ಟಿಆರ್‌ಎಫ್ ಒಂದು ವಿದೇಶೀ ಶಕ್ತಿಗಳ ಕೈಗೊಂಬೆಯಂತಹ ಸಂಘಟನೆಯಾಗಿದ್ದು, ಮೇಲ್ನೋಟಕ್ಕೆ ಸ್ಥಳೀಯ ಮುಖವಾಡವನ್ನು ಧರಿಸಿಕೊಂಡಿದೆ. ಆದರೆ ಟಿಆರ್‌ಎಫ್ ನೈಜ ಉದ್ದೇಶವೇನು? ಜಮ್ಮು ಕಾಶ್ಮೀರದಾದ್ಯಂತ ಭಯ ಹಬ್ಬಿಸಿ, ಅಭಿವೃದ್ಧಿಯನ್ನು ಸ್ಥಗಿತಗೊಳಿಸಿ, ಜನರನ್ನು ವಿಭಜಿಸುವುದು. 

ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಭಯೋತ್ಪಾದನೆಯ ಹೊಸ ಮುಖವೊಂದು ಕಾಣಿಸಿಕೊಂಡಿದೆ. ಈ ಗುಂಪು ತನ್ನನ್ನು ತಾನು ದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಎಂದು ಕರೆದುಕೊಂಡಿದೆ. 2019ರಲ್ಲಿ ಆರ್ಟಿಕಲ್ 370 ರದ್ದುಗೊಂಡ ಬೆನ್ನಲ್ಲಿ ಸೃಷ್ಟಿಯಾದ ಟಿಆರ್‌ಎಫ್ ಈಗ ಜಮ್ಮು ಮತ್ತು ಕಾಶ್ಮೀರದ ಶಾಂತಿ ಮತ್ತು ಸುರಕ್ಷತೆಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಮೇಲ್ನೋಟಕ್ಕೆ ಇದು ಸ್ಥಳೀಯ ಕಾಶ್ಮೀರಿಗರ ಹಕ್ಕುಗಳಿಗೆ ಹೋರಾಡುವ ಸಂಘಟನೆಯಂತೆ ಕಂಡರೂ, ಭದ್ರತಾ ತಜ್ಞರು ಮತ್ತು ಸರ್ಕಾರಿ ಸಂಸ್ಥೆಗಳು ಟಿಆರ್‌ಎಫ್ ಪಾಕಿಸ್ತಾನಿ ಮೂಲದ ಭಯೋತ್ಪಾದನಾ ಸಂಘಟನೆಗಳ ಬೆಂಬಲ ಹೊಂದಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಟಿಆರ್‌ಎಫ್ ಒಂದು ವಿದೇಶೀ ಶಕ್ತಿಗಳ ಕೈಗೊಂಬೆಯಂತಹ ಸಂಘಟನೆಯಾಗಿದ್ದು, ಮೇಲ್ನೋಟಕ್ಕೆ ಸ್ಥಳೀಯ ಮುಖವಾಡವನ್ನು ಧರಿಸಿಕೊಂಡಿದೆ. ಆದರೆ ಟಿಆರ್‌ಎಫ್ ನೈಜ ಉದ್ದೇಶವೇನು? ಜಮ್ಮು ಕಾಶ್ಮೀರದಾದ್ಯಂತ ಭಯ ಹಬ್ಬಿಸಿ, ಅಭಿವೃದ್ಧಿಯನ್ನು ಸ್ಥಗಿತಗೊಳಿಸಿ, ಜನರನ್ನು ವಿಭಜಿಸುವುದು!

Bengaluru Road Rage: ಕನ್ನಡಿಗರ ಹಿರಿಮೆಗೆ ಧಕ್ಕೆ ತಂದ DRDO ಅಧಿಕಾರಿಯ ಮಾತು ಮತ್ತು IAF ಅಧಿಕಾರಿಯ ಕ್ರಮಗಳು

ಏನು ಈ ಟಿಆರ್‌ಎಫ್?: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದಾಗಿ, ಕಣಿವೆ ರಾಜ್ಯದಲ್ಲಿ ಉದ್ವಿಗ್ನತೆಗಳು ನಡೆದ ಬಳಿಕ 2019ರ ಕೊನೆಯ ಭಾಗದಲ್ಲಿ ಟಿಆರ್‌ಎಫ್ ಸಂಘಟನೆ ಸ್ಥಾಪನೆಗೊಂಡಿತು. ಈ ಗುಂಪು ತನ್ನನ್ನು ತಾನು ಒಂದು ಸ್ಥಳೀಯ ಸಂಘಟನೆ ಎಂದು ಕರೆದುಕೊಳ್ಳುತ್ತದೆ. ಆದರೆ, ಭಾರತದ ಗುಪ್ತಚರ ಸಂಸ್ಥೆಗಳು ಅದು ಪಾಕಿಸ್ತಾನಿ ಬೆಂಬಲಿತ ಲಷ್ಕರ್ ಎ ತೈಬಾ (ಎಲ್ಇಟಿ) ಮತ್ತು ಹಿಜ್ಬುಲ್ ಮುಜಾಹಿದೀನ್ ನಂತಹ ಎರಡು ಪಾಕಿಸ್ತಾನಿ ಬೆಂಬಲಿತ ಭಯೋತ್ಪಾದಕ ಸಂಘಟನೆಗಳೊಡನೆ ಸಂಪರ್ಕ ಹೊಂದಿದೆ ಎಂದು ಸ್ಪಷ್ಟಪಡಿಸಿವೆ.

