ಏಪ್ರಿಲ್ 23, ಈ ದಿನಾಂಕ ಇಡೀ ವಿಶ್ವ ಸಾಹಿತ್ಯದಲ್ಲಿ ಮಹತ್ತರ ದಿನ. ಶೇಕ್ಸ್‌ಪಿಯರ್ ಜನಿಸಿದ್ದು ಏಪ್ರಿಲ್ 23, 1564. ಅದೇನು ಕಾಕತಾಳೀಯವೋ, ಏಪ್ರಿಲ್ 23 ಅನೇಕ ಸಾಹಿತ್ಯ ದಿಗ್ಗಜರ ಹುಟ್ಟು ಮತ್ತು ಸಾವು ಎರಡನ್ನೂ ನೋಡುತ್ತಾ ತಣ್ಣಗೆ ಕೂತಿದೆ.
ಆರ್.ಎಸ್.ವೆಂಕಟರಾಜ್, ಮಾಜಿ ಉಪ ನಿರ್ದೇಶಕರು, ಪ್ರಸಾರಾಂಗ, ವಿಟಿಯು, ಬೆಳಗಾವಿ
ಏಪ್ರಿಲ್ 23, ಈ ದಿನಾಂಕ ಇಡೀ ವಿಶ್ವ ಸಾಹಿತ್ಯದಲ್ಲಿ ಮಹತ್ತರ ದಿನ. ಶೇಕ್ಸ್‌ಪಿಯರ್ ಜನಿಸಿದ್ದು ಏಪ್ರಿಲ್ 23, 1564. ಅದೇನು ಕಾಕತಾಳೀಯವೋ, ಏಪ್ರಿಲ್ 23 ಅನೇಕ ಸಾಹಿತ್ಯ ದಿಗ್ಗಜರ ಹುಟ್ಟು ಮತ್ತು ಸಾವು ಎರಡನ್ನೂ ನೋಡುತ್ತಾ ತಣ್ಣಗೆ ಕೂತಿದೆ. ಸರ್ವಾಂಟೆಸ್, ಶೇಕ್ಸ್‌ಪಿಯರ್, ಇಂಕಾ ಗಾರ್ಸಿಲಾಸೋ ಡೆ ಲಾ ವೆಗಾ, ಮೌರಿಸ್ ಡ್ರುಆನ್, ಹೋಲ್ಡರ್ ಕೆ.ಲಾಕ್ಸ್ನಸ್, ಪ್ಲಾಡಿಮಿರ್ ನಬೋಕೋವ್, ಜೋಸೆಫ್ ಪ್ಲಾ, ಮ್ಯಾನುಯೆಲ್ ಮೆಜಿಯಾ ವ್ಯಾಲೆಜೋ..ಇವರೆಲ್ಲರ ಹುಟ್ಟು ಅಥವಾ ಸಾವು ಏಪ್ರಿಲ್ 23ರ ಜೊತೆ ಥಳಕು ಹಾಕಿಕೊಂಡಿದೆ. ಈ ಎಲ್ಲಾ ಮಹನೀಯರು ಆಯಾ ಕಾಲಘಟ್ಟದಲ್ಲಿ, ಅವರ ದೇಶ ಭಾಷೆಯಲ್ಲಿ ಅತ್ಯಂತ ಉತ್ತುಂಗ ಕೃತಿಗಳನ್ನು ಕಟ್ಟಿ ಕೊಟ್ಟ ಪ್ರಾಥಃಸ್ಮರಣೀಯರು.
ಹಿನ್ನೆಲೆಯಲ್ಲಿ 1995ರಲ್ಲಿ ಪ್ಯಾರೀಸಿನಲ್ಲಿ ನಡೆದ ಯುನೆಸ್ಕೋ ಜನರಲ್ ಕಾನ್ಸರೆನ್ಸ್‌ನಲ್ಲಿ ಏಪ್ರಿಲ್ 23 ವಿಶ್ವ ಪುಸ್ತಕ ಮತ್ತು ಗ್ರಂಥಸ್ವಾಮ್ಯ ದಿನ ಎಂದು ಘೋಷಿಸಲಾಯಿತು. ಗ್ರಂಥ, ಗ್ರಂಥೋಧ್ಯಮ, ಗ್ರಂಥಾಲಯ, ಗ್ರಂಥಸ್ವಾಮ್ಯ ವಾಚನಾಭಿರುಚಿ... ಇತ್ಯಾದಿ ಹಲವು ಆಯಾಮಗಳಿಗೆ ಮಹತ್ವ ನೀಡಿ, ಅವುಗಳ ಕುರಿತು ಜಗತ್ತಿನಾದ್ಯಂತ ಪಸರಿಸಲು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದೇ ಇದರ ಮುಖ್ಯ ಉದ್ದೇಶ. ಓದುವ ಕಲೆ ಒಂದು ಸಂವಾದ. ಈ ಸಂವಾದದ ಭಾಗಿಗಳೆಂದರೆ ಓದುಗ ಮತ್ತು ಲೇಖಕ, ಇದು ಎರಡು ಮನಸ್ಸುಗಳ ಬೌದ್ಧಿಕ ಮತ್ತು ವೈಚಾರಿಕೆಗಳ ಮಂಥನ.
