ಚಕ್ರವರ್ತಿ ರಾಜಗೋಪಾಲಾಚಾರಿಯವರು ತಮಿಳುನಾಡಿನಲ್ಲಿ ಒಮ್ಮೆ ಹಿಂದಿ ಕಲಿಸಲು ಮುಂದಾಗಿದ್ದರೂ, ಕೊನೆಗೆ ಅವರು ತ್ರಿಭಾಷಾ ಸೂತ್ರದಲ್ಲಿನ ತಂತ್ರಗಾರಿಕೆ ಮತ್ತು ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಮಾಡುವ ಪರಿಣಾಮವನ್ನು ಗ್ರಹಿಸಿ, ತಮ್ಮ ಜೀವನದುದ್ದಕ್ಕೂ ಹಿಂದಿ ಹೇರಿಕೆಯನ್ನು ವಿರೋಧಿಸಿದ್ದರು ಮತ್ತು ಈ ತ್ರಿಭಾಷಾ ಸೂತ್ರವನ್ನು ‘ನರಿ ಸೂತ್ರ’ ಎಂದು ಜರಿದಿದ್ದರು. 

ರಮಾನಂದ ಶರ್ಮಾ (ಅರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು), ಬೆಂಗಳೂರು

ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ರಾಜ್ಯಗಳು ಜಾರಿಗೊಳಿಸಬೇಕಾದ ‘ತ್ರಿಭಾಷಾ ಸೂತ್ರ’ದ ಬಗೆಗೆ ಗೊಂದಲ, ಜಿಜ್ಞಾಸೆ ಮುಂದುವರೆದಿದೆ. ಈ ‘ತ್ರಿಭಾಷಾ ಸೂತ್ರವು’ ಹಿಂದಿ ಭಾಷೆಯನ್ನು ಹಿಂಬಾಗಿಲ ಮೂಲಕ ಹಿಂದಿಯೇತರ ರಾಜ್ಯಗಳ ಮೇಲೆ, ಅದರಲ್ಲೂ ಮುಖ್ಯವಾಗಿ ದಕ್ಷಿಣ ಭಾರತದ ಮೇಲೆ ಹೇರುವ ಹುನ್ನಾರ ಇದೆ ಎನ್ನುವ ಅಕ್ರೋಶ ಕೇಳಿ ಬರುತ್ತಿದೆ. ಹಿಂದಿ ಭಾಷೆಯನ್ನು ನಖಶಿಖಾಂತ ವಿರೋಧಿಸುವ ತಮಿಳುನಾಡು, ಈ ಸೂತ್ರದ ವಿರುದ್ಧ ಯುದ್ಧವನ್ನೇ ಸಾರಿದೆ. ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸದಿದ್ದರೆ ಕೇಂದ್ರ ಸರ್ಕಾರ ಸಮಗ್ರ ಶಿಕ್ಷಣ ನೀತಿಯಲ್ಲಿ ನೀಡುವ ₹2152 ಕೋಟಿಯನ್ನು ನಿಲ್ಲಿಸುವುದಾಗಿ ಧಮಕಿ ಹಾಕಿದರೂ ತಮಿಳುನಾಡು ಕ್ಯಾರೇ ಎನ್ನಲಿಲ್ಲ ಮತ್ತು ₹10,000 ಕೋಟಿ ನೀಡಿದರೂ ಅನುಷ್ಠಾನ ಗೊಳಿಸುವುದಿಲ್ಲ ಎಂದು ಸಡ್ಡು ಹೊಡೆದು, ಕೇಂದ್ರಕ್ಕೆ ಚಾಲೆಂಜ್‌ ಎನ್ನುವಂತೆ ತನ್ನ ಬಜೆಟ್‌ನಲ್ಲೇ ಸಮಗ್ರ ಶಿಕ್ಷಣಕ್ಕೆ ₹2152 ಕೋಟಿಯನ್ನು ನಿಗದಿಪಡಿಸಿದೆ. ಇದೂ ಸಾಲದು ಎನ್ನುವಂತೆ ಹಿಂದಿ ಲಿಪಿಯನ್ನು ಹೋಲುವ ರುಪಾಯಿ ಚಿಹ್ನೆಯ ಬದಲಾಗಿ ತಮಿಳು ಲಿಪಿ ಚಿಹ್ನೆಯನ್ನು ತನ್ನ ಬಜೆಟ್‌ನಲ್ಲಿ ಅಳವಡಿಸಿಕೊಂಡು ತಮಿಳು ಭಾಷಾಭಿಮಾನವನ್ನು ಮೆರೆದಿದೆ ಮತ್ತು ಹಿಂದಿಗೆ ಟಾಂಗ್‌ ನೀಡಿದೆ.

