2026ರ ನಗೋಯಾ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತವು ಅಥ್ಲೆಟಿಕ್ಸ್ ಮತ್ತು ಸ್ಕ್ವ್ಯಾಶ್‌ನಲ್ಲಿ ಗಮನಾರ್ಹ ಸಾಧನೆ ಮಾಡಿ ಒಟ್ಟು 37 ಪದಕಗಳೊಂದಿಗೆ 12ನೇ ಸ್ಥಾನದಲ್ಲಿದೆ. ಹಲವು ಕ್ರೀಡಾಪಟುಗಳು ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರೆ, ಬಾಕ್ಸಿಂಗ್ ಮತ್ತು ಆರ್ಚರಿಯಲ್ಲಿ ಪದಕದ ಭರವಸೆ ಮೂಡಿದೆ.

ನಗೋಯಾ: 2026ರ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ನಿರೀಕ್ಷಿತ ಮಟ್ಟದಲ್ಲಿ ಪದಕಗಳು ಸಿಗದಿದ್ದರೂ, ದೇಶ ಪದಕ ಬರವನ್ನು ಎದುರಿಸುತ್ತಿಲ್ಲ. ಭಾನುವಾರ ಭಾರತ ಅಥ್ಲೆಟಿಕ್ಸ್‌ನಲ್ಲಿ 5, ಸ್ಕ್ವ್ಯಾಶ್‌ನಲ್ಲಿ 2 ಪದಕ ಜಯಿಸಿತು. 4 ಚಿನ್ನ, 16 ಬೆಳ್ಳಿ, 17 ಕಂಚಿನೊಂದಿಗೆ ಒಟ್ಟು 37 ಪದಕ ಗೆದ್ದಿರುವ ಭಾರತ, ಪದಕ ಪಟ್ಟಿಯಲ್ಲಿ 12ನೇ ಸ್ಥಾನ ಪಡೆದಿದೆ.

ಕೂಟದ 8ನೇ ದಿನದ ಆರಂಭದಲ್ಲಿ ಸ್ಕ್ವ್ಯಾಶ್‌ ಸಿಂಗಲ್ಸ್‌ ವಿಭಾಗದಲ್ಲಿ ಭಾರತೀಯರಿಬ್ಬರಿಗೂ ಸೋಲು ಎದುರಾಯಿತು. ಮಹಿಳಾ ಸಿಂಗಲ್ಸ್‌ನಲ್ಲಿ ಅನಾಹತ್‌ ಸಿಂಗ್‌, ಪುರುಷರ ಸಿಂಗಲ್ಸ್‌ನಲ್ಲಿ ಅಭಯ್‌ ಸಿಂಗ್‌ ಬೆಳ್ಳಿಗೆ ತೃಪ್ತಿಪಟ್ಟರು. ಸಂಜೆ ಅಥ್ಲೀಟ್‌ಗಳು ಪದಕ ಬೇಟೆಯಾಡಿದರು. ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಆ್ಯನ್ಸಿ ಸೋಜನ್‌, ಪುರುಷರ ಹೈಜಂಪ್‌ನಲ್ಲಿ ಸರ್ವೇಶ್‌ ಕುಶಾರೆ ಬೆಳ್ಳಿ ಜಯಿಸಿದರೆ, ಮಹಿಳೆಯರ 3000 ಮೀ. ಸ್ಟೀಪಲ್‌ ಚೇಸ್‌ನಲ್ಲಿ ಪಾರುಲ್‌ ಚೌಧರಿ, ಮಹಿಳೆಯರ 200 ಮೀ. ಓಟದಲ್ಲಿ ಹರಿತಾ ಭದ್ರಾ, ಪುರುಷರ ಡೆಕಾಥ್ಲಾನ್‌ನಲ್ಲಿ ತೇಜಸ್ವಿನ್‌ ಶಂಕರ್‌ ಕಂಚು ಪಡೆದರು.

ಬ್ಯಾಡ್ಮಿಂಟನ್‌ ಸಿಂಗಲ್ಸ್‌ನಲ್ಲಿ ಭಾರತಕ್ಕೆ ಭಾರೀ ನಿರಾಸೆ ಎದುರಾಯಿತು. ಆರ್ಚರಿಯಲ್ಲಿ ಭಾರತ ಸೆಮೀಸ್‌ಗೇರಿದರೆ, 3 ಬಾಕ್ಸರ್‌ಗಳು ಉಪಾಂತ್ಯ ತಲುಪಿ ಪದಕ ಖಚಿತಪಡಿಸಿಕೊಂಡರು. ಮಹಿಳಾ ಹಾಕಿ ತಂಡ ಸತತ 4ನೇ ಜಯ ದಾಖಲಿಸಿ, ಲಯ ಮುಂದುವರಿಸಿತು.

