ಏಷ್ಯನ್ ಗೇಮ್ಸ್‌ನಲ್ಲಿ ಶನಿವಾರ ಭಾರತ ಪುರುಷರ ಹಾಕಿ ಮತ್ತು ಕ್ರಿಕೆಟ್ ತಂಡಗಳು ಫೈನಲ್ ಪಂದ್ಯಗಳನ್ನು ಆಡಲಿವೆ. ಹಾಕಿಯಲ್ಲಿ ಮಲೇಷ್ಯಾ ವಿರುದ್ಧ ಹಾಗೂ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ವಿರುದ್ಧ ಸೆಣಸಾಡಲಿದ್ದು, ಎರಡರಲ್ಲೂ ಚಿನ್ನದ ಪದಕ ಗೆಲ್ಲುವ ಗುರಿ ಹೊಂದಲಾಗಿದೆ.
ಏಷ್ಯಾಡ್‌ನಲ್ಲಿ ಶನಿವಾರ ಭಾರತ 2 ಪ್ರಮುಖ ಕ್ರೀಡೆಗಳ ಫೈನಲ್‌ನಲ್ಲಿ ಕಣಕ್ಕಿಳಿಯಲಿದ್ದು, ಎರಡರಲ್ಲೂ ಚಿನ್ನದ ಮೇಲೆ ಗುರಿ ಇಟ್ಟಿದೆ. ಕಳೆದ ಬಾರಿ ಚಾಂಪಿಯನ್ ಭಾರತ ಪುರುಷರ ಹಾಕಿ ತಂಡ ಈ ಬಾರಿ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಮಲೇಷ್ಯಾ ವಿರುದ್ಧ ಆಡಲಿದೆ.
ಏಷ್ಯಾಡ್‌ನಲ್ಲಿ ಭಾರತ 4 ಬಾರಿ ಚಾಂಪಿಯನ್ ಆಗಿದೆ. ಆದರೆ ಈವರೆಗೂ ಸತತ 2ನೇ ಬಾರಿ ಗೆಲ್ಲಲು ಸಾಧ್ಯವಾಗಿಲ್ಲ. ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ 4-3 ಅಂತರದಲ್ಲಿ ರೋಚಕವಾಗಿ ಗೆದ್ದಿರುವ ಭಾರತ, ಫೈನಲ್‌ನಲ್ಲಿ ಸುಧಾರಿತ ಪ್ರದರ್ಶನ ನೀಡಬೇಕಾದ ಅಗತ್ಯವಿದೆ. ಮತ್ತೊಂದೆಡೆ ಸೆಮೀಸ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಗೆದ್ದು ಫೈನಲ್‌ಗೇರಿರುವ ಮಲೇಷ್ಯಾ, ಚೊಚ್ಚಲ ಚಿನ್ನದ ನಿರೀಕ್ಷೆಯಲ್ಲಿದೆ. ಈ ಹಿಂದೆ 2010, 2018ರಲ್ಲಿ ತಂಡ ಬೆಳ್ಳಿ ಜಯಿಸಿತ್ತು.
ಭಾರತಕ್ಕೆ ಫೈನಲ್‌ನಲ್ಲಿಂದು ಪಾಕಿಸ್ತಾನ ಎದುರಾಳಿ:
ಈ ಬಾರಿ ಚಿನ್ನ ಗೆಲ್ಲುವ ಫೇವರಿಟ್ ಎನಿಸಿಕೊಂಡೇ ಏಷ್ಯನ್ ಗೇಮ್ಸ್‌ನಲ್ಲಿ ಆಡುತ್ತಿರುವ ಭಾರತ ಕ್ರಿಕೆಟ್ ತಂಡ, ಶುಕ್ರವಾರ ಫೈನಲ್‌ನಲ್ಲಿ ಬದ್ಧವವೈರಿ ಪಾಕಿಸ್ತಾನ ವಿರುದ್ಧ ಕಾದಾಡಲಿದೆ. ಕಳೆದ ಬಾರಿ ಋತುರಾಜ್ ಗಾಯಕ್ವಾಡ್ ನೇತೃತ್ವದಲ್ಲಿ ಚಿನ್ನ ಗೆದ್ದಿದ್ದ ಭಾರತ, ಈ ಬಾರಿ ಶ್ರೇಯಸ್ ಅಯ್ಯರ್ ಸಾರಥ್ಯದಲ್ಲಿ ಚಾಂಪಿಯನ್ ಎನಿಸಿಕೊಳ್ಳುವ ವಿಶ್ವಾಸ ಹೊಂದಿದೆ.