ಇನ್ನೊಂದು ಭಾಷೆ ಕಲಿಸುವ ನೆಪ: ಮೇಲ್ನೋಟಕ್ಕೆ ಈ ತ್ರಿಭಾಷಾ ಸೂತ್ರದಲ್ಲಿ ಹಿಂದಿ ಹೇರಿಕೆ ನೇರವಾಗಿ ಕಾಣುವುದಿಲ್ಲ. ಅದರೆ ಈ ಸೂತ್ರದಲ್ಲಿ ಇನ್ನೊಂದು ಭಾರತೀಯ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕು ಎನ್ನುವ ಕಟ್ಟಳೆಯಲ್ಲಿ ಹಿಂದಿ ಹೇರಿಕೆ ಗೋಪ್ಯವಾಗಿದೆ ಎಂದು, ದಕ್ಷಿಣದ ರಾಜ್ಯಗಳು ಮತ್ತು ಮುಖ್ಯವಾಗಿ ತಮಿಳುನಾಡು ತಗಾದೆ ತೆಗೆದಿವೆ, ಈ ಮೂರನೇ ಭಾಷೆ ಯಾವುದು ಮತ್ತು ಅದನ್ನು ಹೆಸರಿಸದಿರುವುದು ಹಲವು ಜಿಜ್ಞಾಸೆ ಮತ್ತು ಸಂದೇಹಗಳಿಗೆ ಅಸ್ಪದ ನೀಡಿದೆ. ಈ ಮೂರನೇ ಭಾಷೆ ಪರೋಕ್ಷವಾಗಿ ಹಿಂದಿಯತ್ತಲೇ ಒಲಿಯುತ್ತಿದೆ ಎನ್ನುವುದು ಅವರ ವಾದ. ನೇರವಾಗಿ ಹೇಳದೇ, ಹೇರಿಕೆ ಮಾಡದೇ ದಕ್ಷಿಣದವರ ಕಣ್ಣಿಗೆ ಮಂಕು ಬೂದಿ ಎರಚಿ ಹಿಂದಿಯನ್ನು ಹಿಂದಿನ ದಾರಿಯಲ್ಲಿ ತುರುಕುವ ಹುನ್ನಾರ ಎಂದು ಅವರು ಪ್ರತಿಭಟಿಸುತ್ತಿದ್ದಾರೆ. 

