ವೆನಿಜುವೆಲಾದ ಮೇಲೆ 7 ಬಾಂಬ್‌ ನಡೆಸಿದ ಅಮೆರಿಕ ಕೇವಲ ಅರ್ಧ ತಾಸಲ್ಲಿ ಇಡೀ ದೇಶವನ್ನೇ ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಜೊತೆಗೆ ಯಾವುದೇ ಯುದ್ಧ ನಡೆಸದೇ, ಆ ದೇಶಕ್ಕೆ ನುಗ್ಗಿ ಹಾಲಿ ಅಧ್ಯಕ್ಷರನ್ನೇ ಬಂಧಿಸಿ ತನ್ನ ದೇಶಕ್ಕೆ ಕರೆದೊಯ್ಯುವ ಮೂಲಕ ಟ್ರಂಪ್‌ ಹೊಸ ಇತಿಹಾಸ ರಚಿಸಿದ್ದಾರೆ.

ವಾಷಿಂಗ್ಟನ್‌/ಕಾರಕಸ್‌: ತೈಲ ಸಂಪನ್ಮೂಲ ದೇಶಗಳ ಮೇಳೆ ದಾಳಿಯ ದೊಡ್ಡ ಇತಿಹಾಸ ಹೊಂದಿರುವ ಅಮೆರಿಕ, ಇದೀಗ ವಿಶ್ವವೇ ಕಂಡುಕೇಳರಿಯದ ಮತ್ತೊಂದು ದಾಳಿ ನಡೆಸಿದೆ. ಲ್ಯಾಟಿನ್‌ ಅಮೆರಿಕದ (ದಕ್ಷಿಣ ಅಮೆರಿಕ) 7ನೇ ಅತಿದೊಡ್ಡ ರಾಷ್ಟ್ರ ವೆನಿಜುವೆಲಾ ಮೇಲೆ ಅಮೆರಿಕ ಶನಿವಾರ ಡ್ರಗ್ಸ್‌ ಭಯೋತ್ಪಾದನೆ ಆರೋಪ ಹೊರಿಸಿ ಅಚ್ಚರಿಯ ಸೇನಾ ಹಾಗೂ ವಾಯು ದಾಳಿ ನಡೆಸಿದೆ. ವಿಮಾನ, ಕಾಪ್ಟರ್‌ ಹಾಗೂ ಭೂಸೇನೆಯನ್ನು ಬಳಸಿ ರಾಜಧಾನಿ ಕಾರಕಸ್‌ ಮೇಲೆ ಭಾರೀ ವೈಮಾನಿಕ ದಾಳಿ ನಡೆಸಿರುವ ಅಮೆರಿಕ ಸೇನೆ, ದೇಶದ ನಿರಂಕುಶವಾದಿ ಅಧ್ಯಕ್ಷ ನಿಕೋಲಸ್‌ ಮಡುರೋ ಹಾಗೂ ಪತ್ನಿ ಸಿಲಿಯಾ ಫ್ಲೋರ್ಸ್‌ ಅವರನ್ನು ಅಪಹರಣ ಮಾಡಿ ಕೊನೆಗೆ ಬಂಧಿಸಿದೆ ಹಾಗೂ ಹಡಗು ಮೂಲಕ ಅಮೆರಿಕಕ್ಕೆ ಕರೆದೊಯ್ದಿದೆ.

ವೆನಿಜುವೆಲಾದ ಮೇಲೆ 7 ಬಾಂಬ್‌ ನಡೆಸಿದ ಅಮೆರಿಕ ಕೇವಲ ಅರ್ಧ ತಾಸಲ್ಲಿ ಇಡೀ ದೇಶವನ್ನೇ ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಜೊತೆಗೆ ಯಾವುದೇ ಯುದ್ಧ ನಡೆಸದೇ, ಆ ದೇಶಕ್ಕೆ ನುಗ್ಗಿ ಹಾಲಿ ಅಧ್ಯಕ್ಷರನ್ನೇ ಬಂಧಿಸಿ ತನ್ನ ದೇಶಕ್ಕೆ ಕರೆದೊಯ್ಯುವ ಮೂಲಕ ಟ್ರಂಪ್‌ ಹೊಸ ಇತಿಹಾಸ ರಚಿಸಿದ್ದಾರೆ.

ಇದರ ಬೆನ್ನಲ್ಲೇ ದೇಶವನ್ನುದ್ದೇಶಿಸಿ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ವೆನಿಜುವೆಲಾದಲ್ಲಿ ಅಧಿಕಾರ ಹಸ್ತಾಂತರವಾಗಿ ಪರ್ಯಾಯ ಸರ್ಕಾರ ರಚನೆ ಆಗುವವರೆಗೆ ಅಮೆರಿಕವೇ ಆಡಳಿತ ನೋಡಿಕೊಳ್ಳಲಿದೆ. ಅಮೆರಿಕ ತೈಲ ಕಂಪನಿಗಳು ಅಲ್ಲಿ ವ್ಯಾಪಾರ ನಡೆಸಲಿವೆ’ ಎಂದಿದ್ದಾರೆ.

