ್ಟಿಸಿಕೊಂಡು ಕಮಿಷನ್‌ ಆಧಾರದ ಮೇಲೆ ಹಣ ಪಡೆಯುತ್ತಿದ್ದ. ತಲೆ ಮರೆಸಿಕೊಂಡಿರುವ ಸೈಯ್ಯದ್‌ ಇಲಿಯಾಜ್‌ ಪ್ರಮುಖ ಆರೋಪಿಯಾಗಿದ್ದು, ಆತ ಸಿಕ್ಕರೆ ಇನ್ನಷ್ಟುಮಾಹಿತಿ ಹೊರ ಬರಲಿದೆ ಎಂದು ಪೊಲೀಸರು ಹೇಳಿದರು.