ಹಿಂದಿನ ಭಯೋತ್ಪಾದಕ ಸಂಘಟನೆಗಳು ಬಹಿರಂಗವಾಗಿ ಧಾರ್ಮಿಕ ಭಯೋತ್ಪಾದನೆ ನಡೆಸಿದ್ದರೆ, ಟಿಆರ್‌ಎಫ್ ತನ್ನ ನಡೆಯನ್ನು 'ಸೆಕ್ಯುಲರ್ (ಜಾತ್ಯಾತೀತ) ಪ್ರತಿರೋಧ' ಎಂದು ಕರೆದುಕೊಂಡಿತ್ತು. ಇದು ಪಾಕಿಸ್ತಾನದ ಮೇಲೆ ಅಂತಾರಾಷ್ಟ್ರೀಯ ಒತ್ತಡವನ್ನು, ಅದರಲ್ಲೂ ಫೈನಾನ್ಸಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್) ಕೈಗೊಳ್ಳುವ ಕಠಿಣ ಕ್ರಮವನ್ನು ತಪ್ಪಿಸಲು ಅನುಸರಿಸಿದ ಹೆಜ್ಜೆಯಾಗಿದೆ. ಟಿಆರ್‌ಎಫ್ ಏನೇ ಹೇಳಿಕೊಂಡರೂ, ಅದು ನಡೆಸಿದ ಭೀಕರ ದಾಳಿ ಬೇರೆಯೇ ಕತೆಯನ್ನು ಹೇಳುತ್ತಿದೆ.

ಟಿಆರ್‌ಎಫ್ ಯಾರನ್ನು ಗುರಿಯಾಗಿಸಿದೆ?
ಟಿಆರ್‌ಎಫ್ ಇಲ್ಲಿಯ ತನಕ ನಡೆಸಿದ ದಾಳಿಗಳ ಗುರಿಗಳು:
ನಾಗರಿಕರು, ಅದರಲ್ಲೂ ಕಾಶ್ಮೀರಿ ಹಿಂದೂಗಳು ಮತ್ತು ಸಿಖ್ಖರಂತಹ ಅಲ್ಪಸಂಖ್ಯಾತರು
ಪ್ರವಾಸಿಗರು ಮತ್ತು ವಲಸಿಗ ಕಾರ್ಮಿಕರು
ಸರ್ಕಾರಿ ಉದ್ಯೋಗಿಗಳು ಮತ್ತು ಭದ್ರತಾ ಪಡೆಗಳ ಸಿಬ್ಬಂದಿ
2021ರಲ್ಲಿ ಟಿಆರ್‌ಎಫ್ ಶ್ರೀನಗರದಲ್ಲಿ ಓರ್ವ ಕಾಶ್ಮೀರಿ ಪಂಡಿತ ಉದ್ಯಮಿ ಮತ್ತು ಇಬ್ಬರು ಶಾಲಾ ಶಿಕ್ಷಕರನ್ನು ಹತ್ಯೆಗೈದಿತ್ತು.
2020ರಲ್ಲಿ ಕುಪ್ವಾರಾದಲ್ಲಿ ನಡೆದ ಘರ್ಷಣೆಯಲ್ಲಿ ಐವರು ಭಾರತೀಯ ಯೋಧರು ಮತ್ತು ಐವರು ಟಿಆರ್‌ಎಫ್ ಭಯೋತ್ಪಾದಕರು ಸಾವಿಗೀಡಾಗಿದ್ದರು.
ಈಗ, 2025ರಲ್ಲಿ, ಟಿಆರ್‌ಎಫ್ ಇಲ್ಲಿಯವರೆಗಿನ ತನ್ನ ಅತ್ಯಂತ ಭೀಕರ ದಾಳಿ ನಡೆಸಿ, ಪಹಲ್ಗಾಂವ್‌ನಲ್ಲಿ ರಕ್ತದ ಓಕುಳಿ ಹರಿಸಿದ್ದು, ಈ ಘೋರ ಕೃತ್ಯ ದೇಶವನ್ನೇ ಆಘಾತಗೊಳಿಸಿದೆ.

