ಅಮೆರಿಕಾ ತನ್ನ ಆಕ್ರಮಣಕಾರಿ ನೀತಿಯಿಂದ ಹಲವು ದೇಶಗಳನ್ನು ಮಣಿಸಿದರೂ, ಅಣ್ವಸ್ತ್ರ ಹೊಂದಿರುವ ರಷ್ಯಾದ ಮೇಲೆ ದಾಳಿ ಮಾಡಲು ಹಿಂಜರಿಯುತ್ತದೆ. ಇದಕ್ಕೆ ಪ್ರಮುಖ ಕಾರಣ, ರಷ್ಯಾದ ನಾಯಕತ್ವವೇ ಸಂಪೂರ್ಣ ನಾಶವಾದರೂ ಅಮೆರಿಕಾದ ಮೇಲೆ ಸ್ವಯಂಚಾಲಿತವಾಗಿ ಪ್ರತಿದಾಳಿ ನಡೆಸುವ 'ಪೆರಿಮೀಟರ್' ಎಂಬ ರಹಸ್ಯ ವ್ಯವಸ್ಥೆ. 

ರಾಘವೇಂದ್ರ ಮೆಣಸೆ 

ವೆನಿಝುವೆಲಾದ ಕಥೆಯಲ್ಲಿ ಇನ್ನೊಂದು ಅಧ್ಯಾಯ ಮುಗಿದಿದೆ. ಅದರ ಜೊತೆಗೇ, 'ನನಗೆ ಬೇಕಾದದ್ದು ಏನಾದರೂ ನಿಮ್ಮ ಹತ್ತಿರ ಇದ್ದರೆ, ಅದನ್ನು ಕಸಿದುಕೊಳ್ಳಲು ನಾನು ಏನು ಬೇಕಾದರೂ ಮಾಡಬಲ್ಲೆ' ಎಂದು ಸದಾ ಗುಟುರುಹಾಕುವ ಜಾಗತಿಕ ರೌಡಿ ಅಮೇರಿಕಾದ ಕಥೆಗೆ ಇನ್ನೊಂದು ಅಧ್ಯಾಯ ಸೇರಿದೆ. ಕೈಗಾರಿಕಾ ಕ್ರಾಂತಿಯಲ್ಲಿ ಮೊದಲ ಹೆಜ್ಜೆಯಿಟ್ಟ ದೇಶವಾದ ನಂತರ ಅಮೆರಿಕಾ ಕಳೆದ ನೂರು ವರ್ಷಗಳಲ್ಲಿ ಮಾಡಿದ್ದು ಈ ರೌಡಿಸಂ ಅನ್ನೇ. ತನ್ನ ಸ್ನೇಹಿತರಾಗಲೀ ಶತ್ರುಗಳಾಗಲೀ ಎಲ್ಲರ ವಿರುದ್ಧವೂ ಒಂದಲ್ಲ ಒಂದು ರೀತಿಯಲ್ಲಿ ರೌಡಿ ಬುದ್ಧಿ ತೋರಿಸುವ ದೇಶ, ಎದುರಾಳಿಯನ್ನು ಮಣಿಸಲಿಕ್ಕೆ ಸಾಮ, ದಾನ, ಭೇದ, ದಂಡ ಎಲ್ಲ ನೀತಿಗಳನ್ನು ಬಳಸುತ್ತದೆ. ಹಾಗೂ ಈ ನೀತಿಗಳಲ್ಲಿ ಅಮೆರಿಕಾದ ದಂಡನೀತಿಯೇ ಹೆಚ್ಚು ದಮನಕಾರಿ ಹಾಗೂ ಅತ್ಯಂತ ಹೆಚ್ಚು ಉಪಯೋಗಿಸಲ್ಪಟ್ಟದ್ದೂ ಹೌದು. ಶತ್ರುಗಳನ್ನು ಮಣಿಸಲು ಪ್ರಾರಂಭದಲ್ಲಿ ಬೇರೆ ನೀತಿಗಳನ್ನು ಬಳಸಿದಾಗಲೂ ಕೊನೆಗೆ ಅಮೇರಿಕಾ ಬಂದಿಳಿಯುವುದು ದಂಡನೀತಿಗೇ.