ವಿಶ್ವ ಪುಸ್ತಕ ಮತ್ತು ಗ್ರಂಥ ಸ್ವಾಮ್ಯ ದಿನಾಚರಣೆ: ಓದಿನ ದಿನಕ್ಕೆ ಯುನೆಸ್ಕೋದಿಂದ ಮನ್ನಣೆ

ವಲಸಿಗರು ಗಮನಾರ್ಹ ಸಂಖ್ಯೆಯಲ್ಲಿರುವ ಕರ್ನಾಟಕದಲ್ಲಿ ಅ ಮೂರನೇ ಭಾಷೆಯ ಅಯ್ಕೆ ಮತ್ತು ಅದನ್ನು ಕಲಿಸುವುದು ಸುಲಭವೇ? ಮೂರನೇ ಭಾಷೆಯನ್ನು ಅಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ದಕ್ಷಿಣ ರಾಜ್ಯಗಳು ತಮ್ಮ-ತಮ್ಮೊಳಗೆ ಬಡಿದಾಡಿಕೊಳ್ಳುವಂತೆ ಮಾಡಿ, ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ ಎನ್ನುವಂತೆ ಹಿಂದಿಯನ್ನು ಉಪಾಯವಾಗಿ ದಕ್ಷಿಣದಲ್ಲಿ ಒಳ ತಳ್ಳುವಂತೆ ಮಾಡುವ ತಂತ್ರಗಾರಿಕೆ ಇದು ಎಂದು ದಕ್ಷಿಣದವರು ಹೇಳುತ್ತಾರೆ. ಎನ್.ಸಿ.ಇ.ಅರ್.ಟಿ ಇಂಗ್ಲೀಷ್‌ ಪುಸ್ತಕಗಳಿಗೆ ಹಿಂದಿ ಭಾಷೆಯ ಟೈಟಲ್‌ ನೀಡುವುದನ್ನು ಮತ್ತು ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ತ್ರಿಭಾಷಾ ಸೂತ್ರದ ಅಡಿಯಲ್ಲಿ ಮೂರನೇ ಭಾಷೆಯಾಗಿ ಹಿಂದಿ ಭಾಷೆಯನ್ನು ಕಡ್ಡಾಯ ಮಾಡಿದ್ದನ್ನು ಅವರು ಎತ್ತಿ ತೋರಿಸುತ್ತಾರೆ. ರಾಜ್ಯಗಳಿಗೆ ಕೇಂದ್ರದಿಂದ ಅನುದಾನ ಹಂಚಿಕೆ, ಲೋಕಸಭಾ ಕ್ಷೇತ್ರಗಳ ಪುನರ್‌ ವಿಂಘಡನೆ, ತೆರಿಗೆ ಸಂಗ್ರಹ, 

ಹಿಂದಿ-ಹಿಂದಿಯೇತರ ರಾಜ್ಯಗಳ ಮಧ್ಯ ತಾರತಮ್ಯ ಮುಂತಾದ ವಿಚಾರದಲ್ಲಿ ದಕ್ಷಿಣದ ರಾಜ್ಯಗಳು ಕೇಂದ್ರದ ವಿರುದ್ಧ ಒಂದಾಗುತ್ತಿದ್ದು, ಇದನ್ನು ಮುರಿಯಲು ತ್ರಿಭಾಷಾ ಸೂತ್ರವನ್ನು ಬಳಸಲಾಗುತ್ತದೆ ಎನ್ನುವ ಮಾತೂ ಕೇಳಿ ಬರುತ್ತಿದೆ. ಇತ್ತೀಚಿನವರೆಗೆ ಕೇವಲ ತಮಿಳುನಾಡಿನಲ್ಲಿ ಕಾಣುತ್ತಿದ್ದ ಹಿಂದಿ ವಿರೋಧ, ಈಗ ದಕ್ಷಿಣ ಭಾರತವನ್ನು ಕ್ರಮೇಣ ವ್ಯಾಪಿಸುತ್ತಿದ್ದು, ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆ ಮಾತನಾಡದೆ ಹಿಂದಿ ಭಾಷೆಯನ್ನು ಸಮರ್ಥಿಸಿಕೊಂಡಿದ್ದಕ್ಕೆ ಬ್ಯಾಂಕ್‌ ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದರೊಂದಿಗೆ ಮಹಾರಾಷ್ಟ್ರವನ್ನು ದೊಡ್ಡ ಪ್ರಮಾಣದಲ್ಲಿ ಪ್ರವೇಶಿಸಿದೆ ಮತ್ತು ಹಿಂದಿ ಹೇರಿಕೆ ಮುಂದಿನ ದಿನಗಳಲ್ಲಿ ಎಲ್ಲಾ ಹಿಂದಿಯೇತರ ರಾಜ್ಯಗಳನ್ನು ವ್ಯಾಪಿಸಿದರೆ ಎನ್ನುವ ಭಯ ಅವರಿಸಿದೆ. ಹಿಂದಿ ಹೇರಿಕೆಯ ಭಯ ಮಹಾರಾಷ್ಟ್ರದಲ್ಲಿ ಎರಡು ರಾಜಕೀಯ ಬದ್ಧ ವೈರಿಗಳಾದ ರಾಜ್‌ ಥಾಕ್ರೆ ಮತ್ತು ಉದ್ದವ್‌ ಠಾಕ್ರೆ ಕೈಜೋಡಿಸುವಂತೆ ಮಾಡಿದೆ.