ಪಹಲ್ಗಾಂವ್ ದಾಳಿ ಯಾಕೆ ಮುಖ್ಯವಾಗಿದೆ?: ಕಾಶ್ಮೀರದ ಪಹಲ್ಗಾಂವ್ ಬಳಿಯ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿ ಸಮಸ್ತ ಭಾರತವನ್ನೇ ಆಘಾತಕ್ಕೆ ತಳ್ಳಿದೆ. ಭಾರತದ ಅತ್ಯಂತ ಸುಂದರ ತಾಣಗಳಲ್ಲಿ ಒಂದಾದ ಪಹಲ್ಗಾಂವ್‌ನಲ್ಲಿ ಶಾಂತವಾಗಿರಬೇಕಿದ್ದ ಪ್ರವಾಸಿ ಸಮಯ ದುರಂತಮಯವಾಗಿ ಪರಿವರ್ತನೆಗೊಂಡಿದ್ದು, 26 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅವರಲ್ಲಿ ಬಹುತೇಕರು ಪ್ರವಾಸಿಗರೇ ಆಗಿದ್ದಾರೆ. ಎಪ್ರಿಲ್ 22ರ ಅಪರಾಹ್ನ ಈ ದಾಳಿ ನಡೆದಿದ್ದು, ಭಾರೀ ಆಯುಧಗಳನ್ನು ಹೊಂದಿದ್ದ ಭಯೋತ್ಪಾದಕರ ಗುಂಪು ದಟ್ಟ ಕಾಡುಗಳಿಂದ ಹೊರಬಂದು, ಈ ಪ್ರಸಿದ್ಧ ಚಾರಣ ತಾಣವನ್ನು ಸುತ್ತುವರಿಯಿತು. ಸಾವಿಗೀಡಾದವರಲ್ಲಿ ಇಬ್ಬರು ವಿದೇಶಿಗರು, ಇಬ್ಬರು ಸ್ಥಳೀಯ ನಿವಾಸಿಗಳು ಮತ್ತು ಲೆಫ್ಟಿನೆಂಟ್ ವಿನಯ್ ನರ್ವಾಲ್ (26) ಎಂಬ ಭಾರತೀಯ ನೌಕಾಪಡೆಯ ಅಧಿಕಾರಿ ಸೇರಿದ್ದರು. ಕೊಚ್ಚಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ವಿನಯ್ ನರ್ವಾಲ್ ಇತ್ತೀಚೆಗಷ್ಟೇ ವಿವಾಹವಾಗಿದ್ದರು. ರಜೆಯಲ್ಲಿದ್ದ ವಿನಯ್ ಪತ್ನಿಯೊಡನೆ ಹನಿಮೂನ್‌ಗಾಗಿ ಕಾಶ್ಮೀರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಭಯೋತ್ಪಾದಕರ ದಾಳಿಗೆ ಬಲಿಯಾದರು.

ದುರದೃಷ್ಟವಶಾತ್, ಕರ್ನಾಟಕದ ಇಬ್ಬರು ಪ್ರವಾಸಿಗರೂ ಸಹ ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ: ಶಿವಮೊಗ್ಗದ 47 ವರ್ಷ ವಯಸ್ಸಿನ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ ಮತ್ತು ಬೆಂಗಳೂರಿನ ಮತ್ತಿಕೆರೆಯ 41 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಭರತ್ ಭೂಷಣ್ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ವೇಳೆ ಅವರೊಡನೆ ಪ್ರಯಾಣಿಸುತ್ತಿದ್ದ ಅವರ ಕುಟುಂಬಸ್ತರು ದಾಳಿಯಲ್ಲಿ ಪಾರಾಗಿದ್ದರೂ, ಬಹಳಷ್ಟು ಆಘಾತಕ್ಕೆ ಒಳಗಾಗಿದ್ದಾರೆ. ಮಂಜುನಾಥ್ ಅವರ ಪತ್ನಿ, ಮಲ್ನಾಡ್ ಅಡಿಕೆ ಮಾರಾಟ ಸಹಕಾರ ಸಂಘದ ಬೀರೂರು ಶಾಖೆಯ ಮ್ಯಾನೇಜರ್ ಆಗಿರುವ ಪಲ್ಲವಿ ಅವರು ಈ ದುರ್ಘಟನೆಯನ್ನು ವಿವರಿಸಿದ್ದಾರೆ. ಗುಂಡಿನ ಸದ್ದು ಮೊಳಗಿದಾಗ ಮಂಜುನಾಥ್ ತಮ್ಮ ಮಗನಿಗಾಗಿ ಏನನ್ನೋ ಖರೀದಿಸುತ್ತಿದ್ದರು. ಇದ್ದಕ್ಕಿದ್ದಂತೆ ಅವರು ರಕ್ತದ ಮಡುವಿನಲ್ಲಿ ಕುಸಿದು ಬಿದ್ದರು. ತಾನು ಮತ್ತು ಮಗ ಭಯೋತ್ಪಾದಕರ ಬಳಿ ತಮ್ಮನ್ನೂ ಕೊಲ್ಲುವಂತೆ ಬೇಡಿಕೊಂಡೆವು. ಆಗ ಅವರಲ್ಲಿ ಒಬ್ಬ "ಇಲ್ಲ, ನೀವು ಹೋಗಿ ಇದನ್ನು ಪ್ರಧಾನಿ ನರೇಂದ್ರ ಮೋದಿಗೆ ಹೇಳಿ!" ಎಂದಿದ್ದ ಎಂದು ಶಿಲ್ಪಾ ವಿವರಿಸಿದ್ದಾರೆ.