ಇದೇ ಅಮೆರಿಕಾ, ಕೆಲವು ಶತ್ರುಗಳ ವಿರುದ್ಧ ಎಷ್ಟೇ ಸಿಟ್ಟು ದ್ವೇಷಗಳಿದ್ದರೂ ದಂಡನೀತಿ ಬಳಸದ ಕೆಲವು ಉದಾಹರಣೆಗಳೂ ಇವೆ. ಈ ಪಟ್ಟಿಯಲ್ಲಿ ಎಲ್ಲಕ್ಕಿಂತ ಮೊದಲ ಉದಾಹರಣೆಯೇ ರಷ್ಯಾ. ಅಮೆರಿಕಾ ಮತ್ತು ರಷ್ಯಾ ಎರಡನೇ ಮಹಾಯುದ್ಧದವರೆಗೂ ಒಂದೇ ಬಣದಲ್ಲಿದ್ದು, ನಂತರ ಎಣ್ಣೆ ಸೀಗೇಕಾಯಿ ಸಂಬಂಧವಾದ ಎರಡು ದೇಶಗಳು. ಮಹಾಯುದ್ಧದ ನಂತರ ಇವರಿಬ್ಬರ ನಡುವೆ ನಡೆಯೂ ನಡೆಯದ ಯುದ್ಧದ ಕಾಲವೊಂದಿತ್ತು. ಒಂದೇ ಬುಲೆಟ್ ಹಾರದಿದ್ದರೂ, ಒಂದೇ ಬಾಂಬ್ ಎಸೆಯದಿದ್ದರೂ, ಯಾವ ಯುದ್ಧವೂ ನಡೆಯದೇ ಇದ್ದರೂ ಇಬ್ಬರೂ ಪರಸ್ಪರದೆಡೆಗೆ ಕ್ಷಿಪಣಿಗಳನ್ನು ಗುರಿಯಿಟ್ಟುಕೊಂಡು, ದಿನದ ಇಪ್ಪತ್ತನಾಲ್ಕು ಘಂಟೆ ಯುದ್ದಸನ್ನದ್ಧವಾಗಿ ಕುಳಿತ ಆ ಕಾಲಘಟ್ಟವನ್ನು ‘ಶೀತಲಸಮರದ ಕಾಲ’ ಎಂದೇ ಕರೆಯಲಾಗುತ್ತದೆ.

ಈ ಶೀತಲ ಸಮರದಿಂದಾಗಿ ತಂತ್ರಜ್ಞಾನದ ವಿಚಾರದಲ್ಲಿ ಮನುಕುಲಕ್ಕೆ ಬಹಳವೇ ಉಡುಗೊರೆಗಳು ದೊರೆತವು. ಈ ಎರಡು ದೈತ್ಯದೇಶಗಳು ಒಬ್ಬರನ್ನೊಬ್ಬರು ಮೀರಿಸಲು, ಹಾಗೂ ಯಾರನ್ನು ಯಾರು ಬೇಕಾದರೂ, ಯಾವಾಗ ಬೇಕಾದರೂ ಹೊಡೆಯಬಲ್ಲ ಸ್ಥಿತಿಯಲ್ಲಿ ಕುಳಿತ ಪರಿಣಾಮವಾಗಿಯೇ ನಮಗೆ ಉಪಗ್ರಹ, ರೇಡಿಯೋ ನೆಟ್ವರ್ಕುಗಳು, ಎಲೆಕ್ಟ್ರಾನಿಕ್ಸ್ ತಂತ್ರಜ್ಞಾನ, ಕಂಪ್ಯೂಟರುಗಳು, ಮೈಕ್ರೋವೇವ್, ಜಿಪಿಎಸ್, ಮೊಬೈಲ್ ಫೋನು, ಹೃದಯಾಘಾತದ ಔಷಧಿ ಇತ್ಯಾದಿಗಳು ಸಿಕ್ಕಿದ್ದು. ಇವೆಲ್ಲ ಆವಿಷ್ಕಾರಗಳ ಹಿಂದೆ ಶೀತಲಯುದ್ಧದ ಛಾಯೆ ಇದ್ದೇ ಇದೆ.

ಅಮೆರಿಕಾ ಯಾರನ್ನಾದರೂ ಹೊಡೆಯುವ ಮುಂಚೆ ಆಲೋಚಿಸುವ ಎರಡೇ ಎರಡು ವಿಚಾರಗಳು:

(1) ಇವರ ಬಳಿ ನನಗೆ ಬೇಕಾದದ್ದೇನಾದರೂ ಇದೆಯೇ?