ಮಡುರೋ ಹಾಗೂ ಪತ್ನಿಯನ್ನು ಬಂಧಿಸಿದ್ದು ಅಪರೂಪದ ಘಟನೆಯಾಗಿದೆ. ಒಂದು ದೇಶದ ಅಧ್ಯಕ್ಷನನ್ನು ಆತನ ದೇಶಕ್ಕೇ ನುಗ್ಗಿ ಬಂಧಿಸಿ ತನ್ನ ದೇಶಕ್ಕೆ ಅಮೆರಿಕ ಎಳೆದೊಯ್ದಿದ್ದು, ಬಹುಶಃ ಇಂಥ ಘಟನೆ ಮೊದಲ ಬಾರಿ ನಡೆದಿದೆ.

ಟ್ರಂಪ್‌ ಅವರು 2ನೇ ಬಾರಿ ಅಮೆರಿಕ ಅಧ್ಯಕ್ಷರಾದ ಬಳಿಕ ವೆನಿಜುವೆಲಾ ಮತ್ತು ಅಮೆರಿಕ ನಡುವಿನ ವೈಮನಸ್ಯ ಹೆಚ್ಚುತ್ತಲೇ ಇತ್ತು. ಮುಖ್ಯವಾಗಿ ಮಾದಕ ವಸ್ತುಗಳ ಸಾಗಣೆ ವಿಚಾರವಾಗಿ ಈ ತಿಕ್ಕಾಟ ತೀವ್ರಗೊಂಡಿತ್ತು. ಇತ್ತೀಚೆಗಷ್ಟೇ ಟ್ರಂಪ್‌ ಅ‍ವರು, ‘ವೆನಿಜುವೆಲಾವು ಡ್ರಗ್‌ ಗ್ಯಾಂಗ್‌ಗಳ ಮೇಲೆ ನಿಯಂತ್ರಣ ಹೇರದಿದ್ದರೆ ನೇರ ಸೇನಾ ದಾಳಿ ನಡೆಸುತ್ತೇವೆ’ ಎಂದು ಎಚ್ಚರಿಕೆಯನ್ನೂ ನೀಡಿದ್ದರು. ಇದರ ಬೆನ್ನಲ್ಲೇ ಈ ಸಿನಿಮೀಯ ದಾಳಿ ನಡೆದಿದೆ.

ಅಮೆರಿಕ ದಾಳಿ ವಿರುದ್ಧ ವೆನಿಜುವೆಲಾ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ ಹಾಗೂ ಮರುಡೋ ದಂಪತಿ ಜೀವಂತ ಇದ್ದಾರೆಯೆ ಎಂಬುದನ್ನು ದೃಢಪಡಿಸಬೇಕು ಎಂದು ಆಗ್ರಹಿಸಿದೆ. ಅಲ್ಲದೆ, ಯುದ್ಧದಲ್ಲಿ ನಾವು ಜಯಶಾಲಿ ಆಗುತ್ತೇವೆ ಎಂದಿದೆ,

ಆದರೆ ಅಮೆರಿಕವು ಮಡುರೋ ಅವರನ್ನು ಅಮೆರಿಕದಲ್ಲಿ ಕ್ರಿಮಿನಲ್‌ ವಿಚಾರಣೆಗೆ ಒಳಪಡಿಸಲು ನಿರ್ಧರಿಸಿದೆ. ದಂಪತಿಯ ಮೇಲೆ ಡ್ರಗ್ಸ್‌ ಭಯೋತ್ಪಾದನೆ ಕೇಸ್‌ ಹಾಕಲಾಗಿದ್ದು, ಅಂತಾರಾಷ್ಟ್ರೀಯ ಅಪರಾಧಿಯೊಬ್ಬನನ್ನು ಬಂಧಿಸುವಲ್ಲಿ ಯಶ ಕಂಡಿದ್ದೇವೆ. ನ್ಯೂಯಾರ್ಕ್‌ನಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಟ್ರಂಪ್‌ ಹಾಗೂ ಅಮೆರಿಕ ಅಟಾರ್ನಿ ಹೇಳಿದ್ದಾರೆ.