ಈ ದಾಳಿಯ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಒಂದು ಸಭೆಯಲ್ಲಿ ಭಾಗವಹಿಸಲು ತೆರಳಿದ್ದ ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವಿ ಸೂರ್ಯ ಅವರು ದಾಳಿಯಲ್ಲಿ ಮೃತಪಟ್ಟವರ ಕುಟುಂಬಸ್ತರನ್ನು ಸುರಕ್ಷಿತವಾಗಿ ಮನೆಗೆ ಕರೆತರಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ. ಈ ದಾಳಿ ನಡೆದ ತಾಣ 'ಮಿನಿ ಸ್ವಿಜರ್ಲ್ಯಾಂಡ್' ಎಂದೇ ಪ್ರಸಿದ್ಧವಾಗಿದ್ದು, ಅದು ಸುಂದರವಾದ, ಆದರೆ ದುರ್ಗಮವಾದ ಕಣಿವೆಯಾಗಿದೆ. ಅಲ್ಲಿಗೆ ಕೇವಲ ಕಾಲ್ನಡಿಗೆಯ ಮೂಲಕ ಅಥವಾ ಕುದುರೆಯ ಮೂಲಕ ಮಾತ್ರವೇ ತೆರಳಲು ಸಾಧ್ಯ. ಇದು ರಕ್ಷಣಾ ಕಾರ್ಯಾಚರಣೆಗಳನ್ನು ಇನ್ನಷ್ಟು ಕಷ್ಟಕರವಾಗಿಸಿದೆ. ಸ್ಥಳೀಯರು ಕುದುರೆಗಳ ಮೂಲಕ ಗಾಯಾಳುಗಳನ್ನು ಅಲ್ಲಿಂದ ರಕ್ಷಿಸಲು ಪ್ರಯತ್ನಿಸಿದರೆ, ಗಂಭೀರವಾಗಿ ಗಾಯಗೊಂಡವರನ್ನು ಹೆಲಿಕಾಪ್ಟರ್‌ಗಳ ಮೂಲಕ ಏರ್ ಲಿಫ್ಟ್ ಮಾಡಲಾಯಿತು. ಬಹಳಷ್ಟು ಜನರು ಇನ್ನೂ ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಇಲ್ಲಿಯ ತನಕ ಸರ್ಕಾರ ಅಧಿಕೃತವಾದ ಸಾವಿನ ಸಂಖ್ಯೆಯನ್ನು ಬಿಡುಗಡೆಗೊಳಿಸಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ತನ್ನ ಸೌದಿ ಅರೇಬಿಯಾ ಭೇಟಿಯನ್ನು ಮೊಟಕುಗೊಳಿಸಿ, ಕಾಶ್ಮೀರದ ಪರಿಸ್ಥಿತಿಯನ್ನು ಅವಲೋಕಿಸಲು ಭಾರತಕ್ಕೆ ಮರಳಿದ್ದಾರೆ.