(2) ಇವರ ಬಳಿ ಅಣುಬಾಂಬ್ ಇದೆಯೇ?

ಎಲ್ಲೆಲ್ಲಿ ಮೊದಲ ಪ್ರಶ್ನೆಯ ಉತ್ತರ 'ಹೌದು' ಮತ್ತು ಎರಡನೆಯದರ ಉತ್ತರ 'ಇಲ್ಲ' ಎಂದಿದೆಯೋ, ಆ ದೇಶವನ್ನು ಅಮೆರಿಕಾ ನಿರಾಯಾಸವಾಗಿ ಆಪೋಶನ ತೆಗೆದುಕೊಳುತ್ತದೆ. ಎರಡಕ್ಕೂ ಉತ್ತರ ‘ಹೌದು’ ಎಂದಾದಲ್ಲಿ ಅವರನ್ನು ಮಣಿಸಲು, ಸರಿಯಾದ ಸಮಯಕ್ಕಾಗಿ ಕಾಯುತ್ತಾ ಹೊಂಚುಹಾಕಿ ಕೂರುತ್ತದೆ. ಇದೇ ಕಾರಣಕ್ಕೆ, ಅಂದರೆ ಅಣ್ವಸ್ತ ಇದೆ ಎಂಬ ಕಾರಣಕ್ಕೇ, ಅಮೇರಿಕಾ ರಷ್ಯಾದ ಮೇಲೆ ಧಾಳಿ ಮಾಡಿಲ್ಲ ಕೂಡಾ. ಇತಿಹಾಸದಲ್ಲಿ ರಷ್ಯಾ 'ಯಾರು ಬೇಕಾದರೂ ಬಂದು ಮಣ್ಣುಮುಕ್ಕಿಸಬಲ್ಲಷ್ಟು' ಅತ್ಯಂತ ದುರ್ಬಲವಾಗಿದ್ದ ಹಲವಾರು ಸಂದರ್ಭಗಳಿದ್ದರೂ ಕೂಡಾ ರಷ್ಯಾವನ್ನು ಆಕ್ರಮಿಸ ಹೋಗಲಿಲ್ಲ. ಯಾಕೆಂದರೆ ಅಮೆರಿಕಾಕ್ಕೆ ಅಣ್ವಸ್ತ್ರದ ಭಯ ಜೋರಾಗಿಯೇ ಇದೆ. ಆ ಅಸ್ತ್ರ ಇಲ್ಲ ಎಂಬ ಕಾರಣಕ್ಕೇ (ಅಥವಾ ಆ ಧೈರ್ಯದ ಮೇಲೆಯೇ) ಅಮೇರಿಕಾ ವಿಯೆಟ್ನಾಂ, ಕ್ಯೂಬಾ, ಕೊಲಂಬಿಯಾ, ಇರಾಕ್ ಮತ್ತು ಅಫ್ಘಾನಿಸ್ಥಾನಗಳನ್ನು ಆಪೋಶನ ತೆಗೆದುಕೊಂಡಿದ್ದು, ಹಾಗೂ ‘ಅಣ್ವಸ್ತ್ರಗಳು ಇವೆ’ ಎಂಬ ಕಾರಣಕ್ಕೇ ಅಮೇರಿಕಾ ಯಾವತ್ತೂ ಚೀನಾ, ರಷ್ಯಾ, ಭಾರತದ ಮೇಲೆ ಮತ್ತು ಪುಟಾಣಿ ಉತ್ತರಕೊರಿಯಾದ ಮೇಲೂ ಯುದ್ಧಕ್ಕೆ ಹೋಗಿಲ್ಲ.