ಕೇರಳದ ಆಟೋಚಾಲಕನ ಪುತ್ರಿ ಆ್ಯನ್ಸಿಗೆ ಸತತ 2ನೇ ಬೆಳ್ಳಿ ಪದಕ!

ಇತ್ತೀಚೆಗೆ ಅಂಜು ಬಾಬಿ ಜಾರ್ಜ್‌ರ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದ ಕೇರಳದ ನಾಟಿಕ್ಕಾ ಎಂಬ ಹಳ್ಳಿಯ, ಆಟೋ ಡ್ರೈವರ್‌ನ ಪುತ್ರಿ ಆನ್ಸಿ ಸೋಜನ್‌, ಏಷ್ಯನ್‌ ಗೇಮ್ಸ್‌ ಲಾಂಗ್‌ಜಂಪ್‌ನಲ್ಲಿ ಸತತ 2ನೇ ಬೆಳ್ಳಿ ಜಯಿಸಿದ್ದಾರೆ. ಸ್ಪರ್ಧೆಯ ಬಹುತೇಕ ಸಮಯ ಮುನ್ನಡೆಯಲ್ಲಿದ್ದು, ಚಿನ್ನ ಗೆಲ್ಲುವ ನೆಚ್ಚಿನ ಅಥ್ಲೀಟ್‌ ಎನಿಸಿದ್ದ ಆ್ಯನ್ಸಿ ಕೊನೆಗೆ ಬೆಳ್ಳಿಗೆ ತೃಪ್ತಿಪಡಬೇಕಾಯಿತು. ತಮ್ಮ ಕೊನೆಯ ಯತ್ನದಲ್ಲಿ 6.55 ಮೀ. ನೆಗೆದ ಚೀನಾದ ಹುವಾಂಗ್‌ ಯಿಂಗ್‌ಯಿಂಗ್‌, 6.53 ಮೀ. ದೂರಕ್ಕೆ ನೆಗೆದ ಆ್ಯನ್ಸಿಯನ್ನು ಹಿಂದಿಕ್ಕಿ ಚಿನ್ನ ಗೆದ್ದರು.

ಮೊದಲ 5 ಯತ್ನದ ಮುಕ್ತಾಯಕ್ಕೆ 3ನೇ ಸ್ಥಾನ ಕಾಯ್ದುಕೊಂಡಿದ್ದ ಭಾರತದ ಶೈಲಿ ಸಿಂಗ್‌ರನ್ನು ಚೀನಾದ ಮೆಂಗ್‌ಯಿ ಟಾನ್‌ ಕೊನೆ ಯತ್ನದಲ್ಲಿ ಹಿಂದಿಕ್ಕಿದರು. ಶೈಲಿ 6.42 ಮೀ. ನೆಗೆದರೆ, 6.46 ಮೀ.ನೊಂದಿಗೆ ಮೆಂಗ್‌ಯಿ ಕಂಚು ಪಡೆದರು.

200 ಮೀ. ಓಟದಲ್ಲಿ ಆಭರಣ ವಿನ್ಯಾಸಕಿ ಹರಿತಾಗೆ ಕಂಚು!

ಮುಂಬೈನ 23 ವರ್ಷದ ಹರಿತಾ ಭದ್ರಾ ಮಹಿಳೆಯರ 200 ಮೀ. ಓಟದಲ್ಲಿ ಫೈನಲ್‌ನಲ್ಲಿ 23.20 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚು ಪಡೆದರು. ಕ್ರೀಡಾ ವಿಜ್ಞಾನದಲ್ಲಿ ಪದವಿ ಪಡೆದಿರುವ ಹರಿತಾ, ಆಭರಣ ವಿನ್ಯಾಸಕಿಯೂ ಆಗಿದ್ದಾರೆ. ಇದೇ ಸ್ಪರ್ಧೆಯಲ್ಲಿದ್ದ ಕರ್ನಾಟಕದ ಉನ್ನತಿ ಅಯ್ಯಪ್ಪ 6ನೇ ಸ್ಥಾನ ಪಡೆದರು.

ಉ.ಪ್ರದೇಶದ ಡಿಎಸ್‌ಪಿ ಪಾರುಲ್‌ಗೆ 3000 ಮೀ. ಸ್ಟೀಪಲ್‌ ಚೇಸ್‌ ಕಂಚು

ಕಳೆದ ಏಷ್ಯಾಡ್‌ನಲ್ಲಿ 3000 ಮೀ. ಸ್ಟೀಪಲ್‌ ಚೇಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಪಾರುಲ್‌ ಚೌಧರಿಗೆ ಈ ಬಾರಿ ಕಂಚು ಸಿಕ್ಕಿದೆ. 9 ನಿಮಿಷ 8.67 ಸೆಕೆಂಡ್‌ಗಳಲ್ಲಿ ಓಟ ಪೂರೈಸಿದ 31 ವರ್ಷದ, ಉತ್ತರ ಪ್ರದೇಶ ಪೊಲೀಸ್‌ ಇಲಾಖೆಯಲ್ಲಿ ಡಿಎಸ್‌ಪಿ ಆಗಿರುವ ಪಾರುಲ್‌ ತಮ್ಮ ವೈಯಕ್ತಿಕ ಶ್ರೇಷ್ಠ ಪ್ರದರ್ಶನದೊಂದಿಗೆ 3ನೇ ಸ್ಥಾನ ಪಡೆದರು. ಬಹರೇನ್‌ನ ವಿನ್‌ಫ್ರೆಡ್‌ ಯಾವಿ 9 ನಿಮಿಷ 4.36 ಸೆಕೆಂಡ್‌ಗಳೊಂದಿಗೆ ಚಿನ್ನ, ಕಜಕಸ್ತಾನದ ನೊರಾ ಜೆರುಟೊ 9 ನಿಮಿಷ 6.82 ಸೆಕೆಂಡ್‌ಗಳೊಂದಿಗೆ ಬೆಳ್ಳಿ ಪಡೆದರು. ಭಾರತದ ಅಂಕಿತಾ 9 ನಿಮಿಷ 19.24 ಸೆಕೆಂಡ್‌ಗಳಲ್ಲಿ ಓಡಿ 4ನೇ ಸ್ಥಾನ ಪಡೆದರು. ಪಾರುಲ್‌ ಸೋಮವಾರ 5000 ಮೀ. ಓಟದಲ್ಲಿ ಭಾಗವಹಿಸಲಿದ್ದಾರೆ. ಕಳೆದ ಏಷ್ಯಾಡ್‌ನಲ್ಲಿ ಅವರು ಈ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರು.

ಕೂದಲೆಳಯ ಅಂತರದಲ್ಲಿ ಸರ್ವೇಶ್‌ಗೆ ಕೈತಪ್ಪಿದ ಚಿನ್ನ!

ಪುರುಷರ ಹೈಜಂಪ್‌ನಲ್ಲಿ ಸರ್ವೇಶ್‌ ಕುಶಾರೆ ಚಿನ್ನ ಗೆಲ್ಲುವ ಫೇವರಿಟ್‌ ಎನಿಸಿದರು. ಆದರೆ ಕೊನೆಗೆ ಬೆಳ್ಳಿಗೆ ಕೊರಳೊಡ್ಡಬೇಕಾಯಿತು. 2.22 ಮೀ. ಎತ್ತರವನ್ನು ಸರ್ವೇಶ್‌ ಮೊದಲ ಯತ್ನದಲ್ಲೇ ಹಾರಿದರು. ಚೈನೀಸ್‌ ತೈಪೆಯ ಚಾವೊ ಫು 2ನೇ ಯತ್ನದಲ್ಲಿ ಈ ಎತ್ತರ ಪೂರೈಸಿದರು. ಆದರೆ 2.25 ಮೀ. ಹಾರುವಾಗ ಪರಿಸ್ಥಿತಿ ಬದಲಾಯಿತು. ಫು ಮೊದಲ ಯತ್ನದಲ್ಲೇ ಯಶಸ್ಸು ಕಂಡರೆ, ಸರ್ವೇಶ್‌ 2ನೇ ಯತ್ನದಲ್ಲಿ ಯಶಸ್ವಿಯಾದರು. 2.28 ಮೀ. ಎತ್ತರಕ್ಕೆ ಹಾರಲು ಇಬ್ಬರಿಗೂ ಸಾಧ್ಯವಾಗಲಿಲ್ಲ. ಹೀಗಾಗಿ, ಸರ್ವೇಶ್‌ ಬೆಳ್ಳಿಗೆ ತೃಪ್ತಿಪಡಬೇಕಾಯಿತು. ಭಾರತೀಯ ಸೇನೆಯಲ್ಲಿ ನಾಯಬ್‌ ಸುಬೇದಾರ್‌ ಆಗಿರುವ 31ರ ಸರ್ವೇಶ್‌ಗೆ ಏಷ್ಯಾಡ್‌ನಲ್ಲಿ ಇದು ಮೊದಲ ಪದಕ.