ದಾಳಿಗೆ ಹಾದಿಯಾಯಿತೇ ಪಾಕಿಸ್ತಾನಿ ಸೇನಾ ಮುಖ್ಯಸ್ಥರ ಹೇಳಿಕೆ?: ಇತ್ತೀಚೆಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸೀಂ ಮುನೀರ್ ನೀಡಿದ್ದ ವಿವಾದಾತ್ಮಕ ಹೇಳಿಕೆ ಪಹಲ್ಗಾಂವ್ ದಾಳಿಗೆ ಕಾರಣವಾಗಿರುವ ಸಾಧ್ಯತೆಗಳಿವೆ. ಆತ ಕಾಶ್ಮೀರ ಪಾಕಿಸ್ತಾನದ 'ಜುಗ್ಯುಲರ್ ವೇನ್' ಎಂದು ಕರೆದಿದ್ದರು. ಇಂತಹ ಹೇಳಿಕೆಗಳು ಭಯೋತ್ಪಾದಕ ಸಂಘಟನೆಗಳಿಗೆ ಹೇಯ ಕೃತ್ಯಗಳನ್ನು ನಡೆಸಲು ಪ್ರೋತ್ಸಾಹ ನೀಡುತ್ತವೆ ಎಂದು ಗುಪ್ತಚರ ಮೂಲಗಳು ಭಾವಿಸಿವೆ. 'ಜುಗುಲರ್ ವೇನ್' ಎನ್ನುವುದು ಕತ್ತಿನಲ್ಲಿರುವ ಮುಖ್ಯವಾದ ರಕ್ತನಾಳವಾಗಿದ್ದು, ಇದು ತಲೆಯಿಂದ ಹೃದಯಕ್ಕೆ ರಕ್ತವನ್ನು ಸಾಗಿಸುತ್ತದೆ. 

ವ್ಯಕ್ತಿಯ ಉಳಿವಿಗೆ ಈ ರಕ್ತನಾಳಗಳು ಅನಿವಾರ್ಯವಾಗಿದ್ದು, ಅವುಗಳಿಗೆ ಹಾನಿ ಉಂಟಾದರೆ ಪ್ರಾಣಕ್ಕೇ ಅಪಾಯ ತಲೆದೋರಬಹುದು. ಕಾಶ್ಮೀರವನ್ನು ಪಾಕಿಸ್ತಾನದ ಕತ್ತಿನ ರಕ್ತನಾಳ ಎಂದು ಕರೆಯುವಂತಹ ರಾಜಕೀಯ ಹೇಳಿಕೆಗಳು ಕಾಶ್ಮೀರ ಪಾಕಿಸ್ತಾನಕ್ಕೆ ಅತ್ಯಂತ ಮಹತ್ವದ್ದು ಎಂಬ ಅರ್ಥವನ್ನು ನೀಡುತ್ತವೆ. ಅಮೆರಿಕಾ ಉಪಾಧ್ಯಕ್ಷರಾದ ಜೆಡಿ ವ್ಯಾನ್ಸ್ ಅವರು ಭಾರತಕ್ಕೆ ಭೇಟಿ ನೀಡುತ್ತಿರುವ ಮಹತ್ವದ ಸಂದರ್ಭದಲ್ಲಿ ಈ ದಾಳಿ ಸಂಭವಿಸಿದ್ದು, ಅಂತಾರಾಷ್ಟ್ರೀಯ ಗಮನವನ್ನು ಸೆಳೆಯುವ ಸಲುವಾಗಿ ಈ ದಾಳಿಯನ್ನು ನಡೆಸಲಾಯಿತೇ ಎಂಬ ಅನುಮಾನಗಳು ಮೂಡಿವೆ.

ಸಂಚಿನ ಹಿಂದೆ ಇದ್ದರೇ ಲಷ್ಕರ್ ಕಮಾಂಡರ್‌ಗಳು?: ಭಾರತೀಯ ಗುಪ್ತಚರ ಸಂಸ್ಥೆಗಳ ಪ್ರಕಾರ, ಲಷ್ಕರ್ ಎ ತೈಬಾದ ಉನ್ನತ ಕಮಾಂಡರ್, ಖಾಲಿದ್ ಎಂದೂ ಹೆಸರಾದ ಸೈಫುಲ್ಲಾ ಕಸೂರಿ ಈ ದಾಳಿಯ ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಅಬು ಮೂಸಾ ಸೇರಿದಂತೆ, ಪಾಕಿಸ್ತಾನದ ರಾವಲ್‌ಕೋಟ್ ಮೂಲದ ಇಬ್ಬರು ಲಷ್ಕರ್ ಮುಖಂಡರ ಪಾತ್ರದ ಕುರಿತು ಅನ್ವೇಷಿಸಲಾಗುತ್ತಿದೆ. ಎಪ್ರಿಲ್ 18ರಂದು, ಪಹಲ್ಗಾಂವ್ ದಾಳಿಗೆ ಕೆಲವೇ ದಿನಗಳ ಮುನ್ನ ಅಬು ಮೂಸಾ ರಾವಲ್‌ಕೋಟ್‌ನಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡುತ್ತಾ, "ಕಾಶ್ಮೀರದಲ್ಲಿ ಜಿಹಾದ್ ಮುಂದುವರಿಯಲಿದೆ, ಗುಂಡುಗಳು ಸಿಡಿಯಲಿವೆ, ಮತ್ತು ಶಿರಚ್ಛೇದನಗಳು ನಡೆಯಲಿವೆ" ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ. ಆತ ಭಾರತ ಸರ್ಕಾರ ಹೊರಗಿನವರಿಗೆ ನಿವಾಸಿ ಪ್ರಮಾಣಪತ್ರ ನೀಡಿ, ಕಾಶ್ಮೀರದ ಜನಸಂಖ್ಯಾ ಚಿತ್ರಣವನ್ನು ಬದಲಿಸಲು ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದ್ದ.