ಶೀತಲ ಯುದ್ಧದ ಕಾಲದಲ್ಲಂತೂ ಅಮೆರಿಕಾ ಮತ್ತು ರಷ್ಯಾ ನಾಮುಂದು ತಾಮುಂದು ಎನ್ನುವಂತೆ ಅಣ್ವಸ್ತ್ರಗಳನ್ನು ತಯಾರಿಸಿ ಪೇರಿಸಿಟ್ಟುಕೊಂಡವು. ಒಂದಲ್ಲ ಒಂದು ದಿನ ಯುದ್ಧ ಬಂದೇ ಬರುತ್ತದೆ, ಆ ದಿನ ಎದುರಾಳಿಯನ್ನು ಧೂಳಿಪಟ ಮಾಡಲೇಬೇಕು. ನನ್ನದು ಒಂದು ತಲೆ ಬಿದ್ದರೆ ಎದುರಿನವನ ಹತ್ತು ತಲೆಗಳನ್ನು ತೆಗೆಯಬೇಕು ಎಂಬ ಉಮೇದಿನಲ್ಲೇ ಇಬ್ಬರೂ ಟನ್ನುಗಟ್ಟಲೆ ಅಣ್ವಸ್ತ್ರಗಳನ್ನು ಸೈನ್ಯದ ಪ್ರತೀತುಕಡಿಯಲ್ಲೂ ಸೇರಿಸಿಟ್ಟರು. ಇವತ್ತಿನ ಲೆಕ್ಕದಲ್ಲಿ ರಷ್ಯಾದ ಬತ್ತಳಿಕೆಯಲ್ಲಿ ಒಟ್ಟು 5,459, ಅಮೆರಿಕಾದ ಗ್ಯಾರೇಜಿನಲ್ಲಿ 5,177 ಪರಮಾಣು ಸಿಡಿತಲೆಗಳಿವೆ. ಜಗತ್ತಿನಲ್ಲಿರುವ ಒಟ್ಟು ಪರಮಾಣು ಸಿಡಿತಲೆಗಳಲ್ಲಿ 87% ಈ ಎರಡು ದೈತ್ಯರ ಬಳಿಯೇ ಇವೆ. ಇಷ್ಟೆಲ್ಲಾ ಯುದ್ಧಸನ್ನದ್ಧ ಸ್ಥಿತಿಯಲ್ಲಿದ್ದರೂ, ಎಷ್ಟೇ ಉಸಿರುಗಟ್ಟಿಸುವ ಪರಿಸ್ಥತಿಯಲ್ಲೂ ಯಾರೂ ಅಣ್ವಸ್ತ್ರ ಪ್ರಯೋಗ ಮಾಡಲಿಲ್ಲ. ಆದರೆ, ಈ ಶಾಂತಿಯ ನಡೆಯ ಹಿಂದೆ ‘ಅಣುಬಾಂಬ್ ಹಾಕಬಾರದು. ಹಾಕಿದರೆ ಮತ್ತೊಂದು ಹಿರೋಷಿಮಾದಂತಹ ಮಾರಣಹೋಮವಾಗುತ್ತದೆ. ಮನುಕುಲಕ್ಕೆ ನಷ್ಟವಾಗುತ್ತದೆ’ ಎಂಬೆಲ್ಲಾ ಯಾವ ಮಾನವೀಯ ಮೌಲ್ಯವೂ ಇದ್ದಿರಲಿಲ್ಲ. ಬದಲಿಗೆ, ಇಬ್ಬರಿಗೂ ಎದುರಾಳಿಯ ಅಣ್ವಸ್ತ್ರ ಸಾಮರ್ಥ್ಯದ ಬಗ್ಗೆ ಸಣ್ಣದೊಂದು ಅಂಜಿಕೆ ಇದ್ದೇ ಇತ್ತು. ‘ನಮ್ಮಲ್ಲಿ ಎಷ್ಟು ಅಣುಬಾಂಬುಗಳಿವೆ’ ಎಂದು ವಿಶ್ವಸಂಸ್ಥೆಗೆ ಕೊಟ್ಟ ಲೆಕ್ಕ ತೋರಿಕೆಗಷ್ಟೇ ಎಂದು ಇಬ್ಬರಿಗೂ ಗೊತ್ತಿತ್ತು. ಅಷ್ಟೇ ಅಲ್ಲದೆ ರಷ್ಯಾದ ಬಳಿ ಹೈಡ್ರೋಜನ್ ಬಾಂಬ್ ಇರುವ ಭಯವೂ ಅಮೆರಿಕಾಗೆ ಇತ್ತು.

