2026ರ ಏಷ್ಯನ್ ಗೇಮ್ಸ್‌ನಲ್ಲಿ ಮೈಸೂರಿನ ಪ್ರಣವಿ ಶರತ್ ಅರಸ್ ಗಾಲ್ಫ್‌ನಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇವರ ಅದ್ಭುತ ಪ್ರದರ್ಶನದಿಂದ ಭಾರತದ ಮಹಿಳಾ ಗಾಲ್ಫ್ ತಂಡವು ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದೆ.

ಏಷ್ಯನ್ ಕ್ರೀಡಾಕೂಟ 2026ರಲ್ಲಿ ಭಾರತದ ಕ್ರೀಡಾಪಟುಗಳು ಹೊಸ ಚರಿತ್ರೆ ಸೃಷ್ಟಿಸುವುದನ್ನು ಮುಂದುವರಿಸಿದ್ದಾರೆ. ಶನಿವಾರ ನಡೆದ ರೋಮಾಂಚಕ ಪಂದ್ಯಾವಳಿಯಲ್ಲಿ ಮೈಸೂರಿನ ಉದಯೋನ್ಮುಖ ಗಾಲ್ಫ್ ಆಟಗಾರ್ತಿ ಪ್ರಣವಿ ಶರತ್ ಅರಸ್, ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫ್ ಆಟಗಾರ್ತಿ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂತಿಮ ಸುತ್ತಿನಲ್ಲಿ ಅತ್ಯಂತ ಧೈರ್ಯ ಹಾಗೂ ತಾಳ್ಮೆಯ ಆಟ ಪ್ರದರ್ಶಿಸಿದ ಅವರು, ತಮ್ಮ ಹತ್ತಿರದ ಸ್ಪರ್ಧಿಗಳಿಗಿಂತ ಒಂದು ಸ್ಟ್ರೋಕ್ ಅಂತರದ ರೋಮಾಂಚಕ ಮುನ್ನಡೆ ಸಾಧಿಸಿ ಸ್ವರ್ಣ ಪದಕಕ್ಕೆ ಮುತ್ತಿಕ್ಕಿದರು. ಪ್ರಣವಿ ಅವರ ಈ ಅದ್ಭುತ ಪ್ರದರ್ಶನವು ಭಾರತಕ್ಕೆ ವೈಯಕ್ತಿಕ ಚಿನ್ನ ತಂದುಕೊಟ್ಟಿದ್ದಷ್ಟೇ ಅಲ್ಲದೆ, ಮಹಿಳಾ ತಂಡ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲಲು ಬಹುಮುಖ್ಯ ನೆರವಾಯಿತು. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಅಂತಿಮ ಸುತ್ತಿನ ರೋಮಾಂಚನ ಮತ್ತು ಕಂಬ್ಯಾಕ್!

ಅಂತಿಮ ಸುತ್ತಿನ ಪಂದ್ಯವು ತೀವ್ರ ಕುತೂಹಲದಿಂದ ಕೂಡಿತ್ತು. ಪಂದ್ಯದ ಮೂರನೇ ಹೋಲ್‌ನಲ್ಲಿ ಟ್ರಿಪಲ್ ಬೋಗಿ ಅನುಭವಿಸಿದ ಪ್ರಣವಿ, ತಮ್ಮ ಮೂರು-ಸ್ಟ್ರೋಕ್‌ಗಳ ಮುನ್ನಡೆಯನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿದರು. ಆದರೆ, ಸವಾಲುಗಳಿಗೆದೊಡ್ಡಿದ ಪ್ರಣವಿ ಅತ್ಯಂತ ವೇಗವಾಗಿ ಚೇತರಿಸಿಕೊಂಡರು. ತಕ್ಷಣವೇ ಮೂರು ಭರ್ಜರಿ ಬರ್ಡಿಗಳನ್ನು ಬಾರಿಸುವ ಮೂಲಕ ಪಂದ್ಯದಲ್ಲಿ ಮತ್ತೆ ಹಿಡಿತ ಸಾಧಿಸಿದರು. ಅಂತಿಮ ಸುತ್ತಿನಲ್ಲಿ 70 ಅಂಕ ಗಳಿಸಿದ ಅವರು, ನಾಲ್ಕು ದಿನಗಳ ಪಂದ್ಯಾವಳಿಯಲ್ಲಿ ಒಟ್ಟು 15-ಅಂಡರ್ 265 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಚಿನ್ನದ ಪದಕಕ್ಕೆ ಭಾಜನರಾದರು. 2002ರಲ್ಲಿ ಶಿವ ಕಪೂರ್ ಪುರುಷರ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ನಂತರ, ಏಷ್ಯನ್ ಗೇಮ್ಸ್ ಗಾಲ್ಫ್‌ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಚಿನ್ನದ ಪದಕ ಇದಾಗಿದೆ.