ಧರ್ಮಾಧಾರಿತವಾಗಿ ದಾಳಿಗೆ ಒಳಗಾದ ಪ್ರವಾಸಿಗರು: ಆರಂಭಿಕ ವರದಿಗಳ ಪ್ರಕಾರ, ದಾಳಿಗೆ ತುತ್ತಾದ ದುರದೃಷ್ಟವಂತರ ಬಳಿ ಭಯೋತ್ಪಾದಕರು ಇಸ್ಲಾಮಿಕ್ 'ಕಲ್ಮಾ' (ಧಾರ್ಮಿಕ ನುಡಿ) ಪಠಿಸುವಂತೆ ಹೇಳಿದ್ದರು. ಅದನ್ನು ಹೇಳಲು ವಿಫಲರಾದವರನ್ನು ಅಲ್ಲಿಯೇ ಗುಂಡಿಕ್ಕಿ ಹತ್ಯೆಗೊಳಿಸಲಾಯಿತು. ಈ ದುರ್ಘಟನೆ ಈ ದಾಳಿಯಲ್ಲಿ ಧಾರ್ಮಿಕ ದ್ವೇಷವೂ ಬಹುದೊಡ್ಡ ಪಾತ್ರ ವಹಿಸಿದೆ ಎನ್ನುವುದನ್ನು ಸ್ಪಷ್ಟಪಡಿಸಿತು.

ದಾಳಿಗೆ ಪ್ರಚೋದನೆ ನೀಡಿದ ದ್ವೇಷ ಭಾಷಣಗಳು ಮತ್ತು ವಕ್ಫ್ ಪ್ರತಿಭಟನೆಗಳು: ಇಂತಹ ಹಿಂದೂ ವಿರೋಧಿ ದಾಳಿಗಳು ಇದ್ದಕ್ಕಿದ್ದಂತೆ ಗೊತ್ತುಗುರಿಯಿಲ್ಲದೆ ನಡೆಸುವಂತವಲ್ಲ ಎಂದು ಅಧಿಕಾರಿಗಳು ಅಭಿಪ್ರಾಯ ಪಡುತ್ತಾರೆ. ಭಾರತದಲ್ಲಿ ಈಗ ವಕ್ಫ್ ಮಸೂದೆಯಲ್ಲಿನ ಬದಲಾವಣೆಗಳಿಗೆ ಸಂಬಂಧಿಸಿದ ಪ್ರತಿಭಟನೆಗಳು ನಡೆಯುತ್ತಿದ್ದು, ಈ ಕುರಿತು ಪಾಕಿಸ್ತಾನಿ ತೀವ್ರವಾದಿಗಳಲ್ಲೂ ಆಕ್ರೋಶ ಮೂಡಿಸುವ ಸಲುವಾಗಿ ಇಂತಹ ದಾಳಿಯನ್ನು ಯೋಜಿತವಾಗಿ ರೂಪಿಸಿರಬಹುದು ಎನ್ನಲಾಗಿದೆ. ಇದು ಭಯೋತ್ಪಾದಕ ಸಂಘಟನೆಗಳಿಗೆ ಮತ್ತೆ ಜೊತೆಯಾಗಿ, ದಾಳಿ ಸಂಘಟಿಸಲು ಉತ್ತೇಜನ ನೀಡಿರುವ ಸಾಧ್ಯತೆಗಳಿವೆ.

ಯೋಜಿತ ದಾಳಿಯೇ ಹೊರತು ಭದ್ರತಾ ಲೋಪವಲ್ಲ: ಆರಂಭಿಕ ವರದಿಗಳ ಪ್ರಕಾರ, ಸ್ಥಳೀಯರ ನೆರವಿನೊಡನೆ ಆರು ಭಯೋತ್ಪಾದಕರು ಈ ದಾಳಿ ನಡೆಸಿದ್ದರು. ಈ ಭಯೋತ್ಪಾದಕರು ಕೆಲವು ದಿನಗಳ ಮುನ್ನವೇ ಈ ಪ್ರದೇಶಕ್ಕೆ ಆಗಮಿಸಿದ್ದು, ಅಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಎಪ್ರಿಲ್ ತಿಂಗಳ ಆರಂಭದಲ್ಲಿ ಭಯೋತ್ಪಾದಕರು ಈ ಪ್ರದೇಶದ ಹೊಟೆಲ್‌ಗಳಲ್ಲಿ ವಿಚಕ್ಷಣೆ ನಡೆಸಿವೆ ಎಂದು ಗುಪ್ತಚರ ಸಂಸ್ಥೆಗಳು ಹೇಳಿವೆ. ಆದ್ದರಿಂದಲೇ ಈ ದಾಳಿ ಗುಪ್ತಚರ ವೈಫಲ್ಯವಾಗಿರದೆ, ಭಯೋತ್ಪಾದಕರು ಸರಿಯಾದ ಸಮಯಕ್ಕೆ ಕಾದು ದಾಳಿ ನಡೆಸಿರುವ ಒಂದು ಪ್ರಕರಣವಾಗಿದೆ.