ಮ್ಮ ಮೇಲೆ ಬಾಂಬ್ ಹಾಕ್ತಿನಿ ಅಂತಾ ಹೆದರಿಸಲಿಲ್ಲ

ಈ ಅಂಜಿಕೆಯೇ 1950 ರಿಂದ 1990ರವರೆಗೆ ಅಮೆರಿಕಾವನ್ನು ರಷ್ಯಾದ ಮೇಲೆ ಯುದ್ಧ ಸಾರದಂತೆ ಹಿಡಿದಿಟ್ಟಿದ್ದು. ಕ್ಯೂಬನ್ ಮಿಸೈಲ್ ಬಿಕ್ಕಟ್ಟಿನ ಕಾಲದಲ್ಲಿ ಮೂರನೇ ಮಹಾಯುದ್ಧ ಇನ್ನೇನು ಪ್ರಾರಂಭವಾಗುತ್ತದೆ ಎಂಬ ಸ್ಥಿತಿಯಲ್ಲೂ ಅಮೆರಿಕಾ ಸಂಯಮ ಕಾಡುಕೊಂಡಿದ್ದು. ಯುದ್ಧದ ಬದಲಿಗೆ ಸೋವಿಯತ್ ರಷ್ಯಾವನ್ನು ಹಲವಾರು ಭಾಗಗಳಾಗಿ ಛಿದ್ರವಾಗಿಸುವ ಪ್ರಾಜೆಕ್ಟಿಗೆ ಅಮೆರಿಕಾ ಕೈ ಹಾಕಿದ್ದು. ಆದರೆ, 1990ರಲ್ಲಿ ಸೋವಿಯತ್ ರಷ್ಯಾ ಪುಡಿಯಾದಮೇಲೂ ಅಂದರೆ ರಾಜಕೀಯವಾಗಿ ದುರ್ಬಲವಾದ ಮೇಲೂ ಯಾಕೆ ಅಮೆರಿಕಾ ಮಾಸ್ಕೋದ ಮೇಲೆ ರೌಡಿಸಂ ಮಾಡಲಿಲ್ಲ? ತೈಲ ನಮಗೆ ಕೊಡದಿದ್ದರೆ, ನಿಮ್ಮ ಮೇಲೆ ಬಾಂಬ್ ಹಾಕ್ತಿನಿ ಅಂತಾ ಹೆದರಿಸಲಿಲ್ಲ!? ಇಲ್ಲೊಂದು ಕುತೂಹಲಕಾರಿ ವಿಷಯವಿದೆ.

ನೂರಾರು ಮಿಸೈಲುಗಳನ್ನು ರಷ್ಯಾದ ಕಡೆಗೆ ಹಾರಲಿಕ್ಕೆ ತಯಾರಿಸಿಟ್ಟುಕೊಂಡಿದ್ದರೂ ಕೂಡಾ, ರಷ್ಯಾ ಒಂದಲ್ಲ ಒಂದು ದಿನ ನನ್ನ ಮೇಲೆ ಬಾಂಬ್ ಹಾಕಬಹುದು ಎಂಬ ಹೆದರಿಕೆಯಿದ್ದ ಅಮೆರಿಕಾ ಸಾಧ್ಯವಾದಷ್ಟೂ ಜನರನ್ನು ಬಚಾಯಿಸಿಕೊಳ್ಳಲು ಬಂಕರುಗಳನ್ನೂ ಕಟ್ಟಿಕೊಂಡಿತ್ತು. ಮತ್ತದನ್ನು ಜಗತ್ತಿಗೆ ಎದೆತಟ್ಟಿ ಹೇಳಿಕೊಂಡಿತ್ತು ಕೂಡಾ. ಅಮೆರಿಕಾ ಎಷ್ಟು ಬಾಯಿಬಡುಕ ರೌಡಿಯೋ, ರಷ್ಯಾ ಅಷ್ಟೇ ಮೌನಿ. ಆ ಮೌನದಲ್ಲೇ ರಷ್ಯಾದ ಅಪಾಯಕಾರಿ ತಂತ್ರಗಳು ಅಡಗಿದ್ದದ್ದು. ರಷ್ಯನ್ನರು ಮಿಸೈಲು, ಬಂಕರುಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ “Периметр” (ಪೆರಿಮೀಟರ್ - ಪರಿಧಿ) ಎಂಬ ಒಂದು ರಹಸ್ಯ ನೀತಿಯನ್ನೂ ರೂಪಿಸಿಕೊಂಡಿದ್ದರು.

ಏನಿದು ಪೆರಿಮೀಟರ್?