ಈ ಪಂದ್ಯದಲ್ಲಿ ಸ್ಪಿನ್ನರ್‌ಗಳು ನಿರ್ಣಾಯಕ ಎನಿಸಿಕೊಳ್ಳುವ ಸಾಧ್ಯತೆಯಿದ್ದು, ಭಾರತ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಈ ಪಂದ್ಯಕ್ಕೂ ಮಳೆ ಭೀತಿ ಇದ್ದು, ಪಂದ್ಯ ನಡೆಯದಿದ್ದರೆ ಎರಡೂ ತಂಡಗಳು ಚಿನ್ನದ ಪದಕ ಪಡೆಯಲಿವೆ. ಪಾಕ್ ತಂಡಕ್ಕೆ ಸಾಹಿಬ್‌ಝಾದ ಫರ್ಹಾನ್ ನಾಯಕತ್ವ ವಹಿಸಲಿದ್ದಾರೆ.
ಭಾರತಕ್ಕೆ 3-0 ಸರಣಿ ಕ್ಲೀನ್‌ಸ್ವೀಪ್ ವಿಶ್ವಾಸ
ಮುಲ್ಲಾನ್‌ಪುರ: ಭಾರತ ಹಾಗೂ ವೆಸ್ಟ್‌ಇಂಡೀಸ್ ನಡುವಿನ 3ನೇ ಹಾಗೂ ಕೊನೆ ಏಕದಿನ ಪಂದ್ಯ ಶನಿವಾರ ನಡೆಯಲಿದೆ. ಈಗಾಗಲೇ ಮೊದಲೆರಡು ಪಂದ್ಯಗಳಲ್ಲಿ ಗೆದ್ದಿರುವ ಶುಭ್‌ಮನ್ ಗಿಲ್ ಪಡೆ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ.
ಮೊದಲೆರಡು ಪಂದ್ಯಗಳಲ್ಲಿ ಭಾರತ ಬ್ಯಾಟಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದೆ. ಅದರಲ್ಲೂ 2ನೇ ಪಂದ್ಯದಲ್ಲಿ ವಿಂಡೀಸ್ ನೀಡಿದ್ದ 406 ರನ್ ಗುರಿಯನ್ನು ಭಾರತ ಯಶಸ್ವಿಯಾಗಿ ಬೆನ್ನತ್ತಿ ಗೆದ್ದಿತ್ತು. ಈ ಎರಡೂ ಪಂದ್ಯಗಳಲ್ಲಿ ತಂಡದ ಬೌಲಿಂಗ್ ಪಡೆ ನೀರಸ ಪ್ರದರ್ಶನ ನೀಡಿತ್ತು. ಹೀಗಾಗಿ 3ನೇ ಪಂದ್ಯದಲ್ಲಿ ಬೌಲಿಂಗ್ ಪಡೆ ಸುಧಾರಿತ ಪ್ರದರ್ಶನ ನೀಡಬೇಕಾದ ಅಗತ್ಯವಿದೆ. ಅನುಭವಿ ವೇಗಿ ಮೊಹಮ್ಮದ್ ಸಿರಾಜ್‌ಗೆ ಈ ಪಂದ್ಯದಲ್ಲಿ ಅವಕಾಶ ಸಿಗಬಹುದು. ಆಲ್ರೌಂಡರ್ ಜಡೇಜಾ ಲಯಕ್ಕೆ ಮರಳುವ ಕಾತರದಲ್ಲಿದ್ದಾರೆ.
ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ


