ಏಷ್ಯನ್ ಗೇಮ್ಸ್‌ನ ಮಿಶ್ರ ಮಾರ್ಷಲ್ ಆರ್ಟ್ಸ್ ಸೆಮಿಫೈನಲ್‌ನಲ್ಲಿ ಭಾರತದ ಸುಚಿಕಾ ಪಂದ್ಯ ಡ್ರಾ ಆದರೂ ತೂಕದ ಆಧಾರದ ಮೇಲೆ ಫೈನಲ್ ಅವಕಾಶ ಕಳೆದುಕೊಂಡಿದ್ದಾರೆ. ಎದುರಾಳಿಗಿಂತ 700 ಗ್ರಾಂ ಹೆಚ್ಚು ತೂಕ ಹೊಂದಿದ್ದ ಕಾರಣ ಅವರು ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು. ಈ ಘಟನೆ ಪ್ಯಾರಿಸ್ ಒಲಿಂಪಿಕ್ಸ್‌ನ ವಿನೇಶ್ ಫೋಗಟ್ ಅವರ ಅನರ್ಹತೆಯನ್ನು ನೆನಪಿಸಿದೆ.

ನಗೋಯಾ: 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ಕುಸ್ತಿಪಟು ವಿನೇಶ್‌ ಫೋಗಟ್‌ ತಮ್ಮ ಫೈನಲ್‌ ಪಂದ್ಯಕ್ಕೂ ಮುನ್ನ 100 ಗ್ರಾಂ ಹೆಚ್ಚು ತೂಕ ಹೊಂದಿದ್ದಕ್ಕೆ ಅನರ್ಹಗೊಂಡು ಐತಿಹಾಸಿಕ ಚಿನ್ನದ ಪದಕದಿಂದ ವಂಚಿತರಾಗಿದ್ದರು. ಈಗ ಏಷ್ಯನ್‌ ಗೇಮ್ಸ್‌ನಲ್ಲೂ ಭಾರತ ತೂಕದ ಕಾರಣದಿಂದ ಮತ್ತೊಂದು ಸಂಭಾವ್ಯ ಚಿನ್ನವನ್ನು ತಪ್ಪಿಸಿಕೊಂಡಿದೆ.

ಮಿಶ್ರ ಮಾರ್ಷಲ್‌ ಆರ್ಟ್ಸ್‌ನಲ್ಲಿ ಚಿನ್ನದ ಪದಕ ಮಿಸ್

ಮಿಶ್ರ ಮಾರ್ಷಲ್‌ ಆರ್ಟ್ಸ್‌ನ ಮಹಿಳೆಯರ 60 ಕೆ.ಜಿ. ವಿಭಾಗದ ಸೆಮಿಫೈನಲ್‌ ಸೋಮವಾರ ನಡೆಯಿತು. ಭಾರತದ ಸುಚಿಕಾ-ಸಿಂಗಾಪುರದ ಹ್ಯು ಹ್ಯೂನ್‌ ಟಿಯೊ ಸ್ಪರ್ಧಿಸಿದರು. ನಿಗದಿತ ಅವಧಿ ಮುಕ್ತಾಯಕ್ಕೆ ಫಲಿತಾಂಶ ಹೊರಬೀಳದ ಕಾರಣ, ಹೆಚ್ಚುವರಿ ಸಮಯ ನೀಡಲಾಯಿತು. ಅದರಲ್ಲಿ ಸುಚಿತಾ ಉತ್ತಮ ಆಟದ ಹೊರತಾಗಿಯೂ ಅವರು ಸೋತಿದ್ದಾಗಿ ಮೂವರು ಜಡ್ಜ್‌ಗಳು ತೀರ್ಪು ನೀಡಿದರು.

ಇದನ್ನು ಒಪ್ಪದ ಭಾರತ, ₹95800 ಮೊತ್ತ ಪಾವತಿಸಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿತು. ಆಗ ಇತರ ಮೂವರು ಸೇರಿ ಒಟ್ಟು 6 ಜಡ್ಜ್‌ಗಳು ಪರಿಶೀಲನೆ ನಡೆಸಿ, ಪಂದ್ಯದಲ್ಲಿ ಇಬ್ಬರೂ ಸಮಾನ ಅಂಕ ಪಡೆದಿದ್ದಾರೆ. ಹೀಗಾಗಿ ಡ್ರಾ ಎಂದು ಘೋಷಿಸಿದರು.