ಟಿಆರ್‌ಎಫ್ ಹಿಂದೆ ಯಾರಿದ್ದಾರೆ?: ಶ್ರೀನಗರದ ಶೇಖ್ ಸಜ್ಜಾದ್ ಗುಲ್ ಈ ಗುಂಪಿನ ನೇತೃತ್ವ ವಹಿಸಿದ್ದು, ಆತನನ್ನು ಭಾರತ 2022ರಲ್ಲಿ ಭಯೋತ್ಪಾದಕ ಎಂದು ಘೋಷಿಸಿದೆ. ಟಿಆರ್‌ಎಫ್ ಕಾರ್ಯಾಚರಣಾ ಮುಖ್ಯಸ್ಥನಾಗಿದ್ದ ಬಸಿತ್ ಅಹ್ಮದ್ ದರ್ ಈಗ ಹತ್ಯೆಯಾಗಿದ್ದು, ಆತನ ಬದಲಿಗೆ ಬೇರೆಯವರು ಆ ಸ್ಥಾನ ತುಂಬುವ ಸಾಧ್ಯತೆಗಳಿವೆ. ಟಿಆರ್‌ಎಫ್ ಸಂಘಟನೆಯ ವಕ್ತಾರನಾಗಿರುವ ಅಹ್ಮದ್ ಖಾಲಿದ್ ಹಲವು ದಾಳಿಗಳಿಗೆ ಜವಾಬ್ದಾರಿ ವಹಿಸಿಕೊಂಡಿದ್ದಾನೆ. ಇತರ ಮುಖ್ಯ ವ್ಯಕ್ತಿಗಳಾದ ಸಾಜಿದ್ ಜಟ್ಟ್ ಮತ್ತು ಸಲೀಮ್ ರೆಹ್ಮಾನಿ ಲಷ್ಕರ್ ಎ ತೈಬಾ ಜತೆ ಸಂಪರ್ಕ ಹೊಂದಿದ್ದಾರೆ. 2023ರಲ್ಲಿ ಭಾರತ ಟಿಆರ್‌ಎಫ್ ಅನ್ನು ಕಾನೂನು ಬಾಹಿರ ಚಟುವಟಿಕೆ (ತಡೆ) ಕಾಯ್ದೆಯ (ಯುಎಪಿಎ) ಅಡಿಯಲ್ಲಿ ಟಿಆರ್‌ಎಫ್ ಅನ್ನು ಅಧಿಕೃತವಾಗಿ ನಿಷೇಧಿಸಿದೆ. ಈ ಸಂಘಟನೆಯನ್ನು ಯುವಕರ ನೇಮಕಾತಿ, ಆಯುಧಗಳ ಕಳ್ಳಸಾಗಣೆ, ಮತ್ತು ಗಡಿಯಾಚೆಗಿನ ಭತೋತ್ಪಾದನೆಗೆ ಬೆಂಬಲ ನೀಡುವ ಆರೋಪಗಳಡಿ ನಿರ್ಬಂಧಿಸಲಾಗಿತ್ತು.

ದೊಡ್ಡ ಅಪಾಯ: ಪ್ರೊಪಗಾಂಡ ಮತ್ತು ನೇಮಕಾತಿ: ಟಿಆರ್‌ಎಫ್ ಕೇವಲ ಕಾಶ್ಮೀರದ ನೆಲದಲ್ಲಿ ಮಾತ್ರವೇ ಕಾರ್ಯಾಚರಿಸುತ್ತಿಲ್ಲ. ಬದಲಿಗೆ, ಅದು ದ್ವೇಷ ಹಬ್ಬಿಸಲು, ಯುವಕರ ಮೇಲೆ ಪ್ರಭಾವ ಬೀರಲು, ಮತ್ತು ಹೊಸ ಯೋಧರನ್ನು ನೇಮಕಗೊಳಿಸಲು ಸಾಮಾಜಿಕ ಜಾಲತಾಣಗಳನ್ನೂ ಬಳಸುತ್ತದೆ. ಇದು ಹಲವಾರು ಕಾರ್ಯಾಚರಣೆಗಳನ್ನು ಭಾರತದ ಗಡಿಯ ಹೊರಗಿನಿಂದಲೇ ಆಯೋಜಿಸುತ್ತದೆ. 2022ರಲ್ಲಿ ಕಾಶ್ಮೀರದ ಬಹುತೇಕ ಹೊಸ ನೇಮಕಾತಿಗಳಿಗೆ ಟಿಆರ್‌ಎಫ್ ಪಾತ್ರವಿತ್ತು. ನಾಯಕರನ್ನು ಕಳೆದುಕೊಂಡ ಬಳಿಕವೂ ಟಿಆರ್‌ಎಫ್ ತನ್ನ ಜಾಲವನ್ನು ವೃದ್ಧಿಸುತ್ತಾ ಸಾಗಿದೆ.