ಹಿಂದಿ ಹೇರಿಕೆಗೆ ನಾನಾ ವೇಷ: ದಕ್ಷಿಣದ ರಾಜ್ಯಗಳಲ್ಲಿ ಹಿಂದಿಗೆ ಒಂದು ಭಾಷೆಯಾಗಿ ವಿರೋಧವಿಲ್ಲ. ಅದರೆ ಅದನ್ನು ಯಾವುದೋ ಇಸಂ. ರಾಷ್ಟ್ರೀಯತೆಯ ಧ್ಯೋತಕ, ದೇಶ ಪ್ರೇಮ, ಸಂಪರ್ಕ-ಆಡಳಿತ ಭಾಷೆ ಹೆಸರಿನಲ್ಲಿ ಈ ಭಾಷೆಯನ್ನು ಹೇರುವುದನ್ನು ವಿರೋಧಿಸುತ್ತಾರೆ. ತಮಿಳುನಾಡಿನಲ್ಲಿ ಈ ವಿರೋಧ ತೀವ್ರವಾಗಿದ್ದರೆ, ಉಳಿದ ರಾಜ್ಯಗಳಲ್ಲಿ ಇತ್ತೀಚೆಗೆ ಉತ್ತರದಿಂದ ದೌಡಾಯಿಸಿ ಬಂದ ವಲಸಿಗರು ಮತ್ತು ಅವರ ದಬ್ಬಾಳಿಕೆಯಿಂದಾಗಿ ವಿರೋಧ ಹೆಚ್ಚುತ್ತಿದೆ. ಹಿಂದಿ ತಿಳಿಯದವರು ಮತ್ತು ಮಾತನಾಡದವರು ಕಡಿಮೆ ದೇಶಪ್ರೇಮಿಗಳೇ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಹಾಗೆಯೇ ಮಕ್ಕಳಿಗೆ ಮೂರನೇ ಭಾಷೆಯ ಭಾರ ಏಕೆ ಎನ್ನುವ ಪ್ರಶ್ನೆಯೂ ಕಾಡುತ್ತಿದೆ. ಅದರ ಬದಲಿಗೆ ಒಂದು ವೃತ್ತಿಪರ ಕೋರ್ಸನ್ನು ಅಥವಾ ಇನ್ನೊಂದು ವಿದೇಶಿ ಭಾಷೆಯನ್ನು ಕಲಿಸಬಹುದು ಎನ್ನುವುದರ ಬಗೆಗೆ ಒಲವಿದೆ. 

ಬೆರಳು ಕೊಟ್ಟರೆ ಮುಂಗೈ ನುಂಗುವಂತೆ ಹಿಂದಿಗೆ ಅಧಿಕೃತವಾಗಿ ಒಳ ಬರಲು ಸ್ವಲ್ಪ ಅವಕಾಶ ನೀಡಿದರೆ, ಹಿಂದಿ ಭಾಷೆಯು ಉತ್ತರದಲ್ಲಿ 25 ಭಾಷೆಗಳನ್ನು ನುಂಗಿ ನೀರು ಕುಡಿದಂತೆ ಕೇಂದ್ರ ಸರ್ಕಾರದ ಬೆಂಬಲ ಮತ್ತು ರಾಜಾಶ್ರಯದಲ್ಲಿ ದಕ್ಷಿಣದಲ್ಲೂ ಸ್ಥಳೀಯ ಭಾಷೆಗಳು ನಶಿಸಬಹುದು ಎನ್ನವ ಭಯ ಅವರಿಸಿದೆ. ತ್ರಿಭಾಷಾ ಸೂತ್ರದ ಹಿಂದಿನ ಉದ್ದೇಶ ಶ್ಲಾಘನೀಯವಿದ್ದರೂ, ವಾಸ್ತವದಲ್ಲಿ ಅದು ಉತ್ತರದಲ್ಲಿ ಏಕ ಭಾಷಾ ಆಗುತ್ತಿದ್ದು, ಅಲ್ಲಿ ದಕ್ಷಿಣದ ಭಾಷೆಯನ್ನು ಕಲಿಸಲಾಗುವುದಿಲ್ಲ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಉತ್ತರ ಪ್ರದೇಶದಲ್ಲಿ ಕನ್ನಡವನ್ನು ಕಲಿಸಲಾಗುತ್ತದೆ ಎನ್ನುವ ಯೋಗಿ ಅದಿತ್ಯರ ಹೇಳಿಕೆಯನ್ನು ಯಾರೂ ಮುಖಬೆಲೆಯಲ್ಲಿ ಸ್ವೀಕರಿಸುತ್ತಿಲ್ಲ ಮತ್ತು ಇದನ್ನು ಕನ್ನಡಿಗರನ್ನು ಮೂರ್ಖರನ್ನಾಗಿಸುವ ತಂತ್ರ ಎನ್ನಲಾಗುತ್ತದೆ.