ಡ್ರಾ ಆಗಿದ್ದರಿಂದ ಫಲಿತಾಂಶ ನಿರ್ಧರಿಸಲು ನಿಯಮ ಪ್ರಕಾರ ಇಬ್ಬರ ತೂಕ ಪರಿಶೀಲನೆಯನ್ನು ಆಧಾರವಾಗಿ ತೆಗೆದುಕೊಳ್ಳಲಾಯಿತು. ಸ್ಪರ್ಧೆಗೂ ಮುನ್ನ ಬೆಳಗ್ಗೆ ನಡೆಸಿದ್ದ ತೂಕದಲ್ಲಿ ಸುಚಿಕಾ 59.2 ಕೆ.ಜಿ. ಇದ್ದರೆ, ಟಿಯೊ 58.5 ಕೆ.ಜಿ. ಇದ್ದರು. ಸುಚಿಕಾಗಿಂತ ಟಿಯೊ 700 ಗ್ರಾಂ ಕಡಿಮೆ ಇದ್ದ ಕಾರಣ, ಟಿಯೊ ವಿಜೇತ ಎಂದು ಘೋಷಿಸಲಾಯಿತು. ಸುಚಿಕಾ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರೆ, ಟಿಯೊ ಫೈನಲ್‌ಗೇರಿದರು. ಇದರ ಬಗ್ಗೆ ಸುಚಿಕಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಫಲಿತಾಂಶದಿಂದ ಅನ್ಯಾಯವಾಗಿದೆ ಎಂದು ಟೀಕಿಸಿದರು.

ವುಶು, ಈಜಿನಲ್ಲಿ ಭಾರತಕ್ಕೆ ಪದಕವಿಲ್ಲ

ಟೋಕಿಯೊ: ಏಷ್ಯಾಡ್‌ನ ವುಶು, ಈಜು ಸ್ಪರ್ಧೆಗಳಲ್ಲಿ ಮಂಗಳವಾರ ಭಾರತ ಪದಕ ಗೆಲ್ಲಲು ವಿಫಲವಾಗಿದೆ. ವುಶು ಮಹಿಳೆಯರ ಚಾಂಗ್‌ಕ್ವಾನ್‌ ಫೈನಲ್‌ನಲ್ಲಿ ನ್ಯೆಮನ್ ವಾಂಗ್ಸು 15ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಮಹಿಳೆಯರ 60 ಕೆ.ಜಿ. ವಿಭಾಗದಲ್ಲಿ ರೋಶಿಬಿನಾ ದೇವಿ, ಪುರುಷರ 56 ಕೆ.ಜಿ. ವಿಭಾಗದಲ್ಲಿ ಆರ್ಯನ್‌ ಕ್ವಾರ್ಟರ್‌ ಫೈನಲ್‌ಗೇರಿದರು.

ಈಜು ಸ್ಪರ್ಧೆಯ 50 ಮೀ. ಬ್ಯಾಕ್‌ಸ್ಟ್ರೋಕ್‌ನ ಫೈನಲ್‌ನಲ್ಲಿ ಬೆಂಗಳೂರಿನ ಶ್ರೀಹರಿ ನಟರಾಜ್‌ 10ನೇ ಸ್ಥಾನಿಯಾದರು. 50 ಮೀ. ಫ್ರೀಸ್ಟೈಲ್‌ನಲ್ಲಿ ಆಕಾಶ್‌, ಗಿತೇಶ್‌ ಶಾ, 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಧನುಶ್ ಸುರೇಶ್‌ ಫೈನಲ್‌ಗೇರಲಿಲ್ಲ. ಇನ್ನು, ನಟ ಮಾಧವನ್‌ ಅವರ ಪುತ್ರ ವೇದಾಂತ್‌ ಮಾಧವನ್‌ ಹಾಗೂ ಸಾಜನ್‌, ಧಕ್ಷಣ್‌, ಅನೀಶ್‌ ಇದ್ದ ತಂಡ 4*200 ಫ್ರೀಸ್ಟೈಲ್‌ನಲ್ಲಿ ಫೈನಲ್‌ಗೇರಲು ವಿಫಲವಾಯಿತು.

ಪ್ರಿ ಕ್ವಾರ್ಟರ್‌ಗೆ:

ಪುರುಷರ 70 ಕೆ.ಜಿ. ವಿಭಾಗದ ಬಾಕ್ಸಿಂಗ್‌ನಲ್ಲಿ ಸುಮಿತ್‌ ಪ್ರಿ ಕ್ವಾರ್ಟರ್‌ ಫೈನಲ್‌ಗೇರಿದರು. ಸ್ಕೀಟ್‌ ಶೂಟಿಂಗ್‌ನ ಅರ್ಹತಾ ಸುತ್ತಿನಲ್ಲಿ ಅನಂತ್‌ಜೀತ್‌ ಸಿಂಗ್‌ ನರುಕಾ 21ನೇ, ಮೈರಾಜ್ ಖಾನ್‌ 26ನೇ, ಭವ್‌ತೇಜ್‌ ಸಿಂಗ್‌ 27ನೇ ಸ್ಥಾನಿಯಾದರು.