ಮುಂಬೈ(ಫೆ.18): ಪುಲ್ವಾಮ ಭಯೋತ್ವಾದಕ ದಾಳಿ ರೂವಾರಿ ಜೈಶ್-ಇ-ಮೊಹಮ್ಮದ್ ಭಯೋತ್ವಾದಕ ಸಂಘಟನೆಯನ್ನ ಪಾಕಿಸ್ತಾನ ಪೋಷಿಸುತ್ತಿದೆ ಅನ್ನೋದು ಗೌಪ್ಯವಾಗಿ ಉಳಿದಿಲ್ಲ. ಇದೇ ಸಂಘಟನೆ ಪುಲ್ವಾಮದಲ್ಲಿ CRPF ಯೋಧರ ಮೇಲೆ ದಾಳಿ ನಡೆಸಿ 40ಕ್ಕೂ ಹೆಚ್ಚು ಯೋಧರನ್ನ ಬಲಿಪಡೆದಿದೆ. ಈ ದಾಳಿ ಬಳಿಕ ಪಾಕಿಸ್ತಾನ ಸೂಪರ್ ಲೀಗ್(PSL) ಕ್ರಿಕೆಟ್ ಪ್ರಸಾರವನ್ನ ಭಾರತದಲ್ಲಿ ನಿರ್ಬಂಧಿಸಲಾಗಿದೆ. ಇದೀಗ PSLನಿಂದ ವಿದೇಶಿ ಆಟಗಾರರು ಹಿಂದೆ ಸರಿಯೋ ಸಾಧ್ಯತೆಗಳಿವೆ.

ಇದನ್ನೂ ಓದಿ: ಪುಲ್ವಾಮ ದಾಳಿ: ಭಾರತದಲ್ಲಿ ಪಾಕಿಸ್ತಾನ ಲೀಗ್ ಕ್ರಿಕೆಟ್ ಪ್ರಸಾರ ನಿರ್ಬಂಧ!

ಪಾಕಿಸ್ತಾನ ಸೂಪರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ, ಐಪಿಎಲ್ ಆಡೋ ವಿದೇಶಿ ಕ್ರಿಕೆಟಿಗರು ಪಾಲ್ಗೊಂಡಿದ್ದಾರೆ. ಇವರ ಮೇಲೆ ಬಿಸಿಸಿಐ ಹಾಗೂ ಫ್ರಾಂಚೈಸಿಗಳು ಒತ್ತಡ ಹೇರಿ, PSL ಟೂರ್ನಿಯಿಂದ ಹಿಂದೆ ಸರಿಯುವಂತೆ ಮಾಡೋ ಸಾಧ್ಯತೆ ಹೆಚ್ಚಿದೆ.  IPL ಆಡೋ ಎಬಿ ಡಿವಿಲಿಯ​ರ್ಸ್, ಕ್ರಿಸ್‌ ಗೇಲ್‌, ಶೇನ್‌ ವಾಟ್ಸನ್‌, ರಶೀದ್‌ ಖಾನ್‌ರಂತಹ ತಾರಾ ಆಟಗಾರರು PSL ಟೂರ್ನಿಯ ಆಕರ್ಷಣೆಯಾಗಿದ್ದಾರೆ. ಈ ಆಟಗಾರರು ಪಿಎಸ್‌ಎಲ್‌ನಲ್ಲಿ ಆಡದಂತೆ ಬಿಸಿಸಿಐ ಒತ್ತಡ ಹೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಪುಲ್ವಾಮ ದಾಳಿ: ಪಾಕಿಸ್ತಾನ ಲೀಗ್ ಕ್ರಿಕೆಟ್ ಲೈವ್‌ ಸ್ಕೋರ್‌ಗೂ ಬ್ರೇಕ್‌!

2008ರ ಮುಂಬೈ ದಾಳಿ ಬಳಿಕ ಪಾಕಿಸ್ತಾನಿ ಆಟಗಾರರನ್ನು ಐಪಿಎಲ್‌ನಿಂದ ಹೊರಹಾಕಲಾಗಿತ್ತು. ಪಾಕ್‌ ಕ್ರಿಕೆಟ್‌ಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಇದೀಗ ತಾರಾ ವಿದೇಶಿ ಆಟಗಾರರನ್ನು ಲೀಗ್‌ನಲ್ಲಿ ಆಡದಿರುವಂತೆ ಮಾಡಿ, ಪಾಕಿಸ್ತಾನ ಕ್ರಿಕೆಟ್‌ಗೆ ಮತ್ತಷ್ಟುಹಿನ್ನಡೆ ಉಂಟು ಮಾಡಲು ಬಿಸಿಸಿಐ ಹಾಗೂ ಐಪಿಎಲ್‌ ತಂಡಗಳ ಮಾಲೀಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ: ಮೊಹಾಲಿ ಕ್ರೀಡಾಂಗಣದಲ್ಲಿ ಪಾಕ್‌ ಕ್ರಿಕೆಟಿಗರ ಫೋಟೋ ತೆರವು!

‘ಐಪಿಎಲ್‌ನಲ್ಲಿ ಸಿಗುವಷ್ಟುಸಂಭಾವನೆ, ಸೌಕರ್ಯವನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ನೀಡಲು ಸಾಧ್ಯವಿಲ್ಲ. ಪಿಎಸ್‌ಎಲ್‌ ಐಪಿಎಲ್‌ನಲ್ಲೂ ಜನಪ್ರಿಯ ಲೀಗ್‌ ಸಹ ಅಲ್ಲ.  ಐಪಿಎಲ್‌ನಷ್ಟುಅಭಿಮಾನಿಗಳನ್ನೂ ಹೊಂದಿಲ್ಲ. ಹೀಗಾಗಿ ವಿದೇಶಿ ಆಟಗಾರರು ಸಹಜವಾಗಿಯೇ ಬಿಸಿಸಿಐ ಹಾಗೂ ಐಪಿಎಲ್‌ ತಂಡಗಳ ಮಾಲೀಕರ ಒತ್ತಡಕ್ಕೆ ಮಣಿಯಲಿದ್ದಾರೆ’ ಎಂದು ಮಾಜಿ ಕ್ರಿಕೆಟಿಗರೊಬ್ಬರು ಅಭಿಪ್ರಾಯಿಸಿದ್ದಾರೆ. ಸಾಮಾಜಿಕ ತಾಣಗಳಲ್ಲೂ ತಾರಾ ವಿದೇಶಿ ಆಟಗಾರರಿಗೆ ಪಿಎಸ್‌ಎಲ್‌ ಬಹಿಷ್ಕರಿಸುವಂತೆ ಅಭಿಮಾನಿಗಳು ಮನವಿ ಮಾಡಿದ್ದಾರೆ.