ಬಂದೂಕಿನ ಹಿಂದಿನ ಕ್ರೌರ್ಯ: ಟಿಆರ್‌ಎಫ್ ಕರಾಳ ಮುಖ ಅನಾವರಣಗೊಳಿಸಿದ ಪಹಲ್ಗಾಮ್ ದಾಳಿ

ಹಿಂದಿಯ ಹಿಂದಿನ ಮರ್ಮ: ಚಕ್ರವರ್ತಿ ರಾಜಗೋಪಾಲಾಚಾರಿಯವರು ತಮಿಳುನಾಡಿನಲ್ಲಿ ಒಮ್ಮೆ ಹಿಂದಿ ಕಲಿಸಲು ಮುಂದಾಗಿದ್ದರೂ, ಕೊನೆಗೆ ಅವರು ತ್ರಿಭಾಷಾ ಸೂತ್ರದಲ್ಲಿನ ತಂತ್ರಗಾರಿಕೆ ಮತ್ತು ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಮಾಡುವ ಪರಿಣಾಮವನ್ನು ಗ್ರಹಿಸಿ, ತಮ್ಮ ಜೀವನದುದ್ದಕ್ಕೂ ಹಿಂದಿ ಹೇರಿಕೆಯನ್ನು ವಿರೋಧಿಸಿದ್ದರು ಮತ್ತು ಈ ತ್ರಿಭಾಷಾ ಸೂತ್ರವನ್ನು ‘ನರಿ ಸೂತ್ರ’ ಎಂದು ಜರಿದಿದ್ದರು. ಹಿಂದಿಯನ್ನು ವಿರೋಧಿಸಿ ತಮ್ಮ ‘ಸ್ವರಾಜ್ಯ’ ಪತ್ರಿಕೆಯಲ್ಲಿ ನಿರಂತರವಾಗಿ ಲೇಖನವನ್ನು ಬರೆಯುತ್ತಿದ್ದರು. ಬಹುಮತದ ಹೆಸರಿನಲ್ಲಿ ಕೋಗಿಲೆಯನ್ನು ಬಿಟ್ಟು ಕಾಗೆಯನ್ನು ರಾಷ್ಟ್ರ ಪಕ್ಷಿ ಎನ್ನಲಾಗದು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಲ್ಲಿ ಕೇಂದ್ರ ಮಂತ್ರಿ ಪ್ರಧಾನ್‌ ಬುಲೆಟ್‌ ಟ್ರೇನ್‌ ವೇಗದಲ್ಲಿ ಇದ್ದಂತಿದೆ. ಭಾಷೆ ತುಂಬಾ ಸೂಕ್ಷ್ಮ ಮತ್ತು ಭಾವನಾತ್ಮಕ ವಿಷಯವಾಗಿದ್ದು, ಅವರು ‘ಅಪಘಾತಕ್ಕೆ ಅವಸರ ಮತ್ತು ವೇಗ ಕಾರಣ’ ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡು ಗೇರ್‌ ಬದಲಿಸಬೇಕು ಮತ್ತು ಎಲ್ಲರನ್ನೂ ಒಳಪಡಿಸಿಕೊಂಡು ಮುಂದೆ ಸಾಗಬೇಕು.