ತಡರಾತ್ರಿ ಬಾಂಬ್‌ ದಾಳಿ:

ವೆನಿಜುವೆಲಾದ ಮೇಲೆ ಶುಕ್ರವಾರ ತಡರಾತ್ರಿ 2 ಗಂಟೆ (ಶನಿವಾರ ನಸುಕಿನ ಜಾವ) ಸುಮಾರಿಗೆ ಅಮೆರಿಕ ವಿಮಾನಗಳು ಏಕಾಏಕಿ ವೈಮಾನಿಕ ದಾಳಿ ನಡೆಸಿವೆ. ವೆನಿಜುವೆಲಾದ ಮಿರಾಂಡಾ, ಅರಾಗುನ, ಲಾ ಗುಹೆರಾ ರಾಜ್ಯಗಳ ಮೇಲೆ ಈ ದಾಳಿ ನಡೆದಿದೆ. ಒಟ್ಟು 7 ಕಡೆ ಬಾಂಬ್‌ ದಾಳಿಯ ಸದ್ದು ಕೇಳಿಸಿದೆ. 30 ನಿಮಿಷ ಕಾಲ ನಡೆದ ಈ ದಾಳಿಯ ಗುರಿ ಮಿಲಿಟರಿ ನೆಲೆ ಹಾಗೂ ವಿದ್ಯುತ್ ಸ್ಥಾವರಗಳಾಗಿದ್ದವು ಎಂದು ಹೇಳಲಾಗಿದೆ. ಇದಾದ ಬಳಿಕ ಕೆಳಮಟ್ಟದಲ್ಲಿ ವಿಮಾನ, ಕಾಪ್ಟರ್‌ಗಳ ಹಾರಾಟದ ಸದ್ದು ಕೇಳಿಸಿದೆ.

ನಸುಕಿನ ಜಾವ 2.30ರ ನಂತರ ತರುವಾಯ ಮಡುರೋ ಅವರು ಇದ್ದ ಫೋರ್ಟ್ ಟಿಯುನಾ ಮಿಲಿಟರಿ ನೆಲೆಯೊಳಗಿನ ಮನೆಯ ಬೆಡ್‌ರೂಮಿಗೆ ನುಗ್ಗಿದ ಡೆಲ್ಟಾ ಫೋರ್ಸ್ ಪಡೆ, ಅಲ್‌ಖೈದಾ ಉಗ್ರ ಒಸಾಮಾ ಬಿನ್‌ ಲಾಡೆನ್‌ ರೀತಿಯಲ್ಲೇ ಇಬ್ಬರನ್ನೂ ಹೊರಗೆ ಬಂಧಿಸಿ, ಎಳೆದೊಯ್ದು ಅಮೆರಿಕಕ್ಕೆ ಕರೆದೊಯ್ದಿದೆ.

ಈ ಬಗ್ಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸೋಷಿಯಲ್‌ ಮೀಡಿಯಾ ಹಾಗೂ ಟೀವಿ ಸಂದರ್ಶನದಲ್ಲಿ ಮಾತನಾಡಿ, ‘ಅಧ್ಯಕ್ಷ ಮಡುರೋ ಹಾಗೂ ಪತ್ನಿಯನ್ನು ಬಂಧಿಸಿ, ಹಡಗು ಮೂಲಕ ದೇಶದಿಂದ ಅಮೆರಿಕಕ್ಕೆ ಕರೆತರಲಾಗುತ್ತಿದೆ’ ಎಂದು ಹೇಳಿಕೊಂಡಿದ್ದಾರೆ.

ದಾಳಿಯ ಬೆನ್ನಲ್ಲೇ ಬೆಚ್ಚಿದ ದೇಶದ ಜನತೆ ಕೊಲಂಬಿಯಾದತ್ತ ಪಲಾಯನ ಆರಂಭಿಸಿದ್ದಾರೆ. ಕೊಲಂಬಿಯಾ ಕೂಡ ಗಡಿ ತೆರೆದಿದೆ.

ಸೆಪ್ಟೆಂಬರ್‌ನಲ್ಲಿ ವಾಯು ದಾಳಿ:

ಮಾದಕವಸ್ತು ಸಾಗಣೆ ಆರೋಪ ಹಿನ್ನೆಲೆಯಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಅಮೆರಿಕವು ವೆನಿಜುವೆಲಾ ಸಮುದ್ರ ತೀರದ ಬಳಿ 20ಕ್ಕೂ ಹೆಚ್ಚು ಕಡೆ ವಾಯು ದಾಳಿ ನಡೆಸಿತ್ತು. ಡ್ರಗ್ಸ್‌ ಸಾಗಿಸುತ್ತಿದ್ದ ಹಲವು ಕಿರು ಬೋಟ್‌ಗಳನ್ನು ನಾಶಪಡಿಸಿತ್ತು. ಜತೆಗೆ, ವೆನಿಜುವೆಲಾ ಮೇಲೆ ಹಲವು ನಿರ್ಬಂಧಗಳನ್ನೂ ಹಾಕಿತ್ತು.