ಬಂದೂಕಿನ ಹಿಂದಿನ ಕ್ರೌರ್ಯ: ಟಿಆರ್‌ಎಫ್ ಕರಾಳ ಮುಖ ಅನಾವರಣಗೊಳಿಸಿದ ಪಹಲ್ಗಾಮ್ ದಾಳಿ
ಓದು ಮಾನವನಿಗೆ ಮಾತ್ರ ಸೀಮಿತವಾದ ದೈವದತ್ತ ವರ. ಹಾಗೂ ಓದುವ ಶಕ್ತಿ ಒಂದು ಪ್ರಬಲವಾದ ಅಸ್ತ್ರ, ಜಗತ್ತಿನಲ್ಲಿ ತಲೆ ಎತ್ತಿ ನಿಂತ ರಾಷ್ಟ್ರಗಳು, ಗ್ರಂಥಗಳಿಗೆ ಹಾಗೂ ಅವುಗಳ ಪಠಣಕ್ಕೆ ತನ್ನ ಪ್ರಜೆಗಳಿಗೆ ದೈನಂದಿನ ಜೀವನದಲ್ಲಿ ಅತ್ಯುತ್ತಮ ಸ್ಥಾನ ಕಲ್ಪಿಸಿಕೊಟ್ಟದ್ದೇ ಅವುಗಳ ಅಭ್ಯುದಯಕ್ಕೆ ನಾಂದಿಯಾಯಿತು. ಸಾಕ್ಷರತೆಯು ಜನತಾ ಚಳುವಳಿಯಾದ್ದರಿಂದ ರಷ್ಯಾ, ಇಂಡೋನೇಶಿಯಾ, ಜಪಾನ್, ಕ್ಯೂಬಾ, ಕೆನಡಾ, ಮೆಕ್ಸಿಕೋ, ಡೆನ್ಮಾರ್ಕ್ ಮುಂತಾದ ಅನೇಕ ದೇಶಗಳಲ್ಲಿ ಶಿಕ್ಷಣವು ಶಕ್ತಿಯಾಗಿ ಹೊರಹೊಮ್ಮಿ, ಇಂದು ಆ ರಾಷ್ಟ್ರಗಳು ಸಮೃದ್ಧ ಆರ್ಥಿಕ ಬುನಾದಿ ಮೇಲೆ ಗೋಪುರಗಳನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ.
2000ನೇ ಇಸವಿಯಿಂದ ಯುನೆಸ್ಕೋ ಪ್ರತಿ ವರ್ಷ ‘ವಿಶ್ವ ಪುಸ್ತಕ ರಾಜಧಾನಿ ನಗರ’ ಎಂದು ವಿಶ್ವದ ಒಂದು ನಗರವನ್ನು ಹಲವು ಅಳತೆಗೋಲಿನಿಂದ ಆಯ್ಕೆ ಮಾಡಿ ಪುರಸ್ಕರಿಸುತ್ತದೆ. ಹೀಗೆ ಆಯ್ಕೆ ಮಾಡಿದ ನಗರ ವರ್ಷವಿಡೀ ಪುಸ್ತಕ ಕುರಿತು ಹತ್ತು ಹಲವು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಪ್ರಪಂಚ ಪುಸ್ತಕ ರಾಜಧಾನಿ ಸಲಹಾ ಸಮಿತಿ ಶಿಫಾರಸಿನ ಮೇಲೆ ಯುನೆಸ್ಕೋ ಡೈರೆಕ್ಟರ್ ಜನರಲ್ ಆಡೆ ಅಕೌಲೆ(Audrey Azoulay) ರಿಯೋ ಡಿ ಜನೈರೋ (Rio de Janeiro), (Brazil) 2025ರ ವಿಶ್ವ ಪುಸ್ತಕ ರಾಜಧಾನಿಯಾಗಿ ಘೋಷಿಸಿದ್ದಾರೆ.