ಅಮೆರಿಕ ಎಷ್ಟೇ ಬಾರಿ “ನಾವಾಗಿಯೇ ಮೊದಲ ಅಣ್ವಸ್ತ್ರ ಬಳಸಲ್ಲ” ಎಂದು ಹೇಳಿದ್ದರೂ ಸಹ ಅದನ್ನು ನಂಬಲು ರಷ್ಯಾದ ವಿಜ್ಞಾನಿಗಳು ಮತ್ತು ರಾಜತಾಂತ್ರಿಕರು ತಯಾರಿರಲಿಲ್ಲ. ಮಾತ್ರವಲ್ಲದೇ, ‘ಒಂದು ವೇಳೆ ಅಮೇರಿಕಾ ಮಾಸ್ಕೋದ ಮೇಲೆ ದಾಳಿ ಅಚಾನಕ್ ನಡೆಸಿ, ರಷ್ಯಾದ ನಾಯಕರನ್ನೆಲ್ಲಾ ಸಾಯಿಸಿಬಿಟ್ಟರೆ!?’ ಎಂಬ ಅಳುಕಿದ್ದದ್ದರಿಂದ, ರಷ್ಯಾದ ಅಣ್ವಸ್ತ್ರಗಳನ್ನು ಬಳಸಲು ಬೇಕಿದ್ದ ಎಲ್ಲಾ ತಲೆಗಳು ಉರುಳಿಹೋಗಿ, ಆ ಚೈನ್ ಆಫ್ ಕಮಾಂಡ್ ಇಲ್ಲದೇ ಹೋದರೂ ಸಹ, ಅಣುಬಾಂಬನ್ನು ಲಾಂಚ್ ಮಾಡಲಿಕ್ಕೆ ರಷ್ಯಾದ ಕಟ್ಟಕಡೆಯ ಮನುಷ್ಯನೇ ಇಲ್ಲವಾದರೂ ಸಹ, ಅಮೇರಿಕಾದ ಸರ್ವನಾಶಕ್ಕೆಂದು ಬರೆದಿಟ್ಟ ಚಿತ್ರಕಥೆಯೇ ಈ ‘ಪೆರಿಮೀಟರ್’ ಎಂಬ ವ್ಯವಸ್ಥೆ.

ಅತ್ಯಂತ ಸರಳವಾಗಿ ಇದನ್ನು ವಿವರಿಸೋಣ. ಪೆರಿಮೀಟರ್’ಗಾಗಿ ರಷ್ಯಾ ತನ್ನ ದೇಶಾದ್ಯಂತ ಮುಖ್ಯ ನಗರಗಳು, ಲ್ಯಾಬುಗಳು, ಕೈಗಾರಿಕೆಗಳು, ಜಲಾಶಯಗಳು ಮುಂತಾದ ಕ್ರಿಟಿಕಲ್ ಇನ್ಫ್ರಾಸ್ಟ್ರಕ್ಚರುಗಳಿದ್ದಲ್ಲಿ ನೆಲ, ಜಲ ಮತ್ತು ಆಕಾಶದಲ್ಲಿ ಸೆನ್ಸರುಗಳನ್ನು ಅಡಗಿಸಿಟ್ಟು, ಆ ಸೆನ್ಸರುಗಳ ಜಾಲವನ್ನು ಕಂಪ್ಯೂಟರುಗಳ ಒಂದು ಮಹಾಜಾಲಕ್ಕೆ ಸೇರಿಸಿಟ್ಟರು.