ವಿದೇಶಿ ಅಧ್ಯಕ್ಷನ ಬಂಧಿಸಿ ಅಮೆರಿಕಕ್ಕೆ- ಇದೇ ಮೊದಲು:

1989ರಲ್ಲಿ ಪನಾಮಾ ಮೇಲೆ ದಾಳಿ ಮಾಡಿ ಅಲ್ಲಿನ ಅಧ್ಯಕ್ಷನನ್ನು ಅಧಿಕಾರದಿಂದ ಕೆಳಗಿಳಿಸಿತ್ತು. ಇನ್ನು ಇರಾಕ್‌ ಮೇಲೆ ದಾಳಿ ಮಾಡಿದ್ದ ಅಮೆರಿಕ 2006ರಲ್ಲಿ ಸರ್ವಾಧಿಕಾರಿ ಸದ್ದಾಂ ಹುಸೇನ್‌ನನ್ನು ಕೆಳಗಿಳಿಸಿತ್ತು. ನಂತರ ಯುದ್ಧಾಪರಾಧ ಆರೋಪ ಹೊರಿಸಿ ಗಲ್ಲಿಗೇರಿಸಲಾಗಿತ್ತು. ಆದರೆ ಆತನನ್ನು ಅಮೆರಿಕ ತನ್ನ ದೇಶಕ್ಕೆ ಕರೆದೊಯ್ದಿರಲಿಲ್ಲ. ವಿದೇಶಿ ಅಧ್ಯಕ್ಷನ ಬಂಧಿಸಿ ಅಮೆರಿಕಕ್ಕ ಕರೆದೊಯ್ದಿದ್ದು ಇದೇ ಮೊದಲು.

ನಾವೇ ವೆನಿಜುವೆಲಾ ದೇಶವನ್ನು ಆಳ್ತೇವೆ

ವೆನಿಜುವೆಲಾದಲ್ಲಿ ಸುರಕ್ಷಿತವಾಗಿ ಅಧಿಕಾರ ಹಸ್ತಾಂತರವಾಗಿ ಪರ್ಯಾಯ ಸರ್ಕಾರ ರಚನೆ ಆಗುವವರೆಗೆ ತಾತ್ಕಾಲಿಕವಾಗಿ ಅಮೆರಿಕವೇ ಆಡಳಿತ ನೋಡಿಕೊಳ್ಳಲಿದೆ. ಅಮೆರಿಕ ತೈಲ ಕಂಪನಿಗಳು ಅಲ್ಲಿ ವ್ಯಾಪಾರ ನಡೆಸಲಿವೆ. ನಮ್ಮ ದಾಳಿಯು ಅಮೆರಿಕ ಸೇನೆಯ ಬಲದ ಸಂಕೇತವಾಗಿದೆ.

- ಡೊನಾಲ್ಡ್ ಟ್ರಂಪ್‌, ಅಮೆರಿಕ ಅಧ್ಯಕ್ಷ

2013ರಿಂದಲೂ ಚುನಾವಣಾ ಅಕ್ರಮ ನಡೆಸಿ ಮಡುರೋ ಆಯ್ಕೆಯಾಗುತ್ತಿದ್ದಾರೆ ಎಂಬ ಆರೋಪ

ಡ್ರಗ್ಸ್‌ ಕೇಸಲ್ಲಿ ಬಂಧಿತರ ಬಿಡುಗಡೆ ಮಾಡಿ ಅವರನ್ನು ಅಮೆರಿಕಕ್ಕೆ ಕಳುಹಿಸುತ್ತಿದ್ದಾರೆ ಎಂದು ಆಕ್ರೋಶ

ಮಾದಕ ವಸ್ತು ಜಾಲದಲ್ಲಿ ಮಡುರೋ ಭಾಗಿಯಾಗಿದ್ದಾರೆ. ಇದು ಡ್ರಗ್ಸ್‌ ಭಯೋತ್ಪಾದನೆ ಎಂದು ಕಿಡಿ

ಅಮೆರಿಕಕ್ಕೆ ಭಾರೀ ಪ್ರಮಾಣ ಮಾದಕವಸ್ತು ಸಾಗಣೆ ತಡೆಯುವಲ್ಲಿ ವೆನಿಜುವೆಲಾ ವಿಫಲ ಎಂಬ ದೂರು

ಈ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲು ದೇಶದೊಳಗೆ ನುಗ್ಗಿ ಬಂಧನ, ಬಳಿಕ ಅಮೆರಿಕಕ್ಕೆ