ಈ ಸಂದರ್ಭದಲ್ಲಿ ಶೇಕ್ಸ್ಪಿಯರ್ ಕುರಿತು ಹೇಳದಿದ್ದರೆ ತಪ್ಪಾದೀತೇನೋ?: ಶೇಕ್ಸ್‌ಪಿಯರ್ ಜನಿಸಿದ್ದು ಏಪ್ರಿಲ್ 23, 1564. ಈತನ ಹುಟ್ಟೂರು ಇಂಗ್ಲೆಂಡಿನ ಮಧ್ಯ ಭಾಗದಲ್ಲಿರುವ ಸ್ಟಾಫರ್ಡ್ಅಪಾನ್-ಐವನ್ ಎಂಬ ಪುಟ್ಟ ಗ್ರಾಮ. 2025ನೇ ವರ್ಷ ಆತನ 461ನೇ ಹುಟ್ಟುಹಬ್ಬ. ಇಷ್ಟು ವರ್ಷಗಳಾದರೂ ಜಗತ್ತಿನ ಯಾವುದೇ ಭಾಷೆಯಲ್ಲಿ ಈತನನ್ನು ಮೀರಿಸವ ಮತ್ತೊಬ್ಬ ನಾಟಕಕಾರನಿಲ್ಲ ಎಂದರೆ, ನಂಬಲೇ ಬೇಕು. ಇದರಲ್ಲಿ ಅತಿಶಯೋಕ್ತಿ ಇಲ್ಲ. ಪ್ರತಿ ವರ್ಷ ಏಪ್ರಿಲ್ 23ರಂದು ಇಂಗ್ಲೆಂಡಿನ ಪುಟ್ಟ ಗ್ರಾಮವಾದ ಸ್ಟಾಫರ್ಡ್-ಅಪಾನ್-ಐವನ್‌ನಲ್ಲಿ ಬಹು ದೊಡ್ಡ ಸಾಹಿತ್ಯ ಹಬ್ಬ.
ಅಂದು ಜಗತ್ತಿನಾದ್ಯಂತದಿಂದ ಶೇಕ್ಸ್‌ಪಿಯರ್ ಅಭಿಮಾನಿಗಳ ಮಹಾಪೂರ ಹರಿದು ಬರುತ್ತದೆ. ಕಾವ್ಯವನ್ನು ನಾಟಕದೊಂದಿಗೆ ಮಿಲನ ಮಾಡಿಸುವ ಪ್ರಕ್ರಿಯೆಗೆ ಆತನಿಗೆ ಆತನೇ ಸಾಟಿ, ನಾಟಕ ನೋಡ, ನೋಡುತ್ತಿದ್ದಂತೆಯೇ ಪ್ರೇಕ್ಷಕ ನಾಟಕದ ಪಾತ್ರವಾಗತೊಡಗುತ್ತಾನೆ. ನಾಟಕದ ಅಂಶವಾಗ ತೊಡಗುತ್ತಾನೆ. ಅದು.. ಅದುವೇ ಶೇಕ್ಸ್‌ಪಿಯರ್‌ನ ವೈಶಿಷ್ಟತೆ. ಶೇಕ್ಸ್‌ಪಿಯರ್ ಒಟ್ಟು 36 ನಾಟಕ ಬರೆದಿದ್ದಾನೆ ಅವುಗಳಲ್ಲಿ 22 ನಾಟಕಗಳು ಕನ್ನಡಕ್ಕೆ ಬಂದಿವೆ. ಒಂದು ಘಳಿಗೆ ಶೇಕ್ಸ್‌ಪಿಯರ್ ಕನ್ನಡದವನೇನೋ ಎನ್ನುವ ಭ್ರಮೆಯೂ ಕಾಡುತ್ತದೆ. ಅಷ್ಟರಮಟ್ಟಿಗೆ ಈತನ ಪ್ರತಿಮಾ ಪ್ರಪಂಚವನ್ನು ಕನ್ನಡಕ್ಕೆ ಕಟ್ಟಿಕೊಟ್ಟಿದ್ದಾರೆ ಕನ್ನಡದ ಸಾರಸ್ವತ ಲೋಕದ ಪ್ರಾಥಃಸ್ಮರಣೀಯರು.