ಭಾರತದ ಮಹಿಳಾ ತಂಡಕ್ಕೆ ಐತಿಹಾಸಿಕ ಬೆಳ್ಳಿ ಪದಕ!

ಪ್ರಣವಿ ಅವರ ವೈಯಕ್ತಿಕ ಸಾಧನೆಯ ಜೊತೆಗೆ, ಭಾರತದ ಮಹಿಳಾ ಗಾಲ್ಫ್ ತಂಡವೂ ಬೆಳ್ಳಿ ಪದಕ ಮುಡಿಗೇರಿಸಿಕೊಂಡು ಇತಿಹಾಸ ಬರೆದಿದೆ. ಪ್ರಣವಿ ಉರ್ಸ್, ಅದಿತಿ ಅಶೋಕ್ ಮತ್ತು ದೀಕ್ಷಾ ದಾಗರ್ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡವು ಒಟ್ಟು 14-ಅಂಡರ್ 546 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಅಂತಿಮ ಸುತ್ತಿನಲ್ಲಿ ಅದಿತಿ ಅಶೋಕ್ 67 ಅಂಕ ಹಾಗೂ ದೀಕ್ಷಾ ದಾಗರ್ 77 ಅಂಕ ಗಳಿಸಿ ತಂಡದ ಸ್ಕೋರ್ ಹೆಚ್ಚಿಸಲು ಕೊಡುಗೆ ನೀಡಿದರು. ಈ ವಿಭಾಗದಲ್ಲಿ ಚೀನಾ ತಂಡವು 22-ಅಂಡರ್ 538 ಅಂಕಗಳೊಂದಿಗೆ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.

ಯಾರೀ ಪ್ರಣವಿ ಶರತ್ ಅರಸ್?

1998ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಮೈಸೂರು ಮೂಲದ ಪ್ರಣವಿ ಶರತ್‌ ಅರಸ್‌, ತಮ್ಮ 5 ನೇ ವಯಸ್ಸಿನಲ್ಲಿ ಗಾಲ್ಫ್‌ ಅಂಗಳಕ್ಕೆ ಕಾಲಿಟ್ಟಿರು. ಚಿಕ್ಕ ವಯಸ್ಸಿನಲ್ಲೇ ಅದ್ಭುತ ಪ್ರತಿಭೆ ತೋರಿದ ಪ್ರಣತಿ, ಭಾರತದ ಅತ್ಯಂತ ಭರವಸೆಯ ಆಟಗಾರ್ತಿಯಾಗಿ ಹೊರಹೊಮ್ಮಿದರು. 2015ರಲ್ಲಿ 'ಲೇಡೀಸ್ ಬ್ರಿಟಿಷ್ ಅಮೆಚೂರ್ ಸ್ಟ್ರೋಕ್ ಪ್ಲೇ ಚಾಂಪಿಯನ್‌‌ಶಿಪ್' ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಸಾಧನೆ ಮಾಡಿದ್ದ ಪ್ರಣವಿ, 2016ರಲ್ಲಿ ವೃತ್ತಿಪರ ಗಾಲ್ಫ್ ಆಟಗಾರ್ತಿಯಾಗಿ ಬಡ್ತಿ ಪಡೆದರು.

ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಸುವರ್ಣ ಓಟ!

ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಸರಣಿ ಯಶಸ್ಸು ಕಾಣುತ್ತಿದ್ದಾರೆ. ಪ್ರಣವಿ ಅವರ ಗಾಲ್ಫ್ ಚಿನ್ನದ ಜೊತೆಗೆ, ಮಹಿಳಾ ಹಾಕಿಯಲ್ಲಿ ಭಾರತ ತಂಡ ಚೀನಾವನ್ನು ಮಣಿಸಿ ಚಿನ್ನ ಗೆದ್ದು, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆದುಕೊಂಡಿದೆ. ಅಲ್ಲದೆ, ಕುಸ್ತಿ ಹಾಗೂ ಬಾಕ್ಸಿಂಗ್‌ನಲ್ಲಿ ಸುಜೀತ್, ಪರ್ವೀನ್, ಅಂಕುಶ್ ಮತ್ತು ಲೊವ್ಲಿನಾ ಬೊರ್ಗೊಹೈನ್ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ಸುವರ್ಣ ಅಧ್ಯಾಯ ಬರೆದಿದ್ದಾರೆ.