ಟಿಆರ್‌ಎಫ್ ನಿಗ್ರಹಿಸಲು, ದಾಳಿಗಳನ್ನು ತಡೆಯಲು ಭಾರತ ಕೈಗೊಳ್ಳಬೇಕಾದ ಕ್ರಮಗಳು
ಭಾರತ ತನ್ನ ಗಡಿ ಭದ್ರತೆಯನ್ನು ಇನ್ನಷ್ಟು ಬಲಪಡಿಸಿ, ಸ್ಲೀಪರ್ ಸೆಲ್‌ಗಳ ಮೇಲೆ ಕಟ್ಟುನಿಟ್ಟಿನ ಕಣ್ಣಿಡಬೇಕು. ಟಿಆರ್‌ಎಫ್ ತನ್ನನ್ನು ತಾನು ಒಂದು 'ಸ್ಥಳೀಯ ಚಳುವಳಿ' ಎಂದು ಕರೆದುಕೊಂಡಿದ್ದು, ಈ ಸುಳ್ಳನ್ನು ಭಾರತ ಬಯಲುಗೊಳಿಸಬೇಕು. ಕಾಶ್ಮೀರದ ಜನತೆಗೆ ಉದ್ಯೋಗ, ಶಿಕ್ಷಣ ಮತ್ತು ಅಭಿವೃದ್ಧಿಯ ನೆರವು ನೀಡಬೇಕು. ಇದರಿಂದಾಗಿ ಯುವಕರು ಭಯೋತ್ಪಾದಕರ ಜಾಲಕ್ಕೆ ಬೀಳುವುದು ಕಡಿಮೆಯಾಗುವ ಸಾಧ್ಯತೆಗಳಿವೆ. ಟಿಆರ್‌ಎಫ್ ಕೇವಲ ಒಂದು ಮುಖವಾಡವಷ್ಟೇ. ಇದರ ಹಿಂದೆ ಭಾರತವನ್ನು ವಿಭಜಿಸುವ ಉದ್ದೇಶ ಹೊಂದಿರುವ ಅದೇ ಭಯೋತ್ಪಾದನೆಯ ಮುಖವಿದೆ. ಈಗ ಪಹಲ್ಗಾಂವ್ ಭಯೋತ್ಪಾದನಾ ದಾಳಿಯಲ್ಲಿ ಮಂಜುನಾಥ್ ರಾವ್ ಮತ್ತು ಭರತ್ ಭೂಷಣ್ ಅವರಂತಹ ಕನ್ನಡಿಗರೂ ಬಲಿಯಾಗಿದ್ದು, ಭಯೋತ್ಪಾದನೆ ಕೇವಲ ಕಾಶ್ಮೀರದ ಸಮಸ್ಯೆಯಾಗಿರದೆ, ಸಮಸ್ತ ಭಾರತವನ್ನೇ ಬಾಧಿಸುತ್ತಿರುವ ಪಿಡುಗಾಗಿದೆ. ಟಿಆರ್‌ಎಫ್ ಅನ್ನು ನಿಗ್ರಹಿಸಲು ನಮಗೆ ಸತ್ಯ, ಐಕ್ಯತೆ ಮತ್ತು ಕಟ್ಟುನಿಟ್ಟಿನ ಕ್ರಮಗಳ ಅಗತ್ಯವಿದೆ. ಕಾಶ್ಮೀರಕ್ಕೆ ಈಗ ಶಾಂತಿಯ ಅಗತ್ಯವಿದೆಯೇ ಹೊರತು ಪ್ರೊಪಗಾಂಡ ಅಲ್ಲ!

ಸಿಯಾಚಿನ್‌ನ ರಕ್ಷಣೆಗೆ ತುಮಕೂರಿನ ಪ್ರಚಂಡರು: ಸೇನೆಗೆ ಸೇರ್ಪಡೆಯಾಗಲಿವೆ 156 ಎಚ್ಎಎಲ್ ಪ್ರಚಂಡ್ ಹೆಲಿಕಾಪ್ಟರ್‌ಗಳು

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)