ಈ ಸೆನ್ಸರುಗಳು ಪರಮಾಣು ಸ್ಫೋಟಗಳಿಂದ ಆಗಬಹುದಾದ ಭೂಕಂಪನ, ವಿಕಿರಣ ಚಟುವಟಿಕೆ ಮತ್ತು ಆ ದಾಳಿಗುತ್ತರವಾಗಿ ರಷ್ಯನ್ ವ್ಯವಸ್ಥೆಗಳು ಕೊಡಬೇಕಾದ ಆಜ್ಞೆಗಳ ಸಂವಹನದ ಕೊರತೆ ಇತ್ಯಾದಿಗಳ ಮೇಲೆ ಸದಾಕಾಲ ಕಣ್ಣಿಟ್ಟಿರುತ್ತವೆ. ಒಂದುವೇಳೆ ಅಮೇರಿಕಾದ ಬಾಂಬ್ ಧಾಳಿಗಳಿಂದ ರಷ್ಯಾದ ಅಧ್ಯಕ್ಷ, ಪ್ರಧಾನಿ ಹಾಗೂ ಸೈನ್ಯದ ಮುಖ್ಯಸ್ಥರೆಲ್ಲರೂ ಒಂದೇಕಾಲಕ್ಕೆ ಹತರಾದರೆ, ಬಾಂಬ್ ಬಿದ್ದಾಗ ನೆಲ ಅದುರಿ ವಿಕಿರಣ ಚೆಲ್ಲಿ ಸೆನ್ಸರುಗಳಿಗೆ ಅದರ ಸಂದೇಶ ಬಂದಮೇಲೂ ‘ಇಂತಿಷ್ಟು ಸಮಯದೊಳಗೆ’ ಅಮೇರಿಕಾದ ಕಡೆಗೆ ಮುಖಮಾಡಿದ್ದ ಮಿಸೈಲುಗಳನ್ನು ಹಾರುವಂತೆ ಆದೇಶ ಕೊಡುವ ಯಾವ ಸ್ವಿಚ್ಚುಗಳೂ ಮನುಷ್ಯರಿಂದ ಒತ್ತಲ್ಪಡದಿದ್ದರೆ, ‘ನಿರ್ಧರಿಸಬೇಕಾದ ಎಲ್ಲರೂ ಸತ್ತು, ರಷ್ಯಾ ಸರ್ವನಾಶವಾಗಿದೆ’ ಎಂದು ಕಂಪ್ಯೂಟರುಗಳೇ ನಿರ್ಧರಿಸಿ, ತನ್ನ ನೆಲದೊಡಲಲ್ಲಿ ಅಡಗಿಸಿಟ್ಟಿದ್ದ, ತನ್ನೆಲ್ಲಾ ಸಬ್ಮರೀನುಗಳಲ್ಲಿ ಪೇರಿಸಿಟ್ಟಿದ್ದ ಅಷ್ಟೂ ಅಣ್ವಸ್ತ್ರಗಳನ್ನು ಅಮೇರಿಕಾದ ಬೇರೆ ಬೇರೆ ನಗರಗಳ ಮೇಲೆ ಮಳೆಯಂತೆ ಸುರಿಸುವ ಆದೇಶ ಕೊಡುತ್ತವೆ. ಅಂದರೆ ರಷ್ಯಾ ಎಂಬ ದೈತ್ಯನ ತಲೆಯನ್ನೇ ಕತ್ತರಿಸಿ ಹಾಕಿದರೂ, ಅಮೆರಿಕಾದ ಒಂದೇ ಒಂದು ನರಪಿಳ್ಳೆಯೂ ಉಳಿಯದಂತೆ ವ್ಯವಸ್ಥೆಯನ್ನು ರಷ್ಯಾ ಮಾಡಿಟ್ಟಿದೆ.

ಇದೇ ಕಾರಣಕ್ಕೆ ಅಮೆರಿಕಾಕ್ಕೆ ರಷ್ಯಾ ಎಂದರೆ ಭಯ. ಮುಂದೆ ಹಾಲಿವುಡ್ ಇದನ್ನು ‘ಡೆಡ್ ಹ್ಯಾಂಡ್ ಸಿಸ್ಟಂ’ ಎಂಬ ಹೆಸರಿನಿಂದ ಜನಪ್ರಿಯವಾಗಿಸಿದರೂ, ಇದರ ಮೂಲ ರಷ್ಯನ್ ಹೆಸರು ‘ಪೆರಿಮೀಟರ್’. ಈಗ ಎಲ್ಲ ಅಣ್ವಸ್ತ್ರ ಹೊಂದಿರುವ ದೇಶಗಳು ತಮ್ಮದೇ ರೀತಿಯ ಪೆರಿಮೀಟರ್ ವ್ಯವಸ್ಥೆಗಳನ್ನು ಹೊಂದಿವೆ. ಅಣುಯುದ್ಧದ ನಡೆದರೆ ನಾಶದ ಅಂತಿಮ ಹಂತದಲ್ಲಿ ಮಾನವ ಅನುಮತಿಯ ಅಗತ್ಯವಿಲ್ಲ ಎಂಬುದೇ ಇದರ ಪ್ರಮುಖ ಲಕ್ಷಣ. ಸಂಪೂರ್ಣ ನಾಯಕತ್ವ ನಾಶವಾದರೂ ಪ್ರತಿದಾಳಿ ಖಚಿತವೆಂಬ ಬೆದರಿಕೆ ಇದ್ದಾಗ ಯಾವ ಶತ್ರು ತಾನೇ ಮೊದಲ ದಾಳಿ ನಡೆಸುತ್ತಾನೆ?