ಬಸಪ್ಪಶಾಸ್ತ್ರಿಗಳು ‘ಒಥೆಲೋ’ ನಾಟಕವನ್ನು ‘ಶೂರಸೇನ ಚರಿತ’ ಎಂದು ರೂಪಾಂತರಿಸಿದರು. ದಿ ಮರ್ಚೆಂಟ್ ಆಫ್ ವೆನಿಸ್ ‘ಪಾಂಚಾಲಿ ಪರಿಣಯ’ವಾಯಿತು. ರೋಮಿಯೋ ಜೂಲಿಯೆಟ್, ‘ರಾಮವರ್ಮ- ಲೀಲಾವತಿ’ಯಾಗಿ ಕನ್ನಡಕ್ಕೆ ಬಂತು. ಪುತಿನ, ವಿ.ಕೆ.ಗೋಕಾಕ್ ಶೇಕ್ಸ್ ಪಿಯರ್ ನಾಟಕ ಗೀತಗಳನ್ನು ಅನುವಾದಿಸಿದ್ದಾರೆ. ಬೇಂದ್ರೆ, ತೀನಂಶ್ರೀ, ಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತ ನಿಸಾರ್ ಅಹ್ಮದ್, ಕೆ.ಎಸ್ ಭಗವಾನ್, ಸುಮತೀಂದ್ರ ನಾಡಿಗ್, ರಾಮಚಂದ್ರದೇವ, ಕ.ವೆಂ.ರಾಘವಾಚಾರ್, ಬಿ.ಎಚ್.ಶ್ರೀಧರ್, ಬಿ.ಎ.ಸನಂ. ಎಚ್.ಎಸ್.ಶಿವಪ್ರಕಾಶ್ ಮುಂತಾದ ಮಹನೀಯರು ಶೇಕ್ಸ್‌ಪಿಯರ್ ಅನ್ನು ವೈವಿಧ್ಯಮಯವಾಗಿ ಕನ್ನಡಕ್ಕೆ ಬರಮಾಡಿಕೊಂಡಿದ್ದಾರೆ.
ನೌಕ್ರಿ ಕೊಡೋದು ಹ್ಯಾಂಗರ ಇರಲಿ, ಬದುಕಿದ್ರ ಸಾಕು: ಭೂ ಸಂತ್ರಸ್ತರ ಅಳಲು
ಶೇಕ್ಸ್‌ಪಿಯರ್ ವೈಯಕ್ತಿಕ ಬದುಕೂ ಅವನ ನಾಟಕಗಳಷ್ಟೇ ರೋಚಕ ಮತ್ತು ರಂಜನೀಯ - 18ನೇ ವಯಸ್ಸಿಗೆ ತನಗಿಂತ 8 ವರ್ಷ ದೊಡ್ಡವಳಾದ ಮೂರು ತಿಂಗಳ ಗರ್ಭಿಣಿ ಜಮೀನ್ದಾರ ಕುಟುಂಬದ ಹೆಂಗಸಾದ ಹಾಥ್‌ವೇಳನ್ನು ಮದುವೆಯಾಗುತ್ತಾನೆ. ಇವರಿಗೆ ನಾಲ್ಕು ಮಕ್ಕಳು. ಮೊದಲನೆಯ ಮಗಳು ಸುಸಾನ್ ಕಂಡರೆ ಶೇಕ್ಸ್‌ಪಿಯರ್‌ಗೆ ಪಂಚಪ್ರಾಣ. ಅದಕ್ಕೇ ಇರಬೇಕು ತನ್ನ 52ನೇ ವಯಸ್ಸಿನಲ್ಲಿ ಅಂದರೆ 1611ರಲ್ಲಿ ದೈವಾದೀನನಾದ ಶೇಕ್ಸ್‌ಪಿಯರ್ ಬಹುತೇಕ ಆಸ್ತಿಯನ್ನು ಮಗಳಾದ ಸುಸಾನ್‌ಗೆ ಮತ್ತು ತನ್ನ ಉಳಿದ ಆಸ್ತಿಯನ್ನು ಮೂರು ಮಕ್ಕಳಿಗೆ ಹಾಗೂ ಗೆಳೆಯರಿಗೆ, ಮತ್ತು ಹೆಂಡತಿಯಾದ ಹಾಥ್‌ವೇಳ ಹೆಸರಿಗೆ ಕೇವಲ ಒಂದು ಮಂಚವನ್ನು ಮಾತ್ರ ನೀಡಿದ್ದನಂತೆ!
